ಸಂಬಾರ ಪದಾರ್ಥಗಳು

ಸಂಬಾರ ಪದಾರ್ಥಗಳು

ಪುಸ್ತಕದ ಲೇಖಕ/ಕವಿಯ ಹೆಸರು
ಡಾ.ವಸುಂದರಾ ಭೂಪತಿ
ಪ್ರಕಾಶಕರು
ನವಕರ್ನಾಟಕ ಪ್ರಕಾಶನ, ಕ್ರೆಸೆಂಟ್ ರಸ್ತೆ, ಬೆಂಗಳೂರು.
ಪುಸ್ತಕದ ಬೆಲೆ
ರೂ.೧೫೦.೦೦ ಮುದ್ರಣ : ೨೦೧೬

ಸಂಬಾರ ಪದಾರ್ಥಗಳು ಪುಸ್ತಕ ಬರೆದ ಡಾ.ವಸುಂದರಾ ಭೂಪತಿ ವೃತ್ತಿಯಲ್ಲಿ ಖ್ಯಾತ ವೈದ್ಯೆ. ಪೃವೃತ್ತಿಯಲ್ಲಿ ಸಾಹಿತಿಯಾದ ಇವರ ಹಲವಾರು ಪುಸ್ತಕಗಳು ಪ್ರಕಟಗೊಂಡಿವೆ. ಇಂಗ್ಲಿಷ್, ಹಿಂದಿ ಭಾಷೆಗೆ ಇವರ ಹಲವು ಪುಸ್ತಕಗಳು ಅನುವಾದಗೊಂಡಿವೆ. ಇವರು ಸಹಲೇಖಕಿಯಾಗಿ ರಚಿಸಿದ ‘ಮನೆಯಂಗಳದಲ್ಲಿ ಔಷಧಿವನ' ಪುಸ್ತಕ ಹಲವಾರು ಮುದ್ರಣಗಳನ್ನು ಕಂಡಿದ್ದು, ಈ ಕೃತಿಗಾಗಿ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯಿಂದ ‘ಶ್ರೇಷ್ಟ ಲೇಖಕಿ' ಪುರಸ್ಕಾರ ದೊರೆತಿದೆ. 

ಪ್ರಾಚೀನ ಕಾಲದಿಂದಲೂ ಭಾರತದ ಸಂಬಾರ ಜಿನಸುಗಳು ವಿದೇಶಗಳಿಗೂ ರಫ್ತಾಗುತ್ತಿದ್ದು ಲೋಕ ಪ್ರಸಿದ್ಧಿ ಪಡೆದಿದ್ದವು. ಅಡುಗೆಗಷ್ಟೇ ಅಲ್ಲದೆ ಆಯುರ್ವೇದ ಚಿಕಿತ್ಸಾ ಪದ್ಧತಿಯಲ್ಲಿ ಹಲವು ವಿಧದ ಸಾಮಾನ್ಯ ಕಾಯಿಲೆಗಳ ನಿವಾರಣೆಗೆ ಬಳಸಲ್ಪಡುತ್ತಿದ್ದವು. ಇವನ್ನು ಮನೆಮದ್ದೆಂದು ಪರಿಗಣಿಸಿ ಜನ ಇಂದಿಗೂ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುತ್ತಾರೆ. ಹೀಗೆ ಉಪಯೋಗಿಸುವಂಥವು ಸಸ್ಯಜನ್ಯ ಪದಾರ್ಥಗಳಾಗಿದ್ದು ಗಿಡ ಮರಗಳ ಎಲೆ, ತೊಗಟೆ, ಕಾಳು, ಬೇರು, ಗೆಡ್ಡೆ ಮತ್ತು ಕಾಯಿ ಮಾತ್ರ. ಪ್ರತಿಯೊಂದಕ್ಕೂ ಅದರದೇ ಆದ ಸುವಾಸನೆ ಹಾಗೂ ಔಷಧೀಯ ಗುಣಗಳಿವೆ. ದಿನನಿತ್ಯದ ಅಡುಗೆಯಲ್ಲಿ ಸರಿಯಾದ ಪ್ರಮಾಣದಲ್ಲಿ ಬಳಸಿದರೆ ರುಚಿಯೂ ಹೆಚ್ಚು. ಆರೋಗ್ಯಕ್ಕೂ ಒಳ್ಳೆಯದು ಎಂದು ಆಯುರ್ವೇದ ಶಾಸ್ತ್ರ ಹೇಳುತ್ತದೆ. ಬಾಯಿ ಚಪಲಕ್ಕೆಂದು ಪ್ರಮಾಣವನ್ನು ಮೀರಿ ಬಳಸಿದಲ್ಲಿ ಅಡ್ಡ ಪರಿಣಾಮಗಳೂ ಇರುವ ಸಾಧ್ಯತೆಯಿದೆ. ಈ ಕೃತಿಯಲ್ಲಿ ಸಂಬಾರ ಪದಾರ್ಥಗಳ ಉಪಯುಕ್ತತೆ ಮತ್ತು ಸರಿಯಾಗಿ ಅಡುಗೆಯಲ್ಲಿ ಬಳಸುವ ವಿಧಾನವನ್ನು ತಿಳಿಸಲಾಗಿದೆ. ವರ್ಣಚಿತ್ರಗಳನ್ನು ಅಳವಡಿಸಲಾಗಿದ್ದು, ವಿವರಣೆಯೂ ಸೇರಿದಂತೆ ಆಕರ್ಷಕವಾಗಿ ರೂಪಿಸಲಾಗಿದೆ.

ಮುನ್ನುಡಿಯಾದ 'ಲೇಖಕರ ಮಾತು' ಇದರಲ್ಲಿ ಡಾ.ವಸುಂಧರಾ ಭೂಪತಿಯವರು ತಾವು ಬರೆದ ಪುಸ್ತಕದ ಬಗ್ಗೆ ಅಧಿಕ ಮಾಹಿತಿ ನೀಡಿದ್ದಾರೆ. ಪುಸ್ತಕದಲ್ಲಿ ಸುಮಾರು ೨೬ ಬಗೆಯ ಸಂಬಾರು ಪದಾರ್ಥಗಳ ಸವಿವರವಾದ ಮಾಹಿತಿ ನೀಡಿದ್ದಾರೆ. ಮೊದಲ ಅಧ್ಯಾಯವನ್ನು ಸಂಬಾರ ಪದಾರ್ಥಗಳು ಎಂದರೆ ಏನು ಎಂದು ತಿಳಿಸಲು ಬಳಸಿಕೊಂಡಿದ್ದಾರೆ. ಅದರ ರೋಚಕ ಇತಿಹಾಸವನ್ನೂ ಸವಿವರವಾಗಿ ನೀಡಿದ್ದಾರೆ. ಅರಶಿನ, ಇಂಗು, ಏಲಕ್ಕಿ, ಕರಿಬೇವು, ಮೆಣಸಿನ ಕಾಯಿ, ಕೊತ್ತಂಬರಿಸೊಪ್ಪು, ಜೀರಿಗೆ, ಪುದೀನಾ, ಮೆಂತ್ಯೆ, ಲವಂಗ,  ಶುಂಠಿ ಮೊದಲಾದ ಸಂಬಾರು ಪದಾರ್ಥಗಳ ಜೊತೆ ನಮಗೆ ಹೆಚ್ಚು ಪರಿಚಿತವಲ್ಲದ ಮರುಗ, ರೇಷ್ಮೆ ಗೆಡ್ಡೆ, ಲವಂಗದ ಮೆಣಸಿನ ಕಾಯಿ, ರೋಸ್ ಮೇರಿ, ಓಮ ಮುಂತಾದ ಪದಾರ್ಥಗಳ ಪರಿಚಯವನ್ನೂ ಮಾಡಿಕೊಟ್ಟಿದ್ದಾರೆ. ಪ್ರತೀ ಬೆಳೆಯ ಬಗ್ಗೆ ಮಾಹಿತಿ, ಅದರಲ್ಲಿರುವ ಪೋಷಕಾಂಶಗಳು, ರಾಸಾಯನಿಕ ಅಂಶಗಳು, ಔಷಧೀಯ ಉಪಯೋಗಗಳು, ಸಂಶೋಧನೆ, ಸಂಸ್ಕರಣೆ ಹಾಗೂ ಕೆಲವು ಇತರೆ ಮಾಹಿತಿಗಳನ್ನು ನೀಡಿರುವುದರಿಂದ ಓದುಗರಿಗೆ ಒಂದು ಸಂಬಾರು ಬೆಳೆಯ ಬಗ್ಗೆ ಒಂದೇ ಕಡೆ ಅದರ ಬಗ್ಗೆ ಎಲ್ಲಾ ವಿವರಗಳು ದೊರೆಯುತ್ತವೆ. ಆ ಬೆಳೆಯನ್ನು ಬೇರೆ ಬೇರೆ ಭಾಷೆಗಳಲ್ಲಿ ಏನೆಂದು ಕರೆಯುತ್ತಾರೆ, ಅದರ ವೈಜ್ಞಾನಿಕ ಹೆಸರು ಏನು ಎಂಬೆಲ್ಲಾ ಪೂರಕ ಮಾಹಿತಿಗಳೂ ಇವೆ.

ಸುಮಾರು ೧೫೦ ಪುಟಗಳ ಈ ಪುಸ್ತಕದಲ್ಲಿ ಆಯಾ ಬೆಳೆಗಳ ವಿವರಗಳ ಜೊತೆ ವರ್ಣರಂಜಿತ ಚಿತ್ರಗಳಿರುವುದು ಬಹಳಷ್ಟು ಪೂರಕವಾಗಿದೆ. ರವಿಕುಮಾರ್ ಅಜ್ಜೀಪುರ ಇವರ ಆಕರ್ಷಕ ವಿನ್ಯಾಸದ ರಕ್ಷಾಪುಟವಿದೆ. ಮಾಹಿತಿಪೂರ್ಣ ಪುಸ್ತಕ ನಿಮ್ಮ ಮನೆಯಲ್ಲಿಡಲು ಸೂಕ್ತ.