'ಸಂಪದ' ನಗೆ ಬುಗ್ಗೆ - ಭಾಗ ೭೯
ಎಣ್ಣೆ ಹಾಕದ ಅಡುಗೆ
ಗಾಂಪ ನಗರದ ಮುಖ್ಯ ರಸ್ತೆಯಲ್ಲಿ ಹೊಸದಾಗಿ ಹೋಟೇಲ್ ಹಾಕಿದ. “ಇಲ್ಲಿ ಎಣ್ಣೆ ಹಾಕದೇ ಅಡುಗೆ ಮಾಡಲಾಗುತ್ತದೆ. ಧೈರ್ಯವಾಗಿ ಬನ್ನಿ, ಆರೋಗ್ಯಕರ ಆಹಾರವನ್ನು ತೃಪ್ತಿಯಾಗಿ ತಿಂದು ಹೋಗಿ.” ಎಂದು ದೊಡ್ಡದಾಗಿ ಬೋರ್ಡ್ ಬರೆಸಿ ಹಾಕಿದ. ಮರುದಿನ ಉದ್ಘಾಟನೆ ಮುಗಿಯುತ್ತಿದ್ದಂತೆ ಜನರಾಶಿ ಬಂದು ಸೇರಿತು. ಎಣ್ಣೆ ಇಲ್ಲದೆ ಹೇಗೆ ಅಡುಗೆ ಸಿದ್ಧವಾಗುತ್ತದೆ ಎಂದು ನೋಡುವ ಕೌತುಕ ಎಲ್ಲರಲ್ಲಿಯೂ ಮನೆ ಮಾಡಿತ್ತು. “ದೇವರಾಣೆಗೂ ನಿಜ. ನೀವೇ ನೋಡಿ ಅಡುಗೆ ಮಾಡುವಾಗ ನಮ್ಮ ಅಡುಗೆಯವನು ಯಾವತ್ತೂ ಎಣ್ಣೆ ಹಾಕುವುದಿಲ್ಲ. ಕೆಲಸ ಮುಗಿಸಿಕೊಂಡು ಮನೆಗೆ ಹೋಗುವಾಗ ಮಾತ್ರ ಎಣ್ಣೆ ಹಾಕುತ್ತಾನೆ !” ಎಂದ ಗಾಂಪ.
***
ಫಲಿತಾಂಶ ಮುಖ್ಯ
ತನ್ನ ಆಡಳಿತದಲ್ಲಿ ಪ್ರಜೆಗಳನ್ನು ಸಿಕ್ಕಾಪಟ್ಟೆ ಗೋಳು ಹೊಯ್ದುಕೊಂಡ ಒಬ್ಬ ಅತಿ ಕೆಟ್ಟ ರಾಜ ಮತ್ತು ಪ್ರಜೆಗಳನ್ನು ತನ್ನ ಮಕ್ಕಳಂತೆ ನೋಡಿಕೊಳ್ಳುತ್ತಿದ್ದ ಇನ್ನೊಬ್ಬ ರಾಜ ಇಬ್ಬರೂ ಸತ್ತು ದೇವ ಲೋಕದ ದಾರಿ ಹಿಡಿದರು. ಇನ್ನೇನು ಸ್ವರ್ಗ, ನರಕ ಎರಡೂ ಹತ್ತಿರ ಬಂದವು. ಮೊದಲು ಇಬ್ಬರೂ ಸ್ವರ್ಗದ ಬಾಗಿಲಲ್ಲಿ ಹೋಗಿ ನಿಂತರು. ಅಲ್ಲಿ ನಿಂತಿದ್ದ ಕಾವಲುಗಾರ ಗಾಂಪ ಇಬ್ಬರನ್ನೂ ತಡೆದು ನಿಲ್ಲಿಸಿ ಚೆಕ್ ಮಾಡೋಕೆ ಶುರು ಮಾಡಿದ. ಮೊದಲು ಕೆಟ್ಟ ರಾಜನ ಸರದಿ ಬಂತು. ಕಾವಲುಗಾರ ಗಾಂಪ ಅವನ ಹಿಸ್ಟರಿ ತೆಗೆದು ನೋಡಿದ. ಅವನನ್ನು ನೋಡಿ ಮುಗುಳ್ನಕ್ಕು, ಬನ್ನಿ ಸ್ವಾಮಿ ನಿಮಗೆ ಸ್ವರ್ಗದ ಬಾಗಿಲು ತೆರೆದಿದೆ ಎಂದು ಅವನಿಗೆ ಚಿನ್ನದ ಕಿರೀಟ ತೊಡಿಸಿ, ತಣ್ಣನೆಯ ಪಾನೀಯ ಕೊಟ್ಟು ಒಳಗೆ ಕರೆದುಕೊಂಡ. ಇದನ್ನೆಲ್ಲಾ ನೋಡುತ್ತಿದ್ದ ಒಳ್ಳೆಯ ರಾಜ, ಅಂಥ ಕೆಟ್ಟವನಿಗೇ ಇಷ್ಟು ಮರ್ಯಾದೆ ಸಿಕ್ಕಮೇಲೆ, ನನಗೆ ಇನ್ನೆಷ್ಟು ಸಿಗಬೇಡ ಎಂದುಕೊಂಡು ಖುಷಿಯಿಂದ ಮುಂದೆ ಹೋದ. ಇವನನ್ನು ತಡೆದು ನಿಲ್ಲಿಸಿದ ಗಾಂಪ ಇವನ ಹಿಸ್ಟರಿ ತೆಗೆದು ನೋಡಿದ. ನಂತರ ತಲೆ ಎತ್ತಿ ಇವನ ಮುಖ ನೋಡಿದವನೇ, ತನ್ನ ಮುಖ ಸಿಂಡರಿಸಿಕೊಂಡು, ನಿನಗೆ ಇಲ್ಲಿ ಜಾಗವಿಲ್ಲ, ನೀನು ನರಕಕ್ಕೆ ಹೋಗಬಹುದು. ಅಂದ. ಈ ರಾಜನಿಗೆ ಆಶ್ಚರ್ಯ ಮತ್ತು ಸಿಟ್ಟು ಎರಡೂ ಒಟ್ಟಿಗೆ ಬಂತು. ಅದೇ ಸಿಟ್ಟಿನಲ್ಲಿ, ಇದ್ಯಾವ ನ್ಯಾಯ? ಅವನು ಪ್ರಜೆಗಳಿಗೆ ಎಷ್ಟೆಲ್ಲಾ ಕಿರುಕುಳ ಕೊಟ್ತವನು, ಅವನಿಗೆ ನೋಡಿದರೆ ಅಷ್ಟೊಂದು ಮರ್ಯಾದೆ, ಗೌರವ. ನಾನು ನನ್ನ ಪ್ರಜೆಗಳನ್ನು ಮಕ್ಕಳಂತೆ ನೋಡಿಕೊಂಡವನು. ನನಗೆ ಯಾಕೆ ಇಂಥಾ ಅನ್ಯಾಯ? ದೇವ ಲೋಕದಲ್ಲೂ ಈ ರೀತಿ ಮೋಸವೇ? ಅಂತ ಕಾವಲುಗಾರ ಗಾಂಪನನ್ನು ಕೇಳಿದ. ಅದಕ್ಕೆ ಗಾಂಪ ಹೇಳಿದ, ನೋಡಪ್ಪಾ, ಇದರಲ್ಲಿ ಮೋಸ ಏನಿಲ್ಲ. ನಿನ್ನ ಆಡಳಿತದಲ್ಲಿ ಪ್ರಜೆಗಳು ನೆಮ್ಮದಿಯಾಗಿ ನಿದ್ರೆ ಮಾಡುತ್ತಿದ್ದರು. ಆದರೆ ಅದೇ ಅವನ ಆಡಳಿತದಲ್ಲಿ ಪ್ರತಿ ಕ್ಷಣವೂ ದೇವರೇ, ನಮ್ಮನ್ನು ಕಾಪಾಡು ಅಂತ ಬೇಡಿಕೊಳ್ತಾ ಇದ್ರು. ಅದಕ್ಕೇ ದೇವರಿಗೆ ಆ ರಾಜನೇ ಹೆಚ್ಚು ಇಷ್ಟ. ಪ್ರಯತ್ನ ಮುಖ್ಯ ಅಲ್ಲ. ಫಲಿತಾಂಶ ಮಾತ್ರ ಮುಖ್ಯ ಗೊತ್ತಾಯ್ತಾ?!
***
ಪ್ರಾಣ ಸ್ನೇಹಿತ
ಗಾಂಪ ತನ್ನ ಹೆಂಡತಿ ಶ್ರೀಮತಿ ಜೊತೆ ತುಂಬಾ ಹೊತ್ತಿನವರೆಗೂ ಮಾತಾಡದೆ ಕುಳಿತು ಬಿಟ್ಟಿದ್ದ. ಕೊನೆಗೆ ಮೌನ ಮುರಿದ ಶ್ರೀಮತಿ “ಯಾಕೆ ಸುಮ್ಮನೆ ಕುಳಿತಿದ್ದೀರಿ, ಮಾತಾಡ್ತನೇ ಇಲ್ಲ?” ಎಂದಳು. ಅದನ್ನೇ ಕಾಯುತ್ತಿದ್ದ ಗಾಂಪ, “ನಿನ್ನೆಯ ದಿನ ನನ್ನ ಗೆಳೆಯ ಸೂರಿ ನನಗೆ ಅಷ್ಟೆಲ್ಲಾ ಹೇಳುವಾಗ ನೀನು ಸುಮ್ಮನೇ ಇದ್ದೆ ಅಲ್ವಾ? ಅವಿವೇಕಿ ಅಂದ. ನಿಷ್ಪ್ರಯೋಜಕ, ಕೈಲಾಗದವ ಎಂದೆಲ್ಲಾ ಬಯ್ಯುತ್ತಿದ್ದಾಗ ನೀನು ಏನೂ ಅನ್ನದೇ ಸುಮ್ಮನೇ ನಿಂತಿದ್ದೆ. ನನಗೆ ಅವನು ಬೈದಿದ್ದಕ್ಕಿಂತ ನೀನು ಸುಮ್ಮನಿದ್ದದ್ದೇ ಹೆಚ್ಚು ಬೇಜಾರಾಯ್ತು.” ಅಂದ. “ಹೌದು ರೀ, ನಿನ್ನೆಯಷ್ಟೇ ಅಲ್ಲ, ನನಗೆ ಈಗಲೂ ಆಶ್ಚರ್ಯವಾಗುತ್ತಿದೆ. ಅವನು ನಿಮ್ಮನ್ನು ಎಷ್ಟು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾನಲ್ಲ ಅಂತ. ಅವನಾಡಿದ ಒಂದೊಂದು ಮಾತೂ ನಿಮಗೇ ಹೇಳಿ ಮಾಡಿಸಿದಂತೆ ಇದ್ವು ಅಲ್ವಾ? ನಿಜವಾಗಿಯೂ ಅವನೇ ನಿಮ್ಮ ಪ್ರಾಣದ ಗೆಳೆಯ ಕಣ್ರೀ..." ಎಂದಳು ಶ್ರೀಮತಿ.
***
ಪಾಲು !
ಗಾಂಪ ಮತ್ತು ಸೂರಿ ರಸ್ತೆಯಲ್ಲಿ ಹೋಗುತ್ತಿರುವಾಗ ಎರಡು ಸಾವಿರ ರೂಪಾಯಿಯ ನೋಟು ರಸ್ತೆಯಲ್ಲಿ ಬಿದ್ದಿರುವುದನ್ನು ನೋಡಿದರು.
ಗಾಂಪ: ಏನು ಮಾಡೋಣ ಈಗ?
ಸೂರಿ: 50 : 50 ಹಂಚಿಕೊಳ್ಳೋಣ
ಗಾಂಪ: ಹಾಗಾದ್ರೆ ಉಳಿದ 1900 ರೂ ಏನು ಮಾಡೋದು?!
***
ಪದಕ
ಗಾಂಪ ಸೂರಿಗೆ ನ್ಯೂಸ್ ಪೇಪರ್ ಓದಿ ಹೇಳುತ್ತಿದ್ದ. ಅದು ಅವನ ಪ್ರತಿನಿತ್ಯದ ರೂಢಿಯಾಗಿತ್ತು. ಸುದ್ದಿಯೊಂದು ಹೀಗಿತ್ತು…
ಗಾಂಪ: ಭಾರತದ ಲಾಂಗ್ ಜಂಪ್ ಆಟಗಾರರೊಬ್ಬರು ಚಿನ್ನದ ಪದಕ ಕಳೆದುಕೊಂಡಿದ್ದಾರೆ.
ಸೂರಿ: ಅಯ್ಯೋ.. ಆತ ಲಾಂಗ್ ಜಂಪ್ ಮಾಡುವಾಗ ಚಿನ್ನದ ಪದಕ ಏಕೆ ಹಾಕಿಕೊಳ್ಳಬೇಕಿತ್ತು. ಮನೆಯಲ್ಲಿಟ್ಟು ಬರಬಾರದಿತ್ತಾ?
***
ಸಕಾರಣ !
ಗಾಂಪ: ಇವತ್ತು ಸಿನೆಮಾ ನೋಡಲು ಹೋಗೋಣವೇ?
ಸೂರಿ: ಡಾಕ್ಟರ್ ಹತ್ತಿರ ಅಪಾಯಿಂಟ್ ಮೆಂಟ್ ಇದೆಯಲ್ಲಾ…
ಗಾಂಪ: ಫೋನ್ ಮಾಡಿ, ನನಗೆ ಹುಷಾರಿಲ್ಲ. ಅಪಾಯಿಂಟ್ ಮೆಂಟ್ ಕ್ಯಾನ್ಸಲ್ ಮಾಡಿ ಅಂತ ಹೇಳು !
***
ಉರಿಯೋ ಗಾಯಕ್ಕೆ…
ಗಾಂಪ: ನಿಮ್ಮಪ್ಪ ಉರಿಯೋ ಗಾಯಕ್ಕೆ ಉಪ್ಪು ಹಾಕೋದು ಇನ್ನೂ ಬಿಟ್ಟಿಲ್ವಾ?
ಶ್ರೀಮತಿ: ಯಾಕ್ರೀ ಏನಾಯ್ತು?
ಗಾಂಪ: ಇವತ್ತು ಮತ್ತೆ ಫೋನ್ ಮಾಡಿ ಕೇಳ್ತಾ ಇದ್ದಾರೆ, ನನ್ನ ಮಗಳನ್ನು ಮದುವೆಯಾಗಿ ಖುಷಿಯಲ್ಲಿದ್ದೀರಿ ತಾನೇ? ಅಂತ !
***
ವ್ಯತ್ಯಾಸ
ಗಾಂಪ: ಪ್ರೀತಿಗೂ ಮದುವೆಗೂ ಏನು ವ್ಯತ್ಯಾಸ?
ಸೂರಿ: ಪ್ರೀತಿ ಅಂದರೆ ಬಸ್ ನಲ್ಲಿ ಪ್ರಯಾಣ ಮಾಡಿದ ಹಾಗೆ. ಮದ್ವೆ ಆದ್ರೆ ವಿಮಾನದಲ್ಲಿ ಪ್ರಯಾಣಿಸಿದ ಹಾಗೆ.
ಗಾಂಪ: ಅದು ಹೇಗೆ?
ಸೂರಿ: ಬಸ್ ನಲ್ಲಾದರೆ ಮಾರ್ಗದ ಮಧ್ಯೆ ಎಲ್ಲಿಯಾದ್ರೂ ಇಳ್ಕೋಬಹುದು. ಅದೇ ವಿಮಾನದಲ್ಲಾದರೆ ಇಳಿಯೋಕೆ ಆಗುತ್ತಾ? ಮದ್ವೆನೂ ಹಾಗೇ!
***
(ಸಂಗ್ರಹ)
ಚಿತ್ರ ಕೃಪೆ: ಅಂತರ್ಜಾಲ ತಾಣ