'ಸಂಪದ' ನಗೆ ಬುಗ್ಗೆ - ಭಾಗ ೬೭

'ಸಂಪದ' ನಗೆ ಬುಗ್ಗೆ - ಭಾಗ ೬೭

ಅರ್ಧಾಂಗಿನಿ !

ಗಾಂಪನಿಗೆ ಸರಕಾರಿ ಕೆಲಸದಿಂದ ನಿವೃತ್ತಿ ಆಯಿತು. ನಿವೃತ್ತಿಯ ಬಳಿಕ ದೊಡ್ಡ ಮೊತ್ತವೇ ಕೈಗೆ ಬಂತು. ರೂ ೫೦ ಲಕ್ಷ ಹಣವನ್ನು ಬ್ಯಾಂಕ್ ಸೇವಿಂಗ್ಸನಲ್ಲಿ ತನ್ನ ಮತ್ತು ಪತ್ನಿ ಶ್ರೀಮತಿ ಜಾಯಿಂಟ್ ಅಕೌಂಟ್ ನಲ್ಲಿ ಇಟ್ಟನು. ಅರ್ಜೆಂಟ್ ಗೆ ಇರಲಿ ಎಂದು ATM  ಕಾರ್ಡ್ ಪಿನ್ ಸಹ ಆಕೆಗೆ ತಿಳಿಸಿದನು.

ಗಾಂಪ ಒಮ್ಮೆ ಕೆಲಸದ ನಿಮಿತ್ತ ಒಂದು ಗಂಟೆ ಹೊರಗೆ ಹೋದಾಗ ಫೋನ್ ಮನೇಲಿ ಮರೆತು ಬಂದದ್ದು ನೆನಪಾಯಿತು. ಕೂಡಲೇ ಮನೆಗೆ ಬಂದ. ಫೋನ್ ಸೋಫಾ ಮೇಲೆ ಬಿದ್ದಿದ್ದು ನೋಡಿ ಸ್ವಲ್ಪ ಸಮಾಧಾನ ಆಯಿತು. ಉಸ್ ಅಂತ ಸೋಫಾ ಮೇಲೆ ಕುಳಿತು ಶ್ರೀಮತಿಗೆ " ಫೋನ್ ಏನಾದರೂ ಬಂದಿತ್ತೆ" ಅಂತ ಕೇಳಿದ.

" ಹೌದ್ರಿ ಬ್ಯಾಂಕಿನಿಂದ ಬಂದಿತ್ತು. ಜಾಯಿಂಟ್ ಅಕೌಂಟ್ ಮಾಹಿತಿ ಅಪ್ಡೇಟ್ ಮಾಡ್ಬೇಕು, OTP ಕೊಡಿ ಅಂತ ಕೇಳಿದ್ರು "

ಗಾಂಪ ಬೆವೆತು, ಸೋಫಾದಲ್ಲಿ ಕುಸಿದು ಹೋದ. ಕೂಡಲೇ ಗಾಬರಿಯಾಗಿ " OTP ಕೋಟ್ಯಾ, ಯಾವ OTP ಕೊಟ್ಟೆ"  ಅಂತ ಕೇಳಿದ

ಶ್ರೀಮತಿ:-  ಹೌದರಿ. ಬ್ಯಾಂಕ್ ಮ್ಯಾನೇಜರ್ ಸ್ವತಃ ಫೋನ್ ಮಾಡಿದ್ರು ಅದಕ್ಕೆ  ಕೊಟ್ಟೆ.  

ಗಾಂಪ ಇನ್ನೂ ಕುಸಿದು ಹೋದ. ತಲೆ ತಿರುಗಿದಂತೆ ಆಯಿತು. ಮೊಬೈಲ್ ನಲ್ಲಿ ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡಿದ. ಅದರಲ್ಲಿ ೫೦ ಲಕ್ಷ ಬ್ಯಾಲೆನ್ಸ್ ಹಾಗೇ ಇತ್ತು. 

ಅಚ್ಚರಿಯಿಂದ ‘ಏನೇ, ಯಾವ O T P ಕೊಟ್ಟೆ?’ ಎಂದು ಕೇಳಿದ.

ಶ್ರೀಮತಿ (ಮುಗ್ಧತೆಯಿಂದ) O T P 4042 ಅಂತ ಬಂದಿತ್ತು. ಜಾಯಿಂಟ್ ಅಕೌಂಟ್ ಅಲ್ವಾ,  ಅದಕ್ಕೆ ನಾನು ನನ್ನ ಪಾಲಿನ O T P  2021 ಕೊಟ್ಟೆ ಅಂದ್ಲು.

ಗಾಂಪನಿಗೆ ಜೀವ ಬಂದಂತಾಯಿತು. ಆಗ ಅವನಿಗೆ ಅರಿವಾಯಿತು ಹೆಂಡತಿಯನ್ನು ಏಕೆ ‘ಅರ್ಧಾಂಗಿನಿ’ ಅನ್ನೋದು ಅಂತ!

***

ವಿಧೇಯತೆ !

ಗಾಂಪ ಸಣ್ಣವನಿದ್ದಾಗ ಊರಲ್ಲೆಲ್ಲಾ ‘ಉಲ್ಟಾ’ ಎಂದೇ ಗುರುತಿಸಿಕೊಂಡಿದ್ದ. ಏಕೆಂದರೆ ಅವನಿಗೆ ಏನೇ ಕೆಲಸ ಮಾಡಲು ಹೇಳಿದರೂ ಅದಕ್ಕೆ ತದ್ವಿರುದ್ಧವಾಗಿ ಮಾಡುತ್ತಿದ್ದ. ‘ಹಾರ ಬೇಡ’ ಎಂದರೆ ಹಾರಿಯೇ ಸಿದ್ದ. ಪೇಪರ್ ಹರಿಯ ಬೇಡ ಎಂದರೆ ಹರಿದೇ ಬಿಡುತ್ತಿದ್ದ. ಹೀಗೆ ಉಲ್ಟಾ ಕೆಲಸಗಳನ್ನು ಮಾಡುತ್ತಾನೆ ಎಂದು ಗೊತ್ತಿದ್ದೇ ಊರಿನ ಜನರು ಅವನಿಗೆ ಹೇಳ ಬೇಕಾದ ಕೆಲಸಗಳನ್ನು ವಿರುದ್ಧವೇ ಹೇಳುತ್ತಿದ್ದರು. ಆಗ ಆತ ಸರಿಯಾಗಿ ಮಾಡುತ್ತಿದ್ದ.

ಅದೊಂದು ದಿನ ಗಾಂಪ ಮತ್ತು ಆತನ ತಂದೆ ಕತ್ತೆಯನ್ನು ಹೊಡೆದುಕೊಂಡು ಪುಟ್ಟ ಸೇತುವೆಯ ಮೇಲೆ ಹೋಗುತ್ತಿದ್ದರು. ಕತ್ತೆಯ ಮೇಲೆ ಸಾಮಾನಿನ ಚೀಲಗಳಿದ್ದವು. ಸ್ವಲ್ಪ ಸಮತೋಲನ ತಪ್ಪಿದರೂ ಚೀಲಗಳು ನೀರುಪಾಲಾಗುವ ಸಂಭವವಿತ್ತು. ಗಾಂಪ ಕುಳಿತ ಕತ್ತೆಯ ಚೀಲ ಒಂದು ಬದಿಗೆ ಸರಿದಿತ್ತು. ಅದನ್ನು ಗಮನಿಸಿದ ಆತನ ತಂದೆ “ ಗಾಂಪ, ಕತ್ತೆಯ ಬಲಭಾಗಕ್ಕೆ ಸ್ವಲ್ಪ ತೂಕ ಎಳೆದು ಹಾಕು. ಇಲ್ಲಾ ಅಂದರೆ ಆ ಚೀಲ ನೀರಿಗೆ ಬೀಳಬಹುದು.” ಎಂದು ಎಚ್ಚರಿಸಿದ. ಅದನ್ನು ಕೇಳಿಸಿಕೊಂಡ ಗಾಂಪ ಚೀಲಗಳನ್ನು ಬಲಭಾಗಕ್ಕೆ ಹಾಕಿದ. ಆ ಭಾಗ ಆಗಲೇ ಒಂದು ಬದಿಗೆ ಕುಸಿದಿತ್ತು. ಇನ್ನಷ್ಟು ಕುಸಿದು ಕತ್ತೆ ಬಲ ಬದಿಗೆ ಕುಸಿದು ಚೀಲ ನೀರಿಗೆ ಬಿದ್ದು ಕೊಚ್ಚಿಕೊಂಡು ಹೋಯಿತು. 

“ಮೂರ್ಖ, ಬಲ ಅಂದರೆ ನೀನು ಎಡಕ್ಕೆ ತೂಕ ಹಾಕಬೇಕಲ್ಲವೋ? ಉಲ್ಟಾ ಮಹಾಶಯ" ಎಂದ ಅಪ್ಪ ಕೋಪದಿಂದ. ಅದಕ್ಕೆ ಶಾಂತವಾಗಿ ಗಾಂಪ ಉತ್ತರಿಸಿದ “ ಅಪ್ಪಾ, ನಾನೀಗ ದೊಡ್ಡವನಾಗಿದ್ದೇನೆ. ಇವತ್ತಿನಿಂದಾದರೂ ನಾನು ಹಿರಿಯರು ಹೇಳಿದ ಮಾತನ್ನು ಉಲ್ಟಾ ಮಾಡದೇ ಚಾಚೂ ತಪ್ಪದೇ ಪಾಲಿಸಬೇಕು ಎಂದು ಬೆಳಿಗ್ಗೆ ನಿರ್ಧಾರ ಮಾಡಿದ್ದೆ" ಎಂದ.

***

ಅಕ್ಕಿ ಕಾಳು

ಮದುವೆಯ ಮರುದಿನ ನವ ದಂಪತಿಗಳಾದ ಗಾಂಪ ಮತ್ತು ಶ್ರೀಮತಿ ಆರಾಮವಾಗಿ ಬೆಡ್ ರೂಮ್ ನಲ್ಲಿ ಕುಳಿತಿದ್ದರು. 

ಗಾಂಪ: ನಿನಗೆ ಎಷ್ಟು ಜನ ಬಾಯ್ ಫ್ರೆಂಡ್ಸ್ ಇದ್ದರು?

ಶ್ರೀಮತಿ ತನ್ನ ಬ್ಯಾಗ್ ನಿಂದ ಒಂದು ಕವರ್ ತೆಗೆದು, ಗಾಂಪನಿಗೆ ಕೊಟ್ಟಳು. ಅದರಲ್ಲಿ ಅಕ್ಕಿಯ ಕಾಳುಗಳಿದ್ದವು. ಅದನ್ನು ಗಾಂಪ ಲೆಕ್ಕ ಮಾಡಿದಾಗ ೭ ಕಾಳುಗಳಿದ್ದವು.

ಗಾಂಪ: ಏಳು ಜನ ಬಾಯ್ ಫ್ರೆಂಡ್ಸ್ ಇರೋದು ಈಗಿನ ಕಾಲದಲ್ಲಿ ದೊಡ್ದ ವಿಷಯವೇನಲ್ಲ ಬಿಡು. ಆದರೆ ಇದೇನು ಕವರ್ ಒಳಗೆ ಎರಡು ನೂರು ರೂಪಾಯಿಗಳು?

ಶ್ರೀಮತಿ: ನಾನು ಯಾರನ್ನಾದರೂ ಬಾಯ್ ಫ್ರೆಂಡ್ ಮಾಡಿಕೊಂಡಾಗ ಅವರ ಹೆಸರಿನಲ್ಲಿ ಒಂದು ಅಕ್ಕಿ ಕಾಳನ್ನು ಈ ಕವರ್ ನಲ್ಲಿ ಹಾಕುತ್ತಿದ್ದೆ. ಕವರ್ ಪೂರ್ತಿ ತುಂಬಿದಾಗ ನಾನು ಅದನ್ನು ಮಾರುತ್ತಿದ್ದೆ. ಈ ಎರಡು ನೂರು ರೂಪಾಯಿಗಳು ಅಕ್ಕಿ ಮಾರಿ ಸಿಕ್ಕ ಹಣ !

***

ಕುಡಿತ

ಡಾಕ್ಟರ್: ಹೇಗಿದ್ದೀರಿ? ಕುಡಿಯೋದನ್ನು ಬಿಟ್ಟಿದ್ದೀರೋ ಇಲ್ಲವೋ?

ಗಾಂಪ: ಈಗ ಕುಡಿಯೋದನ್ನು ಬಿಟ್ಟಿದ್ದೇನೆ ಡಾಕ್ಟ್ರೇ, ಆದರೆ ಯಾರಾದರೂ ಬಲವಂತ ಮಾಡಿದರೆ ಮಾತ್ರ ಕುಡಿಯುತ್ತೇನೆ.

ಡಾಕ್ಟರ್: ಒಳ್ಳೇಯದು, ಇದ್ಯಾರು ನಿಮ್ಮ ಜೊತೆ, ನಿಮ್ಮ ತಮ್ಮನಾ?

ಗಾಂಪ: ಅಲ್ಲ ಡಾಕ್ಟ್ರೇ, ಕುಡಿಯಲು ನನಗೆ ಬಲವಂತ ಮಾಡುವಂತೆ ನಾನು ಕೆಲಸಕ್ಕೆ ಇಟ್ಟು ಕೊಂಡ ವ್ಯಕ್ತಿ !

***

ಪರಿಚಯ

ಅಪರೂಪಕ್ಕೆ ರಸ್ತೆಯಲ್ಲಿ ಹಳೆಯ ಗೆಳೆಯರಾದ ಗಾಂಪ ಮತ್ತು ಸೂರಿಯ ಭೇಟಿಯಾಗುತ್ತದೆ.

ಗಾಂಪ: ನನ್ನ ಹೆಂಡತಿ ಬಹಳ ಜೋರು. ನನ್ನನ್ನೇ ಮೂರ್ಖ, ಕೆಲಸಕ್ಕೆ ಬಾರದವನು ಅಂತೆಲ್ಲ ಬೈತಾಳೆ. ನಿನ್ನ ಹೆಂಡತಿ ಹೇಗೆ?

ಸೂರಿ: ನನ್ನ ಹೆಂಡತಿಯು ನಿನ್ನನ್ನು ಹಾಗೆಲ್ಲ ಬೈಯಲಿಕ್ಕಿಲ್ಲ ಬಿಡು. ಏಕೆಂದರೆ, ಅವಳಿಗೆ ನಿನ್ನ ಪರಿಚಯವೇ ಇಲ್ಲ. ಒಮ್ಮೆ ನನ್ನ ಮನೆಗೆ ಬಾ ಪರಿಚಯ ಮಾಡಿಸುತ್ತೇನೆ.

***

ಕಹಿ ಕುಡಿಯುವ ಕಷ್ಟ

ಗಾಂಪ ಶ್ರೀಮತಿಗೆ ಒಂದು ಪೆಗ್ ವಿಸ್ಕಿ ಹಾಕಿ ಕೊಟ್ಟ. 

ಶ್ರೀಮತಿ: ಛೇ...ತುಂಬಾ ಕಹಿ ಇದೆ..ರೀ…

ಗಾಂಪ: ಮತ್ತೆ ನೀನೇನು ಅಂದುಕೊಂಡೆ? ನಾನು ದಿನಾ ಪಾನಕದಂತೆ ಸಿಹಿ ಕುಡಿತಿದ್ದೀನಿ ಅಂದುಕೊಂಡ್ಯಾ? ನಾನೂ ಈ ಕಹಿಯನ್ನೇ ಕುಡಿತಿದ್ದೀನಿ. ಅದರ ಕಷ್ಟ ನನಗೇ ಗೊತ್ತು !

***

ಆಲಸ್ಯ ಎಂದರೆ…

ಗಾಂಪ: ಪರೀಕ್ಷೆಯಲ್ಲಿ ಏನು ಕೇಳಿದ್ದರು?

ಸೂರಿ: ‘ಆಲಸ್ಯವೆಂದರೆ ಏನು?’ ಎಂಬ ಬಗ್ಗೆ ಐದು ಪುಟಗಳಷ್ಟು ದೊಡ್ಡದಾದ ಪ್ರಬಂಧ ಬರೆಯಲು ಹೇಳಿದ್ದರು.

ಗಾಂಪ: ಅದಕ್ಕೆ ನೀನು ಏನಂತ ಬರೆದೆ?

ಸೂರಿ: ನಾಲ್ಕು ಪುಟಗಳಷ್ಟು ಖಾಲಿ ಬಿಟ್ಟು, ಕೊನೆಯ ಪುಟದಲ್ಲಿ ದೊಡ್ಡದಾಗಿ ‘ಆಲಸ್ಯವೆಂದರೆ ಇದೆ’ ಎಂದು ಬರೆದಿಟ್ಟು ಬಂದೆ.

***

ಮದುವೆ ವಾರ್ಷಿಕೋತ್ಸವ

ಶ್ರೀಮತಿ: ರೀ, ನಮ್ಮ ಮದುವೆಯಾಗಿ ಇವತ್ತಿಗೆ ಐದು ವರ್ಷ ಪೂರ್ತಿ ಆಯ್ತು.

ಗಾಂಪ: ಹೋ... ಹಾಗಾ! ಮತ್ತೆ ಚುನಾವಣೆ ಮಾಡೋ ಚಾನ್ಸ್ ಉಂಟಾ, ಅಥವಾ ಇದೇ ಸರ್ಕಾರ ಮತ್ತೆ ಮುಂದುವರಿಯುತ್ತಾ...?

(ಸಂಗ್ರಹ)

ಚಿತ್ರ ಕೃಪೆ: ಅಂತರ್ಜಾಲ ತಾಣ