ಸಂಬಂಧ ಕಡಿಯುವ ಮುನ್ನ ಮತ್ತೊಂದು ಅವಕಾಶ ನೀಡಿ...!

ಕ್ಷುಲ್ಲಕ ಕಾರಣಕ್ಕೆ ಹೇಳದೇ ಕೇಳದೇ ದೂರವಾಗಿ ಹೋದ (ಕಾಲ್ಪನಿಕ) ಸ್ನೇಹಿತನೋರ್ವನ ಬಗ್ಗೆ ನಾನಿಲ್ಲಿ ಬರೆಯುತ್ತಿದ್ದೇನೆ. ತುಂಬಾ ಆತ್ಮೀಯರಾಗಿ, ಸ್ನೇಹಿತರಾಗಿ ಪ್ರತಿನಿತ್ಯ ಒಮ್ಮೆಯಾದರೂ ಭೇಟಿಯಾಗಿ ಒಂದಷ್ಟು ಹೊತ್ತು ಹರಟೆ ಹೊಡೆಯುತ್ತಿದ್ದ ಸ್ನೇಹಿತರು, ಸಂಬಂಧಿಕರು ಯಾವುದೋ ಸಣ್ಣ ಕಾರಣದಿಂದ ದೂರವಾಗಿ ಬಿಡುತ್ತಾರೆ! ಆ ಸ್ನೇಹ ಸಂಬಂಧ ಮತ್ತೆ ಮೊದಲಿನಂತೆ ನಳನಳಿಸಬೇಕಾದರೆ ಅವರೀರ್ವರಲ್ಲಿ ಯಾರಾದರೂ ಒಬ್ಬರು ಇಗೋ (ಅಹಂ) ಬಿಡಬೇಕು! ಇಲ್ಲವಾದರೆ ಆ ಸ್ನೇಹ ಮತ್ತೆ ಬೆಸೆಯುವುದೇ ಇಲ್ಲ! ಇಲ್ಲಿ 'ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?' ಎಂಬುದೇ ದೊಡ್ಡ ಮತ್ತು ಗಂಭೀರ ಪ್ರಶ್ನೆಯಾಗಿ ಸಂಬಂಧ ಎಂಬುದು ವರ್ಷಾನುಗಟ್ಟಲೆ ಯಾವುದೇ ಸ್ವಾರಸ್ಯವಿಲ್ಲದೇ ಹಳ್ಳಹಿಡಿದಿರುತ್ತದೆ.
ಹೀಗೇ ಸುಮಾರು ನಾಲ್ಕು ವರ್ಷಗಳಿಂದ ಸುದ್ಧಿಯೇ ಇಲ್ಲದ, ಒಂದೇ ಒಂದು ಕರೆ ಮಾಡದ, ಸುಖ ಕಷ್ಟ ವಿಚಾರಿಸದ ಸ್ನೇಹಿತನೋರ್ವನ ಮನೆಗೆ ಧಡೀರ್ ಹೋದೆ. ಅದು ಹದಿನೈದು ದಿವಸಗಳ ಹಿಂದೆ ಒಂದು ಭಾನುವಾರದಂದು. ಮನೆಯ ಸಿಟೌಟಿನಲ್ಲಿ ನಿಂತು ಕಾಲಿಂಗ್ ಬೆಲ್ಲಿನ ಗುಂಡಿ ಒತ್ತಿದೆ. ಒಳಗೆ "ಟಣ್ ಟಣ್" ಅಂತ ಸದ್ದಾಯ್ತು. ಬಾಗಿಲು ತೆರೆಯಿತು.
"ಓ....ಏನು ಇವತ್ತು ಪುರ್ಸೋತಾಯ್ತು? ನೋಡ್ಲಿಕ್ಕೇ ಇಲ್ಲ....ಮನೆಯಲ್ಲೆಲ್ಲಾ ಸೌಖ್ಯವಾ? ತುಂಬಾ ಸಪೂರಾಗಿದ್ದೀಯಲ್ವಾ? ತುಂಬಾ ಬ್ಯೂಸೀ ತೋರ್ತದೆ....." ಮುಖದ ತುಂಬಾ ಸಂತಸದ ನಗು....ಹಿಂದಿನದ್ದೆಲ್ಲಾ ಮರೆತ ಮುಖಭಾವ...
"ಇಕೋ ನೋಡು ಯಾರು ಬಂದ್ರೂಂತ!" ಅಂತ ತನ್ನ ಹೆಂಡತಿಗೂ ಬುಲಾವ್ ಆಯ್ತು.
"ನಿಮ್ಗೆ ನನ್ನ ಅಗತ್ಯ ಇಲ್ಲ ಅಂತ ಈ ನಾಲ್ಕು ವರ್ಷಗಳಲ್ಲಿ ಗೊತ್ತಾಯ್ತು! ನನ್ಗೆ ನಿಮ್ಮ ಅಗತ್ಯ ಇದೆ ಅಂತ ಗೊತ್ತುಪಡಿಸುವುದಕ್ಕೆ ಬಂದೆ!" ಅಂತ ನಗುತ್ತಲೇ ಅಂದೆ.
"ನೀನೊಬ್ಬ ಮಾರೇ...ಕಣ್ಣಿಗೆ ಕೈಹಾಕಿದಂತೆ ಮಾತಾಡ್ತಿ!....ಎಂತಾ ಸಿಟ್ಟಾ...ಅಬ್ಬಾ... ಮತ್ತೆ ಏನ್ ಸಮಾಚಾರ?!"
"ಸಿಟ್ಟಿರ್ತಿದ್ರೆ ಇವತ್ತು ಬರ್ತಿದ್ನಾ ಮಾರಾಯಾ?! ಈಗ ನಾನು ಬಂದಾಗ ಇಷ್ಟೆಲ್ಲಾ ಪ್ರಶ್ನೆ ಮಾಡುವ ನಿಂಗೆ ಒಮ್ಮೆ ನನ್ನ ಮನೆಗೋ...ಆಫೀಸಿಗೋ ಬರ್ಬಹುದಿತ್ತಲ್ಲಾ!!!..."
"ನಾವು ದಿವ್ಸಾ ನಿಮ್ಮ ಸುದ್ದಿ ಮಾತಾಡ್ತಿರ್ತೇವೆ...ನಿನ್ನ ಕವನಗಳು, ಲೇಖನಗಳು, ನಿನ್ನ ಹೊಸ ಮನೆಯ ಫೋಟೋಗಳನ್ನ ನಿತ್ಯ ಫೇಸ್ಬುಕ್ಕಲ್ಲಿ ಓದ್ತೇವೆ, ನೋಡ್ತೇವೆ....ಫೇಸ್ಬುಕ್ ನೋಡದ ದಿವಸ ಇಲ್ಲ" ಅಂತ ಒಂದಷ್ಟು ಉದ್ದದ ಹೊಗಳಿಕೆಯ ಮಾತುಗಳನ್ನು ಉದುರಿಸಿದ.
ನಾನು ಒಂದರ್ಧ ಗಂಟೆ ಅವನ ಮನೆಯಲ್ಲಿದ್ದು, ಆತನ ಹೆಂಡತಿ ತಂದಿಟ್ಟಿದ್ದ ಟೀ ಬಿಸ್ಕತ್ತು ಸವಿದು, ಆತನ ಮೊಬೈಲಿಗೆ ಮಿಸ್ಡ್ ಕಾಲ್ ಕೊಟ್ಟು, "ನನ್ನ ನಂಬ್ರ ಸೇವ್ ಮಾಡ್ಕೋ...ನಿಮ್ಮನ್ನೆಲ್ಲಾ ನೋಡಿ ಖುಷಿಯಾಯ್ತು....ಅಷ್ಟಕ್ಕೋಸ್ಕರ ಬಂದೆ!" ಅಂತ ಹೇಳಿ ವಾಪಾಸು ಮನೆಯ ಹಾದಿ ಹಿಡಿದೆ!
ನಿನ್ನೆ ಭಾನುವಾರ ಅವನಿಂದ ಕರೆ ಬಂದಿತ್ತು! "ನೀನು ಮಂಗಳವಾರ ಬೆಳಿಗ್ಗೆ ಮನೆಯಲ್ಲಿರ್ತೀಯಾ?! ಆ ಕಡೆ ಬರ್ಲಿಕ್ಕಿದೆ... ಈ ಬಾರಿ ತುಂಬಾ ಮಾವಿನ ಹಣ್ಣು ಆಗಿದೆ ಮಾರಾಯ! ಸ್ವಲ್ಪ ತರ್ಲಾ ಮನೆಗೆ?! ಮಕ್ಕಳು ತಿನ್ತಾರಲ್ಲಾ?!"
"ಒಮ್ಮೆ ಮನೆಗೆ ಬರುವ ಔದಾರ್ಯ ತೋರು ಪುಣ್ಯಾತ್ಮ... ಅಷ್ಟೇ ಸಾಕು! ಮಾವಿನ ಹಣ್ಣು ನಿಮ್ಗೆ ಹೆಚ್ಚಾಗಿ ಉಳಿದಿದ್ರೆ ತಾ" ಅಂದೆ.
ಆತ ನಾಳೆ ಮಾವಿನ ಹಣ್ಣುಗಳನ್ನು ತನ್ನ ಕಾರಿಗೆ ತುಂಬಿಕೊಂಡು ನಮ್ಮ ಮನೆಗೆ ಖಂಡಿತಾ ಬರುತ್ತಾನೆ....ನನ್ನ ಮನದೊಳಗೇನೋ ಒಂದು ಬಗೆಯ ಖುಷಿ...ಸಂಧಾನ ಫಲಿಸಿದ ಸಂಭ್ರಮ... ಕಳೆದುಕೊಂಡದ್ದನ್ನು ಮತ್ತೆ ಪಡೆದ ಸಂತಸ.... ಕಾಯುತ್ತಿದ್ದೇನೆ..... ದಾರಿ ನೋಡುತ್ತಿದ್ದೇನೆ....
(ನಿಮಗೂ ಇಂತಹ ಅನುಭವಗಳಾಗಿದ್ದರೆ ತಡಮಾಡದೇ ಒಮ್ಮೆ ಇಗೋ ಬಿಟ್ಟು ಪ್ರಯತ್ನಿಸಿ ನೋಡಿ)
-”ಮೌನಮುಖಿ” ಆತ್ರಾಡಿ ಪೃಥ್ವಿರಾಜ ಹೆಗ್ಡೆ, ಉಡುಪಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ