ಸಂಪದ :ಸಮುದಾಯಕ್ಕೆ ವರ

ಸಂಪದ :ಸಮುದಾಯಕ್ಕೆ ವರ

ಬರಹ

ನನಗೂ ಅಂತರ್ಜಾಲಕ್ಕೂ ಬಹಳ ನಂಟು. ಇತರರಿಂದ ಮೊದಲೇ ಅಂತರ್ಜಾಲದ ಬಗ್ಗೆ ಆಕರ್ಷಿತನಾದೆ. ಅದರೂ ಬಹಳ ಸಮಯ ಸಂಪದದ ಬಗ್ಗೆ ನನಗೆ ತಿಳಿದಿರಲಿಲ್ಲ.ಬಹುಶ: ಸಂಪದದ ಬಗೆಗಿನ ಸುಧಾ ಬರಹ(ಪವನಜ ಬರೆದದ್ದೇ?)ಓದಿದ ನಂತರವೇ ನಾನು ಇಲ್ಲಿ ನೋಂದಾಯಿಸಿಕೊಂಡೆ.

ಸಂಪದದಿಂದ ಆಗಿರುವ ಉಪಯೋಗವನ್ನು ಅಳೆಯುವುದೇ ಕಷ್ಟ.
ನಾನು ತಂತ್ರಜ್ಞಾನದ ಬಗೆಗಿನ ಲೇಖನಗಳನ್ನು ಗೂಗಲ್ ನ್ಯೂಸಿನಲ್ಲಿ ನೋಡುತ್ತಿರುತ್ತೇನೆ. ಆದರೂ ಗೂಗಲ್ ಕ್ರೋಮಿನ ಬಿಡುಗಡೆ, ಕನ್ನಡ ಫೈರ್‌ಪಾಕ್ಸ್, ಲಿನಕ್ಸ್ ಮತ್ತು ಕನ್ನಡ,ವರ್ಚುವಲ್ ಬಾಕ್ಸ್ ಎಂಬ vmwareಗೆ ಸರಿ ಸಮಾನ ಪ್ಯಾಕೇಜ್, ವೈಫಿ ಸುಭದ್ರಗೊಳಿಸುವಿಕೆ ಬಗ್ಗೆ, ಕನ್ನಡ ವಿಕಿಪೀಡಿಯ ಚಟುವಟಿಕೆ ಬಗ್ಗೆ, ಬಂಬು ಡಿಜಿಟೈಸರ್ ಪೆನ್‌ಗಳ ಬಗ್ಗೆ.... ಹೀಗೆ ಉಪಯುಕ್ತ, ದೈನಂದಿನ ಜೀವನದಲ್ಲಿ ಬೇಕಾಗುವ ಸುದ್ದಿ ಸಮಾಚಾರಗಳು ತಿಳಿದದ್ದು ಸಂಪದದ ಸಹವಾಸದಿಂದ! (ಇತ್ತೀಚೆಗಿನ ಕೆಲವನ್ನು ಮಾತ್ರಾ ಉಲ್ಲೇಖಿಸಿದ್ದೇನೆ)
ಅಂದಹಾಗೆ ಫೈರ್‌ಪಾಕ್ಸಿನಲ್ಲಿ ಇಂಟರ್ನೆಟ್ ಟ್ಯಾಬ್ ಆಪ್ಷನ್, ವೈನ್ ಬಳಸಿ ವಿಂಡೋಸ್ ತಂತ್ರಾಂಶವನ್ನು ಲಿನಕ್ಸಿನಲ್ಲಿ ಬಳಸುವುದು ಇಲ್ಲಿಂದಲೇ ನನ್ನ ಗಮನಕ್ಕೆ ಬಂತು.ಟೈನಿ ಯುಆರೆಲ್,ಪಿಕಾಸದ ಬಳಕೆಯಿಂದ ಚಿತ್ರಗಳ ಸ್ಲೈಡ್ ಶೋ ಸಂಪದದ ಮೂಲಕವೆ ತಿಳೀತು.

ನನ್ನ ಬರಹಗಳನ್ನು ಓದಿ ಮಹೇಶ ಟೀಕಿಸುವವರೆಗೆ ಸಂಸ್ಕೃತ ಮತ್ತು ಕನ್ನಡ ಪದಗಳ ಬಗೆಗೆ ನಾನು ಗಮನ ಕೊಟ್ಟಿದ್ದೇ ಕಡಿಮೆ.ಜಿ ಟಿ ನಾರಾಯಣ ರಾವ್ ಅವರಂತಹ ಬರಹಗಾರರ ಮಾದರಿ ನನ್ನ ಮುಂದಿತ್ತು. ಸರಳವಾಗಿ ಬರೆಯಿರಿ ಎಂದು ಮಹೇಶ್ ಸದಾ ಬೆನ್ನು ಬಿದ್ದು ಸಂಪದದಲ್ಲಿ "ಬುದ್ಧಿ" ಹೇಳಿದ್ದರಿಂದ ಇಷ್ಟಾದರೂ ಸುಧಾರಿಸಿದ್ದೇನೆ.(ಇನ್ನೂ ಸುಧಾರಣೆ ಆಗಬೇಕಿದೆ ಎನ್ನುತ್ತೀರಿ ಅನ್ನುವುದು ಗೊತ್ತು).ಈಗ ಸಾಧ್ಯವಾದಷ್ಟು ಕನ್ನಡ ಒರೆಗಳ ಬಳಕೆಗೆ ಪ್ರಯತ್ನಿಸುತ್ತೇನೆ.

ಡಿಜಿಟಲ್ ಗ್ರಂಥಾಲಯ,ಅಲ್ಲಿ ಇರುವ ಕನ್ನಡದ ಪುಸ್ತಕಗಳು ಇವೆಲ್ಲವೂ ಇಲ್ಲೇ ತಿಳಿಯುತ್ತಿತ್ತು.ಆನ್‌ಲೈನಿನಲ್ಲಿ ಪುಟವನ್ನು ಓದಲು ಸಾಧ್ಯವಾಗುತ್ತಿತ್ತು. ಒಂದೇ ಸಲಕ್ಕೆ ಪುಸ್ತಕ ಇಳಿಸಿಕೊಳ್ಳುವ ಸಲಕರಣೆಯನ್ನು ಸಂಪದಿಗರು ಮಾಡಿ ಎಲ್ಲರ ಜತೆ ಹಂಚಿಕೊಂಡಿದ್ದರು. ಪುಸ್ತಕವನ್ನು ಹಲವು ಭಾಗವಾಗಿಸಿ ಉಳಿಸುವ ಡೌನ್‌ಲೋಡರನ್ನು ಸುನಿಲ್ ನನಗೆ ಕಳುಹಿದ್ದು ಸಂಪದದ ಮೂಲಕವೇ.

ಇನ್ನು ಘಟಾನುಘಾಟಿಗಳ ಜತೆ ಸರಸವಾಡಲು ಸಾಧ್ಯವದದ್ದು ಸಂಪದದ ಕೃಪೆಯಿಂದಲೇ. ಹಾಡು,ಕನ್ನಡ,ತಂತ್ರಜ್ಞಾನ,ಹಳೆಗನ್ನಡ,ಪತ್ರಿಕೆಗಳ ವರದಿಗಳು,ಸಾಧನ ಸಲಕರಣೆಗಳು,ಹೊಸ ತಂತ್ರಾಂಶಗಳು, ಚಿತ್ರಗಳು,ಒಗಟುಗಳು,ನೀರಿನ ನಿಶ್ಚಿಂತೆ,ಫೊಟೋಗ್ರಫಿ,ಆಧ್ಯಾತ್ಮಿಕ ವಿಷಯಗಳು ಕನ್ನಡ ಪದಗಳ ಬಗೆಗಿನ ಚರ್ಚೆ(ಕೆಲವೊಮ್ಮೆ ಅನಗತ್ಯ ಎನಿಸುವಷ್ಟು) ಸಂಪದದ ಮೂಲಕ ಆಗುತ್ತಿರುತ್ತದೆ. ಇದರ ಲಾಭವನ್ನು ನಮ್ಮ ಮಾತು,ವ್ಯವಹಾರಗಳು,ಜೀವನಶೈಲಿ ಇವೆಲ್ಲವುಗಳನ್ನು ನೋಡಿದರಷ್ಟೇಗೊತ್ತಾದೀತು.ಆರೋಗ್ಯ,ಕೃಷಿಯ ಬಗೆಗಿನ ಸಂಪದದ ಚಾನೆಲ್ ಕೂಡಾ ಹಲವು ಬಾರಿ ಉಪಯುಕ್ತ ಮಾಹಿತಿ ನೀಡುತ್ತಿವೆ.

(ಇದೆಲ್ಲ ನೆನಪಿಸಿಕೊಂಡದ್ದು "ಸಂಪದ ಬ್ಲಾಗ್‌ನಿಂದ ಏನು ಉಪಯೋಗ?" ಎಂಬ ಚರ್ಚೆಯಿಂದ.)