ಸಂಶೋಧನೆಯಲ್ಲಿ ಮುದ್ರಣವಾದ ಕನ್ನಡದ ಪುಸ್ತಕ

ಸಂಶೋಧನೆಯಲ್ಲಿ ಮುದ್ರಣವಾದ ಕನ್ನಡದ ಪುಸ್ತಕ

ಹೊಸ ಸಂಶೋಧನೆಯಲ್ಲಿ ದೊರೆತ 1640 ರಲ್ಲಿ ಮುದ್ರಣವಾದ ಕನ್ನಡದ ಪುಸ್ತಕದ ಕುರಿತು ವಿಶ್ವ ಪುಸ್ತಕ ದಿನ ಅಂಗವಾಗಿ ಸ್ಪ್ಯಾನ್‌ ಪ್ರಿಂಟರ್ಸ್‌ನ ಸ್ಪ್ಯಾನ್‌ ಕೃಷ್ಣಮೂರ್ತಿ ಬರೆದಿರುವ ಲೇಖನ ನಿಮ್ಮ ಓದಿಗಾಗಿ.

ಏಪ್ರಿಲ್ ೨೩ ರಂದು ವಿಶ್ವಪುಸ್ತಕ ದಿನಾಚರಣೆಯನ್ನು ವಿಶ್ವವೇ ಆಚರಿಸುತ್ತಾ ಬರುತ್ತಿದೆ. ಕರ್ನಾಟಕದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಮತ್ತು ಪ್ರಕಾಶಕರ ಸಂಘಗಳು ಪುಸ್ತಕ ಸಂಸ್ಕೃತಿಯನ್ನು ಬಿಂಬಿಸುವ ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತಿವೆ.

ಇಲ್ಲಿಯವರೆಗೂ ಕನ್ನಡದಲ್ಲಿ ಮುದ್ರಿತವಾದ ಮೊದಲ ಗ್ರಂಥವೆಂದರೆ, ಕೋಲ್ಕತ್ತಾದ ಶ್ರೀರಾಮಪುರ ಮುದ್ರಣಾಲಯದಲ್ಲಿ 1817ರಲ್ಲಿ ಮುದ್ರಣವಾದ ವಿಲಿಯಂ ಕೇರಿಯ ‘ಎ ಗ್ರಾಮರ್ ಆಫ್ ಕರ್ನಾಟಕ ಲಾಂಗ್ವೇಜ್’ ಪುಸ್ತಕ. ಈ ಗ್ರಂಥದ ಮೂಲಪ್ರತಿಯನ್ನು ಅಧ್ಯಯನಮಾಡಿ ೧೯೯೭ರಲ್ಲಿ ವಾರಣಾಸಿಯ ಬನಾರಸ್ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದ ಮುಖ್ಯಸ್ಥರಾದ ಡಾ. ಶಿವಾನಂದ ವಿರಕ್ತಮಠ ಅವರು ಕೆಲವು ಬದಲಾವಣೆಯೊಂದಿಗೆ ಮರು ಪ್ರಕಟಿಸಿದ್ದರು. ಮುಂದೆ ೨೦೧೮ರಲ್ಲಿ ಪ್ರೊ. ಎ. ವಿ. ನಾವಡ ಮತ್ತು ಡಾ. ಬಿ. ವಿ. ಮಹಿದಾಸ್ ಅವರು ವಿಲಿಯಂ ಕೇರಿಯ ಮೂಲ ಗ್ರಂಥವನ್ನು ಆಧಾರ ಪ್ರತಿಯನ್ನಾಗಿರಿಸಿಕೊಂಡು ನಮ್ಮ ಕಾಲದ ಹೊಸ ತಿಳಿವಳಿಕೆಯ ಬೆಳಕಿನಲ್ಲಿ ಅದನ್ನು ಸಂಪಾದಿಸಿದ್ದಾರೆ.

ನಾನು ಕನ್ನಡ ಮುದ್ರಣಾಲಯಗಳ ಇತಿಹಾಸದ ಬಗ್ಗೆ ಸಂಶೋಧನೆ ಮಾಡುತ್ತಿದ್ದು ಮಾಹಿತಿ ಕಲೆಹಾಕಲು ಹಲವು ಹಳೆಯ ಪುಸ್ತಕಗಳನ್ನು ಗಮನಿಸುತ್ತಿರುವಾಗ ಕನ್ನಡ ಸಾಹಿತ್ಯ ಲೋಕದ ಸಂಶೋಧಕರಿಗೆ ಅಚ್ಚರಿ ಉಂಟುಮಾಡುವ ಹೊಸ ವಿಷಯವೊಂದು ಬೆಳಕಿಗೆ ಬರುತ್ತಿದೆ. ಅದೇನೆಂದರೆ,1817ರಲ್ಲಿ ಮುದ್ರಣವಾದ ವಿಲಿಯಂ ಕೇರಿಯ ‘ಎ ಗ್ರಾಮರ್ ಆಫ್ ಕರ್ನಾಟಕ ಲಾಂಗ್ವೇಜ್’ ಪುಸ್ತಕಕ್ಕಿಂತ ಮುಂಚೆಯೇ ಫಾದರ್ ಮಾರ್ಕೋಸ್ ಜಾರ್ಜ್ ಎಂಬ ಪಾದ್ರಿಯು ಬರೆದ ‘ಕೆನರೆಸ್ ಗ್ರಾಮರ್’ ಎಂಬ ಪುಸ್ತಕವು 1640 ರಲ್ಲಿ ಗೋವಾ ಬಳಿಯ ರಾಕೋಲ್ ಎಂಬ ಸಣ್ಣ ಪಟ್ಟಣದ ಸೇಂಟ್ ಇಗ್ನೇಷಿಯಸ್ ಕಾಲೇಜಿನ ಮುದ್ರಣಾಲಯದಲ್ಲಿ ಮುದ್ರಣವಾಗಿದೆ. (ಇದೇ ಪುಸ್ತಕ 1857 ರಲ್ಲಿ ಮರುಮುದ್ರಣವಾಗಿದೆ). 

ಈ ಮಾಹಿತಿಯು 1939ರಲ್ಲಿ ಮುದ್ರಣವಾದ D. Ferroli S.J. ಅವರ The Jesuits in Malabar JA ಎಂಬ ಪುಸ್ತಕದ ಪುಟ ಸಂಖ್ಯೆ 453ರಲ್ಲಿದೆ. ಇದೇ ಮಾಹಿತಿಯನ್ನು ಆಧಾರವಾಗಿ ಆಂಧ್ರ ಪ್ರದೇಶದ ಖ್ಯಾತ ಸಂಶೋಧಕಿ ಡಾ. ಜೆ. ಮಂಗಮ್ಮ ಅವರು 1975ಲ್ಲಿ ಸಂಶೋಧಿಸಿ ಹೊರತಂದ Book Printing in India, JA ಎಂಬ ಪುಸ್ತಕದ ಪುಟ ಸಂಖ್ಯೆ 23 ಮತ್ತು 171ರಲ್ಲಿ ಪ್ರಸ್ತಾಪಿಸಿದ್ದಾರೆ.

1556ರಲ್ಲಿ ಪೋರ್ಚುಗಲ್ ದೇಶದ ಪಾದ್ರಿಗಳ ಜೊತೆಯಲ್ಲಿ ಭಾರತದ ಗೋವಾಕ್ಕೆ ಮೊದಲ ಮುದ್ರಣಯಂತ್ರ ಕಾಲಿರಿಸಿದ್ದು, ಇದಾದ ಕೆಲವೇ ವರ್ಷಗಳಲ್ಲಿ ಗೋನ್ಸಾಲಿಸ್ ಎಂಬುವನು ಭಾರತದ ವಿವಿಧ ಭಾಷೆಗಳ ಲಿಪಿಯ ಅಚ್ಚುಮೊಳೆಗಳ ತಯಾರಿಕೆಗೆ ಉದ್ಯುಕ್ತನಾಗಿದ್ದು, ಅವನು ಮೊದಲು ಕನ್ನಡ ಲಿಪಿಯ ಅಚ್ಚುಮೊಳೆಗಳನ್ನು ತಯಾರಿಸಲು ಸಿದ್ಧತೆಮಾಡಿ ಕೈಗೆತ್ತಿಕೊಂಡಿದ್ದ ಎಂದು ಡಾ. ಶ್ರೀನಿವಾಸ ಹಾವನೂರು ಅವರು ಆಧಾರಸಹಿತವಾಗಿ ವಾದ ಮಂಡಿಸಿದ್ದಾರೆ. ಇದಾದ ಎಂಟು ದಶಕಗಳ ಬಳಿಕ ಅದೇ ಗೋವಾದ ಬಳಿ ಇರುವ ರಾಕೋಲ್ ಎಂಬ ಸಣ್ಣ ಪಟ್ಟಣದಲ್ಲಿ ಈ ಪುಸ್ತಕವು ಮುದ್ರಣವಾಗಿರುವುದು ಸಂಶೋಧಕರಲ್ಲಿ ಹಲವು ಹೊಳಹುಗಳು ಮಾಡಲು ದಾರಿ ಮಾಡಿಕೊಡುತ್ತದೆ.

ತಾವು ಈ ಮಾಹಿತಿಯನ್ನು ತಮ್ಮ ದಿನಪತ್ರಿಕೆಯಲ್ಲಿ ಪ್ರಕಟಿಸಿ ಕರ್ನಾಟಕದ ಸಂಶೋಧಕರ ಗಮನಕ್ಕೆ ತರಬೇಕೆಂದು ಮನವಿ. ‘ಕೆನರೆಸ್ ಗ್ರಾಮರ್’ ಪುಸ್ತಕವನ್ನು ಲಂಡನ್‌ನ ಬ್ರಿಟಿಷ್ ಮ್ಯೂಸಿಯಂನ ಗ್ರಂಥಾಲಯದಲ್ಲೋ ಅಥವಾ ನವದೆಹಲಿಯ ನ್ಯಾಷನಲ್ ಆರ್ಕಿವ್ಸ್ ಆಫ್ ಇಂಡಿಯದಲ್ಲೋ ಹುಡುಕಿ, ಆಸಕ್ತರು ಹೆಚ್ಚಿನ ಸಂಶೋಧನೆ ಮಾಡಲು ಅನುವು ಮಾಡಿಕೊಡಬೇಕು.

-ಸ್ಪ್ಯಾನ್‌ ಕೃಷ್ಣಮೂರ್ತಿ, ಬೆಂಗಳೂರು

(ಸಂಗ್ರಹ: ಸಂತೋಷ್ ಕುಮಾರ್, ಸುರತ್ಕಲ್)