'ಸಂಪದ' ನಗೆ ಬುಗ್ಗೆ - ಭಾಗ ೮೭

'ಸಂಪದ' ನಗೆ ಬುಗ್ಗೆ - ಭಾಗ ೮೭

ಸ್ವಲ್ಪ ಕೆಳಗೆ

ಭಾರತ, ಚೀನಾ ಮತ್ತು ಅಮೇರಿಕಾದ ನಾಗರಿಕರು ಲೋಕಾಭಿರಾಮವಾಗಿ ಬಡಾಯಿ ಕೊಚ್ಚಿಕೊಳ್ಳುತ್ತಿದ್ದರು. 

ಅಮೇರಿಕಾ ಪ್ರಜೆ: ನಾವು ಆಕಾಶದ ಮೇಲೆಯೆ ವಿಮಾನ ಬಿಡುತ್ತೇವೆ. 

ಉಳಿದಿಬ್ಬರ ಪ್ರಶ್ನೆ: ಆಕಾಶಕ್ಕಿಂತ ಮೇಲೆ? ಅದು ಹೇಗೆ ಸಾಧ್ಯ?

ಅಮೇರಿಕಾ ಪ್ರಜೆ: ಆಕಾಶಕ್ಕಿಂತ ಸ್ವಲ್ಪ ಕೆಳಗೆ ಅಷ್ಟೇ.

ಚೀನಾ ಪ್ರಜೆ: ನಾವು ಸಮುದ್ರ ತಳಕ್ಕಿಂತ ಕೆಳಗೆ ಹಡಗು ನಡೆಸುತ್ತೇವೆ.

ಉಳಿದಿಬ್ಬರು: ತಳಕ್ಕಿಂತ ಕೆಳಗೆ ಅಸಾಧ್ಯವೇ ಸರಿ.

ಚೀನಾ ಪ್ರಜೆ: ಸ್ವಲ್ಪ ಮೇಲೆ ಅಷ್ಟೇ.

ಭಾರತೀಯ: ನಾವು ಮೂಗಿನಲ್ಲೇ ಊಟ ಮಾಡುತ್ತೇವೆ

ಉಳಿದಿಬ್ಬರು: ಮೂಗಿನಲ್ಲಿ ಊಟ ಮಾಡೋದಾ? ಅಸಾಧ್ಯದ ಮಾತು

ಭಾರತೀಯ: ಸ್ವಲ್ಪ ಕೆಳಗೆ ಅಷ್ಟೇ !

***

ವಿಷವೇರದ ರಹಸ್ಯ

ಗಾಂಪ ಒಂದು ಕಾಡಿನಲ್ಲಿ ಸುತ್ತಾಡುತ್ತಿದ್ದ. ಆಗ ಒಂದು ಹಾವು ಆತನ ಕಾಲಿಗೆ ಕಚ್ಚಿತು. ಗಾಂಪನಿಗೆ ಸಿಟ್ಟು ಬಂತು ಮತ್ತು ಕಾಲು ಮುಂದೆ ಮಾಡಿ “ಇಗೋ ಕಚ್ಚು. ಎಷ್ಟು ಬೇಕೋ ಅಷ್ಟು ಕಚ್ಚು." ಎಂದ. ಹಾವು ಮತ್ತೆ ಮೂರ್ನಾಲ್ಕು ಬಾರಿ ಕಚ್ಚಿತು. ಕೊನೆಗೆ ಸುಸ್ತಾಗಿ ಕೇಳಿತು. “ನೀನು ಮನುಷ್ಯನೇನಯ್ಯಾ? ಇಷ್ಟು ಕಚ್ಚಿದರೂ ಮರದಂತೆ ನಿಂತೇ ಇದೀಯಲ್ಲ" ಎಂದಿತು. ಗಾಂಪ ಉತ್ತರಿಸಿದ. “ ನಾನು ಮನುಷ್ಯನೇ ಕಣಯ್ಯಾ ಮರವಲ್ಲ. ಆದರೆ ನನ್ನ ಈ ಕಾಲು ಮರದಿಂದ ಮಾಡಿದ್ದು. ನಕಲಿ" ಎಂದ !

***

ಲೆಗ್ ಬ್ರೇಕ್

ಶಾಲೆಗೆ ರಜೆ ಇದ್ದರೆ ಮುಗಿಯಿತು. ಗಾಂಪ ಮತ್ತು ಆತನ ಮಗ ಮರಿ ಗಾಂಪನ ನಡುವೆ ಟಿವಿ ರಿಮೋಟ್ ಗಾಗಿ ಕದನ ನಡೆಯುತ್ತಾ ಇರುತ್ತೆ. ಮರಿಗಾಂಪನಿಗೆ ಮೊಬೈಲ್ ಸಿಗದೇ ಇದ್ದಾಗ ಆತ ಟಿವಿ ರಿಮೋಟ್ ಗಾಗಿ ಇನ್ನಿಲ್ಲದ ಕಿತಾಪತಿ ಮಾಡುತ್ತಾನೆ. ಆತನಿಗೆ ಕಾರ್ಟೂನ್ ನೋಡುವ ತವಕ. ಗಾಂಪನಿಗೆ ಕ್ರಿಕೆಟ್ ಪಂದ್ಯಾಟ ನೋಡುವ ಹುಚ್ಚು. ಆ ದಿನ ಗಾಂಪ ಕ್ರಿಕೆಟ್ ಮ್ಯಾಚ್ ನೋಡುತ್ತಿದ್ದಾಗ ಅಲ್ಲಿಗೆ ಬಂದ ಮರಿ ಗಾಂಪ ರಿಮೋಟ್ ಗಾಗಿ ಹೊಂಚು ಹಾಕುತ್ತಾ ಕುಳಿತಿದ್ದ. ಅದೇ ಸಮಯ ಟಿವಿಯಲ್ಲಿ ಬೌಲರ್ ಒಬ್ಬನ “ಲೆಗ್ ಬ್ರೇಕ್" ಬೌಲಿಂಗ್ ಶೈಲಿಯ ಬಗ್ಗೆ ವೀಕ್ಷಕ ವಿವರಣೆಯಲ್ಲಿ ಮಾಹಿತಿ ನೀಡುತ್ತಿದ್ದರು. ಅದನ್ನು ಕೇಳಿದ ಮರಿ ಗಾಂಪ ಕೂಡಲೇ ತನ್ನ ಅಪ್ಪನ ಬಳಿ “ ಅಪ್ಪಾ ನೋಡು ಬೌಲರ್ ನ ಕಾಲು ಮುರಿಯಿತಂತೆ (ಲೆಗ್ ಬ್ರೇಕ್) ಇನ್ನು ಮ್ಯಾಚ್ ಇಲ್ಲ. ಕೊಡು ರಿಮೋಟ್" ಎಂದು ರಿಮೋಟ್ ಕಿತ್ತುಕೊಂಡು ತನ್ನ ಇಷ್ಟದ ಕಾರ್ಟೂನ್ ನೋಡ ತೊಡಗಿದ. ಗಾಂಪ ಗಪ್ ಚುಪ್ ಎಂದು ಮಗನನ್ನೇ ನೋಡುತ್ತಿದ್ದ !

***

ಯಜಮಾನರ ಕುಡಿತ

ಶ್ರೀಮತಿ: ನಮ್ಮ ಯಜಮಾನರು ಈಗೆಲ್ಲ ಕುಡಿಯೋದನ್ನು ಹಂತ ಹಂತವಾಗಿ ನಿಲ್ಲಿಸ್ತಿದ್ದಾರೆ.

ತಾರಾ: ತುಂಬಾ ಸಂತೋಷ ಕಣೆ. ಸದ್ಯ ಒಳ್ಳೆಯದಾದರೆ ಸಾಕು.

ಶ್ರೀಮತಿ: ಅಯ್ಯೋ ರಾಮ, ನಾನು ಹೇಳಿದ್ದು ನಿಂಗೆ ಸರಿಯಾಗಿ ಅರ್ಥ ಆದಂಗಿಲ್ಲ. ಜಯನಗರ ೧ನೇ ಹಂತ, ೨ನೇ ಹಂತ ಬಿಟ್ಟು ೩ನೇ ಹಂತದಲ್ಲಿ ಮಾತ್ರ ಕುಡಿಯೋಕೆ ಹೋಗ್ತಿದ್ದಾರೆ. ದಿನೇ ದಿನೇ ಹಂತ ಬಿಡ್ತವ್ರೆ!

***

ಸಾವಿನ ಕಾರಣ

ಗಾಂಪ: ಪಕ್ಕದ ಮನೆಯವರ ಹೆಂಡತಿಗೆ ಏನಾಗಿತ್ತಂತೆ? ಅವರು ಸತ್ತಿದ್ದಾದ್ರೂ ಹೇಗೆ?

ಶ್ರೀಮತಿ: ದವಸ ಧಾನ್ಯಗಳ ಬೆಲೆ ಜಾಸ್ತಿಯಾಯಿತು. ಹಾಗಾಗಿ ಸತ್ತು ಹೋದಳು.

ಗಾಂಪ: ಹುಚ್ಚಿಯಂತೆ ಮಾತನಾಡಬೇಡ. ದವಸ ಧಾನ್ಯಗಳ ರೇಟು ಜಾಸ್ತಿಯಾದರೆ ಯಾರಾದ್ರೂ ಸಾಯ್ತಾರಾ?

ಶ್ರೀಮತಿ: ನಾನು ಇದೇ ಕಣ್ಣಿನಿಂದ ಡೆತ್ ಸರ್ಟಿಫಿಕೇಟ್ ನೋಡಿದ್ದೀನಿ. ಅದರಲ್ಲಿ ಹಾಗೇ ಬರೆದಿತ್ತು.

ಗಾಂಪ: ಏನು ಬರೆದಿತ್ತು.

ಶ್ರೀಮತಿ: Death due to High Pulse rate ಅಂತ ಬರೆದಿತ್ತು !

***

ಕಾರಣ

ಪ್ರೇಮಿಗಳ ದಿನದಂದು ಅಜ್ಜ ಅಜ್ಜಿಯರಾಗಿದ್ದ ಗಾಂಪ ಮತ್ತು ಶ್ರೀಮತಿ ತಮ್ಮ ಯೌವನದ ದಿನಗಳನ್ನು ಮರು ಸೃಷ್ಟಿಸಲು ಬಯಸಿದರು.

ಗಾಂಪಜ್ಜ ಗುಲಾಬಿ ಹೂವು ತೆಗೆದುಕೊಂಡು, ಅವರು ಮೊದಲು ಪರಿಚಯವಾದ ಬಸ್ ಸ್ಟಾಪ್ ನಲ್ಲಿ ಕಾಯುತ್ತಾ ಇದ್ದ. ಗಾಂಪಜ್ಜನಿಗೆ ಮೈಯೆಲ್ಲಾ ರೋಮಾಂಚನ, ಕಾಲು ನಡುಗುತ್ತಾ ಇತ್ತು. ತುಂಬಾ ಬೆವೆತು ಬಿಟ್ಟರು. ಎಷ್ಟೇ ಹೊತ್ತು ಕಾದರೂ ಶ್ರೀಮತಿ ಅಲ್ಲಿಗೆ ಬರಲೇ ಇಲ್ಲ.

ಸಿಟ್ಟಿನಿಂದ ಮನೆಗೆ ಬಂದು “ಲೇ.. ಬಸ್ ಸ್ಟಾಪ್ ಗೆ ಯಾಕೆ ಬರಲಿಲ್ಲ?” ಅಂತ ಕೇಳಿದ. ಅದಕ್ಕೆ ಪ್ರತಿಯಾಗಿ ಶ್ರೀಮತಿ ನಾಚುತ್ತಾ “ ಸಾರಿ ಜಾನು, ಈ ದಿನ ಪ್ರೇಮಿಗಳ ದಿನ ಅಂತ ನಮ್ಮ ಅಮ್ಮ ನನ್ನನು ಹೊರಗೆ ಹೋಗೋಕೆ ಬಿಡಲಿಲ್ಲ" ಅಂದಳು !

***

ವಾಸನೆ

ಗಾಂಪ: ಪಲಾವ್ ನಲ್ಲಿ ಟೂತ್ ಪೇಸ್ಟ್ ವಾಸನೆ ಬರ್ತಾ ಇದೆಯಲ್ಲಾ

ಶ್ರೀಮತಿ: ಲವಂಗ, ಉಪ್ಪು, ಪುದೀನಾ ಇರಲಿಲ್ಲ. ಪೇಸ್ಟ್ ನಲ್ಲಿ ಅದೆಲ್ಲಾ ಇದೆ ಎಂಬ ಜಾಹೀರಾತು ನೋಡಿದ್ದೆ. ಅದ್ಕೆ ಅದನ್ನೇ ಹಾಕಿದೆ. !

***

(ಸಂಗ್ರಹ) 

ಚಿತ್ರ ಕೃಪೆ: ಅಂತರ್ಜಾಲ ತಾಣ