ಸಂಸದರು, ಶಾಸಕರ ವರ್ತನೆ ಪ್ರಶ್ನಾರ್ಹ : ಸಂಯಮ ಇರಲಿ

ಸಂಸದರು, ಶಾಸಕರ ವರ್ತನೆ ಪ್ರಶ್ನಾರ್ಹ : ಸಂಯಮ ಇರಲಿ

ರಾಜ್ಯ ವಿಧಾನಮಂಡಲ ಹಾಗೂ ದೇಶದ ಸಂಸತ್ತು ಒಂದೇ ದಿನ ಕಂಡು ಕೇಳರಿಯದ ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಗುವ ಮೂಲಕ ಚರ್ಚೆಗೆ ಆಹಾರವಾಗಿದೆ. ರಾಜ್ಯ ವಿಧಾನ ಪರಿಷತ್ತಿನಲ್ಲಿ ಹಿರಿಯ ಶಾಸಕ ಸಿ ಟಿ ರವಿ ಅವರು ಆಕ್ಷೇಪಾರ್ಹ ಎಂಬ ಆರೋಪದ ಸಂಬಂಧ ಅವರ ಮೇಲೆ ಬೆಳಗಾವಿಯ ಸುವರ್ಣಸೌಧದೊಳಗೇ ಹಲ್ಲೆ ಯತ್ನ ನಡೆದಿದೆ. ಕೊನೆಗೆ ಅವರ ಬಂಧನವೂ ಆಗಿದೆ. ಮತ್ತೊಂದೆಡೆ, ದೆಹಲಿಯಲ್ಲಿ ಅಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆ ಸಂಬಂಧ ನಡೆಯುತ್ತಿದ್ದ  ಪರ - ವಿರುದ್ಧ ಪ್ರತಿಭಟನೆಯ ವೇಳೆ ತಳ್ಳಾಟ - ನೂಕಾಟವಾಗಿ ಒಬ್ಬರ ಮೇಲೊಬ್ಬರು ಸಂಸದರು ಹಾರಿ ಗಾಯ ಮಾಡಿಕೊಂಡಿದ್ದಾರೆ. ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿಯೇ ಇದಕ್ಕೆ ಕಾರಣ ಎಂದು ಕೇಸ್ ಕೂಡಾ ದಾಖಲಾಗಿದೆ. ಕಾಂಗ್ರೆಸ್ ಪ್ರತಿ ದೂರು ದಾಖಲಿಸಿದ್ದರೆ, ಬಿಜೆಪಿಯ ಮಹಿಳಾ ಸಂಸದರೊಬ್ಬರು ರಾಹುಲ್ ವಿರುದ್ಧ ಗಂಭೀರ ಆರೋಪ ಮಾದಿದ್ದಾರೆ. 

ಇದೆಲ್ಲಾ ಏನು? ರಾಜಕಾರಣ ಎತ್ತ ಸಾಗುತ್ತಿದೆ? ಉದಾತ್ತ ಚರ್ಚೆಗಳು, ವಿಷಯ ಮಂಡನೆಗಳು ನಡೆಯಬೇಕಿದ್ದ ಸದನಗಳು, ಅದರ ಆವರಣದಲ್ಲಿ ಪರಸ್ಪರ ಗೌರವದಿಂದ ನಡೆದುಕೊಳ್ಳಬೇಕಿದ್ದ ಸದಸ್ಯರು ಏಕೆ ಈ ರೀತಿಯ ತುಚ್ಛ ವರ್ತನೆ ತೋರುತ್ತಿದ್ದಾರೆ ಎಂಬುದು ಪ್ರಶ್ನಾರ್ಹ. ವಿಶ್ವದಲ್ಲೇ ಅತ್ಯಂತ ಹಳೆಯ ಪ್ರಜಾಪ್ರಭುತ್ವ ದೇಶಗಳಲ್ಲಿ ಒಂದಾಗಿರುವ ಭಾರತ, ಆ ವ್ಯವಸ್ಥೆಯನ್ನು ಸದೃಢವಾಗಿ ಉಳಿಸಿಕೊಂಡು ಬಂದಿರುವ ಕೆಲವೇ ಕೆಲವು ದೇಶಗಳ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತದೆ. ಸದನಗಳಲ್ಲಿ ಅರ್ಥಪೂರ್ಣ ಚರ್ಚೆ ನಡೆದು, ಕಾಡುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು, ಕಾಲಮಾನಕ್ಕೆ ತಕ್ಕಂತೆ ಶಾಸನಗಳನ್ನು ರೂಪಿಸುವ ಗುರುತರ ಜವಾಬ್ದಾರಿ ಈ ಸದನಗಳ ಮೇಲೆ ಇರುತ್ತದೆ. ಕಲಾಪಗಳನ್ನು ನಡೆಸಲು ಸರ್ಕಾರಗಳು ಕೋಟ್ಯಾಂತರ ರೂಗ಼ಳನ್ನು ವ್ಯಯ ಮಾಡುತ್ತವೆ. ಆದರೆ ಸದನಗಳು ಈಗ ಅಕ್ಷರಶಃ ರಣಾಂಗಣವಾಗುತ್ತಿರುವುದು ಶೋಚನೀಯವಾದ ಸಂಗತಿ. ಎಲ್ಲರಿಗೂ ಶಾಸನಸಭೆ ಅಥವಾ ಸಂಸತ್ತಿನ ಸದಸ್ಯರಾಗಲು ಅವಕಾಶ ಸಿಗುವುದಿಲ್ಲ. ಅಸಂಖ್ಯಾತ ಜನರು ಆ ಸದನದ ಸದಸ್ಯರಾಗಲು ಹಾತೊರೆಯುತ್ತಿದ್ದಾರೆ. ಅಲ್ಲಿ ನಡೆಯುವ ಚರ್ಚೆಗಳನ್ನು ಕುತೂಹಲದಿಂದ ಆಲಿಸುವವರೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸದನದ ಸದಸ್ಯರ ವರ್ತನೆ ಅಂತಹ ವರ್ಗಕ್ಕೆ ಯಾವ ಸಂದೇಶ ನೀಡುತ್ತಿದೆ? ಭವಿಷ್ಯದಲ್ಲಿ ರಾಜಕಾರಣಕ್ಕೆ ಬರುವವರು, ಸದನ ಎಂದರೆ ಅಲ್ಲಿ ಗಲಾಟೆ ಮಾಡಬೇಕು, ಬಡಿದಾಟ ನಡೆಸಬೇಕು ಎಂದುಕೊಂಡರೆ ಅದಕ್ಕಿಂತ ಗಂಡಾಂತರ ಬೇರೊಂದಿಲ್ಲ. ಶಾಸನ ಸಭೆ, ಸಂಸದೀಯ ವ್ಯವಸ್ಥೆಯಲ್ಲಿರುವವರಿಂದ ಆತ್ಮಾವಲೋಕನ ಅಗತ್ಯ.

ಕೃಪೆ: ಕನ್ನಡ ಪ್ರಭ, ಸಂಪಾದಕೀಯ, ದಿ: ೨೧-೧೨-೨೦೨೪

ಚಿತ್ರ ಕೃಪೆ: ಅಂತರ್ಜಾಲ ತಾಣ