ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ?

ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ?

ಬರಹ

ಸಂಪದದ ಒಳಹೊರಗೆ ಕನ್ನಡದ ಬಗ್ಗೆ ಕಾಳಜಿ ಇರುವ ( ಅರಿವಿನ ಜೊತೆಗೆ :-)) ಜನರಲ್ಲಿ ಉಂಟಾಗುವ ವಾದವಿವಾದಗಳು ನನಗೆ ಒಮ್ಮೊಮ್ಮೆ ಅಚ್ಚರಿಯನ್ನು ಕೆಲವೊಮ್ಮೆ ಬೇಜಾರನ್ನು ಉಂಟು ಮಾಡುತ್ತವೆ.ಈ ಗಲಾಟೆ ಲಟಾಪಟಿಗಳು ವ್ಯಕ್ತಿ, ಜಾತಿಗಳನ್ನು ತೆಗೆಳುವದರಲ್ಲೋ ಅಥವಾ ಒಣ ಪಾಂಡಿತ್ಯ ತೋರುವುದರಲ್ಲೋ ಮುಗಿಯುತ್ತದೆ. ಇವುಗಳಲ್ಲಿ ನಾನು ಕಂಡ ಸಾಮಾನ್ಯ ಸಂಗತಿಗಳು ಇಂತಿವೆ.

ಅಚ್ಚ ಕನ್ನಡ ಕುವರರ ಕೂಗು

  • ಸಂಸ್ಕೃತದಿಂದಲೇ ಕನ್ನಡಕ್ಕೆ ಕುತ್ತು.
  • ಮಹಾಪ್ರಾಣಗಳ ಪ್ರಾಣ ತೆಗೀಬೇಕು.ಕನ್ನಡದಲ್ಲಿ ರುವ ಸಂಸ್ಕೃತ ಒರೆಗಳನ್ನು ಓಡಿಸಬೇಕು.
  • ಕನ್ನಡ ದ್ರಾವಿಡ ನುಡಿ.ಆದ್ದರಿಂದ ಕನ್ನಡಿಗರು ದ್ರಾವಿಡ ತಳಿ. ಸಂಸ್ಕೃತ ನಮ್ಮದಲ್ಲದ (ಆರ್ಯ) ಬೇರೆ ತಳಿಯ ನುಡಿ.
  • ಸಂಸ್ಕೃತ ಹಾರುವರ ಹೇರಿಕೆ.ಅದರಲ್ಲಿರುವ ಅರಿಮೆ ಒಂದು ಧರ್ಮಕ್ಕೆ ಮಾತ್ರ ಸೇರಿದ್ದು.
  • ಸಂಸ್ಕೃತದಿಂದ ನಾವು ಕಲಿಯುವಂತದ್ದು ಏನೂ ಇಲ್ಲ. ಹೊಟ್ಟೆ ಹೊರೆಯೋಕೆ ಏನೂ ಗಿಟ್ಟುವುದಿಲ್ಲ.
  • ಸಂಸ್ಕೃತವನ್ನು ಹೊಗಳುವುದು ಅಂದರೆ ಕನ್ನಡಕ್ಕೆ ಎರೆಡು ಬಗೆಯುವುದು.

ಸಂಸ್ಕೃತ ಸಮರ್ಥಕರ ವಾದಸರಣಿ

  • ಸಂಸ್ಕೃತ ಕನ್ನಡದ ಜನನಿ (ದೇವಕಿಯಲ್ಲದಿದ್ದರೂ ಕನಿಷ್ಟ ಯಶೋದೆ).
  • ಸಂಸ್ಕೃತವಿಲ್ಲದ ಕನ್ನಡ ಸತ್ವಹೀನ. ಬಹಳಷ್ಟು ಕನ್ನಡ ಪದಗಳು ಸಂಸ್ಕೃತದ ಭಿಕ್ಷೆ.ಪಾರಿಭಾಷಿಕ ಪದಗಳಿಗೆ ಸಂಸ್ಕೃತವೇ ಶ್ರೇಷ್ಟ.
  • ಸಂಸ್ಕೃತದ ವಿರುದ್ಧ ಮಾತಾಡುವವರೆಲ್ಲಾ ಜಾತಿ ರಾಜಕೀಯದ ಉದ್ದೇಶದಿಂದ ಮಾಡುತ್ತಾರೆ.
  • ನಮ್ಮ ಧರ್ಮ ಮತ್ತು ಸಂಸ್ಕೃತಿಯ ಸಾರವಿರುವುದೇ ಸಂಸ್ಕೃತದಲ್ಲಿ.
  • ಸಂಸ್ಕೃತ ಸಕಲ ಜ್ಞಾನಗಳ ಭಂಢಾರ.ಮೇಲಾಗಿ ದೇವ ಭಾಷೆ
  • ಸಂಸ್ಕೃತ ಗಣಕಕ್ಕೆ ಹೇಳಿ ಮಾಡಿಸಿದ ಭಾಷೆ.ಪಾಣಿನಿಯ ಅಷ್ಟಾಧ್ಯಾಯೀ ಕನ್ನಡಕ್ಕೂ ಚಾಚೂ ತಪ್ಪದೆ ಅನ್ವಯಿಸುತ್ತದೆ.

ತಮಾಷೆಯೇನೆಂದರೆ ಹೊರಗಿನವರಿಗೆ ಇವನ್ನೆಲ್ಲಾ ನೋಡಿದ ಮೇಲೆ ಕರ್ನಾಟಕದಲ್ಲಿ ಎಲ್ಲಾ ಕಡೆ ಬೀದಿ ಕಾಳಗ ನಡಿಯುತ್ತಾ ಇದೆ ಅಂತ ಅನ್ನಿಸಬಹುದು . ಆದರೆ ಆ ರೀತಿಯ ಪರಿಸ್ಥಿತಿ ಎಲ್ಲೂ ಇಲ್ಲ. ನಮ್ಮ ಈ ಕನ್ನಡ ಕಲಿಗಳು ಕೂಡ ಸಂಸ್ಕೃತವನ್ನು ದ್ವೇಷಿಸುವುದಿಲ್ಲ. ಸಂಸ್ಕೃತ ವೀರರ ನಿಜವಾದ ಒಲವಿನ ಭಾಷೆ ಕನ್ನಡವೇ. ಇನ್ನೂ ಹೇಳಬೇಕೆಂದರೆ ಅಂತರಜಾಲದಲ್ಲಿ ಸುಳಿದಾಡುವ ಎಷ್ಟೋ "ಕನ್ನಡ ಕಲಿ"ಗಳು "ಸಂಸ್ಕೃತ ವೀರ"ರಿಗಿಂತ ಹೆಚ್ಚು ಸಂಸ್ಕೃತ ಕಲಿತಿರುತ್ತಾರೆ."ಸಂಸ್ಕೃತ ವೀರ"ರು ಕೂಡ ಕಾಳಿದಾಸನಿಗಿಂತ ಕುಮಾರವ್ಯಾಸನನ್ನು ಓದಿರುವ ಸಾಧ್ಯತೆಯೇ ಹೆಚ್ಚು. ಇದನ್ನು ನೋಡಿದಾಗ ನನಗೆ ಈ ಮೇಲ್ಕಾಣಿಸಿದ ನಿಲುವುಗಳೆಲ್ಲಾ ಸುಮ್ಮನೆ ಅತಿಯಾಟ ("extreme posturing") ಅಂತ ಅನ್ನಿಸುತ್ತೆ.ನಾನು ಇವನ್ನು ಅಣಕವಾಡುವ ರೀತಿಯಲ್ಲಿ ಪ್ರಸ್ತಾಪಿಸಿರುವುದನ್ನು ಗಮನಿಸಿ. ಇದು ಖಂಡಿತವಾಗಿ ಉದ್ದೇಶಿತವೆ. ಇವುಗಳ ಬಗ್ಗೆ ಇನ್ನೊಮ್ಮೆ ಬರಿಯುತ್ತೇನೆ. ನನ್ನ ಈ ಬರಹದ ವಸ್ತು ಬೇರೆ.

ನಾನು ಬಲವಾಗಿ ನಂಬಿರುವ ಕೆಲವು ಸಂಗತಿಗಳನ್ನು ಇಲ್ಲಿ ಹೇಳಿ ಬಿಡ್ತೀನಿ. ಕನ್ನಡದ ನೆಲ /ಜಲ ಎರಡೂ ಇಂತ ಜಗಳಕ್ಕೆ ಹೇಳಿ ಮಾಡಿಸಿದ್ದಲ್ಲ .ಆ ರೀತಿ ಬಡಿದಾಟಕ್ಕೆ ಸರಿಯಾದ ಜಾಗ ನಮ್ಮ ದೇಶದಲ್ಲಿ ಬೇರೆ ಕಡೆ ಇವೆ ( ನಾನು ಯಾವ ಹೆಸರು ಹೇಳೋದಿಲ್ಲ :-)). ಎರಡನೆಯದಾಗಿ ನಮ್ಮ ನಾಡು ಇರೋ ಆಯಕಟ್ಟಿನ ಜಾಗ ಮತ್ತು ನಮ್ಮ ಜನರ ಚರಿತ್ರೆ ಎರಡೂ ನಮ್ಮ ದೇಶದಲ್ಲಿ ಬೇರೆ ಎಲ್ಲೂ ಇರದಂತ ಸಾಮಾಜಿಕ ಶಾಂತಿ ಕೊಟ್ಟಿವೆ. ಹೀಗಿರಬೇಕಾದರೆ ಇಂತ ವಿಷಯ ನಮಗೆ ಯಾಕೆ ಇಷ್ಟು ತಲೆನೋವು ತರಬೇಕು?

ನನ್ನ ಅನಿಸಿಕೆ ಇಷ್ಟು.
೧) ಕನ್ನಡದ ಜನರನ್ನು ಈಗ ವಿಪರೀತ ಕೀಳರಿಮೆ ಕಾಡುತ್ತಾ ಇದೆ. ಇದನ್ನು ತಪ್ಪು ಅಂತ ಯೋಚನೆ ಮಾಡಬೇಕಿಲ್ಲ.ಈ ತುಡಿತ / ಕುದಿತ ಇದ್ದರೇನೆ ಜನ ಮುಂದುವರಿಯುವುದಕ್ಕೆ ಯತ್ನ ಮಾಡುತ್ತಾರೆ. ಈ ಕೀಳರಿಮೆಯ ಮೂಲ ಭಯ.

  • ನೆರೆ ರಾಜ್ಯಗಳಿಗಿಂತ ನಾವು ಬಡವರಾದರೆ?
  • ಹೆಚ್ಚು ಅವಿದ್ಯಾವಂತರಾದರೆ?
  • ನಮ್ಮ ನೆಲನೀರುಗಳ ಒಡೆತನ ಕಳೆದು ಕೊಂಡರೆ?
  • ನಮ್ಮ ಸಿನಿಮಾಗಳು ಕಳಪೆಯಾದರೆ? ನಮ್ಮನ್ನು ದಿಲ್ಲಿಯಲ್ಲಿ ಕಡೆಗಣಿಸಿದರೆ?
  • ನಮ್ಮತನವೇ ಕಳೆದುಕೊಂಡು ಮೂಲೆಗುಂಪಾದರೆ?"

ಈ ಎಲ್ಲಾ ಪ್ರಶ್ನೆಗಳು ನಾಡಿನಲ್ಲಿರುವ ಕನ್ನಡಿಗರನ್ನು ಕಾಡಿದರೆ ಕೊನೆಯ ಪ್ರಶ್ನೆ ಹೊರನಾಡಿನಲ್ಲಿರುವ ಕನ್ನಡಿಗರಿಗೆ ಹೆಚ್ಚು ದಣಿಸುತ್ತದೆ.

೨) ನನಗೆ ಬರಗೂರು ರಾಮಚಂದ್ರಪ್ಪ ಒಂದು ಸಂದರ್ಶನದಲ್ಲಿ ಹೇಳಿದ ಮಾತು ನೆನಪಿಗೆ ಬರುತ್ತದೆ.
"ಕನ್ನಡ ಬೆಳೆಯಬೇಕಾದರೆ ಕನ್ನಡಿಗ ಬೆಳೆಯಬೇಕು. ಕನ್ನಡ ಉಳಿಯಬೇಕಾದರೆ ಕನ್ನಡಿಗನ ಬಾಳು ಹಸನಾಗಬೇಕು."
ಇದು ನಿಜವಾಗಿ ಎಲ್ಲರೂ ಒಪ್ಪುವಂತ ಸಂಗತಿ. ಈ ಅಡಿಪಾಯದ ಮೇಲೆ ನಾವು ೨೦೦೦+ ಇಸವಿಯ ಕನ್ನಡದ ಕಟ್ಟಡ ಕಟ್ಟಬೇಕು. ಸರಳವಾಗಿ ಹೇಳಬೇಕೆಂದರೆ,ಈ ಕೆಳಗಿರುವ "ಬೇಕು"ಗಳ ಪಟ್ಟಿ

  • ಕನ್ನಡಿಗರಲ್ಲಿ ಬಡತನ ಕಡಿಮೆಯಾಗಬೇಕು.ನಮ್ಮ ನಾಡಿನಲ್ಲಿ ಕೆಲಸ ಸಿಗಬೇಕು.
  • ಕನ್ನಡಿಗರೆಲ್ಲಾ ಅಕ್ಷರ ಕಲಿತು ಪತ್ರಿಕೆ (ಕೊಂಡು )ಓದಬೇಕು. ತಂತ್ರಜ್ಞಾನ ಕಲಿಕೆಯಲ್ಲಿ ಕೂಡ ನಾವು ಮುಂದಿರಬೇಕು.
  • ನಮ್ಮ ನೆಲನೀರುಗಳು ನಮ್ಮ ಕೈಯಲ್ಲೇ ಇರಬೇಕು. ಅಥವಾ ನಾವು ಎಲ್ಲರ ತರಹ ನೆರೆರಾಜ್ಯಗಳಲ್ಲಿ ನಮ್ಮ ಹಣಕಾಸಿನ ಬಲದ ಅಚ್ಚೊತ್ತಬೇಕು.
  • ನಮ್ಮ ಸಾಹಿತ್ಯ ,ಕಲೆ, ಸಿನಿಮಾಗಳು ಬೇರೆ ಜನ ಕೂಡ ಮೆಚ್ಚು ವಂತಿರಬೇಕು. ನಮ್ಮ ದನಿ ದಿಲ್ಲಿಯಲ್ಲಿ (ಆದರೆ ನ್ಯೂಯಾರ್ಕಿನಲ್ಲಿ) ಗಟ್ಟಿಯಾಗಿ ಕೇಳೆಬೇಕು.
  • ಎಲ್ಲಾ ಕನ್ನಡಿಗರಲ್ಲಿ ಎಲ್ಲೇ ಇದ್ದರೂ ಕನ್ಡಡದ ಬಗ್ಗೆ ಹೆಮ್ಮೆ , ಒಲುಮೆ ಇರಬೇಕು.

ಈ ರೀತಿ ನೋಡಿದಾಗ ಸಂಸ್ಕೃತ -ಕನ್ನಡ ವಿಷಯಕ್ಕೆ ಒಂದು ಸರಿಯಾದ ನೆಲೆಗಟ್ಟು ಸಿಗುತ್ತದೆ. ನನ್ನ ಮಟ್ಟಿಗೆ ಹೇಳುವುದಾದರೆ ಕೇವಲ ಕಿಟ್ಟೆಲ್, ಕಾಲ್ಡವೆಲ್ಲ್ ಮತ್ತು ಪಾಣಿನಿಯರನ್ನು ಬಿಟ್ಟು ನಮ್ಮ ಶಾಲೆಗಳಲ್ಲಿ ಓದುವ ವೆಂಕ ,ನಾಣಿ, ಸೀನರ ಬಗ್ಗೆ ಮಾತಾಡಬೇಕು. ಕನ್ಣಡವನ್ನು ಪ್ರೈಮರಿ ಮತ್ತು ಹೈಸ್ಕೂಲುಗಳಲ್ಲಿ ನಮ್ಮ ಹುಡುಗರಿಗೆ ಹೇಗೆ ಕಲಿಸಬೇಕು ಅನ್ನುವುದೇ ನಮ್ಮ ಮುಂದಿರುವ ಸಮಸ್ಯೆ.ಅಷ್ಟೇ ಅಲ್ಲ, ಕನ್ನಡದ ಮೂಲಕ ನಮ್ಮ ಜನರನ್ನು ಬೇರೆ ವಿದ್ಯೆ ಕಲಿಸುವ ರೀತಿ ಕೂಡ ಮುಖ್ಯ . ಇವೆರಡು ಆದರೆ ಉಳಿದವೆಲ್ಲಾ ತನ್ನಂತಾನೆ ಸರಿ ಹೋಗುತ್ತವೆ. ಇದನ್ನು ಕೇವಲ ಭಾಷಾ ಶಾಸ್ತ್ರ ಅಥವಾ ವ್ಯಾಕರಣದ ಮಟ್ಟಿಗೆ ನಿಲ್ಲಿಸಬಾರದು. ಈ ನಿಟ್ಟಿನಲ್ಲಿ ನನಗೆ ಹೊಳೆದ ಸಂಗತಿಗಳು.

೧) ಕನ್ನಡದಲ್ಲಿ ಎಷ್ಟು ಸಂಸ್ಕೃತ ಬಳಸಬೇಕು ? ಇದನ್ನ ಅವರವರಿಗೆ ಬಿಡಿ. ಆಡು ನುಡಿಗೆ ದೂರಾದ "ಸಂಸ್ಕೃತಭೂಯಿಷ್ಟ"ವಾದ ಬರಹ ಸಹಜ ಸಾವನ್ನು ಅಪ್ಪುತ್ತದೆ. ನಾವು ನಮ್ಮ ಕೈಯಲ್ಲಿ ನೆತ್ತರು ಹರಿಸುವುದು ಬೇಡ.ನಾವು ತಿಳಿಗನ್ನಡದಲ್ಲಿ ಬರೆದು ಮೇಲ್ಪಂಕ್ತಿ ಹಾಕಿದರಾಯಿತು
೨) ವರ್ಣಮಾಲೆಯ/ವ್ಯಾಕರಣ ಸರಳೀಕರಣ - ಇದು ಒಪ್ಪತಕ್ಕ ಸಂಗತಿ. ಪುಟಾಣಿ ಮಕ್ಕಳಿಗೆ ಮತ್ತು ಕನ್ನಡೇತರರಿಗೆ ಸರಳ ವರ್ಣಮಾಲೆ ಕಲಿಸೋಣ. ನಿತ್ಯ ಬಳಕೆಯಲ್ಲಿರುವ ಎಲ್ಲ ಪದಗಳಿಗೂ ಸರಳ ವರ್ಣಮಾಲೆಯಲ್ಲೇ ಬರೆಯುವಂತ ಉಚ್ಚಾರಣೆ("alternate spelling") ಉಪಯೋಗಿಸೋಣ. ಇದನ್ನು ಒಪ್ಪದವರಿಗೆ ಆಯ್ಕೆ ಇದ್ದೇ ಇದೆ. ಆದರೆ ಚಿಕ್ಕ ಮಕ್ಕಳ ಹೊತ್ತಗೆಗಳಲ್ಲಿ ಸರಳ ಕನ್ನಡವೇ ಬಳಕೆಯಾಗಲಿ. ೫ನೇ ತರಗತಿಯಿಂದ ಪೂರ್ತಿ ವರ್ಣಮಾಲೆಯ ಪಾಠವಾಗಲಿ. ಇದು ೬/೭ ಆದರೂ ಚಿಂತೆಯಿಲ್ಲ.
೩) ಪಾರಿಭಾಷಿಕ (technical) ಪದಗಳು- ಆದಷ್ಟು ತಿಳಿಗನ್ನಡ ಇಲ್ಲವೆ ಈಗಾಗಲೆ ಬಳಕೆಯಲ್ಲಿರುವ ಸರಳ ಸಂಸ್ಕೃತ ಪದಗಳನ್ನು ಉಪಯೋಗವಾಗಲಿ.ಅರ್ಥವಾಗದ ಮೂಲ ದ್ರಾವಿಡ (ಇಲ್ಲವೇ ತಮಿಳು) ಒರೆಗಳು ಸಂಸ್ಕೃತದಷ್ಟೇ ದೊರ ಇಡೋಣ.ಬೇಕಿದ್ದರೆ ಇಂಗ್ಲೀಶು ಪದವನ್ನೇ ಕನ್ನಡ ನಾಲಿಗೆಗೆ ಹೊಂದುವಂತೆ ಮಾರ್ಪಡಿಸೋಣ.ಇವುಗಳಲ್ಲಿ ನಮ್ಮ ದೇಶದ ಎಲ್ಲ ನುಡಿಗಳು ಒಂದೇ ನೀತಿ ಅನುಸರಿಸಿದರೆ ಒಳಿತು.
೪) ಹಳ್ಳಿ ಇಲ್ಲವೆ ಕನ್ನಡ ಶಾಲೆಗಳಿಂದ ಬಂದ ಹುಡುಗರು ಕಾಲೇಜಿಗೆ ಬಂದಾಗ ಕೀಳರಿಮೆಯಾಗುವುದು ಅವರ ಕನ್ನಡದಲ್ಲಿರುವ ಸಂಸ್ಕೃತ ಕೊರತೆಯಿಂದಲ್ಲ . ಅವರ ಇಂಗ್ಲೀಶಿನಿಂದ. ನನ್ನ ಜೊತೆಯಲ್ಲಿ ಓದುತಿದ್ದ ಅನೇಕ ಮಂದಿಗೆ ಈ ರೀತಿ ಆದದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಸುಮಾರು ಜನ ಓದಿಗೆ ಶರಣು ಹೊಡೆದರು. ಕಾಲೇಜಿನಲ್ಲಿ ಪರೀಕ್ಷೆಯಲ್ಲಿ ಉತ್ತರಗಳನ್ನು ಬರೆಯಲು ಅರೆಕನ್ನಡ -ಅರೆಇಂಗ್ಲೀಶು ಬಳಸಲು ಅನುವು ಮಾಡಿಕೊಟ್ಟರೆ ಇವರೆಲ್ಲ ಮುನ್ನೆಡೆಯುತ್ತಾರೆ. ಕ್ರಮೇಣ ಕೆಲಸಕ್ಕೆ ಬೇಕಾದಷ್ಟು ಇಂಗ್ಲೀಶು ಕಲಿಯುತ್ತಾರೆ.

ಇನ್ನು ಕನ್ನಡಿಗರೇ ಆದ ಸಂಸ್ಕೃತ ಪ್ರೇಮಿಗಳು ಯಾಕೆ ಸುಮ್ಮನೆ ಸಿಟ್ಟಾಗುತ್ತಾರೆ? ಇಲ್ಲಿ ಬಿಡಿಸಿ ಹೇಳದ ಒಳಮನಸ್ಸಿನ ಗುಟ್ಟುಗಳಿವೆ. ಕನ್ನಡಿಗರು ನಮ್ಮ ದೇಶದಲ್ಲಿ ಇರುವ ಬಹಳ "ದೇಶಭಕ್ತ"( nationalist) ಜನ. ಕನ್ನಡಿಗರ ಜಾಯಮಾನಕ್ಕೆ ಪ್ರಾದೇಶಿಕತೆ ಒಗ್ಗಲ್ಲ. ಅಷ್ಟೇ ಅಲ್ಲ,ನಮ್ಮ ಇಡೀ ಧಾರ್ಮಿಕ(ಹಿಂದು) ಪರಂಪರೆಯನ್ನು ತುಂಬಾ ಗೌರವಿಸುತ್ತಾರೆ. ಇಲ್ಲಿ ಯಾವತ್ತೂ ಜಾತಿ/ ನುಡಿ ಅಡ್ಡ ಬಂದಿಲ್ಲ. ಉದಾಹರೆಣೆಗೆ ಶ್ರೀವೈಷ್ಣವ ಗುಡಿಗಳಲ್ಲಿ ತಿರುಪ್ಪಾವೆ ಹಾಡಿದರೆ ಯಾರು ತಲೆ ಬಿಸಿ ಮಾಡಿಕೊಳ್ಳುವುದಿಲ್ಲ. ಲಿಂಗಾಯತ / ಒಕ್ಕಲಿಗ ಮಠಗಳೂ ಕೊಡ ವೇದಾಧ್ಯಯನವನ್ನು ಪೋಷಿಸುತ್ತವೆ.ಇಲ್ಲಿ ಜಾತಿಗಳಲ್ಲಿ ಸ್ಫರ್ಧೆ ಇದ್ದರೂ ಕೊಚ್ಚಿಹಾಕುವಂತ ಆಕ್ರೋಶ ಇಲ್ಲ. ನಮ್ಮ ನೆರೆ ರಾಜ್ಯದಲ್ಲಿ ಇರುವಂತ ರಾಜಕೀಯ "ದ್ರಾವಿಡ ಪ್ರಜ್ಞೆ " ನಮಗೆ ಇಲ್ಲ. ನಾವೇನೆ ಹೇಳಿದರೂ ಸಂಸ್ಕೃತ ತನ್ನದೇ ರೀತಿಯಲ್ಲಿ ಪ್ರಾದೇಶಿಕ ಮಿತಿಗಳನ್ನು ಮೀರಿ ನಿಂತಿದೆ. ಸಂಸ್ಕೃತ ಸಾಹಿತ್ಯಕ್ಕೆ ಮತ್ತು ಧಾರ್ಮಿಕ(ಹಿಂದು) ಪರಂಪರೆಗೆ ಉತ್ತರದವರಷ್ಟೆ ನಮ್ಮ ಕೊಡುಗೆ ಇದೆ. ಶಂಕರ, ಮಧ್ವ ಮತ್ತು ರಾಮಾನುಜ ಮೂವರು ಕೆಲಸ ಮಾಡಿದ ಜಾಗ ನಮ್ಮ ನಾಡು.ಆದ್ದರಿಂದ ಸಂಸ್ಕೃತವು ನಮ್ಮದೇ ಎನ್ನುವ ಅನಿಸಿಕೆ ಇದೆ.

"ಸಂಸ್ಕೃತ ಬೇಡ"ಎಂದ ಒಡನೆ ಹಲವರಿಗೆ ಕೇಳುವುದು ಜಾತಿ/ಧರ್ಮ/ ಪ್ರಾದೇಶಿಕ ರಾಜಕೀಯದ ಕೂಗು. ಇದು ಪೂರ್ತಿ ಕಾರಣವಿಲ್ಲದೆಯೂ ಇಲ್ಲ. ಭಾಷೆ-ರಾಷ್ಟ್ರಪ್ರಜ್ಞೆ-ಧರ್ಮ ಎಲ್ಲವೂ ಕೆಲವು ಸಲ ಬಿಡಿಸಲಾಗದ ರೀತಿಯಲ್ಲಿ ತಳಕು ಹಾಕಿಕೊಂಡಿರುತ್ತವೆ. ಅದಕ್ಕೆ ಪರಿಹಾರ ಇದ್ದೇ ಇದೆ. "ಕನ್ನಡ ಬೇಕು" ಅನ್ನಿ. ನಿಮ್ಮನ್ನು ಯಾರು ತಡೆಯುವುದಿಲ್ಲ. ವಚನಕಾರರು ಯಾವ ಋಷಿ ಗಳಿಗೂ ಕಮ್ಮಿ ಇಲ್ಲ ಅನ್ನಿ. ಯಾರೂ ಇಲ್ಲ ಎನ್ನುವುದಿಲ್ಲ. ಕನ್ನಡ ಮುಂದೆ ಹೋಗಬೇಕಾದ ವೇಳೆಯಲ್ಲಿ ಈ ಚರ್ಚೆ ಒಳ್ಳೆಯದೆ. ತಪ್ಪು ದಾರಿಯಲ್ಲಿ ಹೋಗಬಾರದು . ಏನಂತೀರಿ?