ಸಂಪಾದಕೀಯ: ೨೦೦೮ಕ್ಕೆ ಗುಡ್ ಬೈ

ಸಂಪಾದಕೀಯ: ೨೦೦೮ಕ್ಕೆ ಗುಡ್ ಬೈ

ಬರಹ

 

ಹೆದರಬೇಡಿ.ಮೊದಲೇ ಹೇಳಿಬಿಡುತ್ತೇವೆ, ನಮ್ಮ ದಿನಪತ್ರಿಕೆಗಳ ಘನಗಂಭೀರ ಸಂಪಾದಕರು ಮಾಡುವಂತೆ 
ನಾವು ವರ್ಷದ ಕೊನೆಯ ದಿನ ಕುಳಿತು ಚಾರ್ಟೆಡ್ ಅಕೌಂಟೆಂಟ್ ಥರ ಕಳೆದ ಮುನ್ನೂರ ಅರವತ್ನಾಲ್ಕು
ದಿನಗಳು ಚಿಲ್ಲರೆ ಘಂಟೆಗಳಲ್ಲಿ ಮಾಡಿದ ಸಾಧನೆಗಳು, ಕಟ್ಟಿದ ಮಹಲುಗಳು, ಬೀಳಿಸಿದ ಮಳಿಗೆಗಳ ಲೆಕ್ಕ
ಹಾಕುತ್ತಾ ಕೂರುವುದಿಲ್ಲ. ಇಲ್ಲವೇ ನಮ್ಮ ಹೈ ಫೈ ಟೈಮ್ಸಾಫಿಂಡಿಯಾದಂತೆ ನೀವು ಹೊಸ ವರ್ಷದ
ರಾತ್ರಿಯನ್ನು ನಿಶೆಯಲ್ಲಿ ಕಳೆಯಲು ಬೆಂಗಳೂರಿನ ಯಾವ ಯಾವ ಮೂಲೆಯನ್ನು ಸೇರಬೇಕು ಎಂಬುದರ ವಿವರ
ಕೊಡಲು ಹೋಗುವುದಿಲ್ಲ. ಬದುಕುವುದನ್ನು ಕಲಿಸುವುದಕ್ಕಾಗಿ ಬದುಕುತ್ತಿರುವ ಗುರುಗಳ ಹಾಗೆ ಹೊಸ
ವರ್ಷದಲ್ಲಿ ನಿಮ್ಮ ವ್ಯಕ್ತಿತ್ವವನ್ನು ಯಾವ ಎತ್ತರಕ್ಕೆ ಕೊಂಡೊಯ್ದು ಕೆಳಕ್ಕೆ ನೂಕಬಹುದು
ಎಂಬುದನ್ನು ಕೊರೆಯಲು ಹೋಗುವುದಿಲ್ಲ. ಇಲ್ಲವೇ ನಮ್ಮ ದೇಶದ ಫುಲ್ ಟೈಮ್ ದೇಶಭಕ್ತರು ಹಾಗೂ ನೈತಿಕ
ಪೊಲೀಸರ ಹಾಗೆ ಈ ಹೊಸ ವರ್ಷಾಚರಣೆ ಎಂಬುದು ಪರದೇಶಿ ಸಂಸ್ಕೃತಿ. ಇದು ವಿಕೃತಿ. ಅಮಲು, ನಿಶೆ,
ಅಬ್ಬರ, ಹಿಂಸೆಯಲ್ಲಿ ಸಂಭ್ರಮಾಚರಣೆ ಮಾಡುವುದು ಯಾವ ಸೀಮೆ ಸಂಸ್ಕಾರ ಎಂದೆಲ್ಲಾ ದೊಡ್ಡ ದೊಡ್ಡ
ಪ್ರಶ್ನೆಗಳನ್ನು ಕೇಳಿ ಗದ್ದಲವೆಬ್ಬಿಸುವುದಿಲ್ಲ. ಅತಿ ಭಾವುಕ, ನಿರಾಶಾವಾದಿ ಬುದ್ಧಿವಂತ ಮೂರ್ಖರ
ಹಾಗೆ ಹೊಸ ವರ್ಷ ಬಂದಿತು ಅಂತ ಕುಣಿಯಬೇಡಿ, ನಿಮ್ಮ ಜೀವನದಿಂದ ಒಂದು ವರ್ಷ ಕಳೆದುಹೋಯಿತಲ್ಲ ಎಂದು
ಮರುಗಿ ಎಂದು ನಿಮ್ಮನ್ನು ಗಾಬರಿಗೊಳಿಸುವುದಿಲ್ಲ.

ಸರಿ ನಾವು ಕಮ್ಯುನಿಸ್ಟ್ ಪಕ್ಷದ ಹಾಗೆ ಬರೀ ಏನನ್ನು ಮಾಡಬಾರದು ಎಂದಷ್ಟೇ ಹೇಳುತ್ತಿರುವುದು
ಅನೇಕ ಹಿತೈಷಿಗಳಲ್ಲಿ ಗೊಂದಲ ಹುಟ್ಟಿಸುವುದರಿಂದ ಸ್ಪಷ್ಟವಾಗಿ ಹೇಳುವುದೆಂದರೆ ತಣ್ಣಗೆ ಕೂತು ಎರಡು
ಸಾವಿರದ ಎಂಟರ ಕ್ಯಾಲಂಡರನ್ನು ಮಗುಚಿ ಹಾಕಿ ಹೊಸ ಕ್ಯಾಲೆಂಡರ್ ತೆಗೆದು ಕುಳಿತುಕೊಳ್ಳುತ್ತೇವೆ
ಅಷ್ಟೇ. ನಾವು ನೋಡುತ್ತಿರುವ ಈ ಕ್ಷಣ ನಮಗೆ ಗೋಚರಿಸದ ಹಾಗೆ ಹರಿದು ಹೋಗುವಂತೆ ಈ ವರ್ಷವೂ ಕಳೆದು
ಹೋಗುತ್ತದೆ. ನಮಗೆ ಗೊತ್ತಿಲ್ಲದೆ ಕಾಲದ ಹರಿವಿನಲ್ಲಿ ನಾವು ಮುಂದಕ್ಕೆ ಹೋಗುವ ಯಾವ ಪ್ರಯತ್ನ
ಮಾಡದಿದ್ದರೂ ಕಾಲ ಹಿಂದಕ್ಕೆ ಹೋಗುತ್ತಿರುತ್ತದೆ. ವೇದಾಂತದಿಂದ ಆಘಾತಗೊಳ್ಳಬೇಡಿ, ಅತಿ
ಸಂತೋಷವಾದಾಗ, ಅತೀ ದುಃಖವಾದಾಗ ಹಾಗೂ ಮಾಡಲು ಏನೂ ಕೆಲಸವಿಲ್ಲದಾಗ ನಮಗೆ ಹೀಗೆ ವೇದಾಂತದ
ದರ್ಶನವಾಗುತ್ತಿರುತ್ತದೆ.

ಕಾಲದ ಹರಿವು ಅನಂತವಾದರೂ ನಾವು ತೃಣಮಾತ್ರರಾದ ಮಾನವರು ನಮ್ಮ ನಿಲುಕಿಗೆ ಸಿಕ್ಕಲಿ ಅಂತ
ಸಮಯವನ್ನು ಭಾಗಿಸಿ ಗುಣಿಸಿ ನಾನಾ ಹೆಸರು ಕೊಟ್ಟೆವು ಅಲ್ಲವೇ? ಆದರೆ ನಾವು ಅದೆಷ್ಟು
ಬುದ್ಧಿವಂತರೆಂದರೆ, ನಾವು ಸೃಷ್ಟಿಸಿಕೊಂಡ ಅನುಕೂಲವನ್ನೇ ಅನಾನಕೂಲವನ್ನಾಗಿಸಿ ಕೊಳ್ಳುತ್ತೇವೆ.
ಬೇಕಾದಾಗ ಕೂಡಲೇ ಸಿಕ್ಕಲಿ ಎಂದು ನಾವು ವಸ್ತುವೊಂದನ್ನು ಇರಿಸಿದಾಗ ಜಾಗ ಶೀರ್ಷಾಸನ ಹಾಕಿದರೂ
ಹೊಳೆಯುವುದಿಲ್ಲ. ಹಾಗೇ ಕ್ಯಾಲೆಂಡರ್ ಎಂಬ ಉಪಕರಣದಿಂದ ನಾವು ಕಾಲವನ್ನೇ ಗೆದ್ದು ಬಿಟ್ಟೆವು ಎಂದು
ಸಂಭ್ರಮಿಸುತ್ತಿರುವಾಗಲೇ ‘ಅಯ್ಯೋ ಸೋಮವಾರ ಬಂತಪ್ಪಾ’ ‘ಅಯ್ಯೋ ಇವತ್ತು ಮಂಗಳವಾರ, ನಾನು ದುಡ್ಡು
ಕೊಡಲ್ಲ’ ‘ಹುರ್ರಾ ಇವತ್ತು ಶನಿವಾರ...’ ಎಂದೆಲ್ಲಾ ಹುಚ್ಚರ ಹಾಗೆ ಭ್ರಮಿಸುತ್ತೇವೆ. ಕ್ಯಾಲೆಂಡರ್
ಎಂಬ ಚಿಲ್ಲರೆ ಸಂಗತಿ ಇಲ್ಲದೇ ಹೋಗಿದ್ದರೆ ನಮಗೆ ಶನಿವಾರ ಯಾವುದು ಭಾನುವಾರ ಯಾವುದು ಅಂತಲೇ
ತಿಳೀತಿರಲಿಲ್ಲ ಅಲ್ಲವೇ? ಆಗ ಕಾಲೇಜಲ್ಲಿ ಸೋಮವಾರ ಎಕ್ಸಾಮು ಅಂದರೆ ನಾವು ದಿಕ್ಕೆಟ್ಟು ಕಂಗಾಲಾಗಿ
ರಾತ್ರಿ ಇಡೀ ಕಣ್ಣೆವೆ ನೋಯಿಸಿ ಓದುವ ಶ್ರಮ ತೆಗೆದುಕೊಳ್ಳದೆ ಸಾವಕಾಶವಾಗಿ ಓದಿ ಮುಗಿದ ದಿನವನ್ನೇ
ಸೋಮವಾರವಾಗಿಸಿಕೊಳ್ಳಬಹುದಿತ್ತು. ಮುಂದಿನ ಭಾನುವಾರ ನಿನ್ನ ದುಡ್ಡು ಕೊಟ್ಟು ಬಿಡುತ್ತೇನೆ ಎಂದು
ಸಾಲಗಾರ ಜಗತ್ತಿನಲ್ಲಿ ಎಷ್ಟು ಮಂದಿಗೆ ಬೇಕಾದರೂ ಮಾತು ಕೊಡಬಹುದಿತ್ತು!

ವರ್ಷವೊಂದು ಹೇಗೋ ಕಳೆದು ಹೋಯ್ತು. ಬರುತ್ತಿರುವ ಹೊಸ ವರ್ಷವನ್ನು ಹೊಸ ಹೆಂಡತಿಯನ್ನು
ನೋಡಿಕೊಳ್ಳುತ್ತೇನೆ ಎಂದು ಕನಸು ಕಾಣುತ್ತಿರುವವರು, ಹೊಸ ವರ್ಷದಲ್ಲಿ ಮಾಡಬೇಕಾದ ಕೆಲಸಗಳನ್ನು
ಪಟ್ಟಿ ಮಾಡುತ್ತಾ ಕುಳಿತವರು, ಹೊಸ ವರ್ಷಕ್ಕೆ ಕುಡಿತ ಬಿಡಬೇಕು, ಸಿಗರೇಟು ಬಿಡಬೇಕು, ಕೈಕೊಟ್ಟು
ಹೋದ ಹುಡುಗಿಯ ಮರೀಬೇಕು, ಹಿಂದಿನ ಮನೆಯ ಹುಡುಗನೊಂದಿಗಿನ ಅಫೇರು ಕಡಿದುಕೊಳ್ಳಬೇಕು, ದೇವರನ್ನು
ನಂಬಲು ಶುರುಮಾಡಬೇಕು, ಸ್ನಾನ ಮಾಡುವಾಗ ಹಾಡುವುದನ್ನು ನಿಲ್ಲಿಸಬೇಕು, ಪ್ಯಾಂಟಿನ ಜಿಪ್
ಹಾಕಿಕೊಳ್ಳುವುದನ್ನು ಮರೆಯಬಾರದು, ಮೇಕಪ್ ಖರ್ಚು ಕಡಿಮೆ ಮಾಡಿಕೊಳ್ಳಬೇಕು, ಯಾರೊಂದಿಗೂ ಜಗಳ
ಮಾಡಬಾರದು, ಸಿಟ್ಟು ಕಡಿಮೆ ಮಾಡಿಕೊಳ್ಳಬೇಕು, ತಲೆಯಲ್ಲಿ ಕೂದಲು ಹೆಚ್ಚು ಬೆಳೆಸಿಕೊಳ್ಳಬೇಕು.
ಹೊಟ್ಟೆ ಕರಗಿಸಬೇಕು, ಬ್ಯಾಂಕ್ ಬ್ಯಾಲೆನ್ಸ್ ಬೆಳೆಸಬೇಕು. ಮದುವೆಯಾಗಬೇಕು, ಡಿವೋರ್ಸ್ ಪಡೆಯಬೇಕು-
ಎಂದೆಲ್ಲಾ ರೆಸೊಲ್ಯೂಶನ್ ಮಾಡಿಕೊಳ್ಳುತ್ತಿರುವವರು ಪ್ರತಿವರ್ಷದಂತೆ ಈ ವರ್ಷವೂ ಈ ಲೇಖನ
ಓದಲಿಕ್ಕಾಗದಷ್ಟು ಬ್ಯುಸಿಯಿರುವುದರಿಂದ ಅವರಿಗೆ ಏನೂ ಹೇಳುವುದಿಲ್ಲ. ಉಳಿದವರಿಗೆ ಹೇಳುವುದಿಷ್ಟೇ,
ದೇವರು ಕರುಣಾಮಯಿ, ಹಾಸ್ಯ ಪ್ರಜ್ಞೆ ಇರುವವ, ನಾವು ಎಷ್ಟೇ ವರ್ಷಗಳನ್ನು ಹಡಾಲೆದ್ದು ಹೋಗುವಂತೆ
ಬದುಕಿ ತೋರಿಸಿದರೂ, ನಾವು ಹೊಸ ದಿನವನ್ನು, ಹೊಸ ಬೆಳಗನ್ನು ಯಕ್ಕುಟ್ಟಿ ಹೋಗುವಂತೆ ಮಾಡಿ
ತೋರಿಸಿದರೂ, ನಮಗೆ ಮತ್ತೆ ಮತ್ತೆ ಹೊಸ ವರ್ಷವನ್ನು ನೀಡುತ್ತಿದ್ದಾನೆ, ಹೊಸ ದಿನವನ್ನು, ಹೊಸ
ಕ್ಷಣವನ್ನು ನೀಡುತ್ತಿದ್ದಾನೆ. ನಾವು ತಾಳ್ಮೆ ಕಳೆದುಕೊಳ್ಳುವುದು ಬೇಡ, ಪ್ರಯತ್ನವನ್ನು ಬಿಡುವುದು
ಬೇಡ. ನಾವು ಹೀಗೇ ಎಡಬಿಡಂಗಿಗಳ ಹಾಗೆ ೨೦೦೯ರ ವರ್ಷವನ್ನೂ ಉಡಾಯಿಸಿ ಹಾಕುತ್ತೇವೆ ನೋಡುತ್ತಿರು
ಎಂದು ದೇವರಿಗೆ ಸವಾಲು ಎಸೆಯಬೇಕು! ಏನಂತೀರಿ?