ಸಂಭ್ರಮ ಸಡಗರದಿಂದ ಆಚರಿಸುವ ಗೌರಿ ಹಬ್ಬ

ಭಾದ್ರಪದ ಮಾಸದ ಶುಕ್ಲ ಪಕ್ಷದ ತದಿಗೆಯಂದು ಗೌರಿ ಹಬ್ಬ ಆಚರಣೆ ಮಾಡುತ್ತಾರೆ. ನಮ್ಮ ಮನೆಯಲ್ಲಿ ನಾವು ಸಣ್ಣವರಿರುವಾಗಿನಿಂದ ಗೌರಿ ಹಬ್ಬವನ್ನು ಆಚರಣೆ ಮಾಡುತ್ತಿದ್ದಾರೆ. ನಾವೆಲ್ಲಾ ಇದು ಮಹಿಳೆಯರ ಹಬ್ಬ ಎಂದು ಹೇಳಿ ದೂರ ಉಳಿಯುತ್ತಿದ್ದೆವು. ಮನೆಯಲ್ಲಿ ಗೌರಿ ಹಾಗೂ ಮಹೇಶ್ವರ (ಈಶ್ವರ)ನ ಚಿತ್ರ ಪಟಗಳನ್ನು ಇರಿಸಿ, ಅದರ ಎದುರು ನಯವಾಗಿಸಿದ ತೆಂಗಿನಕಾಯಿಗಳನ್ನು ಇಟ್ಟು, ಅದರ ಕಣ್ಣುಗಳಿಗೆ ಕಾಡಿಗೆ, ಕುಂಕುಮ, ಸಿಂದೂರಗಳಿಂದ ಅಲಂಕಾರ ಮಾಡುತ್ತಾರೆ. ಈ ತೆಂಗಿನ ಕಾಯಿಗಳ ಮೇಲೆ ಹಣತೆಯನ್ನು ಉರಿಸುತ್ತಾರೆ. ದೇವರಿಗೆ ಮಂಗಳಾರತಿ ನಂತರ ಬಾಳೆ ಎಲೆಯಲ್ಲಿ ಅಂದು ಗೌರಿಗೆ ಮಾಡಿದ ನೈವೇದ್ಯವನ್ನು ಬಡಿಸಲಾಗುತ್ತದೆ. ನಂತರ ಮನೆಯ ಹಿರಿಯ ಮುತ್ತೈದೆಗೆ ಕಿರಿಯ ಮಹಿಳೆಯರು ತೆಂಗಿನ ಕಾಯಿ (ವಾಯಿಣ ಅಥವಾ ವಾಯಿನ) ಕೊಟ್ಟು ಅವರಿಂದ ಆಶೀರ್ವಾದ ಪಡೆದುಕೊಳ್ಳುತ್ತಾರೆ. ನಮ್ಮ ಮನೆಯಲ್ಲಿ ಈ ರೀತಿಯ ಕ್ರಮವನ್ನು ಸುಮಾರು ಒಂದು ಶತಮಾನದಿಂದ ಆಚರಣೆ ಮಾಡುತ್ತಾ ಬಂದಿದ್ದಾರೆ.
ಪ್ರತಿ ವರ್ಷವೂ ಎಲ್ಲಾ ವಸ್ತುಗಳ ದರಗಳು ಏರಿಕೆಯಾಗುತ್ತಲೇ ಇರುತ್ತವೆ. ಹಬ್ಬಗಳನ್ನು ಆಚರಿಸಲು ಬೇಕಾದ ಹಣವನ್ನು ಸಂಗ್ರಹಿಸುವುದು ತುಂಬಾ ಕಷ್ಟಕರವೆಂದು ತೋರುತ್ತದೆ. ಆದರೂ, ಆ ಕಷ್ಟಗಳನ್ನು ಹೇಗೋ ಸರಿಪಡಿಸಿ, ಎಲ್ಲಾ ವರ್ಗದ ಜನರು ಅದ್ಧೂರಿಯಾಗಿ ಹಬ್ಬವನ್ನು ಆಚರಿಸಲು ಸಿದ್ಧರಾಗುತ್ತಾರೆ. ಗೌರಿ-ಗಣೇಶ ಹಬ್ಬದ ಸಂಭ್ರಮವಂತೂ ವರ್ಣಿಸಲು ಅಸಾಧ್ಯವಾದದ್ದು. ಈ ಹಬ್ಬವನ್ನು ಮನೆಯಲ್ಲಿ ಮಾತ್ರವಲ್ಲದೆ, ಬೀದಿಗಳಲ್ಲಿ, ಗಲ್ಲಿಗಳಲ್ಲಿ ಸಹ ಸಡಗರದೊಂದಿಗೆ ಆಚರಿಸಲಾಗುತ್ತದೆ. ವಿಶ್ವದ ಹಲವು ದೇಶಗಳಲ್ಲಿಯೂ ಗಣಪತಿ ಹಬ್ಬವನ್ನು ಉತ್ಸಾಹದಿಂದ ನಡೆಸಲಾಗುತ್ತದೆ ಎಂಬುದು ಗಮನಾರ್ಹ.
ಭಾದ್ರಪದ ಮಾಸದ ಶುಕ್ಲಪಕ್ಷದ ತೃತೀಯ ದಿನದಂದು ಗೌರಿ ಹಬ್ಬವನ್ನು ಮತ್ತು ಚತುರ್ಥಿಯಂದು ಗಣೇಶ ಹಬ್ಬವನ್ನು ಆಚರಿಸುತ್ತಾರೆ. ಗೌರಿ ಹಬ್ಬದಲ್ಲಿ ಪಾರ್ವತಿ ದೇವಿಯು ಕೈಲಾಸದಿಂದ ತನ್ನ ತಾಯ್ನಾಡಾದ ಭೂಲೋಕಕ್ಕೆ ಮಗನೊಂದಿಗೆ ಆಗಮಿಸುತ್ತಾಳೆ ಎಂಬ ನಂಬಿಕೆಯಿದೆ. ಅವಳನ್ನು ತವರುಮನೆಯಲ್ಲಿ ಬಾಗಿನ ನೀಡಿ ಆತಿಥ್ಯ ನೀಡಿ, ಪತಿಯ ಮನೆಗೆ ಕಳುಹಿಸುತ್ತಾರೆ. ಪಾರ್ವತಿಯ ತವರು ಆಗಮನದ ಸಂತೋಷವೇ ಈ ಹಬ್ಬದ ಮುಖ್ಯ ಆಕರ್ಷಣೆ.
ವಿವಾಹಿತ ಮಹಿಳೆಯರು ತಮ್ಮ ಸೌಭಾಗ್ಯ ಹೆಚ್ಚಲು ಮತ್ತು ಅವಿವಾಹಿತೆಯರು ಉತ್ತಮ ಪತಿಯನ್ನು ಪಡೆಯಲು ಗೌರಿ ಪೂಜೆಯನ್ನು ಮಾಡುತ್ತಾರೆ. ಆ ದಿನ ಹೊಸ ಸೀರೆ ಧರಿಸಿ, ಕೈಯಲ್ಲಿ ಬಳೆಗಳನ್ನು ತೊಟ್ಟು, ಕೂದಲಿಗೆ ಹೂಗಳನ್ನು ಮುಡಿದು, ಅರಿಶಿನ-ಕುಂಕುಮವನ್ನು ಹಚ್ಚಿಕೊಂಡು, ಬಾಗಿಲಿಗೆ ಪೂಜೆ ಮಾಡುತ್ತಾರೆ. ಬಾವಿಯಿಂದ ನೀರು ತಂದು, ತೆಂಗಿನಕಾಯಿಗೆ ಅರಿಶಿನ-ಕುಂಕುಮ ಹಚ್ಚಿ ಕಲಶವನ್ನು ಸ್ಥಾಪಿಸುತ್ತಾರೆ. ಅದರಲ್ಲಿ ಮಾವಿನ ಎಲೆ ಮತ್ತು ನಾಣ್ಯಗಳನ್ನು ಹಾಕುತ್ತಾರೆ. ಈ ಕಲಶವನ್ನು ಅಕ್ಕಿ ಹರಡಿದ ಪ್ಲೇಟ್ನಲ್ಲಿ ಇರಿಸಿ, ಹೂಗಳು, ಪತ್ರಗಳು ಮತ್ತು ಗೆಜ್ಜೆವಸ್ತ್ರದಿಂದ ಅಲಂಕರಿಸಿ ಸ್ವರ್ಣಗೌರಿಯನ್ನು ಪೂಜಿಸುತ್ತಾರೆ. ಪೂಜೆಯ ನಂತರ, ಮಹಿಳೆಯರು ಬಲಗೈ ಮಣಿಕಟ್ಟಿಗೆ ೧೬ ಎಳೆಯ ದಾರವನ್ನು ಗೌರಿಯ ಆಶೀರ್ವಾದವೆಂದು ಕಟ್ಟಿಕೊಳ್ಳುತ್ತಾರೆ.
ಸ್ವರ್ಣಗೌರಿ ಪೂಜೆಯ ಆಚರಣೆಯ ಹಿಂದಿನ ಪೌರಾಣಿಕ ಕಥೆಯು ಹೀಗಿದೆ: ಚಂದ್ರಪ್ರಭ ಎಂಬ ರಾಜನು ಬೇಟೆಗೆ ಕಾಡಿಗೆ ಹೋದಾಗ, ಸರೋವರದ ಬಳಿ ಅಪ್ಸರೆಯರು ಸ್ವರ್ಣಗೌರಿ ಪೂಜೆಯಲ್ಲಿ ತೊಡಗಿದ್ದರು. ಪೂಜೆ ಮುಗಿದ ನಂತರ, ರಾಜನು ಅದರ ಮಹತ್ವವನ್ನು ಕೇಳಿದಾಗ, ಅಪ್ಸರೆಯರು ವ್ರತದ ವಿಧಾನ ಮತ್ತು ಮಹಿಮೆಯನ್ನು ವಿವರಿಸುತ್ತಾರೆ. ಈ ವ್ರತವನ್ನು ಆಚರಿಸಿದರೆ ಸಂತಾನ ಭಾಗ್ಯ ಸಿಗುತ್ತದೆ ಎಂದು ಹೇಳಿ, ಭಾದ್ರಪದ ಶುದ್ಧ ತೃತೀಯೆಯಂದು ಮಾಡುವಂತೆ ಸಲಹೆ ನೀಡಿ, ೧೬ ಗಂಟುಗಳ ದಾರವನ್ನು ಕೊಡುತ್ತಾರೆ.
ರಾಜನು ಅರಮನೆಗೆ ಬಂದು ಆ ದಾರವನ್ನು ಮೊದಲ ಪತ್ನಿಗೆ ನೀಡುತ್ತಾನೆ. ಆದರೆ ಆಕೆ ಅದನ್ನು ನಿರ್ಲಕ್ಷಿಸಿ, ಒಣಗಿದ ಮರದ ಮೇಲೆ ಎಸೆಯುತ್ತಾಳೆ. ನಂತರ, ಆ ದಾರದ ಪ್ರಭಾವದಿಂದ ಆ ಮರವು ಚಿಗುರೊಡೆಯುತ್ತದೆ. ಇದನ್ನು ನೋಡಿದ ರಾಜನ ಎರಡನೇ ಪತ್ನಿಯು ಆ ದಾರವನ್ನು ಧರಿಸಿ ಸ್ವರ್ಣಗೌರಿ ವ್ರತವನ್ನು ಆಚರಿಸುತ್ತಾಳೆ. ಅದರ ಫಲವಾಗಿ ಅವರಿಗೆ ಪುತ್ರನು ಜನಿಸುತ್ತಾನೆ. ಕೊನೆಗೆ ರಾಜ-ರಾಣಿಯರು ಸುಖದಿಂದ ಬಾಳಿ, ಶಿವನ ಸಾನ್ನಿಧ್ಯವನ್ನು ಪಡೆದು ಮೋಕ್ಷವನ್ನು ಹೊಂದುತ್ತಾರೆ.
ನವವಿವಾಹಿತ ಮಹಿಳೆಯರು ಮೊದಲ ಗೌರಿ ಹಬ್ಬದಲ್ಲಿ ೧೬ ಮುತ್ತೈದೆಯರಿಗೆ, ನಂತರದ ವರ್ಷಗಳಲ್ಲಿ ಐದು ಮುತ್ತೈದೆಯರಿಗೆ ಮೊರದಲ್ಲಿ ಬಾಗಿನ ನೀಡುವ ಪದ್ಧತಿ ಇದೆ. ಮೊರದಲ್ಲಿ ಬಾಗಿನ ನೀಡುವುದು ಈ ಹಬ್ಬದ ವಿಶೇಷತೆ. ಮೊರವನ್ನು ಲಕ್ಷ್ಮೀದೇವಿಯೊಂದಿಗೆ ಹೋಲಿಸುತ್ತಾರೆ. ಇದರಿಂದ ಉತ್ತಮ ಆರೋಗ್ಯ, ಸುಖ, ಶಾಂತಿ, ಸಮೃದ್ಧಿ ಮತ್ತು ಸೌಭಾಗ್ಯವು ದೊರೆಯುತ್ತದೆ ಎಂಬ ನಂಬಿಕೆಯಿದೆ. ಈ ೧೬ ಮುತ್ತೈದೆಯರು ಪಾರ್ವತಿಯ ವಿವಿಧ ಅವತಾರಗಳು ಎಂದು ಭಾವಿಸಿ, ಮೊರಕ್ಕೆ ಅರಿಶಿನ-ಕುಂಕುಮ ಹಚ್ಚಿ, ಅದರಲ್ಲಿ ಧಾನ್ಯಗಳು, ಬೆಲ್ಲ, ತೆಂಗಿನಕಾಯಿ, ಬಳೆ, ಬಿಟ್ಟೋಲೆ, ಕನ್ನಡಿ, ವಸ್ತ್ರ, ಹಣ್ಣುಗಳು, ವೀಳ್ಯದೆಲೆ-ಅಡಿಕೆಗಳನ್ನು ಇಟ್ಟು ನೀಡುತ್ತಾರೆ.
ಗೌರಿ ಹಬ್ಬವು ತವರುಮನೆಯೊಂದಿಗಿನ ಅವಿನಾಭಾವ ಬಂಧವನ್ನು ಸೂಚಿಸುತ್ತದೆ. ಹೆಣ್ಣುಮಕ್ಕಳಿಗೆ ಹಬ್ಬದ ಮೊದಲು ತವರಿನಿಂದ ಉಡುಗೊರೆಗಳನ್ನು ನೀಡಿ ಶುಭ ಹಾರೈಸುತ್ತಾರೆ. (ಬಯಲುಸೀಮೆಯಲ್ಲಿ ಸಹೋದರರು ಮತ್ತು ತಂದೆಯು ಹೆಣ್ಣುಮಕ್ಕಳಿಗೆ ಕಡ್ಡಾಯವಾಗಿ ಉಡುಗೊರೆ ಕೊಡುವ ಸಂಪ್ರದಾಯವಿದೆ.) ಇದರಿಂದ ಸಹೋದರ-ಸಹೋದರಿಯರ ನಡುವಿನ ಸ್ನೇಹ ಮತ್ತು ಬಾಂಧವ್ಯ ಹೆಚ್ಚುತ್ತದೆ. ಈ ರೀತಿ ಬಾಗಿನ ನೀಡಿ ಶಕ್ತಿ ಸ್ವರೂಪಿಣಿ ಗೌರಿಯನ್ನು ಭಕ್ತಿಯಿಂದ ಪೂಜಿಸಿದರೆ, ನಮ್ಮ ಆಸೆಗಳು ಈಡೇರಿಸುತ್ತಾಳೆ ಎಂಬ ನಂಬಿಕೆ ಜನರಲ್ಲಿದೆ.
ಚತುರ್ಥಿಯಂದು ಗಣೇಶನನ್ನು ಪೂಜಿಸಿ ನೈವೇದ್ಯ ಮಾಡಿದ ನಂತರ, ಗೌರಿಗೆ 'ಮಡಿಲು ತುಂಬಿ ಹೋಗು ಗಂಡನ ಮನೆಗೆ, ನಗುಮುಖದ ನಾರಿ ಇನ್ನೊಮ್ಮೆ ಬಾರಮ್ಮ ನಮ್ಮ ಮನೆಗೆ ಗೌರಿ' ಎಂದು ಭಾವುಕವಾಗಿ ಹೇಳಿ, ಮಕ್ಕಳು ಗೌರಿಯನ್ನು ನೀರಿನಲ್ಲಿ ವಿಸರ್ಜಿಸುತ್ತಾರೆ. ಇದರ ಮೂಲಕ ಅವಳನ್ನು ಕೈಲಾಸಕ್ಕೆ ಮರಳಿ ಕಳುಹಿಸುತ್ತಾರೆ. ನಂತರ ಭಾರಮನಸ್ಸಿನೊಂದಿಗೆ ಮನೆಗೆ ಹಿಂದಿರುಗುತ್ತಾರೆ. ಪಾರ್ವತಿಯ ತವರು ಆಗಮನದ ಸಂಭ್ರಮವೇ ಗೌರಿ ಹಬ್ಬದ ಮುಖ್ಯ ವೈಶಿಷ್ಟ್ಯ. ಗೌರಿ ಹಬ್ಬದ ಮರುದಿನ ಗಣೇಶ ಹಬ್ಬ. ಎಲ್ಲರಿಗೂ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು.
(ಆಧಾರ)
ಚಿತ್ರ ಕೃಪೆ: ಅಂತರ್ಜಾಲ ತಾಣ