ಸಂಸ
ಖ್ಯಾತ ನಾಟಕಕಾರರಾಗಿದ್ದ ‘ಸಂಸ' ಅವರ ಜೀವನಾಧಾರಿತ ಕಾದಂಬರಿ ಇದು. ಈ ಕಾದಂಬರಿಗೆ ಖ್ಯಾತ ಬರಹಗಾರ ನವದೆಹಲಿಯ ಪ್ರೇಮಶೇಖರ ಇವರು ಮುನ್ನುಡಿಯನ್ನು ಬರೆದಿದ್ದಾರೆ. ಅವರ ಪ್ರಕಾರ ಈ ಕೃತಿ ‘ಯಶಸ್ವೀ ನಾಟಕಕಾರನ ಬದುಕೇ ಯಶಸ್ವೀ ನಾಟಕವಾಗಬಹುದಾದ ಸಾಧ್ಯತೆಯನ್ನು ಕಾಣಿಸುವ ಕಾದಂಬರಿ' ಎಂಬ ಸರ್ಟಿಫಿಕೇಟ್ ನೀಡಿದ್ದಾರೆ. ಅವರು ಹೀಗೆ ಬರೆಯುತ್ತಾರೆ “ಕಳೆದ ಶತಮಾನದ ಕನ್ನಡ ಸಾಂಸ್ಕೃತಿಕ ಲೋಕ ಕಂಡ ಅತ್ಯಂತ ಪ್ರತಿಭಾನ್ವಿತ, ಸ್ವಾಭಿಮಾನಿ ಹಾಗೂ ತನ್ನ ರಹಸ್ಯಮಯ ಜೀವನಶೈಲಿಯಿಂದ ಬದುಕಿದ್ದಾಗಲೇ ದಂತಕತೆಯಾಗಿಹೋದ ವಿಶಿಷ್ಟ ನಾಟಕಕಾರ ಸಂಸರ ಬದುಕನ್ನು ಚಿತ್ರಿಸುವ 'ಸಂಸ' ಕಾದಂಬರಿ ಒಂದು ಸ್ತುತ್ಯಾರ್ಹ ಪ್ರಯತ್ನ. ಕಾದಂಬರಿಕಾರರಾದ ಪ್ರೊ.ಮಲೆಯೂರು ಗುರುಸ್ವಾಮಿಯವರು ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿರುವ ಹಿರಿಯ ವಿಧ್ವಾಂಸರು. ಆಡುಮಾತಿನಲ್ಲಿ ಹೊನ್ನೊಳೆ ಎನಿಸಿಕೊಳ್ಳುವ ಹೊನ್ನು ಹೊಳೆಯ ಪಶ್ಚಿಮದ ಅಗರಂ ಗ್ರಾಮದ, ನಿಜವಾದ ಅರ್ಥದ ಪಂಡಿತ ಪುತ್ರ ‘ಸಾಮಿ' ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ನಾಣ್ಣುಡಿಯಂತೆ, ನದಿಯ ಪೂರ್ವದ ಕೊಳ್ಳೇಗಾಲ ಪಟ್ಟಣದಲ್ಲಿ ಶಾಲಾಬಾಲಕನಾಗಿದ್ದಾಗಲೇ ತನ್ನ ನೆಲದ ಗೌರವಕ್ಕೆ ಬಂದ ಅಪಮಾನಕರ ಮಾತನ್ನು ಸಹಿಸದೇ ತೋರಿಸಿದ ಸ್ವಾಭಿಮಾನ, ಅದರ ಬೆನ್ನಹಿಂದೆಯೇ ಕೊಳ್ಳೇಗಾಲದ ‘ಲ್ಯಾಂಡ್ ಮಾರ್ಕ್' ಮರಡಿಗುಡ್ಡದ ಹೆಸರಿನ ಮೂಲದ ಬಗ್ಗೆ ಹಿರಿಯರಿಗೂ ಗೊತ್ತಿಲ್ಲದ ಮಾಹಿತಿ ಹೇಳಿ ತನ್ನ ಜ್ಞಾನಾಶಕ್ತಿಯ ಪರಿಚಯ ಮಾಡಿಕೊಡುವ ಪ್ರಸಂಗಗಳಿಂದ ತೆರೆದುಕೊಳ್ಳುವ ಕಾದಂಬರಿ ತನ್ನೀ ಆರಂಭದಿಂದಲೇ ಗಮನ ಸೆಳೆಯುತ್ತದೆ ಮತ್ತು ಬಾಲಕ ‘ಸಾಮಿ' ನಾಟಕಕಾರ ‘ಸಂಸ'ರಾಗಿ ಅವತಾರವೆತ್ತತೊಡಗಿದಂತೆ ಕಾಣುವ ಬದುಕು -ಬವಣೆ, ಅಲೆದಾಟ-(ಮಾತಿನ) ಬಡಿದಾಟ, ಬರಹ-ಕಲಹಗಳನ್ನು ಆಕರ್ಷಕ ಅಷ್ಟೇ ಕೌತುಕಮಯ ಶೈಲಿಯಲ್ಲಿ ಬಿಡಿಸಿಡುತ್ತಾ ಹೋಗಿ ನಾಡು ಮರೆತಿದ್ದ ಭವ್ಯ ಸಾಂಸ್ಕೃತಿಕ ಅಧ್ಯಾಯವೊಂದನ್ನು ನಮ್ಮ ಮುಂದೆ ಅನಾವರಣಗೊಳಿಸುತ್ತದೆ.”
ಲೇಖಕರಾದ ಪ್ರೊ.ಮಲೆಯೂರು ಗುರುಸ್ವಾಮಿ ಇವರು ತಮ್ಮ ಮೊದಲ ಮಾತಿನಲ್ಲಿ ಹೀಗೆ ಹೇಳುತ್ತಾರೆ “ ಸಂಸರಂತಹವರ ಬಗ್ಗೆ ಕೃತಿ ರಚನೆ ಮಾಡುವುದು ಎಂದರೆ, ಅದೊಂದು ಸವಾಲು. ಇಂತಹವರ ಬಗ್ಗೆ ಬರೆಯುವಾಗ ಲೇಖಕನ ಲೇಖನಿಯ ಕುದುರೆ ಓಡಲು ಬಹುದೊಡ್ಡ ಮೈದಾನವಿರುತ್ತದೆ. ಆದರೆ ಕುದುರೆಗೆ ಕಡಿವಾಣವೂ ಇರಬೇಕು ತಾನೇ! ಬರಹಗಾರ ತನಗೆ ಇದೆ ಎಂದುಕೊಳ್ಳುವ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಳ್ಳಬಾರದು.
ಸಂಸರ ಬದುಕನ್ನು ಮನಃಶಾಸ್ತ್ರದ ಹಿನ್ನಲೆಯಲ್ಲಿ ನೋಡಬಹುದಾದ ಅನೇಕ ಸಾಧ್ಯತೆಗಳೂ ಇವೆ. ಈ ಹಿನ್ನಲೆಯಲ್ಲಿ ನಾನು ಅನೇಕರೊಡನೆ ಚರ್ಚೆಯನ್ನು ಮಾಡಿದೆ. ಆದರೆ ಎಲ್ಲೊ ಒಂದು ಕಡೆ ಅವುಗಳು ಬರಿಯ ಊಹೆಗಳಾಗಿ ಬಿಡುತ್ತವೆಯೇನೋ ಎನಿಸಿತು. ಆ ದೃಷ್ಟಿಯಿಂದ ನ.ಸುಬ್ರಹ್ಮಣ್ಯಂನವರ ‘ಸಂಸ ಸ್ಮರಣೆ' ಬಹಳ ವಸ್ತುನಿಷ್ಟವಾದ ಕೃತಿಯಾಗಿ ಕಂಡು ಬಂತು. ಸಂಸರು ತನ್ನ ಚಿಕ್ಕಪ್ಪ ಎನ್ನುವ ಯಾವ ಒಲವನ್ನೂ ಇಟ್ಟುಕೊಳ್ಳದೆ ಬಹಳ ವಸ್ತುನಿಷ್ಟವಾಗಿ ಬರೆದಿದ್ದಾರೆ.
ಸಂಸರ ಬಗ್ಗೆ ಕೃತಿರಚನೆ ಮಾಡುವ ಸಂದರ್ಭದಲ್ಲಿ ಅವರು ಮಾಡಿದ ಕ್ಷೇತ್ರ ಕಾರ್ಯ, ಅನೇಕರೊಡನೆ ನಡೆಸಿದ ಮಾತುಕತೆಯ ಸಂದರ್ಭದಲ್ಲಿ ಕೇಳಿಬಂದ ಎಲ್ಲ ಮಾತುಗಳನ್ನೂ ಮುಚ್ಚುಮರೆಯಿಲ್ಲದೆ ದಾಖಲಿಸಿದ್ದಾರೆ. ನಾನೂ ಸಹ ಅವರನ್ನೇ ಅನುಸರಿಸಿ ಈ ಕಾದಂಬರಿಯನ್ನು ರೂಪಿಸಿದ್ದೇನೆ. ಉಳಿದಂತೆ ಗ್ರಂಥಋಣದಲ್ಲಿ ಪಟ್ಟಿ ಮಾಡಿರುವ ಎಲ್ಲ ಕೃತಿಗಳಿಂದಲೂ ಅನೇಕ ಅಂಶಗಳನ್ನು ತೆಗೆದುಕೊಂಡಿದ್ದೇನೆ ಎನ್ನುವುದನ್ನು ವಿನಮ್ರನಾಗಿ ಹೇಳಬಯಸುತ್ತೇನೆ.”
ಸಂಸ ಎಂಬ ನಾಟಕಕಾರನ ಬದುಕು ಬಹಳ ವಿಕ್ಷಿಪ್ತ, ನಿಗೂಢ. ಮಾನಸಿಕ ತೊಳಲಾಟದಲ್ಲಿ ಬಳಲಿ ಕೊನೆಗೆ ಆತ್ಮಹತ್ಯೆ ಮಾಡಿಕೊಂಡ ಈ ಪ್ರತಿಭಾವಂತ ನಾಟಕಕಾರನ ಉಳಿದ ಕೃತಿಗಳು ಕೆಲವೇ ಕೆಲವು. ಈ ಕಾದಂಬರಿಯು ಸಂಸರ ಜೀವನದ ಹಲವಾರು ಮಜಲುಗಳನ್ನು ಬಹಳ ಸೊಗಸಾಗಿ ಬಿಚ್ಚಿಡುತ್ತಾ ಹೋಗುತ್ತದೆ. ಸಾಮಿ ವೆಂಕಟಾದ್ರಿ ಅಯ್ಯರ್ ಎಂಬ ವ್ಯಕ್ತಿ ‘ಸಂಸ' ಆಗಿ ಬದಲಾದ ಕಥೆಯೂ ಬಹಳ ರೋಚಕವಾಗಿದೆ. ಸಾಯುವ ಮುನ್ನ ಸಂಸರು ಬರೆದ ಮರಣ ಪತ್ರವನ್ನೂ ಪುಸ್ತಕದ ಕೊನೆಗೆ ನೀಡಲಾಗಿದೆ. ಸುಮಾರು ೩೫೦ ಪುಟಗಳ ಸುದೀರ್ಘ ಕಾದಂಬರಿಯು ಓದುತ್ತಾ ಓದುತ್ತಾ ಮುಂದೇನು ಎಂದು ಓದಿಸಿಕೊಂಡು ಹೋಗುತ್ತಲೇ ಇರುತ್ತದೆ. ಈ ಕೃತಿಯನ್ನು ಲೇಖಕರು ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ, ಹೊಂಡರಬಾಳು ಲಿಂಗರಾಜೇ ಅರಸು, ನಾ.ದೇ.ನರಸಿಂಹಮೂರ್ತಿ ನಾಗವಳ್ಳಿ, ಎಸ್.ಪಿ. ವರದರಾಜ್, ಮಲ್ಲಿಕ್, ಸುಂದರಕೃಷ್ಣ ಅರಸ್, ಬಸವರಾಜ್ ಕೆಸ್ತೂರು, ಹ.ಸೂ. ರಾಜಶೇಖರ್ ಇವರಿಗೆ ಅರ್ಪಿಸಿದ್ದಾರೆ.