ಸಂಯುಕ್ತ ಕರ್ನಾಟಕ 19-08-12ರಂದು ಪ್ರಕಟಿತ ಲೇಖನ 'ನಡುನೀರಲ್ಲಿ ಸಿಲುಕಿದ ಮಂಗಗಳು'-

ಸಂಯುಕ್ತ ಕರ್ನಾಟಕ 19-08-12ರಂದು ಪ್ರಕಟಿತ ಲೇಖನ 'ನಡುನೀರಲ್ಲಿ ಸಿಲುಕಿದ ಮಂಗಗಳು'-

                   ಸಂಯುಕ್ತ ಕರ್ನಾಟಕ 19-08-2012 ರಂದು ಪ್ರಕಟಿತ ಲೇಖನ  ' ನಡುನೀರಲ್ಲಿ ಸಿಲುಕಿದ ಮಂಗಗಳು'

                                         -ಲಕ್ಷ್ಮೀಕಾಂತ ಇಟ್ನಾಳ, ಧಾರವಾಡ
 
 
      ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನಲ್ಲಿ ಬರುವ ಶಿರೂರ ಒಂದು ಸಣ್ಣ ಹಳ್ಳಿ. ಶಿರೂರ ಗ್ರಾಮದ ಪಕ್ಕದಲ್ಲಿ ಮಾರ್ಕಂಡೇಯ ನದಿಯು ಹರಿಯುತ್ತಿದೆ. ಈ ನದಿಗೆ ಅಡ್ಡಲಾಗಿ ಶಿರೂರ ಡ್ಯಾಂ (ಮಾರ್ಕಂಡೇಯ ಪ್ರಾಜೆಕ್ಟ್) ಗೆ  2005 ರಲ್ಲಿ ಗೇಟುಗಳನ್ನು ಅಳವಡಿಸಲಾಯಿತು. ಡ್ಯಾಂನ ಉದ್ದ 1356 ಮೀ. ಮತ್ತು ಎತ್ತರ 40 ಮೀ. ಈ ಡ್ಯಾಂನ ಹಿನ್ನೀರಿನಲ್ಲಿ ರಂಗಧೋಳಿ ಸಹಿತ 9 ಗ್ರಾಮಗಳ  ಜನವಸತಿಗಳು ದನ-ದೊಡ್ಡಿಗಳೊಂದಿಗೆ ಹೊಲ ಮನೆ ಗದ್ದೆಗಳು (898 ಹೆ) ಇನ್ನಿಲ್ಲದಂತೆ ಮುಳುಗಿದವು. ತಾವು ಹುಟ್ಟಿ ಬೆಳೆದ ನೆಲ, ಮನೆ, ಮಠ, ಗುಡಿ, ಕಲಿತ ಶಾಲೆ, ಯುವಕರ ಕಬಡ್ಡಿ ಮೈದಾನಗಳು, ಕುಸ್ತಿಯಾಡಿದ ಗರಡಿಮನೆಗಳನ್ನು, ಹೆಂಗಳೆಯರು ಕುಂಟಲಿಪಿ, ಜೋಕಾಲಿಯಾಡಿದ ಮರ ಗಿಡ, ಸೀಗೆ, ಗೌರಿ ಹುಣ್ಣಿಮೆಗಳ ಬೆಳದಿಂಗಳುಗಳಲ್ಲಿ ತಾವು ಆಡಿದ ಅಂಗಳಗಳನ್ನೆಲ್ಲ ಮತ್ತೆ ಮತ್ತೆ ಬಾರಿ ಬಾರಿ ಹೊರಳಿ ಕಣ್ದುಂಬಿಕೊಳ್ಳುತ್ತ ಅವುಗಳನ್ನು ದಾಟಿ ಸಾಗುತ್ತಿದ್ದ ಆ ಸಂಕಟದ ನೋವು ಹೇಳತೀರದು.  ಜಗವೇ ಹೊತ್ತಿ ಉರಿದ ಅನುಭವ. ಎಲ್ಲರೂ ಸಂತ್ರಸ್ತರೇ. ಉತ್ತಿ ಬಿತ್ತಿದ ಹೊಲ ಗದ್ದೆಗಳನ್ನೆಲ್ಲ, ಕೊನೆಯ ಬಾರಿ ನೋಡಿದ ಜನ ಕಣ್ಣೀರುಗರೆಯುತ್ತ, ನಿಗದಿಪಡಿಸಿದ ಶಿಬಿರ, ಎತ್ತರದ ಪ್ರದೇಶಗಳಿಗೆ ಜನ ಜಾನುವಾರು ಸಹಿತ ಸ್ಥಳಾಂತರ ಹೊಂದಿದರು. ತಮಗೆಲ್ಲ ಅನ್ನ ನೀಡಿದ, ಕಾಳು-ಕಡಿ, ಮಾವು ಪೇರು ಚಿಕ್ಕು ಬಾಳೆ ಸೀತಾಫಲ ಮುಂತಾದ ಹಣ್ಣು ಹಂಪಲಗಳನ್ನೆಲ್ಲ ನೀಡಿದ ಅತ್ಯಂತ ಫಲವತ್ತಾದ ಭೂಮಿತಾಯಿಯನ್ನು ತೊರೆದು ಹೋಗುವ ಅಗಲಿಕೆಯ ನೋವು ನುಂಗಲಾಗದೇ ಚಡಪಡಿಸತೊಡಗಿತ್ತು. ಅದೇ ತಮ್ಮ ನೈಸರ್ಗಿಕ ಬಾಲವಾಡಿಗಳಂತೆÉ ಹೊಲಗದ್ದೆಗಳಲ್ಲಿ ತಮ್ಮ ತಾಯಂದಿರ ಸೆರಗಿನಡಿ ಬೆಳೆದು ಬದುಕಿದ ಅಂದಿನ ಹಿರಿಯ ಜೀವಗಳು ಅಲ್ಲಿಂದ ಅದ್ಹೇಗೆ ತಾನೇ ಬಿಟ್ಟು ಹೋದಾರು. ಚಿಕ್ಕವರಿದ್ದಾಗ ಅಲ್ಲಿಯೇ ತಾನೇ ಅವರು ಮಳೆಯಲ್ಲಿ ನೆನೆಯುತ್ತ, ಆ ಬಣ್ಣದ ಕಾಗದದ ದೋಣಿಗಳನ್ನು ಅ ಮಳೆಯ ನೀರಿನಲ್ಲಿ ತೇಲಿಬಿಟ್ಟದ್ದು. ಅದೇ ಜನ್ಮಭೂಮಿಯಲ್ಲಿ ತಾನೇ ಅವರೆಲ್ಲ ಅಪ್ಪನ ಹೆಗಲ ಮೇಲೆ ಕುಳಿತು ಜಾತ್ರೆಗೆಲ್ಲ ಹೋಗಿದ್ದು, ಬರುವಾಗ ಊರ ಅಗಸಿಯ ಹತ್ತಿರ ಹಚ್ಚಿದ ಬಲೂನಿನವನ ಹತ್ತಿರ ಆ ಪೀಪೀಗಳನ್ನು ತಂದು ಆಡಿದ್ದು. ಇದೆಲ್ಲ ಅವರಿಗೆ ನೆನಪಾಗಿ ಕಾಡತೊಡಗಿತ್ತು.
     ಇನ್ನೂ ಹೊಲ ಗದ್ದೆಗಳಲ್ಲಿ ದೂರದ ತಗ್ಗು ಪ್ರದೇಶಗಳಲ್ಲಿ ಇರಬಹುದಾದ ದನಗಾಹಿಗಳನ್ನು ಒಂಟಿ ಮನೆಗಳನ್ನು ಹುಡುಕಾಡಿ ತಿಳಿಹೇಳಿ, ಡಂಗುರಸಾರಿ ಹಲವಾರು  ವಿನಂತಿಯನ್ನು ಸರ್ಕಾರ ಮಾಡಿ, 2005 ರ ಮಳೆಗಾಲದ ಒಂದು ದಿನ ನಿಷ್ಕರ್ಷೆ ಮಾಡಿ, ನಿಗದಿಪಡಿಸಿದ ಪ್ರದೇಶದಲ್ಲಿ ಇನ್ನಾರೂ ಉಳಿದಿಲ್ಲವೆಂಬುದನ್ನು ಖಾತ್ರಿ ಪಡಿಸಿಕೊಂಡು ಅಂತೂ ಅದೊಂದು ದಿನ ನೀರು ತುಂಬುವ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಗಂಟೆ ಗಂಟೆಗೆ ಡ್ಯಾಂನಲ್ಲಿ ನದಿಯ ನೀರಿನ ಒಳಹರಿವಿನಿಂದ ಏರುವ ನೀರಿನ ಮಟ್ಟದ ಅದ್ಭುತ ದೃಶ್ಯವನ್ನು ಹಿರಿಕಿರಿಯರಾದಿಯಾಗಿ ಬೆರಗುಗಣ್ಣುಗಳಿಂದ ನೋಡುವವರೇ. ಡ್ಯಾಂ ತುಂಬಲು ಸಮೀಪ ಬಂದಾಗ ಹಿನ್ನೀರಿನಲ್ಲಿ ಅಲ್ಲಲ್ಲಿ ಸಣ್ಣ ದೊಡ್ಡ ಮರಗಳು, ಗುಡಿ ಗೋಪುರಗಳು, ಮನೆ ಮಠಗಳು ಮುಳುಗುವುದನ್ನು ಜನ ನೋವಿನಿಂದ ಕೊನೆಯಬಾರಿ ಕಣ್ದುಂಬಿಕೊಂಡರು.
   ಇದು ಕೇವಲ ರಂಗಧೋಳಿಯ ಕಥೆಯಲ್ಲ! ರಂಗಧೋಳಿ ಕೇವಲ ಸಾಂಕೇತಿಕ! ಭೂಮಿಯ ಮೇಲೆ ಕಟ್ಟಿದ ಎಲ್ಲ ಆಣೆಕಟ್ಟೆಗಳ ಅಡಿ ಮುಳುಗಿದ ಸಾವಿರಾರು ಗ್ರಾಮಗಳ ಕಥೆ-ವ್ಯಥೆಯೂ ಇದೇ ಅಲ್ಲವೇ?
    ಶಿರೂರಿನ ಹತ್ತಿರ ದಂಡೆಗೆ ಸುಮಾರು ಎರಡು ಕಿ.ಮೀ ಹಿನ್ನೀರಿನಲ್ಲಿ ಒಂದು ದೊಡ್ಡ ಆಲದ ಮರವೂ ಭಾಗಶ: ಮುಳುಗಡೆಗೊಂಡು ಅದರ ಮೇಲ್ಭಾಗ ಮಾತ್ರ ಕಾಣುತ್ತಿತ್ತು.   ಜುಲೈ 2ರ ನಡುರಾತ್ರಿ ಶಿರೂರಿನ ಜನಕ್ಕೆ ಹಿನ್ನೀರಿನಲ್ಲಿ ಅದಾರೋ ಸಾಮೂಹಿಕವಾಗಿ ಜೋರಾಗಿ ಕಿರುಚಿಕೊಳ್ಳುತ್ತಿರುವ ಶಬ್ದ ಕಿವಿಗೆ ಅಪ್ಪಳಿಸಹತ್ತಿತು. ಆ ಆರ್ತನಾದ ಅದೆಷ್ಟು ಘೋರವಾಗಿತ್ತೆಂದರೆ ಬಹುತೇಕ ಊರಿಗೆ ಊರೇ ಎದ್ದು ಕುಳಿತಿತು. ಅವುಗಳು ಮಂಗಗಳ ಧ್ವನಿ ಎಂದು ತಿಳಿಯುವುದು ತಡವಾಗಲಿಲ್ಲ. ಮನುಷ್ಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದ ಆಡಳಿತಕ್ಕೆ ಇಂಥ ಒಂದು ಸಂದರ್ಭ ಬರಬಹುದೆಂದು ಯಾರೂ ಊಹಿಸದಿದ್ದುದರಿಂದ ಆ ಮಂಗಗಳ ಹಿಂಡು ಆ ಆಲದ ಮರದಲ್ಲಿರುವುದು ಯಾರ ಗಮನಕ್ಕೂ ಬಾರದೇ ಹೋಯಿತು. 
   ಸುದ್ದಿ ತಿಳಿದ ಅರಣ್ಯ ಇಲಾಖೆಯು, ಪ್ರಾಣಿ ಪಕ್ಷಿ ಪ್ರೇಮಿಗಳ ಒಂದು ತಂಡ  ರಚಿಸಿತು. ಆ ತಂಡದಲ್ಲಿ ಆರು ನುರಿತ ಮೀನುಗಾರರು,  ಪಕ್ಷಿ ಪ್ರೇಮಿ ಶಿಕ್ಷಕ  ಆರ್. ಜಿ. ತಿಮ್ಮಾಪೂರ, ಹಾಗೂ ಕೆಪಿಸಿಯ ಇಂಜಿನೀಯರ್ ಹಾಗೂ ಹವ್ಯಾಸಿ ಫೋಟೋಗ್ರಾಫರ್ ರುದ್ರಪ್ಪ ಇದ್ದರು.  ತಂಡ ಆ ಮಂಗಗಳನ್ನು ಪಾರುಮಾಡಲು ಎರಡು ತೆಪ್ಪಗಳಲ್ಲಿ ಆ ಮರದೆಡೆಗೆ ತೆರಳಿತು. ಆ ವಿಶಾಲವಾದ ನೀರಿನಲ್ಲಿ ದೊಡ್ಡ ದೊಡ್ಡ ಅಲೆಗಳು ಉಂಟಾಗಿ ದಂಡೆಯಲ್ಲಿ ತೆಪ್ಪನೋಡುತ್ತ ನಿಂತವರಲ್ಲಿ ತೆರೆಗಳ ಏರಿಳಿತದಲ್ಲಿ ತೆಪ್ಪ ಮುಳುಗಿದಂತೆ ಕಾಣುತ್ತಿದ್ದುದರಿಂದ ಕೂಡಲೇ ಮರಳಿಬರುವಷ್ಟರಲ್ಲಿ ಅರಣ್ಯ ಇಲಾಖೆಯಿಂದ  ಸುರಕ್ಷತೆಗಾಗಿ ಟಾಯರುಗಳ ವ್ಯವಸ್ಥೆ ಮಾಡಲಾಗಿತ್ತು. ತಂಡ ಮರದ ಹತ್ತಿರ ತೆರಳಿ ಪರಿಶೀಲಿಸಿದಾಗ, ಆ ಮರದ ಮೇಲೆ ಇಪ್ಪತ್ತಾರು ಕೆಂಪು ಮಂಗಗಳ ಬೀಡೊಂದು ಇಷ್ಡೆಲ್ಲ ಗಲಾಟೆಗೆ ಕಾರಣವಾಗಿದ್ದುದು ತಿಳಿಯಿತು. ಆ ಗುಂಪಿನಲ್ಲಿ ಗಂಡು (ಆಲ್ಫಾ ಮೇಲ), ಹೆಣ್ಣು ಮಂಗಗಳು ಮರಿಗಳ ಸಮೇತ ವಾಸವಾಗಿದ್ದು ಅವುಗಳ ನಿರಾತಂಕ ಪಯಣಕ್ಕೆ ಮಾನವ ಕಡಿವಾಣ ಹಾಕಿದ್ದುದು, ಆಘಾತಕ್ಕೆ ಒಳಗಾಗಿ ಆರ್ತಧ್ವನಿಯೊಂದಿಗೆ ತಮ್ಮ ಆಕ್ರೋಶ ದು:ಖ ತೋರ್ಪಡಿಸಿದ್ದವು.  ಒಂದು ತೆಪ್ಪವನ್ನು ಮರದ ಕೆಳಗೆ ನಿಲ್ಲಿಸಿ ತೆಳುದಾರದಿಂದ ಚಲಿಸದಂತೆ ಮರಕ್ಕೆ ಕಟ್ಟಿ ಅದರಲ್ಲಿ ಬಾಳೆಹಣ್ಣನ್ನು ಶೇಂಗಾ ಚುರುಮರಿ ಇತ್ಯಾದಿ ಇಟ್ಟು, ಇನ್ನೊಂದು ದೋಣಿಯಲ್ಲಿ ತಂಡ ಸುಮಾರು ಇಪ್ಪತ್ತು ಮೀಟರು ಅಂತರದಲ್ಲಿ ಕುಳಿತಿತು. ಅ ತೆಪ್ಪಕ್ಕೆ ಹಗ್ಗದಿಂದ ಕಟ್ಟಿ (ಮಂಗ ಮಾನವನ ಕರುಳ ಬಳ್ಳಿ) ಇನ್ನೊಂದು ತುದಿಯನ್ನು ತಾವು ಹಿಡಿದುಕೊಂಡಿದ್ದರು.   
    ಅವುUಳು ಕುಳಿತುಕೊಂಡ ತಕ್ಷಣ ಆ ತೆಪ್ಪವನ್ನು ಸಾವಕಾಶವಾಗಿ ನೀರಲ್ಲಿ ಎಳೆದು ತರುವ ಪ್ಲಾನ್ ಇವರದೆಲ್ಲ. ಆದರೆ ಮಂಗಗಳು ಆ ತೆಪ್ಪದ ಸುತ್ತಮುತ್ತ ಪರಿಶೀಲನೆ ಮಾಡಿ ಸಮೀಪದ ರಂಬೆಯಿಂದ ಹಿಂಗಾಲುಗಳಿಂದ ಜೋತು ಬಿದ್ದು ಅದರಲ್ಲಿಯ  ಬಾಳೆ ಹಣ್ಣುಗಳನ್ನು ತೆಗೆದುಕೊಂಡು ಹೋದವು. ಯಾವುವೂ ಆ ತೆಪ್ಪದ ಮೇಲೆ ಬರಲಿಲ್ಲ. ಬಹಳ ಪ್ರಯತ್ನ ಪಟ್ಟರೂ ಅವುಗಳು ತೆಪ್ಪದ ಕಡೆಗೆ ಬರದೇ ಇದ್ದುದರಿಂದ ತಂಡ ಅಂದು ದಡಕ್ಕೆ ಮರಳಿತು. 
    ಇನ್ನೊಮ್ಮೆ ದೋಣಿಯ ಮೇಲೆ ಪ್ಲಾಟ್ ಫಾರ್ಮ ತರಹ ಕಟ್ಟಿ ಅದರ ಮೇಲೆ ಶೇಂಗಾ ಚುರುಮರಿ ಮಾತ್ರ ಇಡಲಾಯಿತು. ಮಂಗಗಳು ಅದರ ಮೇಲೆ ಬಂದರೂ ದೋಣಿಯನ್ನು ಎಳೆಯುತ್ತಿದ್ದಂತೆಯೇ ಜಿಗಿದು ಮರ ಸೇರಿದವು. ಹೀಗಾಗಿ ಈ ಪ್ರಯತ್ನವೂ ವಿಫಲವಾಯಿತು.
   ಆ ಆಲದ ಮರದ ಬುಡದಲ್ಲಿ ಇದ್ದ ಒಂದು ದೇವಸ್ಥಾನಕ್ಕೆ ನಿಯಮಿತವಾಗಿ ಸೇವೆ ಸಲ್ಲಿಸುತ್ತಿದ್ದ ಭಕ್ತರೊಬ್ಬರು ತಾವು ಅಲ್ಲಿಗೆ ಹೋದಾಗಲೆಲ್ಲ ಅ ಮಂಗಗಳಿಗೆ ಬಾಳೆಹಣ್ಣು ಮತ್ತಿತರೆ ತಿನಿಸುಗಳನ್ನು ತಿನ್ನಿಸುತ್ತಿದ್ದುದರಿಂದ ಅವರನ್ನು ಕರೆದುಕೊಂಡು ಮರದ ಹತ್ತಿರ ಹೋಗಲಾಯಿತು. ಅವರು ಬಾಳೆಹಣ್ಣನ್ನು ಅವುಗಳಿಗೆ ತೊರಿಸಿದ ತಕ್ಷಣ ಅವುಗಳು ಅವನ ಹತ್ತಿರವೇ ಬಂದಿದ್ದರಿಂದ ಅದರಲ್ಲಿ ಒಂದು ಮಂಗವನ್ನು ಹಿಡಿದು ದೋಣಿಯಲ್ಲಿ ಹಾಕುತ್ತಿದ್ದಂತೆಯೇ ಉಳಿದ ಮಂಗಗಳು ಕಿರುಚುತ್ತ ತಂಡದ ಮೇಲೆ ದಾಳಿ ಮಾಡಿದವು. ಹೀಗಾಗಿ ಈ ಪ್ರಯತ್ನವೂ ವಿಫಲವಾಯಿತು. ಹಾಗೂ ಇನ್ನೆರಡು ದಿನಗಳ ಪ್ರಯತ್ನ ಫಲ ನೀಡಲಿಲ್ಲ. 
ಇನ್ನೊಂದು ದಿನ  ಸಾಕಷ್ಟು ದೊಡ್ಡದಾದ ಪಂಜರದಂತಹ ಬಲೆಯನ್ನು ದೋಣಿಯಲ್ಲಿ ಇಟ್ಟು ಅದರಲ್ಲಿ ಹಣ್ಣು ಹಂಪಲ, ಶೇಂಗಾ, ಚುರುಮರಿ ಮುಂತಾದವುಗಳನ್ನು ಇಟ್ಟು ಸಂಜೆವೆರೆಗೆ ಕಾಯಿತು ತಂಡ. 
    ಅಂತೂ ಸಂಜೆವರೆಗೆ ಒಟ್ಟು ಹನ್ನೊಂದು ಮಂಗಗಳು ಪಂಜರದ ಬಲೆಯಲ್ಲಿ ಸಿಕ್ಕವು.  ಮಂಗಗಳಿರುವ ತೆಪ್ಪವನ್ನು ಹಗ್ಗದಿಂದ ಎಳೆಯುತ್ತ ದಡಕ್ಕೆ ಬರಲಾಯಿತು. ಆದರೆ ಹೀಗೆ ದಡಕ್ಕೆ ಸಾಗಿಸಿದ ಮಂಗಗಳೆಲ್ಲ ಗಂಡು ಅಥವಾ ಮರಿಗಳಿಲ್ಲದ ಹೆಣ್ಣುಮಂಗಗಳಾಗಿದ್ದುದು ವಿಶೇಷವಾಗಿತ್ತು.  ಮರಿಗಳು ತನ್ನ ತಾಯಿಯನ್ನು ಗಟ್ಟಿಯಾಗಿ ಹಿಡಿದುಕೊಂಡು ಇರುತ್ತಿದ್ದುದರಿಂದ ಮರಿಗಳನ್ನು ಹೊಂದಿದ ತಾಯಿ ಮಂಗಗಳು ನೀರಿನಲ್ಲಿ ಬರದೇ ಉಳಿದವುಗಳಷ್ಟೇ ನೀರಿನ ಕಡೆಗೆ ಬಂದಿರಬಹುದೆಂದು ವಿಶ್ಲೇಷಿಸಲಾಯಿತು. ಉಳಿದ ಮಂಗಗಳನ್ನು ಹೇಗೆ ಹೊರಗೆ ಸಾಗಿಸಬೇಕೆನ್ನುವ ವಿಚಾರ ಮಾಡುವಷ್ಟರಲ್ಲೇ ಹೊರಸಾಗಿಸಿದ ಮಂಗಗಳೆಲ್ಲ ನೀರಿನಲ್ಲಿ ಈಜಿಕೊಂಡು ಆಲದ ಮರದ ಕಡೆಗೆ ಮರಳಿ ಹೋಗುತ್ತಿರುವುದನ್ನು ನೋಡಿತು ತಂಡ. ಅಂದರೆ ಅವುಗಳಿಗೆ ಈಜಲು ಬರುತ್ತಿದ್ದು ಮರಿಗಳ ಸಲುವಾಗಿ ಅವುಗಳು ನಡುಗಡ್ಡೆಯಿಂದ ಹೊರಬರಲಾಗದೇ ಚಡಪಡಿಸುತ್ತಿದ್ದವು ಎಂಬುದು ಅರಿವಾಯಿತು. ತಾಯಿಯನ್ನು ತಬ್ಬಿಹಿಡಿದ ಮರಿಗಳಿರುವುದರಿಂದ ತಾಯಿಮಂಗಗಳಾಗಲಿ ಮರಿಗಳಾಗಲಿ ಹೊರಕ್ಕೆ ಈಜಲು ಸಾಧ್ಯವಾಗದಿರುವುದರಿಂದ ಅವುಗಳು ಸಂಕಟದಿಂದ ಕಿರುಚುತ್ತಿದ್ದವು. 
    ಮನುಷ್ಯರನ್ನು ನಂಬದೇ ಅವುಗಳೂ ಇವರೆಡೆಗೆ ಬರದೇ ಇರುವುದು ಸಮಸ್ಯೆಗೆ ಕಾರಣವಾಗಿತ್ತು. ಬೇರೆ ಸೂಕ್ತ ಉಪಾಯವಿರದೇ ಎಲ್ಲರೂ ನಿರುಪಾಯರಾದರು. ಸುಮಾರು ಹತ್ತು ಹನ್ನೆರಡು ದಿನಗಳಲ್ಲಿ ಮರದ ಎಲೆಗಳೆಲ್ಲ ಕೊಳೆತದ್ದರಿಂದಲೋ ಅಥವಾ ಮಂಗಗಳು ಮರಗಳಲ್ಲಿಯ ಹಣ್ಣು-ಎಲೆಗಳನ್ನೆಲ್ಲ ತಿಂದು ತೀರಿಸಿದ್ದರಿಂದಲೋ ಆಹಾರದ ಕೊರತೆಯಾಗಿ ಆ ಮಂಗಗಳು ಮರಿಗಳ ಸಹಿತ ಒಂದೊಂದಾಗಿ ಸತ್ತು ತೇಲಿದವು. 
 ಮರಿಗಳನ್ನು ಬಿಟ್ಟು ಗಂಡು ಹೆಣ್ಣು ಮಂಗಗಳು ಸರಾಗವಾಗಿ ಈಜಿ ದಡ ಸೇರಬಹುದಿತ್ತು. ಆದರೆ ಅವುಗಳ ಮರಿಗಳನ್ನು ಬಿಟ್ಟು ಹೊರಬರದೇ ಅಲ್ಲಿಯೇ ಸಾವನ್ನು ಸ್ವೀಕರಿಸಿದುದುನ್ನು ನೋಡಿದರೆ ಮನುಷ್ಯ ತನ್ನ ಮೂಗಿನ ನೇರಕ್ಕೆ ‘ಮಂಗಗಳು ತಾನು ಸಾಯುವಾಗ ಮರಿಯನ್ನು ತನ್ನ ಕಾಲಬುಡದಲ್ಲಿ ಹಾಕಿ ನಿಲ್ಲುತ್ತವೆ’ ಎಂಬ ಮಾತನ್ನು ಮಿಥ್ಯವೆಂದು ಆ ಮಂಗಗಳು ತಮ್ಮ ಸಾವಿನಿಂದ ಸಾಬೀತುಪಡಿಸಿದ್ದವು ಹಾಗೂ ಪ್ರಾಣಿ ಸಂಕುಲಕ್ಕೆ ಮನುಷ್ಯ ಮಾಡಿದ ಅನ್ಯಾಯವನ್ನು ಈ ರೀತಿ ಪ್ರತಿಭಟಿಸಿದ್ದವು. ಮನುಷ್ಯರೆಲ್ಲರನ್ನು ಆ ಸ್ಥಳದಿಂದ ಸುರಕ್ಷಿತವಾಗಿ ಸ್ಥಳಾಂತರಿಸಿದ ನಾವು ಪ್ರಾಣಿಗಳ ಸುರಕ್ಷತೆಗಾಗಿ ಕಿಂಚಿತ್ತೂ ಯೋಚಿಸದಿರುವುದು ಮಾನವನ ಸ್ವಾರ್ಥತೆಗೆ ಈ ಘಟನೆ ನಿದರ್ಶನವಾಗಿ ನಿಲ್ಲುತ್ತದೆ.
     ಕೇವಲ ಮನುಷ್ಯನ ಸ್ವಾರ್ಥಕ್ಕೆ ಅದೆಷ್ಟು ಸಂಖ್ಯೆಯಲ್ಲಿ ಈಜಲಾರದ, ಹಾರಲಾರದ, ಓಡಲಾರದ ಕೀಟ ಪ್ರಭೇದಗಳು, ಅದೆಷ್ಟು ಹುಳು ಹುಪ್ಪಟೆಗಳು, ಮುಳುಗಿದ ಮರಗಳಲ್ಲಿಯ ಜೀವಜಂತುಗಳು, ಹಕ್ಕಿಗಳ ಗೂಡುಗಳಲ್ಲಿ ಇರಬಹುದಾದ ತತ್ತಿ, ಮರಿಗಳು, ಬಸವನಹುಳುವಿನಿಂದ ಹಿಡಿದು ಓತಿಕ್ಯಾತ,ಅಮೆಗಳವರೆಗೆ, “ಜೀವಚಕ್ರದ” ಕೊಂಡಿಗೆ, ಜೈವಿಕ ಲೋಕಕ್ಕೆ ಅತೀ ಅವಶ್ಯವಾದ ಅದೆಷ್ಟೋ ಭೂಮಿಯೊಳಗಿನ ಕ್ರಿಮಿ ಕೀಟ ಸಸ್ಯ ಪ್ರಭೇದಗಳಿಗೆ ನಮ್ಮಷ್ಟೇ ಸಹಜವಾಗಿ ಸಿಗಬೇಕಾದ ಈ ಭೂಗ್ರಹದ ಹಕ್ಕನ್ನು ಯಾವ ಹಂಗು ಇಲ್ಲದೇ ಅವುಗಳಿಂದ ಕಸಿದುಕೊಂಡು ಮಾನವ ಈ ಅಸಂಖ್ಯ ಜೀವಿಗಳಿಗೆ ಅನ್ಯಾಯವೆಸಗುತ್ತಿದ್ದಾನೆ. “ಜೀವ ಚಕ್ರದ” ಒಂದೊಂದೇ ಕೊಂಡಿ ಕಳಚಿ ಮನುಷ್ಯ ತನ್ನ ಅಜ್ಙಾನದಿಂದ ಎಂದೋ ಬರುವ ವಿನಾಶವನ್ನು ಇಂದೇ ತಂದು ಕೊಳ್ಳುತ್ತಿದ್ದಾನಲ್ಲವೇ?

Comments