ಸಂಬಂಧ

ಸಂಬಂಧ

ಕೊರೋನಾ ಲಾಕ್ ಡೌನ್ ಸಮಯ. ಲಾಕ್ ಡೌನ್ ಕೆಲವೆಡೆ ಸ್ವಲ್ಪ ಕಟ್ಟುನಿಟ್ಟಾಗಿಯೇ ಜ್ಯಾರಿಯಲ್ಲಿತ್ತು. ಜನಸಾಮಾನ್ಯರು, ಪೊಲೀಸರು ಅಲ್ಲಲ್ಲಿ ಪ್ರದರ್ಶಿಸಿದ ಕ್ರೌರ್ಯವನ್ನು ಟಿವಿಯಲ್ಲಿ ನೋಡಿ ನಡುಗಿಯೇ ಹೋಗಿದ್ದರು.

ಉಡುಪಿಯಲ್ಲಿದ್ದ ಶಾಲೆ ಮೆಟ್ಟಿಲು ಹತ್ತದ ಬಾಗಲಕೋಟೆಯ ವಲಸೆ ಕಾರ್ಮಿಕ ಭೀಮಪ್ಪನ ದೊಡ್ಡಪ್ಪನ ಮಗಳು, ಸಂಬಂಧದಲ್ಲಿ ಅಕ್ಕ ತೀರಿಹೋಗಿದ್ದಳು. ಭೀಮಪ್ಪ ಬಾರದೆ ಮಣ್ಣು ಮಾಡುವುದಿಲ್ಲವೆಂದು ದೊಡ್ಡಪ್ಪನ ಮನೆಯವರು ಮೃತದೇಹ ಮುಂದಿಟ್ಟುಕೊಂಡು ಕಾಯುತ್ತಿದ್ದರು. ಭೀಮಪ್ಪ ಹೋಗುವುದು ಅನಿವಾರ್ಯವಾಗಿತ್ತು. ಆ ಸಂಬಂಧ ಹಾಗಿತ್ತು.

ಬಸ್ ಇರಲಿಲ್ಲ. ಇರುತ್ತಿದ್ದರೆ ಐನೂರು ಕೊಟ್ಟರೆ ಹೋಗಬಹುದಿತ್ತು. ಹದಿನಾಲ್ಕು ಸಾವಿರ ಕೊಟ್ಟರೆ ಕರೆದುಕೊಂಡು ಹೋಗಲು ಉಡುಪಿಯ ಕಾರು ಚಾಲಕನೊಬ್ಬ ಒಪ್ಪಿದ್ದ. ಭೀಮಪ್ಪನ ಸಹಿತ ಮನೆ ಮಂದಿ ಇದ್ದ ಕಾರು ಬಾಗಲಕೋಟೆ ಕಡೆಗೆ ಪ್ರಯಾಣ ಬೆಳೆಸಿತು.

ಅಂತರ್ ಜಿಲ್ಲಾ ಚೆಕ್ ಪೋಸ್ಟ್ ಒಂದರಲ್ಲಿ ಕುಳಿತುಕೊಂಡಿದ್ದ ಪೊಲೀಸನೊಬ್ಬ ಎದುರಿಗಿದ್ದ ಪತ್ರಿಕೆಯನ್ನು ಓದಲು ಕೈಗೆತ್ತಿಕೊಳ್ಳುತ್ತಿದ್ದಂತೆಯೇ ಬರುತ್ತಿದ್ದ ಕಾರನ್ನು ಕಂಡ. ಪತ್ರಿಕೆ ಪಕ್ಕಕ್ಕಿಟ್ಟು ಎದ್ದು ಹೋಗಿ ಕಾರನ್ನು ತಡೆದು ನಿಲ್ಲಿಸಿದ.

ಪ್ರಯಾಣದ ಉದ್ಧೇಶವನ್ನು ಪ್ರಶ್ನಿಸಿದ ಪೊಲೀಸನಿಗೆ, ಕಾರಲ್ಲಿದ್ದ ಭೀಮಪ್ಪ ತನ್ನ ಹಳ್ಳಿ ಭಾಷೆಯಲ್ಲಿಯೇ ಮೃತ ಅಕ್ಕನನ್ನು ಮಣ್ಣು ಮಾಡಲು ಹೋಗುತ್ತಿರುವ ಬಗ್ಗೆ ಸಹಜವಾಗಿಯೇ ವಿವರಿಸಿ ಹೋಗಲು ಅವಕಾಶ ಮಾಡಿಕೊಡುವಂತೆ ಕೈಮುಗಿದು ವಿನಂತಿಸಿದ. ಭೀಮಪ್ಪನಲ್ಲಿ ಅಂತರ್ ಜಿಲ್ಲಾ ಸಂಚಾರಕ್ಕೆ ಬೇಕಾದ ಯಾವ ಪರವಾನಿಗೆ ಇಲ್ಲದಿದ್ದರೂ ಮಾನವೀಯತೆಯ ನೆಲೆಯಲ್ಲಿ ಪೊಲೀಸ್ ಮುಂದಕ್ಕೆ ಪ್ರಯಾಣಿಸಲು ಅವಕಾಶ ಮಾಡಿಕೊಟ್ಟ. 

ಸಂತೃಪ್ತಿಯ ಭಾವದೊಂದಿಗೆ ಕುರ್ಚಿಯಲ್ಲಿ ಬಂದು ಕುಳಿತು ಮತ್ತೆ ಪತ್ರಿಕೆ ಕೈಗೆತ್ತಿಕೊಂಡ ಪೊಲೀಸನ ಕಣ್ಣಿಗೆ ಬಿದ್ದದ್ದು , "ಅಪ್ಪನ ಹೆಣವನ್ನು ನೀವೇ ಅಂತ್ಯಸಂಸ್ಕಾರ ಮಾಡಿ, ಅಪ್ಪನ ಬ್ಯಾಗ್ ನಲ್ಲಿದ್ದ ಎಟಿಎಂನ್ನು ನನಗೆ ಮರಳಿಸಿ, ಅದರಲ್ಲಿ ಹಣವಿದೆ" ಎಂಬ ಮಗನ ಅಮಾನವೀಯತೆಯ ಸುದ್ಧಿ...

~ ಶ್ರೀರಾಮ ದಿವಾಣ, ಉಡುಪಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ