ಸಂಪೂರ್ಣ ಶರಣಾಗದೇ ಜ್ಞಾನೋದಯ ಅಸಾಧ್ಯ!

ಸಂಪೂರ್ಣ ಶರಣಾಗದೇ ಜ್ಞಾನೋದಯ ಅಸಾಧ್ಯ!

ಬಾಹುಬಲಿ ಅನೇಕ ಯುದ್ಧಗಳನ್ನು ಮಾಡಿದ್ದ. ಒಂದು ಹಂತದಲ್ಲಿ ತನ್ನ ಸ್ವಂತ ಸಹೋದರನ ವಿರುದ್ಧವೇ ಯುದ್ಧ ಮಾಡಿದ್ದ. ಆಗ ಅನೇಕ ಸೈನಿಕರು ಮೃತಪಟ್ಟು, ಯುದ್ಧಭೂಮಿಯ ತುಂಬೆಲ್ಲಾ ಮೃತ ದೇಹಗಳು ಬಿದ್ದು ರಕ್ತದ ನದಿಯೇ ಹರಿದಿತ್ತು.

ಇವೆಲ್ಲವನ್ನೂ ಕಂಡ ಬಾಹುಬಲಿಗೆ ಆಘಾತವಾಯಿತು. ಅವನೊಳಗೊಂದು ಪರಿವರ್ತನೆ ಸಂಭವಿಸಿತು. ನಾನೇಕೆ ಇಷ್ಟೊಂದು ಜೀವಗಳನ್ನು ಬಲಿ ತೆಗೆದುಕೊಂಡೆ ಎಂಬ ಪ್ರಶ್ನೆ ಅವನಲ್ಲಿ ಉದ್ಭವಿಸಿತು. ಆದರೆ ಅವನಿಗೆ ಉತ್ತರ ಸಿಗಲಿಲ್ಲ. ಆ ಮರುಕ್ಷಣವೇ ಯುದ್ಧ ಹಾಗೂ ಅವನು ಮಾಡುತ್ತಿದ್ದ ಎಲ್ಲ ಕೆಲಸಗಳನ್ನೂ ತ್ಯಜಿಸಿದ.

ತದೇಕ ಚಿತ್ತನಾಗಿ ಒಂದು ಇಂಚೂ ಕದಲದಂತೆ, ಹದಿನಾಲ್ಕು ವರ್ಷಗಳ ಕಾಲ ಆಳವಾದ ಧ್ಯಾನದಲ್ಲಿ ಒಂದೇ ಕಡೆ ನಿಂತುಬಿಟ್ಟ. ಆ ಸಾಧನೆಯ ತೀವ್ರತೆಯಿಂದಾಗಿ ತನಗೆ ಅಂಟಿಕೊಂಡಿದ್ದ ಅನೇಕ ವಿಷಯಗಳಿಂದ ಬಾಹುಬಲಿ ಮುಕ್ತಿಯನ್ನು ಪಡೆದ.

ಇಡೀ ಜಗತ್ತೇ ಗೆಲ್ಲಲು ಬಯಸಿದಂತಹ ಆ ವ್ಯಕ್ತಿ, ಒಂದು ಕತ್ತೆಗೂ ಸಹ ನಮಸ್ಕರಿಸಲು ಸಿದ್ಧನಾಗಿ, ಅಸಾಧಾರಣವಾದ ನಮ್ರತೆಯಿಂದ ನಿಂತ. ಆದರೆ ಅವನಿಗೆ ಜ್ಞಾನೋದಯವಾಗಲಿಲ್ಲ. ಆ ಹದಿನಾಲ್ಕು ವರ್ಷಗಳಲ್ಲಿ ಅವನು ಯಾರ ಬಳಿಯೂ ಒಂದು ಮಾತನ್ನೂ ಸಹ ಆಡಿರಲಿಲ್ಲ ಮತ್ತು ಯಾವುದೇ ಕಾರಣಕ್ಕೂ ತಾನು ನಿಂತ ಜಾಗದಿಂದ ಕದಲಿರಲಿಲ್ಲ. ಆದರೆ ತನಗೇಕೆ ಜ್ಞಾನೋದಯವಾಗಲಿಲ್ಲ ಎನ್ನುವುದು ಅವನಿಗೆ ಅರ್ಥವಾಗಲಿಲ್ಲ. ಆದ ಆ ದಿಕ್ಕಿನಲ್ಲಿ ನಡೆಯುತ್ತಾ ಬಂದ ಒಬ್ಬ ಯೋಗಿ ಬಾಹುಬಲಿಯನ್ನು ನೋಡಿದ. ಜ್ಞಾನೋದಯವನ್ನು ಹೊಂದಲು ನಾನಿನ್ನೇನನ್ನು ಮಾದಬೇಕು ಎಂದು ಯೋಗಿಗೆ ಕೇಳಲು ಬಾಹುಬಲಿ ಹಂಬಲಿಸಿದ. ಆದರೆ ಹದಿನಾಲ್ಕು ವರ್ಷಗಳಿಂದ ಮೌನವಾಗಿ ನಿಂತಿದ್ದ ಅವನಿಗೆ ತನ್ನ ಬಾಯಿಯನ್ನು ತೆರೆದು ಪ್ರಶ್ನೆ ಹೇಳುವ ಮನಸ್ಸು ಬರಲಿಲ್ಲ. ಬದಲಾಗಿ ಅವನ ಎಡಗಣ್ಣಿನಿಂದ ಕಣ್ಣೀರಿನ ಹನಿಯೊಂದು ಕೆಳಕ್ಕುರುಳಿತು.

ನಾನು ನನ್ನ ರಾಜ್ಯ ಬಿಟ್ಟುಕೊಟ್ಟಿದ್ದೇನೆ. ನನ್ನ ಕುಟುಂಬ, ಅರಮನೆ ಮತ್ತು ನನ್ನ ಎಲ್ಲಾ ಸುಖ-ಸೌಕರ್ಯ ತ್ಯಜಿಸಿದ್ದೇನೆ. ಒಂದು ಚಿಕ್ಕ ಕೀಟಕ್ಕೂ ತಲೆಬಾಗುವ ಮಟ್ಟಿಗೆ ನಾನು ಕರಗಿಹೋಗಿದ್ದೇನೆ. ಮಾಡಲು ನನಗಿನ್ನೇನು ಉಳಿದಿದೆ ಎಂಬ ಪ್ರಶ್ನೆ ಅದರಲ್ಲಿತ್ತು. ನೀನೊಬ್ಬ ಅದ್ಭುತ ಮನುಷ್ಯನಾಗಿ ಮಾರ್ಪಟ್ಟಿರುವೆ. ಒಂದು ಹುಳ ಅಥವಾ ಕೀಟಕ್ಕೆ ನೀನು ತಲೆಬಾಗಲು ಸಿದ್ಧನಿರುವೆ, ಆದರೆ ನಿನ್ನ ಸಹೋದರನಿಗೆ ಅದೇ ರೀತಿಯಲ್ಲಿ ನಮಸ್ಕರಿಸಲು ನೀನು ಸಿದ್ಧನಿರುವೆಯಾ? ಇಲ್ಲ ಅಲ್ಲವೇ, ಅದೇ ನಿನ್ನನ್ನು ತಡೆಹಿಡಿದಿರುವ ಕಾರಣ ಎಂದು ಯೋಗಿ ಹೇಳಿದ. ಬಾಹುಬಲಿಗೆ ತನ್ನ ತಪ್ಪಿನ ಅರಿವಾಯಿತು. ನನ್ನನ್ನು ಬಂಧಿಸಿದ್ದ ತನ್ನ ಸಹೋದರನ ಮೇಲಿನ ದ್ವೇಷವನ್ನು ಕೈಬಿಟ್ಟ ತಕ್ಷಣವೇ ಅವನು ಆತ್ಮಸಾಕ್ಷಾತ್ಕಾರ ಪಡೆದ. 

ನಾವು ಕೂಡ ಜೀವನದಲ್ಲಿ ಈ ರೀತಿ ಯಾವುದೋ ಒಂದು ಚಿಕ್ಕ ಮೋಹಕ್ಕೆ ಸಿಲುಕಿಕೊಂಡು ನಮ್ಮ ಆತ್ಮ ಸಾಕ್ಷಾತ್ಕಾರದಿಂದ ದೂರ ಉಳಿದುಬಿಡುತ್ತೇವೆ. ಗುರುಗಳನ್ನು ಹುಡುಕಿಕೊಳ್ಳುತ್ತೇವೆ ಅವರು ನೀಡಿದ ಪ್ರವಚನವನ್ನು ಶಿರಸಾವಹಿಸಿ ಪಾಲಿಸುತ್ತೇವೆ. ದಿನವೂ ಇತರರಿಗೆ ಸೇವೆ ದಾನ ಮಾಡುವ ಪ್ರಯತ್ನ ಮಾಡುತ್ತೇವೆ. ನಮ್ಮಿಂದಾದಷ್ಟು ಒಳ್ಳೆಯ ವಿಚಾರಗಳಲ್ಲಿ ಗಮನವನ್ನು ಹರಿಸುತ್ತೇವೆ. ಆದರೆ ಇದೆಲ್ಲದರಾಚೆಯೂ ಒಂದು ರೀತಿಯ ಅತೃಪ್ತಿ ನಮ್ಮನ್ನು ಕಾಡುತ್ತಿರುತ್ತದೆ. ನಾವು ಸಂಪೂರ್ಣ ಶಾಂತ ಸ್ಥಿತಿ ತಲುಪಲು, ತೃಪ್ತ ಮನಸ್ಥಿತಿ ಅನುಭವಿಸಲು ಇನ್ನೇನು ಮಾಡಬೇಕು ಎಂಬ ವಿಚಾರ ನಮ್ಮೊಳಗೆ ನಿರಂತರವಾಗಿ ಕೊರೆಯುತ್ತಿರುತ್ತದೆ. ಆದರೆ ನಾವಿಲ್ಲಿ ಒಂದು ಯೋಚಿಸಬೇಕು, ಕೊನೆಯದಾಗಿ ನಮಗೆ ಸಿಗುವ ಮಾನಸಿಕ ನೆಮ್ಮದಿ ಶಾಂತಿಗಾಗಿ ಇವುಗಳನ್ನೆಲ್ಲ ಮಾಡುವ ಬದಲು ಇವನ್ನೇ ನಮ್ಮ ಜೀವನ ಕ್ರಮ ಮಾಡಿಕೊಂಡರೆ ನಾವು ಅರ್ಹ ಮನುಷ್ಯರಾಗಲು ಸಾಧ್ಯ. ಸೇವೆ, ದಾನ, ತ್ಯಾಗ ಇವುಗಳೆಲ್ಲ ಮಾಡಿ ನಮಗೆ ಕೊನೆಗೆ ಅದರಿಂದ ಯಾವುದೋ ಒಂದು ಪ್ರಯೋಜನ ಸಿಗಬೇಕು ಎಂಬ ಹಟ ಬೇಡ. ಇವನ್ನೆಲ್ಲ ಯಾವುದೇ ಪ್ರತಿಫಲ ಅಪೇಕ್ಷೆಯಿಲ್ಲದೇ ಮಾಡಿದಾಗಲೇ ನಿಜವಾಗಿಯೂ ಅದು ತನ್ನತನ ಉಳಿಸಿಕೊಳ್ಳಲು ಸಾಧ್ಯ. 

('ವಿಶ್ವವಾಣಿ' ಕೃಪೆ)

ಚಿತ್ರ ಕೃಪೆ: ಅಂತರ್ಜಾಲ ತಾಣ