ಸಂಬಂಧಗಳು

ಸಂಬಂಧಗಳು

ಕವನ

ಬೆಟ್ಟದ ನೆಲ್ಲಿಗದೆಲ್ಲಿಯ ಕಡಲುಪ್ಪಿನ ಬೆರಕೆ?

ಬಳ್ಳಿಯಲರಳಿದ ಹೂಗಳು ಬೀಳ್ವವು ಹರಿಶಿರಕೆ                 [೧]

ಸಾಗರದಾಚೆಯ ಗೇರಿಗೆ ನಮ್ಮಯ ನೆಲ ಸಾಕು

ವನಧಿಯ ಮತ್ಸ್ಯವು ಕೊಳೆಯದೆ ಉಳಿಯಲು ಹಿಮ ಬೇಕು!   [೨]

ಕಾಡಲಿ ಮೇಯುವ ಹಸುವಿಗೆ ಕರುವಿನದೇ ನೆನಪು

ಕಳ್ಳಗು ಸುಳ್ಳಗು ದೊರೆವುದು ತಾಯೊಲವಿನ ಮುಡಿಪು        [೩]

ಅಡಿಕೆಯ ಮರಗಳ ಗಾಳಿಯನುಸಿರಾಡಿದ ಹುಡುಗ

ತನ್ನನೆ ಕಳಕೊಳ್ಳುವ ನಗರದಲೆನಿತೋ ಬೇಗ !               [೪]

ಭೂಕಂಪದ ದಾವಾಗ್ನಿಗೆ ಬೆಂದಿಹ ಗಡ್ಡೆಗಳ

ಆಯುತ್ತಲಿ ಬಾಯ್ಗಿಕ್ಕುವನಿವನಾರೋ ಮರುಳ!                 [೫]

ಉಬ್ಬರದಬ್ಬರ ಕಡಲಲಿ ತೂಗಾಡುವ ಹಡಗು

ಜನಭಾರದಿ ಮುನ್ನಡೆವುದು ನೆಲೆ ದೊರೆವುದೆ ಕಡೆಗೂ?        [೬]

ಗೋಜಲು ಗೋಜಲು ಅಕ್ಷರ ಸಾರ್ಥಕ ಪದವೆಲ್ಲಿ?

ಹುಡುಕಲು ಸಾಧ್ಯವೇ ಅಲ್ಲವಿದಂಗೈಲಿಹ  ನೆಲ್ಲಿ!                [೭]