ಸಂಪದ ಸಂಮಿಲನ ೨ ( 13.06.10 )
ಸುಮಾರು ದಿನಗಳಿಂದ ಕಾಯುತ್ತಿದ್ದ, ಸಂಪದದ ಸಂಮಿಲನದ ಆ ಸುದಿನದ ರಸ ಘಳಿಗೆ ಬಂದೇ ಬಿಟ್ಟಿತ್ತು.
ಬೆಳಿಗ್ಗೆ ಎಲ್ಲರೂ ದೊಮ್ಮಲೂರಿನ ಸಿ ಐ ಎಸ್ ಭವನದಲ್ಲಿ ಒಟ್ಟು ಸೇರಿದೆವು. ನಾವೆಣಿಸಿದ್ದಕ್ಕಿಂತ ಜಾಸ್ತಿಯೇ ಜನರು ಸೇರಿದ್ದು, ಅತಿಥಿಗಳನ್ನೂ ಸೇರಿದಂತೆ ಎಲ್ಲರಿಗೂ ವಿಸ್ಮಯ ಮತ್ತು ಖುಷಿ ಎರಡೂ ಮೇಳೈಸುವಂತೆ ಆಗಿತ್ತು, ಇಲ್ಲಿಯವರೆಗೆ ಬರೇ ನಮ್ಮ ನಮ್ಮ ಲೇಖನಗಳಿಂದಲೇ ಪರಿಚಯೀ ಸ್ನೇಹಿತರಾಗಿದ್ದ ನಾವೆಲ್ಲಾ ಮುಖತಃ ಭೇಟಿಯಾಗುತ್ತಿರುವುದೇ ಎಲ್ಲರಿಗೂ ದೊಡ್ಡ ಸಂತಸದ ವಿಷಯವೇ ಆಗಿತ್ತು .
ಆರಂಬಿಕ ಪರಿಚಯದ ಮಾತುಕಥೆ ಮುಗಿಸಿ, ನಿಜವಾದ ಕಾರ್ಯಕ್ರಮ ಆರಂಭವಾಯ್ತು. ಕವಿ ಪ್ರೇಮಿ, ಚಟುವಟಿಕೆಯ ಆಗರವಾದ ಹರೀಶ್ ಆತ್ರೇಯ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ದಂಗು ಬಡಿಸಿದರು. ಯಾರಿಗೂ ಸ್ವಲ್ಪವೂ ಸಪ್ಪೆ ಎನಿಸದ ಹಾಗೆ ಪ್ರತಿಯೊಬ್ಬರನ್ನೂ ಅವರವರ ಪರಿಚಯ ಅವರವರ ಉತ್ತಮ ಲೇಖನ ಅಥವಾ ಕವಿತೆಗಳಿಂದಲೇ ಆರಂಭಿಸಿದ್ದು ಹಾಗೂ ಎಲ್ಲಿಯೂ ಬೇಸರಕ್ಕೆಡಮಾಡದೇ, ಎಕತಾನತೆ ತಾರದೇ ವೈವಿಧ್ಯಮಯವಾಗಿ ಬರುವಂತೆ ರೂಪಿಸಿದ್ದು ಅವರ ಉದಯೋನ್ಮುಖ ಚಟುವಟಿಕೆಗಳ ಹಾಗೂ ತನ್ನತನವನ್ನು ಎತ್ತಿ ತೋರಿಸುತ್ತಿತ್ತು. ಕೊನೆಯವರೆಗೂ ಯಾರ್ಯಾರು ಈ ಕಾರ್ಯಕ್ರಮಕ್ಕೆ ಬರಲಿದ್ದಾರೆ ಎಂಬುದು ಗೊತ್ತಿಲ್ಲದಿದ್ದರೂ ಎಲ್ಲಾ ಹಾಜರಾದ ಸಂಪದಿಗರ ವಿವರಗಳನ್ನು ತಾವೇ ಸ್ವತಹ ಹೆಕ್ಕಿ ತೆಗೆದು ಅದನ್ನು ಪ್ರಿಂಟ್ ಮಾಡಿಯೂ ತಂದಿದ್ದು ಅವರ ಕಾರ್ಯ ಕುಶಲತೆಗೆ ಸಾಕ್ಷಿಯಾಗಿ, ನಮ್ಮ ಈ ದಿನದ ಕಾರ್ಯಕ್ಷಮತ್ವತೆಗೆ ಮೂಲ ಕಾರಣೀ ಭೂತರಾಗಿದ್ದ ಹರಿಪ್ರಸಾದ ನಾಡಿಗರ ಅಯ್ಕೆಗೆ ತಲೆದೂಗಲೇ ಬೇಕಾಗಿತ್ತು.
ವಯ್ಯಕ್ತಿಕವಾಗಿ ನಾನು ನಾಡಿಗರನ್ನು ಅವರ ಈ ಸಂಪದದಂತಹಾ ಉತ್ತಮ ಅಭಿರುಚಿಯನ್ನು ಪ್ರತಿ ಕನ್ನಡಿಗರಲ್ಲಿ ಮೂಡಿಸುವ ಉತ್ತಮಕಾರ್ಯವನ್ನು ಅರಂಭಿಸಿದುದಕ್ಕಾಗಿ ಅಭಿನಂದಿಸಲೆಂದೇ ಹೆಚ್ಚು ಮುತುವರ್ಜಿ ವಹಿಸಿ ಇವತ್ತಿನ ಈ ಕಾರ್ಯಕ್ರಮಕ್ಕೆ ಹಾಜರಾಗಿದ್ದೆ, ಏಕೆಂದರೆ ನನ್ನಲ್ಲಿನ ಕವಿತ್ವವನ್ನು ಕನ್ನಡದ ಬಗೆಗಿನ ಗೌರವವನ್ನು ಹೆಚ್ಚಿಸುವಂತೆ ಮಾಡಿ ಅನೇಕಾನೇಕ ಉತ್ತಮ ಸಂಪದಿಗರನ್ನು ಪರಿಚಯಮಾಡಿಸಿ, ಅವರೆಲ್ಲರ ಉತ್ತಮೋತ್ತಮ ಲೇಖನಗಳನ್ನು ಉಣಬಡಿಸುವಂತೆ ಮಾಡಿದ್ದೂ ಅಲ್ಲದೇ ಉತ್ತಮೋತ್ತಮ ಶ್ರೇಷ್ಠ ಗೆಳೆಯರನ್ನೂ ದೊರಕಿಸಿಕೊಟ್ಟ ಈ ಸಂಪದಕ್ಕೆ ನಾನು ಚಿರಋಣಿ. ಅವರೇ ಸ್ವತಹ ಕರೆಮಾಡಿ ಸ್ವಲ್ಪ ಮಟ್ಟಿಗೆ ಅವರನ್ನು ಮುಖತಃ ಭೇಟಿಯಾಗದ ಬೇಗುದಿಯನ್ನು ಕಡಿಮೆ ಮಾಡಿದ್ದರು.
ಹಾಗೆ ಹೇಳುವುದಾದರೆ ನಾವು ಬೇರೆಯವರ ಲೇಖನ,ಕವಿತೆ, ಕಥೆಗಳನ್ನು ನಮ್ಮ ನಮ್ಮ ದೃಷ್ಟಿಯಲ್ಲೇ ಓದುವುದಕ್ಕೂ, ಬರೆದವರ ಅಂದಿನ ಅದೇ ಯೋಚನೆಯೊಂದಿಗೆ ಅವರೊಡನೆಯೇ ಬೆರೆತು ಅನುಭವಿಸುವದಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಹೆಸರು ಮಾತ್ರದಿಂದ ತಮ್ಮ ತಮ್ಮ ಕೃತಿಗಳಿಂದ ನಮ್ಮ ಮನ ಸೂರೆಗೊಂಡ ಚೇತೂ, ಆತ್ರೇಯ, ಈ ಮುಖಾ ಮುಖಿಯಿಂದ ಇನ್ನೂ ಆತ್ಮೀಯರಾಗಿ ನಮ್ಮ ಮನೆಯವರೇ ಅನ್ನಿಸಿದರು. ಇನ್ನು ತರುಣ ಕವಿ ತೇಜಸ್ವೀಯವರ "ಗುರಿ", ಮತ್ತಿತರ ಕವನ ವಾಚನದಿಂದ ನೆರೆದವರೆಲ್ಲರ ಮನಸೂರೆಗೊಂಡರೆ, ಆತ್ಮೀಯ ಚುಟುಕು ಕವಿ ಚೇತನ್ ಕೂಡುವಳ್ಳಿಯವರಿಂದ ಕಾವ್ಯವಾಚನ ಮತ್ತು ಚುಟುಕದಿಂದ ನಮ್ಮೆಲ್ಲರ ಮನಗೆದ್ದರು. ನಾಗರಾಜರವರಿಂದ ಸಂಪದ ಪರಿಚಯ ಹಾಗೂ ಮಳೆನೀರಿನ ಕೊಯ್ಲಿನ ಬಗೆಗೆ ವಿಶೇಷ ಜ್ಞಾನವರ್ಧಕ ಮಾತುಗಳನ್ನಾಡಿದರು. ಹೊಳೆನರಸೀಪುರ ಮಂಜುನಾಥರು ತಮ್ಮ ವಿಶೇಷ ಗಂಭೀರ ಕಂಠ ಸಿರಿಯಿಂದ ತಮ್ಮ ವಿಶಿಷ್ಟ ಕಥೆ "ಅಫಘಾತ"ದ ಮಾಯಾಲೋಕಕ್ಕೆ ಕೊಂಡೊಯ್ದರೆ,ಶ್ರೀಮತಿ ಶ್ಯಾಮಲಾ ಜನಾರ್ಧನನ್ ಅವರು ತಮ್ಮ ಕಥಾವಾಚನ ಹಾಗೂ ತಮ್ಮದೇ ವಿಶೇಷ ಶೈಲಿಯ ವಿಮರ್ಶೆಯನ್ನೂ ನಮಗೆಲ್ಲರಿಗೂ ಉಣಬಡಿಸಿದರು. ಶ್ರೀಮತಿ ರೂಪಾ ರವರು ಸಂಪದದೊಂದಿಗಿನ ತಮ್ಮ ಸಂಭಂದದ ಅನಿಸಿಕೆಯನ್ನೂ ಮತ್ತು ಚಿಕ್ಕಚೊಕ್ಕ ಕಥೆಯನ್ನೂ ಅವರದೇ ಶೈಲಿಯಲ್ಲಿ ವಾಚಿಸಿ ರಂಜಿಸಿದರೆ, ಸಂಪದಿಗರೆಲ್ಲರ ಮೆಚ್ಚಿನ ಆತ್ಮೀಯ ಆಸುಮನ ಅವರು "ಸಖಿ, ಬೆಳೆಯುವದೆಂತು,ಮತ್ತು ಸಂಗಾತಿ ಯಾವಾಗ ಬೇಕು" ಎಂಬಂತಹ ಅರ್ಥಗರ್ಭಿತ,ಹಾಗೂ ಅಮೂಲ್ಯ ಹಾಗೂ ವೈಶಿಷ್ಟ ಪೂರ್ಣ ಕಾವ್ಯ ವಾಚಿಸಿ ನಮ್ಮೆಲ್ಲರ ಮನ ಗೆದ್ದರು. ಆತ್ಮೀಯ, ಹಿರಿಯ, ಚೇತನ ಕವಿ ನಾಗರಾಜ ಅವರಿಂದ ಸಂಪದದ ಬೆಳವಣಿಗೆ ಹೇಗೆ ? ಹಾಗೂ ನಮ್ಮೆಲ್ಲರ ಸಾಂಸ್ಕೃತಿಕ ಬೆಳವಣಿಗೆಯ ಬಗೆಗಿನ ಹಿತವಚನ ಮತ್ತೆ ಮತ್ತೆ ಕೇಳುವಂತಿತ್ತು. ಸಭೆ ಹಾಗೂ ಕಾರ್ಯಕ್ರಮದ ಆರಂಭ ಪ್ರಾರ್ಥನೆ ಮತ್ತು ಹಾಡುಗಳನ್ನು ಶ್ರೀಮತಿ ಶಾಂತಿ ಗೋಪೀನಾಥ್ ತಮ್ಮ ಸುಶ್ರಾವ್ಯ ಕಂಠದಿಂದ ಹಾಡಿದ್ದರೆ, ನಮ್ಮೆಲ್ಲರ ಅಚ್ಚುಮೆಚ್ಚಿನ ಕವಿ, ಪ್ರೇಮಿ, ಹಾಗೂ ಪ್ರಶಂಶನೀಯ ಸೂತ್ರಧಾರ ಹರೀಶ್ ರಿಂದ "ಉತ್ತರ ಕವನ" ವಾಚನ ಕೇಳುವಂತಿತ್ತು.ಮಧ್ಯೆ ಮಧ್ಯೆ ನಡೆದ ಮಾತು ಕಥೆಯೂ ಇವೆಲ್ಲವಕ್ಕೂ ಕಳಶವಿಟ್ಟಂತೆ ಸೊಗಸಾಗಿ ಮೌಲ್ಯವರ್ಧಿಸುವಂತಿತ್ತು. ಅಂಜನ ಕುಮಾರ ಅವರಿಂದ ಮಾತು ಕಥೆ ತಮ್ಮ ಅನುಭವದ ಹಿತವಚನ ಮೆಲುಕು ಹಾಕುವಂತಿತ್ತು.
ವಾರವಿಡೀ ಏಕತಾನತೆಯಲ್ಲಿ ಕೆಲಸ ಆಫೀಸು ಅಂತ ಇದ್ದವರಿಗೆ, ಅದೆಲ್ಲವನ್ನೂ ಒಂದು ದಿನದ ಮಟ್ಟಿಗೆ ಮರೆಯಲು, ಮತ್ತು ತಮ್ಮ ತಮ್ಮ ಒಳಗಿನ ಸ್ವಂತಿಕೆಯನ್ನು ತಮ್ಮಂತವರೆದುರೇ ತೋರಿಸಲು ಅನುವು ಮಾಡಿಕೊಟ್ಟಂತಹ ಈ ಸಂಪದ ಸಂಮಿಲನ ಕಾರ್ಯಕ್ರಮ ಒಂದು ವರದಾನವೇ ಸರಿ. ತಾವು ಸ್ವತಹ ಬಾರದಿದ್ದರೂ ನಮಗೆಲ್ಲರಿಗೂ ಮಧ್ಯೆ ಮಧ್ಯೆ ಸ್ಪೂರ್ತಿ ಸೆಲೆಯಂತೆ ಜಲ ಪಾನದ, ಕಾಫಿ ಬಿಸ್ಕಿಟ್ ನ ವ್ಯವಸ್ಥೆ ಮಾಡಿಸಿದ್ದು, ನಾಡಿಗರ ಗೈರು ಹಾಜರಿಯನ್ನು ಮತ್ತೆ ಮತ್ತೆ ನೆನಪಿಸುವಂತಿತ್ತು. ಅಂತೂ ಈ ಸಂಪದ ಸಂಮಿಲನ ವಾಸ್ತವದಲ್ಲಿ ನಮ್ಮೆಲ್ಲರ ಕಣ್ಮನ ಸೂರೆಗೊಂಡು ನಿಜದ ಅರ್ಥ ಮೂಡಿಸಿತು. ಸಂಪದದ ಸಂಮಿಲನ ಸಾವಿರ ಸಾವಿರ ಸಂಖ್ಯೆಯಲ್ಲಿ ಸಂಪದಿಗರನ್ನು ಸೇರಿಸಿ ಮಾಡುವಂತಹದ್ದಾಗಲಿ ಎಂದು ಹಾರೈಸುತ್ತ, ಮರೆಯಲಾಗದಂತಹ ಅನುಭವವನ್ನು ಕೊಟ್ಟ ಈ ಸಂಪದಕ್ಕೆ ಅನಂತಾನಂತ ಧನ್ಯವಾದಗಳನ್ನು ಅರ್ಪಿಸುತ್ತೇನೆ.
ಸಂಪದದ ಸಂಮಿಲನ ಸ್ಥಳ : ಕೃಪೆ CIS ಭವನ ದೊಮ್ಮಲೂರು
ಸಂಪದ ಸಂಮಿಲನ ಆಯ್ದ ಚಿತ್ರಗಳು
( http://sampada.net/image/26035 )