ಸಂಯಮವಿರಲಿ, ಉದ್ವೇಗ ಒಳ್ಳೆಯದಲ್ಲ...

ಸಂಯಮವಿರಲಿ, ಉದ್ವೇಗ ಒಳ್ಳೆಯದಲ್ಲ...

ಭಾವನಾತ್ಮಕ ಪ್ರತಿಕ್ರಿಯೆಯಲ್ಲಿ ಸೂಕ್ಷ್ಮತೆ ಇರಲಿ. ದ್ವೇಷ ಪ್ರತಿಕಾರಗಳು, ಮಾತು ಅಕ್ಷರಗಳಲ್ಲಿ ಮೂಡುವ ಮುನ್ನ ಹಲವಾರು ಬಾರಿ ಯೋಚಿಸಿ. ನಿಂತ ನೆಲದ, ಸುತ್ತಲಿನ ಜನರ ಹಿತಾಸಕ್ತಿ ಮನದಲ್ಲಿರಲಿ. ನಮ್ಮ ಒಟ್ಟು ಪರಿಸ್ಥಿತಿ ಗಮನದಲ್ಲಿರಲಿ. ಸಹನೆಗೂ, ಹೇಡಿತನಕ್ಕೂ, ಧೈರ್ಯಕ್ಕೂ ನಡುವಿನ ವ್ಯತ್ಯಾಸ ತಿಳಿದಿರಲಿ. ನಮ್ಮ ಸಾಮರ್ಥ್ಯ ಮಿತಿಗಳ ಪುನರಾವಲೋಕನವಾಗಲಿ. ಹಲವಾರು ಸಾಧ್ಯತೆಗಳ ವಿಮರ್ಶೆಯಾಗಲಿ. ಓಟಿನ ಬೇಟೆಯ ಬಗ್ಗೆ ಎಚ್ಚರವಿರಲಿ. ಆಂತರಿಕ ಭಿನ್ನಾಭಿಪ್ರಾಯಗಳು ಹೆಚ್ಚಾಗದಿರಲಿ. ಶತ್ರುಗಳ ಕುತಂತ್ರಗಳ ಸಂಪೂರ್ಣ ಮಾಹಿತಿಯಿರಲಿ. ನಮ್ಮ ನಮ್ಮಲ್ಲಿ ಒಗ್ಗಟ್ಟಿರಲಿ. ನಮ್ಮ ಒಳಗಿನ ಆರೋಪ ಪ್ರತ್ಯಾರೋಪಗಳಿಗೆ ಅಲ್ಪ ವಿರಾಮ ನೀಡಿ. ಯುದ್ಧ, ಶಾಂತಿ, ಸಂಧಾನ, ಅವುಗಳ ದೀರ್ಘ ಪರಿಣಾಮದ ಬಗ್ಗೆ ಹಿರಿಯರೊಂದಿಗೆ ಮಾತುಕತೆ ಮಾಡಿ.

ಹುಚ್ಚರು, ಉಡಾಫೆಯವರು  ಮತ್ತು ಸಾಮಾನ್ಯರ ನಡುವಿನ ಅಂತರದ ತೀರ್ಮಾನ ಯೋಚಿಸಿ ನಿರ್ಧರಿಸಿ. ಮಾತಿನ ದೇಶಭಕ್ತಿಗೂ, ಮನಸ್ಸಿನ ದೇಶಪ್ರೇಮಕ್ಕೂ, ಹೃದಯದ ದೇಶ ಪ್ರೀತಿಗೂ, ನಡುವಿನ ವ್ಯತ್ಯಾಸದ ಅರಿವಿರಲಿ. ಬೃಹತ್ ವೈವಿಧ್ಯಮಯ ಶಾಂತಿ ಪ್ರಿಯ ದೇಶಕ್ಕೂ, ಮತಾಂಧ ಅನಾಗರಿಕ ಚಿಕ್ಕ ದೇಶಕ್ಕೂ ಇರುವ ವ್ಯತ್ಯಾಸ ನಿಮ್ಮ ನೆನಪಿನಲ್ಲಿರಲಿ. ಇರುವವರು ಕಳೆದುಕೊಳ್ಳುವರು, ಇಲ್ಲದವರಿಗೆ ಕಳೆದುಕೊಳ್ಳಲು ಏನೂ ಉಳಿದಿರುವುದಿಲ್ಲ. ಗೆಲುವಿರುವುದು ತಾಳ್ಮೆಯಲ್ಲಿಯೇ ಹೊರತು ಆಕ್ರೋಶದಲ್ಲಿಯಲ್ಲ. ಯಶಸ್ವಿಯಾಗುವುದು ವಿವೇಚನೆಯಿಂದಲೇ ಹೊರತು ಕೋಪದಿಂದಲ್ಲ. ಈ ದೇಶ ಈ ಜನರೊಂದಿಗೆ ಎಲ್ಲಾ ಕಾಲಕ್ಕೂ, ಎಲ್ಲಾ ‌ಸಂಧರ್ಭದಲ್ಲಿಯೂ ನಾವು ನೀವು. ಏಕೆಂದರೆ...

ಮನಸ್ಸೆಂಬುದು ಅಕ್ಷಯ ಪಾತ್ರೆ. ನನ್ನೊಳಗು ನಿನ್ನೊಳಗು ಎಲ್ಲರೊಳಗೂ, ಏನಿದೆಯೆಂದು ಕೇಳದಿರು, ಏನಿಲ್ಲ? ಅದರ ಆಳ ಅಗಲ ಎತ್ತರಗಳನ್ನು ಬಲ್ಲವರಿಲ್ಲ, ನಮ್ಮೊಳಗಿನ ಆಗಾಧ ಸಾಮರ್ಥ್ಯವೇ ಮನಸ್ಸು, ಪ್ರೀತಿ ಪ್ರೇಮ ವಾತ್ಸಲ್ಯಗಳು ತುಂಬಿರುವಂತೆ, ಕೋಪ ದ್ವೇಷ ಅಸೂಯೆಗಳು ತುಂಬಿವೆ. ಅದ್ಭುತ ಆಶ್ಚರ್ಯವೆಂದರೆ, ಅದರ ಆಯ್ಕೆಗಳೂ ನಿನ್ನವೇ, ಯಾರಿಗುಂಟು ಯಾರಿಗಿಲ್ಲ, ಸಾವನ್ನು ಸಂಭ್ರಮಿಸುವ ಸ್ವಾತಂತ್ರ್ಯವೂ ನಿನ್ನದೇ, ಬದುಕನ್ನು ದ್ವೇಷಿಸುವ ಸ್ವಾತಂತ್ರ್ಯವೂ ನಿನ್ನದೇ.

ಕೊರಗೇಕೆ ಓ ಮನುಜ ನೀ ಅಲ್ಪನಲ್ಲ, ಈ ಸೃಷ್ಟಿಯೂ ನಿನ್ನ ಮನಸ್ಸಿಗಿಂತ ದೊಡ್ಡದಲ್ಲ, ಸೃಷ್ಟಿಯಾಚೆಗೂ ವಿಸ್ತರಿಸಬಲ್ಲದು ನಿನ್ನೀ ಮನಸು, ನೀನೇನು ಸಾಮಾನ್ಯನಲ್ಲ, ಅಸಾಮಾನ್ಯ, ಹೃದಯ ಚಿಕ್ಕದೇ ಇರಬಹುದು, ಮನಸ್ಸಿನ ಅಗಾಧತೆ ನಿನಗೇ ಅರಿವಿಲ್ಲ, ಹಾಡಬಲ್ಲೆ, ಬರೆಯಬಲ್ಲೆ, ಓದಬಲ್ಲೆ, ಚಿತ್ರಿಸಬಲ್ಲೆ, ನೆಗೆಯಬಲ್ಲೆ, ಈಜಬಲ್ಲೆ ,ಹಾರಾಡಬಲ್ಲೆ, ಇನ್ನೇಕೆ ತಡ, ಕಿತ್ತೊಗೆ ನಿನ್ನ ನಿರಾಸೆ, ಈ ಕ್ಷಣದಿಂದ ಈ ಮನಸ್ಸು ನಿನ್ನದೇ, ಅದಕ್ಕೆ ನೀನೇ ಅಧಿಪತಿ, ಎದ್ದು ಕುಳಿತುಕೋ ನಿನ್ನ ಮನದ ಸಿಂಹಾಸನದ ಮೇಲೆ, ಆಳು ನಿನ್ನ ಮನಸ್ಸಿನ ಸಾಮ್ರಾಜ್ಯವನ್ನು, ನಿನಗಿಷ್ಟಬಂದಂತೆ, ಈಗ ನೀನು ರಕ್ತ ಮೂಳೆ ಮಾಂಸಗಳ ಮುದ್ದೆಯಲ್ಲ, ನೀನು ನಿನ್ನ ವಿಶಾಲ ಮನಸ್ಸಿನ ಚಕ್ರವರ್ತಿ, ಎಲ್ಲವೂ ಶರಣಾಗಿದೆ ನಿನ್ನ ಕಾಲ ಬಳಿ, ಆತ್ಮವಿಶ್ವಾಸದ ಮುಂದೆ ಸೃಷ್ಟಿಯೂ ನಿನ್ನ ಮುಷ್ಟಿಯಲ್ಲಿ...

  • 319 ನೆಯ ದಿನ ನಮ್ಮ ಜ್ಞಾನ ಭಿಕ್ಷಾ ಪಾದಯಾತ್ರೆ ತುಮಕೂರು ಜಿಲ್ಲೆಯ ಗೊಲ್ಲರ ಹಟ್ಟಿ ಗ್ರಾಮದಿಂದ ಸುಮಾರು ‌17 ಕಿಲೋಮೀಟರ್ ದೂರದ ತುಮಕೂರು ನಗರ ತಲುಪಿತು. ಇಂದು 16/9/2021 ಗುರುವಾರ 320 ನೆಯ ದಿನ ನಮ್ಮ ಕಾಲ್ನಡಿಗೆ  ತುಮಕೂರು ನಗರದಲ್ಲಿಯೇ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದೆ. ನಾಳೆ 17/9/2021 ಶುಕ್ರವಾರ  321 ನೆಯ ದಿನ ಸಹ ನಮ್ಮ ವಾಸ್ತವ್ಯ ತುಮಕೂರು ನಗರದಲ್ಲಿಯೇ...

-ವಿವೇಕಾನಂದ. ಹೆಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ