ಸಂವಿಧಾನವೇ ನಿಜವಾದ ಮಾನವೀಯ ಮೌಲ್ಯಗಳ ಮಾರ್ಗದರ್ಶಕ...!
ಮದರಸಾಗಳಲ್ಲಿ ಖುರಾನ್, ಶಾಲೆಗಳಲ್ಲಿ ಭಗವದ್ಗೀತೆ, ಮಿಷನರಿಗಳಲ್ಲಿ ಬೈಬಲ್, ಹಾಗಾದರೆ ಸಂವಿಧಾನ? ಮತ್ತೆ ಮಧ್ಯಕಾಲೀನ ರಕ್ತಸಿಕ್ತ ದಿನಗಳತ್ತ ನಾವುಗಳು… ಕೆಟ್ಟದ್ದನ್ನು ನಿಲ್ಲಿಸಬೇಕಾದ ಕಾಲದಲ್ಲಿ ಅದರ ಆಕರ್ಷಣೆಗೆ ಒಳಗಾಗುತ್ತಿರುವ ದುರಂತ ಸನ್ನಿವೇಶದಲ್ಲಿ… ಶಾಲೆಗಳಲ್ಲಿ ಹೊಸ ಶಿಕ್ಷಣ ನೀತಿಯ ಪದ್ದತಿಯ ಒಳಗೆ ಭಗವದ್ಗೀತೆಯನ್ನು ಪಠ್ಯದಲ್ಲಿ ಸೇರಿಸಿದರೆ ಹೇಗಿರುತ್ತದೆ ? ಈಗಾಗಲೇ ಮದರಸಾಗಳಲ್ಲಿ ಖುರಾನ್ ಭೋದಿಸಲಾಗುತ್ತಿದೆ. ಅದರಿಂದ ಸ್ಪೂರ್ತಿಯೇ ?
ಏನಿದು ಭಗವದ್ಗೀತೆ ? ಇದನ್ನು ಬರೆದಿದ್ದು ಮತ್ತು ಭೋದಿಸಿದ್ದು ಯಾರು ? ಅದರಲ್ಲಿ ಏನಿದೆ ? ಭಗವದ್ಗೀತೆ ಓದಿ ಅರ್ಥಮಾಡಿಕೊಂಡರೆ ಬದುಕು ಸಾರ್ಥಕವಾಗುತ್ತದೆಯೇ ? ಸಂಸ್ಕಾರ ಸಿಗುತ್ತದೆಯೇ ? ಮೋಕ್ಷ ದೊರೆಯುತ್ತದೆಯೇ ? ಜೀವನದ ನೆಮ್ಮದಿಯ ಮಟ್ಟ ಹೆಚ್ಚುತ್ತದೆಯೇ ? ಸಮಾಜ ಶಾಂತಿಯಿಂದ ನೆಲೆಸುತ್ತದೆಯೇ ? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಾಗಿದೆ.
ಜಾಗತಿಕವಾಗಿ ಬಹಳಷ್ಟು ದೇಶಗಳಲ್ಲಿ ಖುರಾನ್ ಭೋದಿಸಲಾಗುತ್ತದೆ. ಮತ್ತಷ್ಟು ದೇಶಗಳಲ್ಲಿ ಬಹುಶಃ ಬೈಬಲ್ ಸಹ ಭೋದಿಸಬಹುದು. ಆಧುನಿಕ ಸಮಾಜ ನಿರ್ಮಾಣವಾಗುವ ಮೊದಲು ವಿಶ್ವದಲ್ಲಿ ಎಲ್ಲಾ ದೇಶಗಳು ಧರ್ಮದ ಆಧಾರದಲ್ಲಿಯೇ ಆಡಳಿತ ವ್ಯವಸ್ಥೆ ನಡೆಸುತ್ತಿದ್ದವು. ನಂತರ ಬಹಳಷ್ಟು ದೇಶಗಳು ಸಂವಿಧಾನ ರಚಿಸಿಕೊಂಡವು. ಕೆಲವೇ ಕೆಲವು ದೇಶಗಳು ಧರ್ಮವನ್ನೇ ಸಂವಿಧಾನ ಮಾಡಿದವು. ವಿಶ್ವ ಇತಿಹಾಸದ ಅನೇಕ ರಕ್ತಸಿಕ್ತ ಪುಟಗಳು ಧರ್ಮದ ನೆರಳಿನಲ್ಲಿಯೇ ನಡೆದಿದೆ ಎಂಬುದು ನೆನಪಿರಲಿ.
ಈಗ ಭಗವದ್ಗೀತೆ ಬಗ್ಗೆ ಗಮನಿಸೋಣ. ಅಧೀಕೃತ ಇತಿಹಾಸದ ಪ್ರಕಾರ ವ್ಯಾಸ ಎಂಬ ವ್ಯಕ್ತಿಯೊಬ್ಬ ಬರೆದ ಮಹಾಭಾರತ ಎಂಬ ಬೃಹತ್ ಗ್ರಂಥದಲ್ಲಿ, ಕುರುಕ್ಷೇತ್ರದ ಯುದ್ದದ ಪ್ರಾರಂಭದಲ್ಲಿ ಶ್ರೀಕೃಷ್ಣ ಎಂಬ ಪಾತ್ರ ಅರ್ಜನ ಎಂಬ ವ್ಯಕ್ತಿಯ ಸಾರಥಿಯಾಗಿ ಯುದ್ದ ಭೂಮಿಯಲ್ಲಿ ಆತನಿಗೆ ಮಾಡುವ ಭೋದನೆಯೇ ಭಗವದ್ಗೀತೆ ಮತ್ತು ಆತನ ವಿಶ್ವರೂಪ ದರ್ಶನ. ಬದುಕಿನ - ಸಮಾಜದ - ವ್ಯವಸ್ಥೆಯ - ಆಡಳಿತದ ಬಹುತೇಕ ವಿಷಯಗಳಲ್ಲಿ ಇಲ್ಲಿ ಒಂದು ಸ್ಪಷ್ಟ ಚಿಂತನೆ ಮಾರ್ಗ ಗುರಿ ಹೊಂದಲಾಗಿದೆ ಎಂದು ಭಾವಿಸಲಾಗುತ್ತದೆ.
ಬಹಳಷ್ಟು ಆಕ್ರಮಣಗಳು, ದಾಳಿಗಳು, ಇತರ ಧರ್ಮಗಳ ಪ್ರವೇಶ ಮತ್ತು ಮತಾಂತರ ನಮ್ಮದೇ ನೆಲದಲ್ಲಿ ಸೃಷ್ಟಿಯಾದ ಬಂಡಾಯ ಧರ್ಮಗಳು, ವರ್ಣಾಶ್ರಮ ಪದ್ಧತಿಯ ಬಗೆಗಿನ ವಿರೋಧ ಎಲ್ಲದರ ನಡೆವೆಯೂ ಬಹುಸಂಖ್ಯಾತ ಭಾರತದ ಜನಜೀವನ ಅನುಸರಿಸುತ್ತಾ ಬಂದಿದ್ದು ಮನುಸ್ಮೃತಿ ಮತ್ತು ಭಗವದ್ಗೀತೆಯ ಸಂದೇಶಗಳ ಅನುಸಾರ. ವೇದ ಉಪನಿಷತ್ತುಗಳ ಪ್ರಭಾವವೂ ಇದರಲ್ಲಿ ಸೇರಿದೆ. 1950 ರ ನಂತರ ಈ ದೇಶದಲ್ಲಿ ಸಂವಿಧಾನ ರಚನೆಯಾಯಿತು ಮತ್ತು ಅದರ ಪ್ರಕಾರ ಆಡಳಿತ ನಡೆಯತ್ತಿದೆ. ಹಾಗಾದರೆ ಭಗವದ್ಗೀತೆ ಬೇರೆಯೇ ? ಸಂವಿಧಾನ ಬೇರೆಯೇ ? ಸಂವಿಧಾನದಲ್ಲಿ ಇಲ್ಲದ ಮಾನವೀಯ ಮೌಲ್ಯಗಳು ಭಗವದ್ಗೀತೆಯಲ್ಲಿ ಇದೆಯೇ ? ಮತ್ತೆ ಭಗವದ್ಗೀತೆ ಕಲಿಸುವುದರಿಂದ ಸಮಾಜ ಸುಧಾರಿಸುತ್ತದೆಯೇ ?
( ಇದು ಖುರಾನ್ ಮತ್ತು ಬೈಬಲ್ ಗೂ ಅನ್ವಯ ) ಇದು ಚರ್ಚಿಸಬೇಕಾದ ಮುಖ್ಯ ವಿಷಯ.
ಭಾರತದ ಸಂವಿಧಾನ ಧರ್ಮ ವಿರೋಧಿಯಲ್ಲ. ವೇದ, ಉಪನಿಷತ್ತುಗಳು, ಮನುಸ್ಮೃತಿ, ಭಗವದ್ಗೀತೆ, ಬೈಬಲ್, ಖುರಾನ್, ಬುದ್ದ, ಮಹಾವೀರ, ಬಸವ, ಗಾಂಧಿ ಮುಂತಾದ ಯಾವುದೇ ವ್ಯಕ್ತಿ ಅಥವಾ ಗ್ರಂಥಗಳ ವಿರೋಧಿಯಲ್ಲ. ಭಾರತದ ಸಂವಿಧಾನ ಈ ಎಲ್ಲದರ ಮುಂದುವರೆದ, ಬದಲಾವಣೆಯಾದ, ಸುಧಾರಣೆಯಾದ, ನಾಗರಿಕ ಲಕ್ಷಣಗಳನ್ನು ಹೊಂದಿದ, ಈ ನೆಲದ ಸಂಸ್ಕೃತಿ ಮತ್ತು ಮಾನವೀಯ ಮೌಲ್ಯಗಳನ್ನು ಹೊಂದಿದ ಒಂದು ನೀತಿ ನಿಯಮಗಳ ಪುಸ್ತಕ. ಮೇಲೆ ಹೇಳಿದ ವ್ಯಕ್ತಿ ಅಥವಾ ಸಂಸ್ಥೆಗಳಲ್ಲಿ ಇದ್ದ ತಾರತಮ್ಯ, ಅಸಮಾನತೆ, ಅಮಾನವೀಯತೆ ಮುಂತಾದ ಹುಳುಕುಗಳನ್ನು ಸರಿಪಡಿಸಿ ಆಧುನಿಕ ಸಮಾಜದ ಅತ್ಯುತ್ತಮ ಗುಣಲಕ್ಷಣಗಳನ್ನಾಗಿ ರೂಪಾಂತರ ಮಾಡಿದ ಒಂದು ಜೀವನ ವಿಧಾನಗಳ ಸಂಗ್ರಹ.
ಈಗ ಭಗವದ್ಗೀತೆ ಭೋದಿಸಿದರೆ ಅದು ಹಿನ್ನಡೆಯೋ ಮುನ್ನಡೆಯೋ ನಿಮ್ಮ ವಿವೇಚನೆಗೆ ಬಿಡುತ್ತೇನೆ. ಇದಿ ಅಮಿನ್ ಎಂಬ ಸರ್ವಾಧಿಕಾರಿ ಖುರಾನ್ ಓದಿದ್ದ, ಹಿಟ್ಲರ್ ಬೈಬಲ್ ಓದಿದ್ದ, ಸದ್ದಾಂ ಹುಸೇನ್, ಮಹಮ್ಮದ್ ಗಢಾಫಿ, ಬಿನ್ ಲಾಡೆನ್ ಖುರಾನ್ ಓದಿದ್ದರು, ಕಾಶ್ಮೀರ ಪಂಡಿತರ ಹತ್ಯೆ ಮಾಡಿದವರು ಖುರಾನ್ ಓದಿದ್ದರು, ಒಂದು ಇಡೀ ಜನಾಂಗವನ್ನು ಊರ ಹೊರಗಿಟ್ಟು ಪ್ರಾಣಿಗಳಂತೆ ಮನುಷ್ಯರಲ್ಲಿ ಅಸ್ಪೃಶ್ಯತೆ ಆಚರಣೆ ಮಾಡಿದ ಅನೇಕರು ಭಗವದ್ಗೀತೆ ಓದಿದ್ದರು, ಗುಜರಾತಿನಲ್ಲಿ ಮುಸ್ಲಿಮರನ್ನು ಕೊಂದವರು ಭಗವದ್ಗೀತೆ ಓದಿದ್ದರು, ಗಾಂಧಿಯನ್ನು ಕೊಂದವರು ಭಗವದ್ಗೀತೆ ಓದಿದ್ದರು, ಸಿಖ್ ರನ್ನು ಹತ್ಯೆ ಮಾಡಿದವರು ಭಗವದ್ಗೀತೆ ಓದಿದ್ದರು, ದೇಶದ ವಿಭಜನೆಯ ಸಮಯದಲ್ಲಿ ಅಸಂಖ್ಯಾತ ಹಿಂದುಗಳನ್ನು ಚಿತ್ರ ಹಿಂಸೆ ಕೊಟ್ಟು ಸಾಯಿಸಿದ ಜನರು ಖುರಾನ್ ಓದಿದ್ದರು. ಹಿರೋಷಿಮಾ ನಾಗಸಾಕಿಯ ಮೇಲೆ ಬಾಂಬ್ ಸ್ಫೋಟಿಸಿದವರು ಬೈಬಲ್ ಓದಿದ್ದರು, ರಷ್ಯಾದ ವ್ಲಾಡಿಮಿರ್ ಪುಟಿನ್ ಬೈಬಲ್ ಓದಿದ್ದಾನೆ. ವಚನಕಾರರ ಹತ್ಯೆ ಮಾಡಿದವರು ಭಗವದ್ಗೀತೆ ಓದಿದ್ದರು. ಪಾಕಿಸ್ತಾನ ಆಫ್ಘನಿಸ್ತಾನ ಸಿರಿಯಾ ಇರಾಕ್ ಇರಾನಿನಲ್ಲಿ ಆಡಳಿತ ನಡೆಸುತ್ತಿರುವವರು ಖುರಾನ್ ಓದಿದ್ದಾರೆ. ಬರ್ಮಾದಲ್ಲಿ ರೋಹಿಂಗ್ಯಾಗಳನ್ನು ಕಾಡುತ್ತಿರುವವರು ಬುದ್ದನನ್ನು ಓದಿದ್ದಾರೆ. ಟಿಬೆಟ್ ಜನರನ್ನು ಹತ್ಯೆ ಮಾಡುತ್ತಿರುವವರು, ತೈವಾನನ್ನು ಕಾಡುತ್ತಿರುವ ಚೀನಾದ ಮುಖ್ಯಸ್ಥರು ಬುದ್ದನನ್ನು ಓದಿದ್ದಾರೆ. ಸಾಕೇ ಇನ್ನೂ ಬೇಕೆ. ಈ ಧರ್ಮ ಗ್ರಂಥಗಳು ಮಾಡಿರುವ ಅನ್ಯಾಯ ಅತ್ಯಾಚಾರ ದೌರ್ಜನ್ಯ...
ಈ ಎಲ್ಲದರ ಅನುಭವ ಮತ್ತು ಪರಿಣಾಮವೇ ಭಾರತದ ಸಂವಿಧಾನ. ಅದರಿಂದ ಇಡೀ ವ್ಯವಸ್ಥೆ ಸಂಪೂರ್ಣ ಸುಧಾರಣೆಯಾಗಿ ಅತ್ಯುತ್ತಮವಾಗಿದೆ ಎಂದು ಹೇಳಲಾರೆ. ಆದರೆ ಧರ್ಮದ ಆಡಳಿತ ಕಾಲಕ್ಕಿಂತ ಸ್ವಲ್ಪ ಮಟ್ಟಿಗೆ ಅನುಕೂಲಕರವಾಗಿದೆ ಎಂದು ಧೈರ್ಯವಾಗಿ ಹೇಳಬಹುದು. ಆದ್ದರಿಂದ ಮತ್ತೆ ಹಿಂದಕ್ಕೆ ಹೋಗುವುದು ಬೇಡ. ಇದು ಕೇವಲ ಭಗವದ್ಗೀತೆ ವಿಷಯಕ್ಕೆ ಮಾತ್ರವಲ್ಲ. ಮದರಸಾ ಅಥವಾ ಆ ರೀತಿಯ ಕಲಿಕಾ ಕೇಂದ್ರಗಳಲ್ಲಿ ಖುರಾನ್ ಭೋದನೆ, ಕ್ರಿಶ್ಚಿಯನ್ ಮಿಷನರಿ ಅಥವಾ ಶಾಲೆಗಳಲ್ಲಿ ಬೈಬಲ್ ಭೋದನೆ ಖಂಡಿತ ಬೇಡ.
ಸಂವಿಧಾನ ನಿಮ್ಮ ಧರ್ಮಗಳ ವಿರೋಧಿಯಲ್ಲ. ಸಂವಿಧಾನವೇ ನಿಜವಾದ ಮಾನವೀಯ ಮೌಲ್ಯಗಳ ಮಾರ್ಗದರ್ಶಕ. ಅದು ಮಾನವ ಧರ್ಮದ ಪ್ರಚಾರಕ. ಆದರೆ ಸಂವಿಧಾನದ ಅನುಷ್ಠಾನ ಸರಿಯಾಗಿ ಆಗುತ್ತಿಲ್ಲ. ಅದು ಎಲ್ಲಾ ಉಳ್ಳವರ ಪಾಲಾಗುತ್ತಿದೆ. ಆ ನಿಟ್ಟಿನಲ್ಲಿ ನಾವೆಲ್ಲರೂ ಕೆಲಸ ಮಾಡೋಣ. ಸಂವಿಧಾನ ಅಂಬೇಡ್ಕರ್ ಅವರ ಚಿಂತನೆಯಲ್ಲ. ಸಂವಿಧಾನ ಅಂಬೇಡ್ಕರ್ ಅವರಿಗೆ ಮಾತ್ರ ಸೇರಿದ್ದಲ್ಲ. ಒಬ್ಬ ಭಾರತೀಯ ವ್ಯಕ್ತಿ ಅತ್ಯುತ್ತಮ ಕಾನೂನಿನ ವಿಧ್ಯಾರ್ಥಿಯಾಗಿ ಅಪಾರ ಅನುಭವ ಹೊಂದಿದ ಕಾರಣಕ್ಕಾಗಿ ಅವರ ವಿದ್ವತ್ತಿಗೆ ಅರ್ಹತೆಗೆ ಸಿಕ್ಕಿದ ಕರಡು ರಚನಾ ಸಂಸ್ಥೆಯ ಮುಖ್ಯಸ್ಥರು. ಅವರು ಅವರ ಸ್ವಂತ ಹಿತಾಸಕ್ತಿಗಾಗಿ ಅದನ್ನು ಬರೆದದ್ದಲ್ಲ. ಭಾರತದ ಸಂಪೂರ್ಣ ನೆಲ ಜಲ ಜನರ ರಕ್ಷಣೆಗಾಗಿ ಸರ್ಕಾರದ ಜನರ ಪ್ರತಿನಿಧಿಯಾಗಿ ಕೆಲವು ಸದಸ್ಯರ ಸಹಕಾರದೊಂದಿಗೆ ರಚಿಸಿದ್ದು. ಅಂಬೇಡ್ಕರ್ ಇದನ್ನು ರಚಿಸುವಾಗ ಇಡೀ ವಿಶ್ವದ ಇತಿಹಾಸವನ್ನು ನಿರಂತರ ಅಧ್ಯಯನ ಮಾಡಿದ್ದಲ್ಲದೆ, ಖುರಾನ್ ಬೈಬಲ್ ಭಗವದ್ಗೀತೆ ಮನುಸ್ಮೃತಿ ವೇದ ಉಪನಿಷತ್ತು ಎಲ್ಲವನ್ನೂ ಅರಿತೇ ಸಂವಿಧಾನದ ಕರಡು ರಚಿಸಿದ್ದು.
ಭ್ರಷ್ಟಾಚಾರದಲ್ಲಿ ಅತ್ಯಂತ ಹೆಚ್ಚು ವಂಚನೆ ಮಾಡುತ್ತಿರುವವರು ಪಾಕಿಸ್ತಾನ ಭಾರತ ಬಾಂಗ್ಲಾದೇಶ ಶ್ರೀಲಂಕಾ ನೇಪಾಳದ ಜನರು ಖುರಾನ್ ಬೈಬಲ್ ಭಗವದ್ಗೀತೆ ಓದಿದವರೇ ಆಗಿದ್ದಾರೆ. ಬಸವಣ್ಣನವರ ವಚನಗಳನ್ನು ಅರೆದು ಕುಡಿದ ಎಷ್ಟೋ ಸ್ವಾಮೀಜಿಗಳು ಜಾತಿವಾದಿಗಳು ಮೌಡ್ಯಗಳ ದಾಸರು, ಒಂದು ಪಕ್ಷದ ಬೆಂಬಲಿಗರು ಆಗಿದ್ದಾರೆ.
ವಸು ದೈವ ಕುಟುಂಬ ಎಂದು ಭಗವದ್ಗೀತೆ ಓದಿದವರು ಪಂಕ್ತಿ ಭೇದ ಮಾಡುತ್ತಾರೆ. ವಿಶ್ವ ಶಾಂತಿಯ ಧರ್ಮ ಎಂದು ಖುರಾನ್ ಓದಿದದವರು ಭಯೋತ್ಪಾದಕರು ಆಗುತ್ತಾರೆ. ಶತ್ರುಗಳನ್ನು ಪ್ರೀತಿಸಿ ಎಂದು ಬೈಬಲ್ ಓದಿದವರು ಒಬ್ಬರಿಗೊಬ್ಬರು ಬಾಂಬ್ ಹಾಕಿಕೊಳ್ಳುತ್ತಾರೆ. ಧರ್ಮಗಳು ಮನುಷ್ಯರನ್ನು ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಂದು ವಿಂಗಡಿಸುತ್ತವೆ. ಮೇಲು ಕೀಳು ಎಂದು ವಿಭಜಿಸುತ್ತದೆ. ಸಂವಿಧಾನ ಇಡೀ ಭಾರತೀಯರು ಒಂದು ಎಂದು ಹೇಳುತ್ತದೆ. ಈಗ ಸಂವಿಧಾನ ಬೇಕೆ ಅಥವಾ ಧರ್ಮಗಳು ಬೇಕೆ ನಿರ್ಧಾರ ನಿಮ್ಮದು.
ದಯವಿಟ್ಟು ಅರ್ಥಮಾಡಿಕೊಳ್ಳಿ. ನಾನು ಭಗವದ್ಗೀತೆ ಅಥವಾ ಖುರಾನ್ ಅಥವಾ ಬೈಬಲ್ ವಿರೋಧಿಯಲ್ಲ. ಅದರ ಸುಧಾರಿತ ಭಾಗವಾಗಿ ಸಂವಿಧಾನ ಇರುವಾಗ ಮತ್ತೆ ಹಿಂದಕ್ಕೆ ಹೋಗುವುದು ಏಕೆ ? ಸಂವಿಧಾನದಲ್ಲಿ ಧರ್ಮ ವಿರೋಧದ ಯಾವುದೇ ಅಂಶಗಳು ಇಲ್ಲ. ಅದರಷ್ಟು ಮಾನವೀಯ ಮೌಲ್ಯಗಳ ಸಮಾನ ಚಿಂತನೆ ಎಲ್ಲಿಯೂ ಇಲ್ಲ. ಹಾಗಿದ್ದರೂ ಈ ಬದಲಾವಣೆಗೆ ಚಿಂತನೆ ನಮ್ಮನ್ನು ಮತ್ತೆ ಶೋಷಿಸುವ ಹುನ್ನಾರವೇ…
ಏನೂ ಅರಿಯದ ಮೊಬೈಲ್ ಗ್ಯಾಜೆಟ್ಟುಗಳಲ್ಲಿ ಮುಳುಗಿ ಹೋಗಿರುವ ನಮ್ಮ ಮಕ್ಕಳ ಮುಂದಿನ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ನಿಮ್ಮ ಅಭಿಪ್ರಾಯ ರೂಪಿಸಿಕೊಳ್ಳಿ. ಇಲ್ಲದಿದ್ದರೆ ಖುರಾನ್, ಭಗವದ್ಗೀತೆ, ಬೈಬಲ್ ಗಳು ನಮ್ಮ ಮಕ್ಕಳನ್ನು ನಿಯಂತ್ರಿಸಿ ಮಧ್ಯಕಾಲೀನ ರಕ್ತಸಿಕ್ತ ಯುಗಕ್ಕೆ ಅವರನ್ನು ಕೊಂಡೊಯ್ಯಬಹುದು. ಎಚ್ವರ....
-ವಿವೇಕಾನಂದ ಹೆಚ್.ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ