ಸಂಬಂಧಗಳ ಸ್ಥಿತಿಸ್ಥಾಪಕತ್ವ...
ಹೌದು, ಮನುಷ್ಯ ಸಂಬಂಧಗಳು ಸಹ ಪರಿಸ್ಥಿತಿ ಗುಣಲಕ್ಷಣಗಳನ್ನು ಅವಲಂಬಿಸಿ ತನ್ನ ಸ್ಥಾನವನ್ನು ಕಂಡುಕೊಳ್ಳುತ್ತವೆ. ಗಂಡ ಹೆಂಡತಿ ಅಪ್ಪ ಮಕ್ಕಳು ಇತರೆ ಸಂಬಂಧಗಳು, ಗೆಳೆತನ, ಗುರು ಶಿಷ್ಯರು, ಗ್ರಾಹಕ ಮಾರಾಟಗಾರರು ಸೇರಿ ಎಲ್ಲಾ ಸಂಬಂಧಗಳು ಈ ಸ್ಥಿತಿ ಸ್ಥಾಪಕ ಗುಣ ಹೊಂದಿರುತ್ತವೆ. ಅನುಭವದ ಆಧಾರದ ಮೇಲೆ ಹೇಳುವುದಾದರೆ...
ಬದುಕೊಂದು ದೀರ್ಘಕಾಲದ ಬಹುದೂರದ ಒಂದು ಅನಂತ ಪಯಣ. ಈ ಪಯಣದ ಹಾದಿಯಲ್ಲಿ ರಕ್ತ ಸಂಬಂಧಗಳೆಂಬ ಶಾಶ್ವತ ಮತ್ತು ಸ್ವಾಭಾವಿಕ ಜೊತೆಗಾರರ ಜೊತೆಗೆ ಅವಶ್ಯಕತೆ ಮತ್ತು ಅನಿವಾರ್ಯತೆಯ ಆಧಾರದ ಮೇಲೆ ಮತ್ತಷ್ಟು ಸಂಬಂಧಗಳು ಸೇರುತ್ತವೆ. ಆ ಸಂಬಂಧಗಳ ತೀವ್ರತೆ, ಕಾಲಾವಧಿ, ಆಪ್ತತೆ ಎಲ್ಲವನ್ನೂ ಆ ಸಂಬಂಧಗಳ ಗುಣಲಕ್ಷಣಗಳೇ ನಿರ್ಧರಿಸುತ್ತದೆ ಎನ್ನುವುದೇ ಹೆಚ್ಚು ವಾಸ್ತವ. ಇಲ್ಲಿ ನಮ್ಮ ಕ್ರಿಯೆ ಪ್ರತಿಕ್ರಿಯೆಗಳು ಮುಖ್ಯವೆಂಬುದ ನಿಜ ಆ ಕ್ರಿಯೆ ಪ್ರತಿಕ್ರಿಯೆಗಳು ಸಹ ಸಂಬಂಧಗಳೇ ನಿರ್ಧರಿಸುತ್ತವೆ.
ಹಾಗಾದರೆ ಇಲ್ಲಿ ನಮ್ಮ ಪ್ರಜ್ಞಾಪೂರ್ವಕ ಪ್ರಯತ್ನಗಳು ನಿಷ್ಪ್ರಯೋಜಕವೇ ಎಂಬ ಪ್ರಶ್ನೆ ಮೂಡುತ್ತದೆ. ಸಂಬಂಧಗಳ ಬೆಳವಣಿಗೆಯ ಸೃಷ್ಟಿಯಲ್ಲಿ ಆ ಸಂಬಂಧಗಳೇ ಪ್ರಯತ್ನಗಳ ದಕ್ಷತೆ ಮತ್ತು ಪ್ರಾಮಾಣಿಕತೆಯನ್ನು ನಿರ್ಧರಿಸುತ್ತದೆ. ಇದಕ್ಕೆ ಮಧ್ಯ ವಯಸ್ಸು ಮತ್ತು ಅದಕ್ಕೆ ಮೇಲ್ಪಟ್ಟವರ ಜೀವನದಲ್ಲಿ ಅನೇಕ ಸಹಜ ಉದಾಹರಣೆಗಳು ದೊರೆಯುತ್ತವೆ.
ನಾವು ಎಷ್ಟೇ ಪ್ರಯತ್ನಿಸಿದರು, ಎಷ್ಟೇ ಹೊಂದಾಣಿಕೆ ಅಥವಾ ತ್ಯಾಗ ಮನೋಭಾವ ಪ್ರದರ್ಶಿಸಿದರು ಕೆಲವು ಸಂಬಂಧಗಳು ಉಳಿಯುವುದೇ ಇಲ್ಲ. ಕೆಲವು ಸಂಬಂಧಗಳಲ್ಲಿ ಸಮಾನ ಮನಸ್ಕರ ನಡುವೆ ಸಹ ದೀರ್ಘ ಕಾಲ ಸಂಬಂಧ ಉಳಿಯುವುದಿಲ್ಲ ಮತ್ತೆ ಕೆಲವು ಸಂಬಂಧಗಳಲ್ಲಿ ಇಬ್ಬರ ನಡವಳಿಕೆ ಕೆಟ್ಟದಾಗಿದ್ದರೂ ಸಹ ಸಂಬಂಧಗಳು ದೀರ್ಘ ಕಾಲ ಉಳಿಯುತ್ತದೆ. ಕೆಲವು ಮೇಲ್ನೋಟಕ್ಕೆ ಉತ್ತಮ ಎನಿಸಿದರೂ ಆಂತರ್ಯದಲ್ಲಿ ಅನೇಕ ಅಡೆತಡೆಗಳನ್ನು ಮತ್ತು ಅಸಮಾಧಾನವನ್ನು ಹೊಂದಿರುತ್ತವೆ. ಹಾಗೆಯೇ ಕೆಲವು ಬಾಹ್ಯವಾಗಿ ಅಷ್ಟೊಂದು ಉತ್ತಮ ಅಲ್ಲ ಎನಿಸಿದರೂ ಒಳಗೆ ತುಂಬಾ ಆಳವಾದ ಬೇರುಗಳನ್ನು ನೆಟ್ಟಿರುತ್ತದೆ.
ಅದಕ್ಕಾಗಿಯೇ ಹೇಳಿದ್ದು ಸಂಬಂಧಗಳು ಸಹ ನೀರಿನಂತೆ ಸ್ಥಿತಿ ಸ್ಥಾಪಕ ಗುಣಲಕ್ಷಣಗಳನ್ನು ಹೊಂದಿದೆ ಮತ್ತು ತನ್ನ ಅನುಕೂಲಕ್ಕೆ ತಕ್ಕಂತೆ ಅದನ್ನು ಉಳಿಸುತ್ತದೆ, ಬೆಳೆಸುತ್ತದೆ ಮತ್ತು ಅಳಿಸುತ್ತದೆ ಸಹ. ಇನ್ನೂ ಕೆಲವರಿಗೆ ಒಳ್ಳೆಯ ಕಾರಣಕ್ಕಾಗಿ ಅಥವಾ ಕೆಟ್ಟ ಕಾರಣಕ್ಕಾಗಿ ಕೆಲವು ಸಂಬಂಧಗಳ ಬಗ್ಗೆ ಪಶ್ಚಾತ್ತಾಪ ಇರುತ್ತದೆ. ಸಂಬಂಧ ಬೆಳೆಸಿದ ಬಗ್ಗೆ ಅಥವಾ ಸಂಬಂಧ ಕಡಿದುಕೊಂಡು ಬಗ್ಗೆ. ಆದರೆ ಅದಕ್ಕಾಗಿ ಪಶ್ಚಾತ್ತಾಪದ ಭಾವನೆ ಇರಲಿ ಆದರೆ ನೋವು ಬೇಡ. ಏಕೆಂದರೆ ಅದನ್ನು ಸಂಬಂಧಗಳ ಗುಣಲಕ್ಷಣಗಳೇ ನಿರ್ಧರಿಸಿರುತ್ತವೆ.
ನಮ್ಮೊಂದಿಗೆ ಯಾವ ಸಂಬಂಧ ಎಷ್ಟು ದೂರ ಎಷ್ಟು ಸಹನೀಯ ಅಥವಾ ಅಸಹನೀಯವಾಗಿ ಜೊತೆಯಾಗುತ್ತದೆ ಎಂದು ನಿರ್ಧರಿಸುವ ಗುಣ ಸಂಬಂಧಕ್ಕೇ ಇದೆ. ಅದನ್ನು ಸ್ವೀಕರಿಸುವ ಮತ್ತು ಅರ್ಥೈಸುವ ಮನೋಭಾವ ಮತ್ತು ತಾಳ್ಮೆ ನಮ್ಮದಾಗಿದ್ದರೆ ಸಾಕು.
ಏಕೆಂದರೆ ಮೂರನೆಯವರು ದೂರದಿಂದ ನಮ್ಮ ಸಂಬಂಧಗಳ ಬಗ್ಗೆ ಯಾವುದೇ ಅಭಿಪ್ರಾಯ ಅನಿಸಿಕೆ ಹೊಂದಿರಬಹುದು ಆದರೆ ಅದನ್ನು ನಿಜವಾದ ಶಕ್ತಿ ಸಾಮರ್ಥ್ಯ ಅಥವಾ ದೌರ್ಬಲ್ಯ ನಮಗೆ ಮಾತ್ರ ತಿಳಿದಿರುತ್ತದೆ. ಮಾರ್ಗಮಧ್ಯದಲ್ಲಿ ಕೆಲವು ಸಂಬಂಧಗಳು ಕಡಿದು ಹೋಗಬಹುದು. ಆಗ ಆ ಸಂಬಂಧದ ಸಾಮರ್ಥ್ಯ ಅಷ್ಟೇ ಎಂದು ಭಾವಿಸಿ...
ಎಲ್ಲಾ ಸಂಬಂಧಗಳು ಬಹಳ ಮುಖ್ಯ ಹಾಗೆಯೇ ಎಲ್ಲಾ ಸಂಬಂಧಗಳು ನಶ್ವರ ಸಹ ಎಂಬ ಮನೋಭಾವ ಬೆಳೆಸಿಕೊಂಡರೆ ಸೃಷ್ಟಿಯಲ್ಲಿ ನಮ್ಮ ಅಸ್ತಿತ್ವವನ್ನು ಪ್ರತ್ಯೇಕವಾಗಿ ಉಳಿಸಿಕೊಂಡು ಒಂದು ಕಡೆ ಏಕಾಂಗಿತನದ ಅನಾಥ ಪ್ರಜ್ಞೆ ಮತ್ತೊಂದು ಕಡೆ ಇಡೀ ವ್ಯವಸ್ಥೆಯ ಸಮೂಹ ಪ್ರಜ್ಞೆ ಎರಡನ್ನೂ ಸಮಯ ಸಂದರ್ಭಕ್ಕೆ ತಕ್ಕಂತೆ ಸಾಮಾನ್ಯ ಜ್ಞಾನ ಉಪಯೋಗಿಸಿ ಬದುಕು ರೂಪಿಸಿಕೊಂಡರೆ ಜೀವನಮಟ್ಟ ಸುಧಾರಣೆಯ ಎಲ್ಲಾ ಸಾಧ್ಯತೆ ಇದೆ...
-ವಿವೇಕಾನಂದ ಹೆಚ್.ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ