ಸಂವಿಧಾನ ಸೃಷ್ಟಿಯ ಕತೆ (ಭಾಗ 1)
Constituent Assembly ಅಥವಾ ಸಂವಿಧಾನ ಸಭೆಯ ಉಗಮದ ಇತಿಹಾಸವನ್ನು ಸಂಕ್ಷಿಪ್ತವಾಗಿ ದಾಖಲಿಸುವುದಾದರೆ 1945 ರಲ್ಲಿ ಎರಡನೇ ಮಹಾಯುದ್ಧ ಮುಗಿದ ನಂತರ ಭಾರತದ ಸ್ವಾತಂತ್ರ್ಯದ ಪ್ರಶ್ನೆ ಉದ್ಭವಿಸಿತು. ಹಾಗೆ ಇದಕ್ಕೆ ಪರಿಹಾರ ಸೂಚಿಸಲು ಬ್ರಿಟಿಷರು ಮೂವರು ಸದಸ್ಯರನ್ನೊಳಗೊಂಡ ಒಂದು ಸಮಿತಿಯನ್ನು ಭಾರತಕ್ಕೆ ಕಳುಹಿಸಿದರು. ಆ ಸಮಿತಿಯ ಹೆಸರು ‘ಕ್ಯಾಬಿನೆಟ್ ಮಿಷನ್ ಆಯೋಗ’. ಸದರಿ ಆಯೋಗವು 1946 ಮಾರ್ಚ್ 16 ರಂದು ‘ಭವಿಷ್ಯದ ಭಾರತದ ಸರ್ಕಾರಕ್ಕಾಗಿ ಒಂದು ಸಂವಿಧಾನ ರಚಿಸಲು ಸಂವಿಧಾನ ಸಭೆಯೊಂದನ್ನು ರಚಿಸುವ ಅಗತ್ಯವಿದೆ’ ಎಂದು ಘೋಷಿಸಿತು. ಅಂತೆಯೇ ಆ ಸಭೆ ಪ್ರಜಾಸತ್ತಾತ್ಮಕವಾಗಿರಬೇಕೆಂಬ ನಿಟ್ಟಿನಲ್ಲಿ ವಿವಿಧ ಪ್ರಾಂತ್ಯಗಳ ಅಸೆಂಬ್ಲಿಗಳ ಮೂಲಕ ಸದಸ್ಯರನ್ನು ಆರಿಸಲಾಯಿತು. ಆ ಸಭೆಗೆ ಭಾರತದ ಪಶ್ಚಿಮದ ತುದಿ ಬಾಂಬೆ ಪ್ರಾಂತ್ಯದಿಂದ ಸ್ಪರ್ಧಿಸಿದ್ದ ಅಂಬೇಡ್ಕರರು ಅಂದಿನ ರಾಜಕೀಯ ಪಕ್ಷಗಳ ಅವಿಚ್ಛಿನ್ನ ವಿರೋಧದಿಂದ ಸೋಲಬೇಕಾಯಿತು. ಆದರೂ, ಎದೆಗುಂದದೆ ಪೂರ್ವದ ದೂರದ ಬಂಗಾಳದಿಂದ ಅಲ್ಲಿಯ ಪರಿಶಿಷ್ಟ ಜಾತಿಯ ನಾಯಕ ಜೋಗೇಂದ್ರನಾಥ ಮಂಡಲ್ರ ಬೆಂಬಲದ ಮೂಲಕ ಅವರು ಸಂವಿಧಾನ ಸಭೆಗೆ ಆರಿಸಿ ಬರುವಲ್ಲಿ ಸಫಲರಾರದು. ಒಟ್ಟಾರೆ 296 ಸದಸ್ಯ ಬಲದ ಮೂಲಕ ಸಂವಿಧಾನ ಸಭೆ ತನ್ನ ಪ್ರಥಮ ಸಭೆಯನ್ನು 1946 ಡಿಸೆಂಬರ್ 6ರ ಬೆಳಿಗ್ಗೆ 11ಗಂಟೆಗೆ ನವದೆಹಲಿಯ ಕಾನ್ಸ್ಟಿಟ್ಯೂಶನ್ ಹಾಲ್ನಲ್ಲಿ ಆರಂಭಿಸಿತು.
ಸಭೆ ಆರಂಭವಾದಾಗ ಒಟ್ಟು 296 ಸದಸ್ಯರಲ್ಲಿ ಭಾಗವಹಿಸಿದ್ದು 207 ಮಂದಿಯಷ್ಟೆ. ಇನ್ನುಳಿದ ಮಂದಿ ಅಂದಿನ ಮುಸ್ಲಿಂಲೀಗ್ಗೆ ಸೇರಿದವರಾಗಿದ್ದು ಪ್ರತ್ಯೇಕ ರಾಷ್ಟ್ರಕ್ಕಾಗಿ ಒತ್ತಾಯಿಸಿ ಅವರೆಲ್ಲ ಗೈರುಹಾಜರಾಗಿದ್ದರು. ಹೀಗಿದ್ದರೂ ಪಂಡಿತ್ ಜವಹರಲಾಲ್ ನೆಹರೂ “ಭಾರತ ಸಾರ್ವಭೌಮ ಸ್ವತಂತ್ರ ಗಣರಾಜ್ಯವಾಗಲು ತನ್ನ ಭವಿಷ್ಯದ ಸರ್ಕಾರಕ್ಕಾಗಿ ಅದು ತನ್ನದೇ ಆದಂತಹ ಸಂವಿಧಾನವೊಂದನ್ನು ಹೊಂದುವುದನ್ನು ಬಯಸುತ್ತದೆ” ಎಂದು ಗೊತ್ತುವಳಿಯೊಂದನ್ನು ಮಂಡಿಸಿದರು. ಆದರೆ ಸದಸ್ಯರಾದ ಎಂ.ಆರ್.ಜಯಕರ್ “ಸಭೆಗೆ ಮುಸ್ಲಿಂ ಲೀಗ್ ಮತ್ತು ಇತರೆ ರಾಜ ಸಂಸ್ಥಾನಗಳ ಸದಸ್ಯರು ಗೈರುಹಾಜರಾಗಿರುವುದರಿಂದ ಅವರೆಲ್ಲ ಭಾಗವಹಿಸುವಂತಾಗಲು ಈ ಸಭೆಯನ್ನು ಮುಂದೂಡಬೇಕು” ಎಂದು ತಮ್ಮ ಆಕ್ಷೇಪ ವ್ಯಕ್ತಪಡಿಸಿದರು ಮತ್ತು ನೆಹರೂರವರು ಮಂಡಿಸಿದ್ದ ಆ ಗೊತ್ತುವಳಿಯ ಚರ್ಚೆಯನ್ನು ಮುಂದೂಡಲು ಸಭೆಯ ಕಲಾಪಕ್ಕೆ ತಿದ್ದುಪಡಿಯೊಂದನ್ನು ಮಂಡಿಸಿದರು. ಗೌರವಾನ್ವಿತ ಸದಸ್ಯರ ಇಂತಹ ಆಕ್ಷೇಪ ಸಭೆಯಲ್ಲಿ ಅಲ್ಲೋಲ ಕಲ್ಲೋಲ ಉಂಟುಮಾಡಿತು. ಆಶ್ಚರ್ಯವೆಂದರೆ ಈ ಸಮಯದಲ್ಲಿ ಇಂತಹ ಅನಿರೀಕ್ಷಿತ ಕೋಲಾಹಲದ ನಡುವೆ ಮುಂದುವರಿದ ಸಭೆಯಲ್ಲಿ ಸಭೆಯ ಅಧ್ಯಕ್ಷರಾದ ಡಾ.ಬಾಬು ರಾಜೇಂದ್ರಪ್ರಸಾದ್ರವರು ಡಿಸೆಂಬರ್ 17 ರಂದು ಡಾ.ಅಂಬೇಡ್ಕರರನ್ನು ಸಭೆಯನ್ನುದೇಶಿಸಿ ಮಾತನಾಡಲು ಆಹ್ವಾನಿಸಿದರು. ಸತ್ಯ ಹೇಳಬೇಕೆಂದರೆ ಯಾವ ಸಂವಿಧಾನ ಸಭೆ ನಿಂತುಹೋಗಬೇಕಿತ್ತೋ, ಅನಿರ್ದಿಷ್ಟ ಅವಧಿಗೆ ಮುಂದೂಡಬೇಕಾಗಿತ್ತೋ ಅದು ಮುಂದುವರಿಯಿತು! ಹೋಲಿಕೆ ಮಾಡುವುದಾದರೆ ಭಾರತದ ಸಂವಿಧಾನದ ಚಕ್ರ ಅಂಬೇಡ್ಕರರ ಮೂಲಕ ಉರುಳಲಾರಂಭಿಸಿತು! ಯಾಕೆಂದರೆ ತಮ್ಮ ಭಾಷಣದಲ್ಲಿ ಅಂಬೇಡ್ಕರರು ನೆಹರೂರವರು ಮಂಡಿಸಿದ್ದ ಗೊತ್ತುವಳಿಯ 8 ಅಂಶಗಳನ್ನು ಪದ ಪದವಾಗಿ, ಪದರು ಪದರಾಗಿ ಬಿಡಿಸಿ ಸಂವಿಧಾನ ಎತ್ತ ಸಾಗಬೇಕು, ಹೇಗಿರಬೇಕು ಎಂದು ವಿವಿಧ ರಾಷ್ಟ್ರಗಳ ಸಂವಿಧಾನಗಳನ್ನು ಉಲ್ಲೇಖಿಸುತ್ತಾ ಮಾರ್ಗ ತೋರಿಸಲಾಂಭಿಸಿ ಸಭೆಯನ್ನು ಗಂಭೀರತೆಯೆಡೆಗೆ ತಂದರು. ಮುಸ್ಲಿಂಲೀಗ್ ಸದಸ್ಯರು ಗೈರಾಗಿದ್ದಕ್ಕೆ ಮುಂದಿನ ಸಭೆಯಲ್ಲಿ ಅವರು ಭಾಗವಹಿಸುತ್ತಾರೆ ಎಂಬ ಏಕತೆಯ ಆಶಾಭಾವ ವ್ಯಕ್ತಪಡಿಸುತ್ತಾ ಅಂಬೇಡ್ಕರರು “ವಿವಿಧ ಜಾತಿ-ಜನಾಂಗಗಳಾಗಿದ್ದಾಗ್ಯೂ ನಾವೆಲ್ಲಾ ಸದಾ ಒಂದಾಗಿರುವುದರಲ್ಲಿ ನನಗೆ ಯಾವ ಸಂಶಯವೂ ಇಲ್ಲ” ಎಂದರು.
ಹೀಗೆ ತನ್ನ ಆರಂಭಿಕ ದಿನಗಳನ್ನು ಪ್ರಾರಂಭಿಸಿದ ಸಂವಿಧಾನಸಭೆ ಸರ್ದಾರ್ ವಲ್ಲಭಭಾಯಿ ಪಟೇಲರ ನೇತೃತ್ವದಲ್ಲಿ 1947 ಜನವರಿ 24 ರಂದು ಅಂಬೇಡ್ಕರರನ್ನು ಒಳಗೊಂಡಂತೆ 50 ಜನ ಸದಸ್ಯರ ಸಲಹಾ ಸಮಿತಿಯೊಂದನ್ನು ನೇಮಿಸಿತು. ಆ ಸಮಿತಿ ಇತರೆ 4 ಪ್ರಮುಖ ಉಪಸಮಿತಿಗಳನ್ನು ನಿಯುಕ್ತಿಗೊಳಿಸಿತು. ಅವುಗಳಲ್ಲಿ ಬಹುಮುಖ್ಯದ್ದೆಂದರೆ ಮೂಲಭೂತ ಹಕ್ಕುಗಳ ಉಪಸಮಿತಿ ಮತ್ತು ಅಲ್ಪಸಂಖ್ಯಾತರ ಉಪಸಮಿತಿ. ಅಂಬೇಡ್ಕರರು ಈ ಎರಡೂ ಪ್ರಮುಖ ಸಮಿತಿಗಳ ಸದಸ್ಯರಾದರು. ಮುಂದುವರಿದು ಸಭೆ ಇನ್ನೂ 3 ಕಾರ್ಯಾಚರಣಾ ಸಮಿತಿಗಳನ್ನು ರಚಿಸಿತು. ಅವುಗಳೆಂದರೆ 1.ಕೇಂದ್ರ ಅಧಿಕಾರ ಸಮಿತಿ 2.ಕೇಂದ್ರ ಸಂವಿಧಾನ ಸಮಿತಿ 3.ಪ್ರಾಂತ್ಯಗಳ ಸಂವಿಧಾನ ಸಮಿತಿ. ಇಲ್ಲಿಯೂ ಅಷ್ಟೆ ಅಂಬೇಡ್ಕರ್ ಕೇಂದ್ರ ಸಂವಿಧಾನ ಸಮಿತಿಯ ಸದಸ್ಯರಾದರು. ಹೀಗೆ ಅವರು ಪ್ರಮುಖ ಸಮಿತಿಗಳ ಸದಸ್ಯರಾಗುವುದಕ್ಕೆ ಕಾರಣವೂ ಇತ್ತು. ಯಾಕೆಂದರೆ ಮುಂದೆ ಸಂವಿಧಾನ ಅರ್ಪಿಸುವ ಸಮಯದಲ್ಲಿ ಅವರೇ ಹೇಳಿಕೊಂಡಿರುವಂತೆ “ಪರಿಶಿಷ್ಟ ಜಾತಿಗಳ ಹಿತ ಕಾಯುವ ಮಹದಾಸೆ ಹೊತ್ತಷ್ಟೆ ತಾನು ಸಂವಿಧಾನ ಸಭೆಗೆ ಬಂದೆ...”. ಹೌದು, ಡಾ.ಅಂಬೇಡ್ಕರರು ಪರಿಶಿಷ್ಟರ ಹಿತ ಕಾಯುವ ನೆಪ ಮಾತ್ರಕ್ಕೆ ಬಂದರೂ ತಮಗರಿವಿಲ್ಲದಂತೆ ಅವರು ಇಡೀ ದೇಶದ ಸೇವೆಗೆ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು! ಯಾವ ಪರಿ ಎಂದರೆ ಇಡೀ ಸಂವಿಧಾನ ರಚನಾ ಪ್ರಕ್ರಿಯೆಯಲ್ಲಿ ಸಕ್ರಿಯರಾಗುವ ಮಟ್ಟಿಗೆ. ಅದೂ ಅದೆಂತಹ ಸಕ್ರಿಯತೆಯೆಂದರೆ ಶತೃಗಳೂ ಮೆಚ್ಚಿ ಅಹುದಹುದು ಎನ್ನುವ ಮಟ್ಟಿಗೆ! ಏಕೆಂದರೆ ಸಂವಿಧಾನ ರಚನೆಯ ಇಂತಹ ಔಪಚಾರಿಕ ಪ್ರಕ್ರಿಯೆಗಳು ಪೂರ್ಣಗೊಂಡು ಸ್ವಾತಂತ್ರ್ಯದ ಸಮಯದಲ್ಲಿ ದೇಶ ವಿಭಜನೆಯ ಸಂದರ್ಭ ಬಂದಾಗ ಅಂಬೇಡ್ಕರರು ಗೆದ್ದಿದ್ದ ಬಂಗಾಳದ ಕ್ಷೇತ್ರ ಕಾಂಗ್ರೆಸ್ಸಿಗರ ತಂತ್ರದಿಂದಾಗಿ ಪೂರ್ವ ಪಾಕಿಸ್ತಾನಕ್ಕೆ ಸೇರಲ್ಪಟ್ಟು ಅವರ ಸದಸ್ಯತ್ವ ರದ್ದಾಯಿತು. ಸೋಜಿಗವೆಂದರೆ ಈ ಸಮಯದಲ್ಲಿ ಅಂಬೇಡ್ಕರರ ಸಂವಿಧಾನ ರಚನಾ ಚಾಕಚಕ್ಯತೆ ಕೆಲಸ ಮಾಡಿತು. ಹೇಗೆಂದರೆ ಸ್ವತಃ ಸಭೆಯ ಅಧ್ಯಕ್ಷರಾದ ಡಾ.ಬಾಬು ರಾಜೇಂದ್ರಪ್ರಸಾದರು 1947 ಜೂನ್ 30 ರಂದು ಬಾಂಬೆ ಪ್ರಾಂತ್ಯದ ಅಂದಿನ ಪ್ರಧಾನಿ ಡಾ.ಬಿ.ಜಿ.ಖೇರ್ ರವರಿಗೆ ಪತ್ರ ಬರೆದು “ಬೇರೆ ವಿಷಯಗಳೇನೆ ಇರಲಿ, ಸಂವಿಧಾನ ಸಭೆ ಮತ್ತದರ ವಿವಿಧ ಉಪಸಮಿತಿಗಳಲ್ಲಿ ಅಂಬೇಡ್ಕರರ ಕಾರ್ಯ ಎಂತಹ ಮಟ್ಟದ್ದೆಂದರೆ, ಖಂಡಿತ ಅವರ ಸೇವೆಯನ್ನು ನಾವು ಕಳೆದುಕೊಳ್ಳಬಾರದು. ಅದಕ್ಕಾಗಿ ಜುಲೈ 14ರ ಮುಂದಿನ ಸಭೆಯೊಳಗೆ he should be reelected”ಎಂದರು! (Dr.Ambedkar: The Principal Architect of The Constitution of India, Published by Government of India. Pp.26)
ಹೌದು, ಬಾಬಾಸಾಹೇಬರು ತಕ್ಷಣ ಮರು ಆಯ್ಕೆಯಾದರು. ಹಾಗೇ ಆಗಸ್ಟ್ 15ರಂದು ಭಾರತಕ್ಕೆ ಸ್ವಾತಂತ್ರ್ಯ ಕೂಡ ಸಿಕ್ಕಿತು ಮತ್ತು ಅವರು ಸ್ವತಂತ್ರ ಭಾರತದಲ್ಲಿ ನೆಹರೂ ಸಂಪುಟದಲ್ಲಿ ಕಾನೂನು ಸಚಿವರಾಗಿ ಕೂಡ ನೇಮಕಗೊಂಡರು. ಅಂದಹಾಗೆ ಆಗಸ್ಟ್ 29ರಂದು ಮರುಸಮಾವೇಶಗೊಂಡ ಸಂವಿಧಾನಸಭೆ ಸಹಜವಾಗಿ ಕಾನೂನು ಸಚಿವರಾದ ಡಾ.ಅಂಬೇಡ್ಕರರನ್ನು “ಸಂವಿಧಾನ ಪ್ರತಿ ರಚಿಸುವ ಸಮಿತಿ (drafting committee)”ಯ ಅಧ್ಯಕ್ಷರನ್ನಾಗಿ ಆರಿಸಿತು. ಜೊತೆಗೆ ಆರು ಮಂದಿ ಸದಸ್ಯರ ತಂಡ. ಒಟ್ಟಾರೆ ಸಂವಿಧಾನ ಸಭೆಯ ಇಂತಹ ನಡಾವಳಿಗಳ ಮೂಲಕ ಭಾರತದ ಭವಿಷ್ಯ ಬರೆವ ಕೆಲಸ ಬಾಬಾಸಾಹೇಬರ ಮುಡಿಗೇರಿತು.
(ಇನ್ನೂ ಇದೆ)
-ರಘೋತ್ತಮ ಹೊ.ಬ
(ಸಂಗ್ರಹಿಸಿದ್ದು: ಶ್ರೀರಾಮ ದಿವಾಣ, ಉಡುಪಿ)