ಸಂಶೋಧನ ಸಂಪದ

ಸಂಶೋಧನ ಸಂಪದ

ಪುಸ್ತಕದ ಲೇಖಕ/ಕವಿಯ ಹೆಸರು
ಕ್ಷಮಾ ವಿ ಭಾನುಪ್ರಕಾಶ್
ಪ್ರಕಾಶಕರು
ಸಹನಾ ಪಬ್ಲಿಕೇಶನ್, ರಾಜರಾಜೇಶ್ವರಿ ನಗರ, ಬೆಂಗಳೂರು - ೫೬೦೦೯೮
ಪುಸ್ತಕದ ಬೆಲೆ
ರೂ. ೧೮೫.೦೦, ಮುದ್ರಣ: ೨೦೨೩

‘ಸಂಶೋಧನ ಸಂಪದ' ಎನ್ನುವುದು ಕ್ಷಮಾ ವಿ ಭಾನುಪ್ರಕಾಶ್ ಅವರ ನೂತನ ಕೃತಿ. ೧೫೮ ಪುಟಗಳ ಈ ಪುಸ್ತಕವು ಸಂಶೋಧನೆಗಳನ್ನು ನಡೆಸುವ ಅಗತ್ಯತೆ ಮತ್ತು ಈ ಸಂಶೋಧನೆಗಳ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಕಾರ್ಯದ ಬಗ್ಗೆ ಬಹಳಷ್ಟು ವಿಷಯಗಳನ್ನು ತಿಳಿಸಿಕೊಡುತ್ತದೆ. ಲೇಖಕರಾದ ಟಿ. ಜಿ. ಶ್ರೀನಿಧಿ ಇವರು ಈ ಪುಸ್ತಕಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ. ಅವರು ಬರೆದ ಮುನ್ನುಡಿಯ ಆಯ್ದ ಭಾಗಗಳನ್ನು ಇಲ್ಲಿ ನೀಡಲಾಗಿದೆ... 

“ವಿಜ್ಞಾನ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗಳ ವೇಗ ಬೆರಗುಗೊಳಿಸುವಂಥದ್ದು. ನಮ್ಮ ಬದುಕನ್ನು ಅಗಾಧವಾಗಿ ಪ್ರಭಾವಿಸುವ ಹಲವಾರು ವಿಷಯಗಳನ್ನು ಕುರಿತ ಸಂಶೋಧನೆಗಳು ಇಲ್ಲಿ ಸದಾಕಾಲವೂ ನಡೆಯುತ್ತಲೇ ಇರುತ್ತವೆ.ಇಂತಹ ಸಂಶೋಧನೆಗಳನ್ನು ನಡೆಸುವುದು ಅತ್ಯಗತ್ಯ ಎನ್ನುವುದರಲ್ಲಿ ಸಂದೇಹವೇ ಇಲ್ಲ. ಹಾಗೆಯೇ ಈ ಸಂಶೋಧನೆಗಳ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದು ಕೂಡ ಅಗತ್ಯ. ಬ್ರಿಟನ್ನಿನ ವಿಜ್ಞಾನಿ ಮಾರ್ಕ್ ವಾಲ್ಪೋರ್ಟ್‌ ಅವರ "Science is not finished until it's communicated" ವಿಜ್ಞಾನ ಸಂವಹನದ ಮಹತ್ವವನ್ನು ಬಹಳ ಪರಿಣಾಮಕಾರಿಯಾಗಿ ಎತ್ತಿತೋರಿಸುತ್ತದೆ.

ಇಂಗ್ಲಿಷ್ ಭಾಷೆಯಲ್ಲಿ ಇಂತಹ ಸಂವಹನ ಸಾಕಷ್ಟು ಪ್ರಮಾಣದಲ್ಲಿ ನಡೆಯುತ್ತದೆ. ಇಂಗ್ಲಿಷ್ ಮಾಧ್ಯಮಗಳಲ್ಲಿ ವಿಜ್ಞಾನ ತಂತ್ರಜ್ಞಾನಗಳಿಗೆ ಸಾಕಷ್ಟು ಸ್ಥಳಾವಕಾಶ ಇರುತ್ತದೆ. ಅಲ್ಲದೆ, ಅಲ್ಲಿ ಬಹಳಷ್ಟು ಸಾರಿ ವಿಜ್ಞಾನಿಗಳೇ ವಿಜ್ಞಾನ ಸಂವಹನಕಾರರ ಕೆಲಸವನ್ನೂ ಮಾಡಿಬಿಡುತ್ತಾರೆ. ಆದರೆ ಕನ್ನಡದಂತಹ ಭಾಷೆಗಳಲ್ಲಿ ಪರಿಸ್ಥಿತಿಯೇ ಬೇರೆ. ಕನ್ನಡದಲ್ಲಿ ವಿಜ್ಞಾನ ಸಂವಹನಕ್ಕೆ ನೂರು ವರ್ಷಗಳಿಗೂ ಹೆಚ್ಚಿನ ಇತಿಹಾಸ ಇದ್ದರೂ ಕೂಡ ವಿಜ್ಞಾನ- ತಂತ್ರಜ್ಞಾನಗಳಿಗೆ ಸಂಬಂಧಿಸಿದ ಮಾಹಿತಿ ಇಂದಿಗೂ ಹೆಚ್ಚಿನ ಪ್ರಮಾಣದಲ್ಲಿ ದೊರಕುತ್ತಿಲ್ಲ.

ಮಾಹಿತಿ ಹೆಚ್ಚಿನ ಪ್ರಮಾಣದಲ್ಲಿ ದೊರಕುವಂತಾಗಿಬಿಟ್ಟರೆ ಅಷ್ಟೇ ಸಾಕೇ? ಖಂಡಿತಾ ಸಾಲದು. ಅದರ ವಿಷಯ ವಿಸ್ತಾರವೂ ಹೆಚ್ಚಬೇಕು. ವಿಜ್ಞಾನದ ಪ್ರಾಥಮಿಕ ಪಾಠಗಳಿಂದ ಪ್ರಾರಂಭಿಸಿ ಇತ್ತೀಚಿನ ಸಂಶೋಧನೆಗಳ ವಿವರಗಳವರೆಗೆ ಎಲ್ಲವೂ ಕನ್ನಡದಲ್ಲೇ ದೊರಕುವಂತಾಗಬೇಕು. ಇದನ್ನೆಲ್ಲ ಸಾಧ್ಯವಾಗಿಸುವ ನಿಟ್ಟಿನಲ್ಲಿ ಕನ್ನಡದ ವಿಜ್ಞಾನ ಸಂವಹನಕಾರರ ಪಾತ್ರ ಬಹಳ ಮಹತ್ವದ್ದು. ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಳವಣಿಗೆಗಳು ನಡೆಯುವಷ್ಟೇ ವೇಗವಾಗಿ ಓದುಗರನ್ನು ತಲುಪುವುದು ಈ ವಿಶಿಷ್ಟ ಪ್ರಭೇದದ ಜವಾಬ್ದಾರಿ.

ಕೇಳಲು ಸುಲಭವೆನಿಸಿದರೂ ಈ ಜವಾಬ್ದಾರಿ ಬಹಳ ಕಷ್ಟದ್ದು. ತಮ್ಮ ಬಿಡುವಿನ ವೇಳೆಯನ್ನೆಲ್ಲ ಅಧ್ಯಯನಕ್ಕೆ ಮೀಸಲಿಟ್ಟು, ಮಾಧ್ಯಮಗಳೊಡನೆ ಒಡನಾಡುತ್ತ ವಿಜ್ಞಾನ ಜಗತ್ತಿನ ಹೊಸ ಹೆಜ್ಜೆಗಳನ್ನು ಪರಿಚಯಿಸುವ ಕೆಲಸ ಅಗಾಧ ಶ್ರಮ ಹಾಗೂ ತಾಳ್ಮೆಯನ್ನು ಬೇಡುತ್ತದೆ. ಹಾಗಾಗಿಯೇ, ಕನ್ನಡದಲ್ಲಿರುವ ಸಕ್ರಿಯ ವಿಜ್ಞಾನ ಸಂವಹನಕಾರರ ಸಂಖ್ಯೆ ಇಂದಿಗೂ ಬೆರಳೆಣಿಕೆಯಷ್ಟೇ ಇದೆ!

ನಿಮ್ಮ ಕೈಲಿರುವ ಈ ಕೃತಿಯನ್ನು ಬರೆದಿರುವವರು ಆ ಪೈಕಿ ಒಬ್ಬರು ಎನ್ನುವುದು ಸಂತೋಷದ ಸಂಗತಿ. ವೃತ್ತಿಯಿಂದ ಶಿಕ್ಷಕಿಯಾಗಿರುವ ಕ್ಷಮಾ ತಮ್ಮ ಪ್ರವೃತ್ತಿಯಿಂದಲೂ ಶಿಕ್ಷಕಿಯೇ ಆಗಿದ್ದಾರೆ. ತಮ್ಮ ಓದುಗರಲ್ಲಿ, ಕೇಳುಗರಲ್ಲಿ ವಿಜ್ಞಾನದ ಆಸಕ್ತಿಯನ್ನು ಬೆಳೆಸುವ ನಿರಂತರ ಪ್ರಯತ್ನದಲ್ಲಿ ತೊಡಗಿಕೊಂಡಿದ್ದಾರೆ. ಕಾಫಿ ಹೀರುತ್ತಾ ಎದುರಿಗೆ ಕುಳಿತವರ ಜೊತೆ ಹಾಯಾಗಿ ಹರಟುವಂತಹ ತಮ್ಮದೇ ಆದ ಶೈಲಿಯನ್ನೂ ಅವರು ರೂಢಿಸಿಕೊಂಡಿದ್ದಾರೆ.

ಅವರು ಬರೆದಿರುವ ಲೇಖನಗಳ ಈ ಸಂಗ್ರಹದ ವಿಷಯ ವೈವಿಧ್ಯ ಮೆಚ್ಚುವಂಥದ್ದು. ವಿಜ್ಞಾನ ತಂತ್ರಜ್ಞಾನ ಕ್ಷೇತ್ರದ ಹೊಸ ಬೆಳವಣಿಗೆಗಳ ಬಗ್ಗೆ ಕಳೆದ ಕೆಲ ವರ್ಷಗಳಲ್ಲಿ ಜೀವಜಗತ್ತಿನಿಂದ ಪ್ರಾರಂಭಿಸಿ ವಿದ್ಯುನ್ಮಾನ ಜಗತ್ತಿನವರೆಗೆ, ಅಡುಗೆಮನೆಯಿಂದ ಆರೋಗ್ಯಕ್ಷೇತ್ರದವರೆಗೆ ಈ ಬರಹಗಳಲ್ಲಿ ಅನೇಕ ವಿಷಯಗಳ ಪ್ರಸ್ತಾಪ ಇದೆ. ಅಷ್ಟೇ ಅಲ್ಲ, ಒಂದು ಕಾಲಾವಧಿಯಲ್ಲಿ ವಿಜ್ಞಾನ ಜಗತ್ತು ಬೆಳೆದುಬಂದ ದಾರಿಯ ಹಿನ್ನೋಟವನ್ನೂ ನಾವಿಲ್ಲಿ ಕಾಣಬಹುದು.”