ಸಂವಿಧಾನದ ರಕ್ಷಕರ ಅತ್ಯಂತ ಕಿರು ಪರಿಚಯ

ಸಂವಿಧಾನದ ರಕ್ಷಕರ ಅತ್ಯಂತ ಕಿರು ಪರಿಚಯ

ಸಂವಿಧಾನ ಜಾರಿಯಾಗಿ ಸುಮಾರು 75 ವರ್ಷಗಳ ನಂತರ ಅದರ ಪ್ರಾತಿನಿಧಿಕ ರಕ್ಷಕರಾದ‌ ಭಾರತದ ಗೌರವಾನ್ವಿತ 15 ರಾಷ್ಟ್ರಪತಿಗಳ ಕಾರ್ಯನಿರ್ವಹಣೆ ಕುರಿತು ಸರಳ ಸಂಕ್ಷಿಪ್ತ ಅಭಿಪ್ರಾಯ ಎರಡು ವಾಕ್ಯಗಳಲ್ಲಿ, ಗಣರಾಜ್ಯೋತ್ಸವದ ಸಂದರ್ಭದಲ್ಲಿ...

ರಾಜಧಾನಿಯಿಂದ ಸುಮಾರು ‌2200 ಕಿಲೋಮೀಟರ್ ದೂರದಲ್ಲಿ ಕುಳಿತು ಸಣ್ಣ ಅಧ್ಯಯನ ಮತ್ತು ಮಾಧ್ಯಮಗಳ ಸುದ್ದಿ - ಮಾಹಿತಿಯನ್ನು ಆಧರಿಸಿ.....

1) ಡಾಕ್ಟರ್ ಬಾಬು ರಾಜೇಂದ್ರ ಪ್ರಸಾದ್: ಉತ್ತಮ...ಒಬ್ಬ ಪ್ರತಿಭಾವಂತ - ಪ್ರಾಮಾಣಿಕ ವ್ಯಕ್ತಿ. ಸ್ವಾತಂತ್ರ್ಯ ಹೋರಾಟಗಾರ ಮತ್ತು ಸ್ವಾತಂತ್ರ್ಯ ನಂತರದ ಪ್ರಥಮ ರಾಷ್ಟ್ರಪತಿ. ಗಾಂಧಿ, ನೆಹರು, ಅಂಬೇಡ್ಕರ್, ಪಟೇಲ್ ಮುಂತಾದವರೊಂದಿಗೆ ಸಮನ್ವಯ ಸಾಧಿಸಿ ತಮ್ಮ ಕಾರ್ಯ ನಿರ್ವಹಿಸಿದರು.

2) ಡಾಕ್ಟರ್ ಸರ್ವಪಲ್ಲಿ ರಾಧಾಕೃಷ್ಣನ್: ಉತ್ತಮ.. ಇವರು ಸಹ ಪ್ರತಿಭಾವಂತ ಮತ್ತು ಪ್ರಾಮಾಣಿಕರು. ರಾಷ್ಟ್ರಪತಿಗಳ ಕಚೇರಿಯ ಎಲ್ಲಾ ಶಿಷ್ಟಾಚಾರಗಳನ್ನು ಶಿಸ್ತು ಬದ್ದವಾಗಿ ನಿರ್ವಹಿಸಿದರು. ಇವರ ಜನ್ಮದಿನವನ್ನು ‌ಶಿಕ್ಷಕರ ದಿನಾಚರಣೆಯಾಗಿ ಆಚರಿಸಲಾಗುತ್ತದೆ.

3) ಜಾಕೀರ್ ಹುಸೇನ್: ಉತ್ತಮ… ನಿಷ್ಠಾವಂತ ಮತ್ತು ವಿದ್ವತ್ತಿನ ವ್ಯಕ್ತಿಯಾದ ಇವರು ಸಹ ತಮ್ಮ ಸ್ಥಾನದ ಗೌರವಕ್ಕೆ ಚ್ಯುತಿ ಬಾರದಂತೆ ಎಲ್ಲಾ ಶಿಷ್ಠಚಾರ ಪಾಲಿಸಿ ಗೌರವಾನ್ವಿತ ಸ್ಥಾನ ಪಡೆದಿದ್ದಾರೆ.

4) ವಿ ವಿ ಗಿರಿ: ಸಮಾಧಾನಕರ. ಸ್ವಲ್ಪ ರಾಜಕೀಯ ಹಿನ್ನೆಲೆಯ ವ್ಯಕ್ತಿ. ಆದರು‌ ಸ್ಥಾನ ಅಲಂಕರಿಸಿದ ಮೇಲೆ ಗೌರವದಿಂದಲೇ ನಡೆದುಕೊಂಡರು. ಇವರ ಕಾಲದಲ್ಲಿ ಸ್ವಲ್ಪ ರಾಜಕೀಯ ವ್ಯತ್ಯಾಸಗಳು ಸಹ ಘಟಿಸಿದವು. ಸ್ಥಾನದ ಘನತೆಗೆ ಯಾವುದೇ ಕುಂದು ತರಲಿಲ್ಲ.

5) ಫಕ್ರುದ್ದೀನ್ ಆಲಿ ಅಹಮದ್: ಸಾಧಾರಣ. ಸಂಪೂರ್ಣ ರಾಜಕೀಯ ಹಿನ್ನೆಲೆಯ ವ್ಯಕ್ತಿ. ದೇಶದಲ್ಲಿ ರಾಜಕೀಯ ಮೌಲ್ಯಗಳು ಕುಸಿಯುತ್ತಿದ್ದ ಸಮಯದಲ್ಲಿ ಅಧಿಕಾರ ಸ್ವೀಕರಿಸಿದರು. ಆದರೆ ದುರಾದೃಷ್ಟವಶಾತ್ ಅವಧಿ ಪೂರೈಸದೆ ಅಕಾಲಿಕ ಮರಣ ಹೊಂದಿದರು.

6) ನೀಲಂ ಸಂಜೀವ ರೆಡ್ಡಿ: ಸಾಧಾರಣ....ಪ್ರಧಾನಿ ಪದವಿಯ ಆಕಾಂಕ್ಷಿ.‌ ಆದರೆ ರಾಷ್ಟ್ರಪತಿಯಾಗುವ ಅವಕಾಶ ದೊರೆಯಿತು. ರಾಜಕೀಯ ಏಳು ಬೀಳುಗಳ ನಡುವೆ ಶಿಷ್ಠಚಾರಕ್ಕೆ ಧಕ್ಕೆಯಾಗದಂತೆ ನೋಡಿಕೊಂಡರು. ಹೆಚ್ಚಿನ ಸಾಧನೆ ಏನು ಇಲ್ಲ.

7) ಗ್ಯಾನಿ ಜೇಲ್ ಸಿಂಗ್: ಸಮಾಧಾನಕರ...ವೃತ್ತಿಪರ ರಾಜಕಾರಣಿ. ಪಕ್ಷ ನಿಷ್ಠೆಗಾಗಿ ಒಲಿದ ಪದವಿ. ಅಧಿಕಾರದ ಅವಧಿಯಲ್ಲಿ ಸ್ವಲ್ಪ ವಿವಾದಾಸ್ಪದ ವ್ಯಕ್ತಿ. ಆಗಿನ ಪ್ರಧಾನಿ ರಾಜೀವ್ ಗಾಂಧಿಯವರೊಂದಿಗೆ ಸ್ವಲ್ಪ ಮುನಿಸು. ಕೊನೆಗೆ ಎಲ್ಲವೂ‌ ಸುಖಾಂತ್ಯ. ದೊಡ್ಡ ಸಾಧನೆ ಏನು ಇಲ್ಲ.

8) ಆರ್ ವೆಂಕಟರಾಮನ್: ಉತ್ತಮ. ಪ್ರತಿಭಾವಂತ ಮತ್ತು ಉತ್ತಮ ಆಡಳಿತಗಾರ. ಆದರೆ ಅಧ್ಯಕ್ಷೀಯ ಅವಧಿಯಲ್ಲಿ ಬಹುತೇಕ ವಿಶ್ರಾಂತ ಮನಸ್ಥಿತಿ ಮತ್ತು ಯಥಾವತ್ ಶಿಷ್ಟಾಚಾರ ಪಾಲನೆ. ಸ್ಥಾನದ ಘನತೆ ಕಾಪಾಡಿದರು. ಹೇಳಿಕೊಳ್ಳುವ ಸಾಧನೆ ಇಲ್ಲ.

9) ಶಂಕರ್ ದಯಾಳ್ ಶರ್ಮ: ಕಳಪೆ. ಸ್ಥಾನ ಅಲಂಕಾರಿಸಿದಾಗ ಬಹುತೇಕ ವಿಶ್ರಾಂತ ಮನಸ್ಥಿತಿ.‌ ಕೇವಲ ಔಪಚಾರಿಕ ಕರ್ತವ್ಯವನ್ನು ಮಾತ್ರ ನಿರ್ವಹಿಸಿರುವ ರೀತಿಯ ಆಡಳಿತ. ಯಾವುದೇ ಹೆಚ್ಚಿನ ಸಾಧನೆ ಇಲ್ಲ.

10) ಕೆ ಆರ್ ನಾರಾಯಣನ್: ಉತ್ತಮ. ಪ್ರತಿಭಾವಂತ ಮತ್ತು ದಕ್ಷ ಆಡಳಿತಗಾರ. ‌ಅಧ್ಯಕ್ಷ ಸ್ಥಾನದಲ್ಲಿದ್ದಾಗ ಒಂದಷ್ಟು ‌ಸಾರ್ವಜನಿಕ‌ ಸಮಸ್ಯೆಗಳ ಸ್ಪಂದನೆ ಇರುವುದು ಕಂಡುಬರುತ್ತದೆ. ಸ್ಥಾನದ ಘನತೆಯನ್ನು ಕಾಪಾಡಿದವರು.

11) ಡಾಕ್ಟರ್ ಎ ಪಿ ಜೆ ಅಬ್ದುಲ್ ಕಲಾಂ:  ಅತ್ಯುತ್ತಮ. ರಾಷ್ಟ್ರಪತಿಗಳಾಗಿ ಒಂದು ಮಾದರಿಯನ್ನು, ಸ್ಪೂರ್ತಿಯನ್ನು ಜನರಲ್ಲಿ ಉಂಟುಮಾಡಿದರು. ಸದಾ ಚಟುವಟಿಕೆಯಿಂದ ಇದ್ದು ರಾಷ್ಟ್ರಪತಿ ಹುದ್ದೆಯನ್ನು ಸಾರ್ವಜನಿಕರಿಗೆ ಪರಿಚಯಿಸಿದರು. ಬಹುಶಃ ಹುದ್ದೆಯ ಜನಪ್ರಿಯತೆಯ ದೃಷ್ಟಿಯಿಂದ  ರಾಷ್ಟ್ರಪತಿಗಳಲ್ಲಿ ಅತ್ಯುತ್ತಮ ‌ಕಲಾಂ ಅವರಿಗೆ ಸಲ್ಲಬೇಕು.

12)  ಶ್ರೀಮತಿ ಪ್ರತಿಭಾ ಪಾಟೀಲ್: ಸಾಧಾರಣ. ಮೊದಲ ಮಹಿಳಾ ರಾಷ್ಟ್ರಪತಿ ಎಂಬ ಹೆಗ್ಗಳಿಕೆ ಹೊರತುಪಡಿಸಿ ಹೆಚ್ಚಿನ ಸಾಧನೆ ಏನು ಇಲ್ಲ. ಕೇವಲ ಶಿಷ್ಟಾಚಾರದ ಅಧ್ಯಕ್ಷೆ ಮಾತ್ರ. ‌ಬಹುತೇಕ ವಿಶ್ರಾಂತ ಜೀವನ....

13) ಪ್ರಣವ್ ಮುಖರ್ಜಿ: ಉತ್ತಮ. ಸಂಪೂರ್ಣ ರಾಜಕೀಯ ಹಿನ್ನೆಲೆಯ ವ್ಯಕ್ತಿಯಾದರು  ಪ್ರತಿಭಾವಂತ ಮತ್ತು ದಕ್ಷ ಆಡಳಿತಗಾರ. ‌ಹುದ್ದೆಯ ಘನತೆಯನ್ನು ಎತ್ತಿ ಹಿಡಿದರು. ಶಿಷ್ಟಾಚಾರ ಪಾಲನೆ ಮಾಡಿದರು. ಇತರರಿಗೆ ಹೋಲಿಸಿದರೆ ಉತ್ತಮ.

14) ಶ್ರೀ ರಾಮನಾಥ್ ಕೋವಿಂದ್: ಕಳಪೆ.‌ ಬಹುಶಃ ಭಾರತದ ರಾಷ್ಟ್ರಪತಿಗಳಲ್ಲಿ ಅತ್ಯಂತ ಮೌನ ಮತ್ತು ರಬ್ಬರ್ ಸ್ಟಾಂಪ್ ರಾಷ್ಟ್ರಪತಿ ಇವರೇ ಇರಬೇಕು. ಯಾವುದೇ ಹೇಳಿಕೊಳ್ಳುವ ಚಟುವಟಿಕೆಗಳನ್ನು ನಿರ್ವಹಿಸಲಿಲ್ಲ. ಕೇವಲ ‌ಒಂದು ಗೌರವಯುತ ಸ್ಥಾನ‌ ಎಂದೇ ಪರಿಗಣಿಸಿದರು. ಸ್ಥಾನದ ಘನತೆಯನ್ನು ಕುಗ್ಗಿಸಿದರು.‌ ಯಾರ ನೆನಪಿನಲ್ಲಿ ಸಹ ಉಳಿಯಲಿಲ್ಲ.

15) ಶ್ರೀಮತಿ ದ್ರೌಪದಿ ಮುರ್ಮು: ಇಲ್ಲಿಯವರೆಗೆ ಕಳಪೆ… ಬುಡಕಟ್ಟು ಜನಾಂಗದ ಶ್ರಮಜೀವಿ ಹೆಣ್ಣು ಮಗಳು. ಇನ್ನೂ ಸಾಕಷ್ಟು ಸಮಯವಿದೆ. ಆದರೆ ‌ಸಿಕ್ಕ‌ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಳ್ಳುತ್ತಿಲ್ಲ. ಸ್ವಾಭಿಮಾನ ಮೆರೆಯಬೇಕು. ವಿಶ್ರಾಂತ ಜೀವನ ನಡೆಸುತ್ತಿರುವಂತಿದೆ.

ಇದು ಆಳ ಅಧ್ಯಯನದಿಂದ ಮೂಡಿದ ಅಭಿಪ್ರಾಯವಲ್ಲ. ರಾಷ್ಟ್ರಪತಿಗಳ ಬಗ್ಗೆ ಸಾಮಾನ್ಯ ಜನರ ಸಾಮಾನ್ಯ ತಿಳಿವಳಿಕೆಗಾಗಿ ಮಾತ್ರ. ಕೆಲವು ಅಭಿಪ್ರಾಯ ತಪ್ಪೂ ಆಗಿರಬಹುದು. ಸಂವಿಧಾನದ ನಿಜವಾದ Custodian ರಾಷ್ಟ್ರಪತಿಗಳು. ಅವರು ಸಂವಿಧಾನದ ಆಶಯಗಳನ್ನು, ಮೂಲಭೂತ ಹಕ್ಕು ಮತ್ತು ಕರ್ತವ್ಯಗಳನ್ನು, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಸರಿಯಾಗಿ ಮೇಲ್ವಿಚಾರಣೆ ಮಾಡಬೇಕು. ಆ ನಿಟ್ಟಿನಲ್ಲಿ ಸರ್ಕಾರಗಳು ನಿರ್ಲಕ್ಷ್ಯ ತೋರಿದಾಗ ಎಚ್ಚರಿಕೆ ನೀಡಬೇಕು. ಉಳಿದ ಸಮಯದಲ್ಲಿ ಅವಕಾಶ ಉಪಯೋಗಿಸಿಕೊಂಡು ಅಬ್ದುಲ್ ಕಲಾಂ ರೀತಿ ಸಾರ್ವಜನಿಕರೊಂದಿಗೆ ಸಂವಾದ ನಡೆಸಬೇಕು. ಆದರೂ ಭಾರತದ ಪ್ರಜಾಪ್ರಭುತ್ವದ ಬೇರುಗಳು ಗಟ್ಟಿಯಾಗಿ ಉಳಿಯಲು ಈ ಎಲ್ಲಾ ರಾಷ್ಟ್ರಪತಿಗಳ ಕೊಡುಗೆ ಇದೆ. ಅದಕ್ಕಾಗಿ ಅವರುಗಳನ್ನು ಅಭಿನಂದಿಸುತ್ತಾ… ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳು.

-ವಿವೇಕಾನಂದ ಎಚ್ ಕೆ, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ