ಸಂಯಮ

ಸಂಯಮ

ಇಂದು ಪಾತಂಜಲ ಯೋಗ ಸೂತ್ರದ ಮೂರನೇ ಪಾದದಲ್ಲಿ ಸಂಯಮ ಎನ್ನುವ ಪದ ಬರುತ್ತದೆ. ಸಂಯಮ ಎಂದರೆ ನಾವು ತಿಳಿದ ಸಂಯಮ ಅಲ್ಲ. ಧ್ಯಾನ, ಧಾರಣ ಮತ್ತು ಸಮಾಧಿಯನ್ನು ಒಟ್ಟಿಗೆ ಸಂಯಮ ಎಂದು ಕರೆದನು. ಯಾವುದೇ ಜೀವಂತ ವಸ್ತು ಇರಲಿ, ಅದು ವಿಕಾಸವಾಗುವ ಸಾಮರ್ಥ್ಯ ಪಡೆದು ಕೊಂಡಿರುತ್ತದೆ. ಅದು ಸಸ್ಯ, ಪ್ರಾಣಿ ಅಥವಾ ಮನುಷ್ಯ ಇರಬಹುದು. ಅದರಲ್ಲಿ ಏನೋ ಒಂದು ವಿಶೇಷತೆ ಇರುತ್ತದೆ. ಆ ವಿಶೇಷತೆ ಬದುಕಿನ ಕಾಲಾವಧಿಯಲ್ಲಿ ವಿಕಾಸವಾಗುತ್ತದೆ. ಜೀವನ ಅಂದರೆ ವಿಕಾಸವಾಗುವುದು. ಏನು ಇದೆ ಅದೇ ವಿಕಾಸವಾಗುವುದು. ಮನೆ ಕಟ್ಟುವುದು, ನಿರ್ಮಾಣ ವಿಕಾಸವಲ್ಲ. ಒಂದು ಬೀಜ ನೆಲದೊಳಗೆ ಹಾಕುತ್ತೇವೆ. ಬೆಳದು ವೃಕ್ಷವಾಗುತ್ತದೆ. ಅದು ನಿರ್ಮಾಣ ಅಲ್ಲ, ವಿಕಾಸ. ಒಂದು ಮಗು ಕಾಲಾಂತರದಲ್ಲಿ ವಿಕಾಸವಾಗುತ್ತದೆ. ಅದರೊಳಗೆ ಹುದುಗಿರುವುದೆಲ್ಲ ವಿಕಾಸವಾಗುತ್ತದೆ. ಈ ವಿಕಾಸ ನಿಸರ್ಗದ ನಿಯಮ. ಇದು ನಿಸರ್ಗದ ಬಯಕೆ. ಇಲ್ಲೊಂದಷ್ಟು ಹೂಗಳು ಇದೆ. ಅವು ತಮಗೆಷ್ಟು ಸಾಧ್ಯವೊ ಅಷ್ಟು ವಿಕಾಸವಾಗಿದೆ. ಒಂದು ಮಲ್ಲಿಗೆ ತನಗೆಷ್ಟು ಸಾಧ್ಯವೋ ಅಷ್ಟು ವಿಕಾಸವಾಗುತ್ತದೆ. ಅದರಲ್ಲಿ ಇರುವುದೆಲ್ಲ ಹೊರಗೆ ಬಂದರೆ ಅದಕ್ಕೆ ಪೂರ್ಣ ವಿಕಾಸ ಎನ್ನುತ್ತೇವೆ. ಏನು ಇರುತ್ತದೊ ಅದು ಹೊರಗೆ ಬರಬೇಕು. ಅದು ವಿಕಾಸ.

ನಿಸರ್ಗದಲ್ಲಿ ಸಹಜವಾಗಿ ಆಗುತ್ತದೆ. ಆದರೆ ಮನುಷ್ಯರಾದ ನಾವು ಪ್ರಯತ್ನ ಮಾಡುತ್ತೀವಿ. ಪತಂಜಲ ಹೇಳುವುದು ನಮ್ಮಲ್ಲಿ ಬಹಳ ಶಕ್ತಿ ಹುದುಗಿದೆ. ಒಂದು ಸಸ್ಯ ಹೂವು ಹಣ್ಣು ಬಿಡುತ್ತದೆ. ಅಂದರೆ ಅದರ ವಿಕಾಸ ಮುಗೀತು. ನಮ್ಮದು ಹಾಗಲ್ಲ. ನಮ್ಮಲ್ಲಿ ಒಂದೆರಡು ಅಲ್ಲ, ಬಹಳಷ್ಟು ಶಕ್ತಿಗಳು ಇದಾವೆ. ಎಲ್ಲಾ ಶಕ್ತಿಗಳನ್ನು ವಿಕಾಸಗೊಳಿಸುವುದೇ ಜೀವನದ ಉದ್ದೇಶ. ಮನುಷ್ಯನಲ್ಲಿ ಐಚ್ಚಿಕ ವಿಕಾಸ ಇವೆ. ಸಸ್ಯ ಮತ್ತು ಪ್ರಾಣಿಗಳಲ್ಲಿ ಅನೈಚ್ಚಿಕ ವಿಕಾಸ ಇದೆ. ದೇಹ ಮನಸ್ಸಿಗೆ ಸಂಬಂಧಿಸಿದ್ದು ಸಾಮಾನ್ಯ ವಿಕಾಸ. ವಿಶೇಷ ಸಾಮರ್ಥ್ಯಗಳನ್ನು ಹೊರ ಹಾಕುವುದೇ ಐಚ್ಚಿಕ ವಿಕಾಸ. ಕೋಗಿಲೆ ಹಾಡುವುದು ಅನೈಚ್ಚಿಕ ವಿಕಾಸ. ಅದು ಎಲ್ಲೂ ತರಬೇತಿ ಪಡೆಯುವುದಿಲ್ಲ. ಅದು ಸಹಜವಾಗಿ ಬರುತ್ತದೆ. ಮನುಷ್ಯ ಸುಮ್ಮನೆ ಹಾಡೋದಿಲ್ಲ. ಅದನ್ನು ಇನ್ನಷ್ಟು ಇನ್ನಷ್ಟು ಮಧುರ ಮಾಡುತ್ತಾನೆ. ಬಹಳಷ್ಟು ಶ್ರಮ ಪಡುತ್ತಾನೆ. ಕೊನೆಗೆ ಅಷ್ಟು ಮಧುರ ಮಾಡುತ್ತಾನೆ. ಇದೆ ಐಚ್ಚಿಕ ಕಾರ್ಯ. ನಮ್ಮಲ್ಲಿ ಏನೇನು ಅದೇ, ಅದೆಲ್ಲವನ್ನು ವಿಕಾಸ ಮಾಡಬೇಕು. ಮನುಷ್ಯನಲ್ಲಿ ಏನೇನು ಸಾಮರ್ಥ್ಯ ಇದೆಯೋ, ಅದು ವಿಕಾಸ ಆಗಬೇಕು ಬಳಸಬೇಕು. ಆಗ ಆತ ದೊಡ್ಡವನಾಗುತ್ತಾನೆ. ಬರೀ ಊಟ ನಿದ್ರೆ ಇದು ಜೀವನ ಅಲ್ಲ. ನಮ್ಮಲ್ಲಿ ಏನೋ ಒಂದು ವಿಶೇಷತೆ ಇದೆ. ಅದನ್ನು ಹೊರಹೊಮ್ಮಿಸುವುದು. ಒಬ್ಬನಲ್ಲಿ ಮಾತಿದೆ. ಒಬ್ಬನಲ್ಲಿ ಬುದ್ಧಿ ಇದೆ. ಒಬ್ಬನಲ್ಲಿ ಎದೆ ಇದೆ. ಒಬ್ಬನೇ ಸ್ಮರಣೆ ಇದೆ. ಒಬ್ಬನಲ್ಲಿ ಗ್ರಹಣ ಸಾಮರ್ಥ್ಯ ಇದೆ. ಏನು ಇದೆ?. ಅದನ್ನು ವ್ಯಕ್ತ ಮಾಡಬೇಕು. ಅದಕ್ಕಾಗಿ ಸಾಧನ ಯೋಗ. ಅದಕ್ಕೆ ಒಳ್ಳೆಯ ವಾತಾವರಣ, ಅಗತ್ಯ ಛಲ ಹಾಗೂ ಉತ್ಸಾಹ ಇರಬೇಕು. ಏನು ಮಾಡಬೇಕೊ ಅದನ್ನು ಮಾಡಿದರೆ ವಿಕಾಸ ಆಗುತ್ತದೆ. ಒಬ್ಬ ಸಾಮಾನ್ಯ ಮನುಷ್ಯ ಸಿದ್ಧಿ ಪುರುಷನಾಗುತ್ತಾನೆ. ತಾನ್ ಸೇನ್ ಅದ್ಭುತ ಗಾಯಕ. ಆತನ ಜೀವನಪೂರ್ತಿ ಹಾಡಿದ. ಬೇರೇನೂ ಅಲ್ಲ. ಹಾಡಿದ, ಹಾಡಿದ, ಹಾಡಿದ ಅಷ್ಟೇ. ಬಿಟ್ಟು ಬಿಡದೆ ಮಾಡುತ್ತಲೇ ಇರಬೇಕು. ಇದೇ ಜಗತ್ತನ್ನು ಬಳಸಿಕೊಂಡು, ಇಲ್ಲಿರುವ ವಸ್ತುಗಳನ್ನು ಬಳಸಿಕೊಂಡು, ಏನು ಸಿಕ್ಕಿದ್ದವೆ ಅದನ್ನೇ ಬಳಸಿಕೊಂಡು, ಮಾಡಬೇಕು. ಇದಕ್ಕಾಗಿ ಅಂತರ್ಯೋಗ ಮಾಡಬೇಕು ಅಂದ ಪಾತಂಜಲ ಮಹರ್ಷಿ. ಅದು ಯಾವುದು ಅಂದರೆ ಸಂಯಮ. ಅಂದರೆ ಧಾರಣ ,ಧ್ಯಾನ ಮತ್ತು ಸಮಾಧಿ. ಈ ಮೂರನ್ನು ಮಾಡುವುದೇ ಸಂಯಮ ಎಂದನು. ಈ ಮೂರರ ಮೇಳ ಸಂಯಮ.

1.ಧಾರಣ: ಭಾವನೆ, ಚಿಂತನೆ, ಆಲೋಚನೆಗಳು ಎಲ್ಲಾ ಚಿತ್ತದಲ್ಲಿರುತ್ತದೆ. ಚಿತ್ತ ಅನ್ನುವುದು ಒಂದು ಒಳಗಿನ ಕರಣ. ಈ ಚಿತ್ತ ಇರುವುದರಿಂದ ನೋಡುತ್ತೇವೆ, ಕೇಳುತ್ತೇವೆ, ಮಾಡುತ್ತೇವೆ. ಧಾರಣ ಅಂದರೆ ಇಡುವುದು. ಅಂದರೆ ಮನಸ್ಸಿನಲ್ಲಿ ಆ ವಸ್ತು ಇಡುವುದು ಅಥವಾ ಆ ವಸ್ತುವಿನಲ್ಲಿ ಮನಸ್ಸು ಇಡುವುದು. ಇದಕ್ಕೆ ಧಾರಣ ಎನ್ನುವರು. ಉದಾಹರಣೆಗೆ, ಮನಸ್ಸನ್ನೇ ಒಂದು ಹೂವಿನಲ್ಲಿ ಇಡುವುದು. ಇದರ ಅರ್ಥ ಆ ಹೂವನ್ನು ಬಿಟ್ಟು ಬೇರೆ ಏನನ್ನು ಇಡಬಾರದು. ಅದೊಂದೇ ಇಡಬೇಕು. ಅದು ಧಾರಣ. ಒಂದೇ ಒಂದು ವಸ್ತುವಿನಲ್ಲಿ ಮನಸ್ಸನ್ನು ಇಡಬೇಕು. ಮನಸ್ಸಿನಲ್ಲಿ ಬೇರೆಲ್ಲ ಏನಿದ್ದರೂ ತೆಗೆದು ಹಾಕಬೇಕು. ಉದಾಹರಣೆಗೆ, ನೀರು 10 ಕಡೆ ಹರಿದರೆ ಶಕ್ತಿ ಕಡಿಮೆ. ಒಂದೇ ಕಡೆ ಹರಿದರೆ ಶಕ್ತಿ ಜಾಸ್ತಿ. ಮನಸ್ಸನ್ನು ಒಂದು ಮುಖವಾಗಿ ಹರಿಸಿದರೆ, ಆಗ ಮನಸ್ಸೇ ಅದನ್ನು ಅನುಭವಿಸುತ್ತದೆ, ತಿಳಿದುಕೊಳ್ಳುತ್ತದೆ.

2.ಧ್ಯಾನ: ಈಗ ಆ ಒಂದು ವಸ್ತು ಏನು ಮನಸ್ಸಿನಲ್ಲಿ ಮೂಡಿರುತ್ತದೆ. ಅದಕ್ಕೆ ಪ್ರತ್ಯಯ ಎನ್ನುವರು. ಅದೇ ಚಿತ್ರ ಮತ್ತೆ, ಮತ್ತೆ, ಮತ್ತೆ ಬರುತ್ತಾ ಇದ್ದರೆ, ಮೂಡುತ್ತಾ ಇದ್ದರೆ, ಅದು ಒಂದು ಪ್ರವಾಹ ಆಗುತ್ತದೆ. ಆಗ ವಸ್ತು ಬಿಟ್ಟು ಬೇರೆ ಏನು ಇರುವುದಿಲ್ಲ. ಉದಾಹರಣೆಗೆ ಹೂವು ಮನಸ್ಸಿನಲ್ಲಿ ಮೂಡಿದ್ದರೆ, ಆ ಹೂವಿನ ಚಿತ್ರದ ಜೊತೆಗೆ ಸುಗಂಧ, ಮಕರಂದ ಎಲ್ಲ ಮೂಡುತ್ತದೆ. ಆಗ ಮನಸ್ಸು ಸುಂದರ ಮಕರಂದವಾಗುತ್ತದೆ. ಅದು ಬಿಟ್ಟು ಬೇರೆ ಬರದಂತೆ ನೋಡಿಕೊಂಡರೆ ಧ್ಯಾನ ಎನ್ನುವರು.

3. ಸಮಾಧಿ : ಧ್ಯಾನ ಮಾಡುವಾಗ, ನಾನು ಧ್ಯಾನ ಮಾಡುತ್ತಾ ಇದ್ದೀನಿ ಅನ್ನುವ ಭಾವ ಇರುತ್ತದೆ. ಸಮಾಧಿ ಹಂತದಲ್ಲಿ, ನಾನು ಧ್ಯಾನ ಮಾಡ್ತಾ ಇದ್ದೀನಿ ಅನ್ನುವುದು ಮರೆತು, ನನ್ನ ಮನಸ್ಸಿನಲ್ಲಿ ಹೂವಿದೆ ಅನ್ನುವುದನ್ನು ಮರೆಯುತ್ತದೆ. ನಾನು ಕೂಡ ಅದರಲ್ಲಿ ಬೆರತು, ಬರಿ ಹೂ ಮಾತ್ರ ಉಳಿಯುತ್ತದ. ಈ ರೀತಿ ಧಾರಣ, ಧ್ಯಾನ, ಸಮಾಧಿ ಮಾಡಿದರೆ, ಇದಕ್ಕೆ ಸಂಯಮ ಎಂದು ಕರೆಯುತ್ತಾರೆ. ಈ ಸಂಯಮ ಬಳಸಿದರೆ, ಯಾವ ಸಾಮರ್ಥ್ಯ ವಿಕಾಸ ಆಗಬೇಕು ಎಂದು ಬಯಸುತ್ತೇವೆಯೋ, ಆ ಸಾಮರ್ಥ್ಯ ವಿಕಾಸವಾಗುತ್ತದೆ. ಆ ವಸ್ತುವಿನ ಜ್ಞಾನ, ಅನುಭವ ಸ್ಪಷ್ಟವಾಗಿ ಆಗುತ್ತದೆ. ಇದರಿಂದ ಮಹಾ ಪಂಡಿತನಾಗಬಹುದು. ಅಲ್ಲವೇ?

-ಎಂ.ಪಿ. ಜ್ಞಾನೇಶ್, ಮಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ