ಸಂಭ್ರಮ ಸೌರಭ....ಮಾಸದ ಸಂಭ್ರಮ

ಸಂಭ್ರಮ ಸೌರಭ....ಮಾಸದ ಸಂಭ್ರಮ

ಸಂಭ್ರಮ ಸೌರಭ
---------------
ಸಂಭ್ರಮ ಸೌರಭ ಒಂದು ವಿನೂತನ ಪ್ರಯತ್ನ, ಒಂದು ವಿಶಿಷ್ಟ ಪ್ರಯೋಗ, ಕಲೆ, ಸಾಹಿತ್ಯ, ಸಂಸ್ಕೃತಿಗಳ ತಳಹದಿಯ ಮೇಲೆ ಕನ್ನಡಿಗರೆಲ್ಲರನ್ನು ಒಂದಾಗಿಸುವ, ಭಾವನಾತ್ಮಕವಾಗಿ ಕನ್ನಡದ ಬಂಧವನ್ನು ಅವರೊಂದಿಗೆ ಬೆಸೆಯುವ ಸಮಾನ ಮನಸ್ಕರ ಸಂಘಟನೆಯೇ ಸಂಭ್ರಮ ಸೌರಭ.

೨೦೦೪ರ ಅಗಸ್ಟ್ ೧೫ ರಂದು ಕಾರ್ಯಾರಂಭ ಮಾಡಿದ ಸಂಭ್ರಮ ಸೌರಭ ೫ ವರ್ಷಗಳಿಂದ ನಿರಂತರವಾಗಿ ಕಲಾಸೇವೆ ಮಾಡುತ್ತಾ ಬಂದಿದೆ. ಪ್ರತೀ ತಿಂಗಳು ಒಂದೊಂದು ಕಾರ್ಯಕ್ರಮವನ್ನು ಆಯೋಜಿಸುವ ಈ ಸಂಭ್ರಮ ಸೌರಭ ೫ ವರ್ಷಗಳಲ್ಲಿ ೬೦ ವೈವಿಧ್ಯಮಯ ಸದಭಿರುಚಿಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ತನ್ನ ವೇದಿಕೆಯ ಮೇಲೆ ಪ್ರಸ್ತುತ ಪಡಿಸಿದೆ. ಸಂಗೀತ, ನೃತ್ಯ, ನಾಟಕ, ಹಾಸ್ಯ, ಹರಟೆ, ವಾದ್ಯನಿನಾದ, ರೂಪಕಗಳು, ಯಕ್ಷಗಾನ, ಹರಿಕಥೆ, ಜಾನಪದ ವೈವಿಧ್ಯತೆ ಹೀಗೆ ಕನ್ನಡದ ಹಲವು ಕಲಾಪ್ರಕಾರಗಳ ಸಾಂಸ್ಕೃತಿಕ ಹಬ್ಬವನ್ನು ಪ್ರತೀ ತಿಂಗಳು ನಡೆಸುತ್ತಾ ಬಂದಿರುವ ಹೆಗ್ಗಳಿಕೆ ಸಂಭ್ರಮ ಸೌರಭದ್ದು.

ಉದ್ದೇಶ
-------
ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಕೂಡ ದೈಹಿಕ, ಮಾನಸಿಕ ಒತ್ತಡದಿಂದ ಬಳಲುತ್ತಿರುವುದು ಎಲ್ಲರಿಗೂ ತಿಳಿದ ಸಂಗತಿಯೇ. ಇಂತಹ ಬಳಲಿದ ಮನಸ್ಸಿಗೆ ಮುದ ನೀಡಿ, ಒಂದಿಷ್ಟು ಸಾಂಸ್ಕೃತಿಕ ನಿರಾಳತೆಯ ಮೂಲಕ ಮತ್ತೆ ಆ ವ್ಯಕ್ತಿಯಲ್ಲಿ ಹೊಸ ಹುರುಪು ತುಂಬುವುದೇ ಸಂಭ್ರಮ ಸೌರಭದ ಉದ್ದೇಶ.
ಮನೋರಂಜನ, ಕಲಾರಾಧನ, ಪ್ರತಿಭಾ ಪ್ರದರ್ಶನ, ಪುಷ್ಕಳ ಭೋಜನ ಈ ೪ ಸೂತ್ರಗಳ ಚೌಕಟ್ಟಿನಲ್ಲಿ ಕನ್ನಡದ ಕುಟುಂಬಗಳನ್ನು ಒಂದಾಗಿ ತಂದು ವ್ಯಕ್ತಿಗತವಾಗಿ ಈ ರಂಜನೆ ಸಿಗುವಂತೆ ಹಾಗೂ ಸಾಮಾಜಿಕವಾಗಿ ಕನ್ನಡ ಸಂಸ್ಕೃತಿಯ ಸೌರಭ ಪಸರಿಸುವಂತೆ ಮಾಡುವುದು ಸಂಭ್ರಮ ಸೌರಭದ ಮೂಲೊದ್ದೇಶ.

ಸದಸ್ಯರಾಗುವುದರಿಂದ ಆಗುವ ಅನುಕೂಲತೆಗಳು
------------------------------------------
ತಿಂಗಳಲ್ಲಿ ಒಂದು ಬಾರಿ, ಎರಡು ಬಾರಿ, ಕೆಲವೊಮ್ಮೆ ಅನೇಕಬಾರಿ ನಾವು ನಮ್ಮ ಕುಟುಂಬದೊಂದಿಗೆ ಹೊರಗಡೆ ಹೋಗಿ ಸುತ್ತಾಡಿ, ಸಿನಿಮಾ ನಾಟಕ ನೋಡಿ, ಉಪಹಾರ ಮಂದಿರಗಳಲ್ಲಿ ಊಟ ಮಾಡಿಕೊಂಡು ಮನೆಗೆ ಹಿಂತಿರುಗುವುದು ವಾಡಿಕೆ. ದಿನನಿತ್ಯದ ಜಂಜಾಟಗಳಿಂದ ಕೆಲಹೊತ್ತಾದರೂ ಮುಕ್ತರಾಗಬೇಕೆಂಬ ಚಡಪಡಿಕೆ ನಮ್ಮೆಲ್ಲರದ್ದು. ಇದು ಸಹಜ ಕೂಡ.

ಈ ಪ್ರಕ್ರಿಯೆಗೆ ಒಂದು ಸದಭಿರುಚಿಯ, ಸುಸಂಸ್ಕೃತಿಯ, ಕನ್ನಡಾಭಿಮಾನದ, ಕೌಟುಂಬಿಕ ವಾತಾವರಣದ ಶಿಸ್ತುಬದ್ಧ ಯೋಜನೆಯ ಚೌಕಟ್ಟು ಹಾಕುವುದು ಸಂಭ್ರಮ ಸೌರಭ. ನಮ್ಮ ಕುಟುಂಬದೊಂದಿಗೆ ಹೊರಪ್ರಪಂಚದಲ್ಲಿ ಸಮಯ ಕಳೆದು ಆನಂದಿಸಲು ನಾವು ಪ್ರತೀ ತಿಂಗಳು ಖರ್ಚು ಮಾಡುವ ೫೦೦ ರಿಂದ ೧೦೦೦ ರೂಪಾಯಿಗಳ ವರೆಗಿನ ಹಣದಲ್ಲಿ ಉಳಿತಾಯ ಮಾಡಿ, ಅದರ ಅರ್ಧ ಖರ್ಚಿನಲ್ಲಿ ಉತ್ಕೃಷ್ಟ ಗುಣಮಟ್ಟದ ಸಾಂಸ್ಕೃತಿಕ ಪರಿಸರ ಒದಗಿಸುವುದಲ್ಲದೆ, ಹೊಟ್ಟೆ ತುಂಬಾ ಊಟ ಮಾಡಿಸಿ ಸದಸ್ಯರನ್ನು ಬೀಳ್ಕೊಡುವುದು ಸಂಭ್ರಮ ಸೌರಭದ ಧ್ಯೇಯ.

ಇಲ್ಲಿ ಸದಸ್ಯರಾಗುವುದರಿಂದ ಅನೇಕ ಅವಕಾಶಗಳು ಮುಕ್ತವಾಗಿ ಸಿಗುತ್ತವೆ. ಹೊಸ ಹೊಸ ಜನರ ಪರಿಚಯ, ಹೊಸ ವಿಚಾರಗಳ ವಿಮರ್ಶೆ, ನಿಮಗೆ ಮತ್ತು ನಿಮ್ಮ ಮಕ್ಕಳಿಗೆ ಪ್ರತಿಭಾ ಪ್ರದರ್ಶನಕ್ಕೊಂದು ವೇದಿಕೆ. ಸದಭಿರುಚಿಯ ಮನರಂಜನಾ ಕಾರ್ಯಕ್ರಮ, ಗಣ್ಯ ವ್ಯಕ್ತಿಗಳೊಂದಿಗೆ ಮಾತುಕತೆ, ಉಡುಗೊರೆಗಳು ಮತ್ತು ಶುಚಿ ರುಚಿ ಸಸ್ಯಾಹಾರಿ ಊಟ ಇವೆಲ್ಲವುಗಳು ಅತ್ಯಲ್ಪ ಹಣದಲ್ಲಿ ನಮ್ಮ ಸದಸ್ಯರಿಗೆ ಲಭ್ಯ. ಇಂತಹ ಸಾಮಾಜಿಕ, ಸಾಂಸ್ಕೃತಿಕ, ಕೌಟುಂಬಿಕ ಪರಿಸರದಲ್ಲಿ ನೀವು ಭಾಗಿಯಾಗಬೇಕೆ? ಮತ್ತೇಕೆ ತಡ, ಬನ್ನಿ ... ನಮ್ಮ ಕನ್ನಡ ಬಳಗ ಸೇರಿ.

ಹೆಚ್ಚಿನ ಮಾಹಿತಿಗೆ ಸ೦ಪರ್ಕಿಸಿ ಸ೦ಜೀವ ಕುಲಕರ್ಣಿ - ೯೮೪೫೨೩೪೬೦೦