ಸಂಹಾರ -ಕನ್ನಡ ನಾಟಕ

ಸಂಹಾರ -ಕನ್ನಡ ನಾಟಕ

ಪುಸ್ತಕದ ಲೇಖಕ/ಕವಿಯ ಹೆಸರು
ಮಲಯಾಳ ಮೂಲ:ಕೆ.ಟಿ.ಮುಹಮ್ಮದ್, ಕನ್ನಡಕ್ಕೆ: ಕಾಸರಗೋಡು ಚಿನ್ನಾ
ಪ್ರಕಾಶಕರು
ಪದ್ಮಗಿರಿ ಪ್ರಕಾಶನ, ಕಾಸರಗೋಡು
ಪುಸ್ತಕದ ಬೆಲೆ
ರೂ.೭೫.೦೦, ಮುದ್ರಣ: ೨೦೧೦

ಖ್ಯಾತ ಮಲಯಾಳಂ ನಾಟಕಕಾರರಾದ ದಿ.ಕೆ.ಟಿ.ಮುಹಮ್ಮದ್ ಅವರ ‘ಸಂಹಾರಂ’ ನಾಟಕವನ್ನು ಕನ್ನಡಕ್ಕೆ ತಂದಿದ್ದಾರೆ ಖ್ಯಾತ ರಂಗಕರ್ಮಿ, ಚಿತ್ರ ನಟರಾದ ಕಾಸರಗೋಡು ಚಿನ್ನಾ ಅವರು. ಈ ಪುಟ್ಟ ನಾಟಕದ ಪುಸ್ತಕಕ್ಕೆ ಬೆನ್ನುಡಿ ಬರೆದಿದ್ದಾರೆ ನಟ-ನಿರ್ದೇಶಕರಾದ ಟಿ.ಎಸ್. ನಾಗಾಭರಣ ಇವರು. ಅವರ ಪ್ರಕಾರ ‘ನಟ, ನಿರ್ದೇಶಕ, ಅನುವಾದಕ ಕಾಸರಗೋಡು ಚಿನ್ನಾ ಕನ್ನಡ, ಕೊಂಕಣಿ, ತುಳು ಹಾಗೂ ಮಲೆಯಾಳಂ ಭಾಷೆಗಳಲ್ಲಿ ಪರಿಶ್ರಮವಿರುವವರು. ಹೀಗಾಗಿ ಬಳಸಿರುವ ಪದಗುಚ್ಚಗಳು, ನುಡಿಕಟ್ಟುಗಳು ಪ್ರಸ್ತುತ ಮತ್ತು ಪರಿಣಾಮಕಾರಿಯಾಗಿಯೇ ಇವೆ. ಚಿನ್ನಾರ ಹಾಸ್ಯ ಪ್ರಜ್ಞೆ ಇಲ್ಲಿ ಸಾಕಷ್ಟು ಪ್ರಯೋಜನಕಾರಿಯಾಗಿದೆ. ನಾಟಕದ ಸಾರ್ಥಕತೆ ಅದರ ಪ್ರದರ್ಶನ ಮತ್ತು ಪ್ರಯೋಗದಲ್ಲಿದೆ ಎಂದು ನಂಬಿರುವ ನನಗೆ, ಈ ನಾಟಕ ಹಲವು ಸಾಧ್ಯತೆಗಳನ್ನು ತೆರೆದಿಡುತ್ತದೆ ಎಂದರೆ ತಪ್ಪಲ್ಲ. ಇಂತಹ ಉತ್ತಮ ಕೃತಿಗೆ ಕನ್ನಡ ರಂಗಭೂಮಿ ಸದಾ ಸ್ಪಂದಿಸಲಿ ಎಂದು ಆಶಿಸುತ್ತೇನೆ.’

ತಮ್ಮ ‘ಅಂತರಾಳ'ದಲ್ಲಿ ಲೇಖಕ ಕಾಸರಗೋಡು ಚಿನ್ನಾ ಅವರು ಈ ನಾಟಕವನ್ನು ಭಾಷಾಂತರಿಸಲು ಅನುಮತಿ ನೀಡಿದ ದಿ.ಕೆ.ಟಿ.ಮುಹಮ್ಮದ್ ಅವರ ಪುತ್ರ ಕೆ.ಟಿ.ಜತಿನ್ ಮುಹಮ್ಮದ್ ಅವರಿಗೆ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ. ಡಾ.ವಿಜಯಾ ಅವರು ನಾಟಕದ ಬಗ್ಗೆ ತಮ್ಮ ‘ನಾಲ್ಕು ಮಾತು' ಬರೆದಿದ್ದಾರೆ. ಅದರಲ್ಲಿ ಅವರು ನಾಟಕದ ಕಥಾ ವಸ್ತುವಿನ ಬಗ್ಗೆ ಸೊಗಸಾಗಿ ಪರಿಚಯ ಮಾಡಿಕೊಡುತ್ತಾರೆ. ಅವರು ಬರೆಯುತ್ತಾರೆ ‘ ಎರಡು ಅಂಕಗಳ ಈ ನಾಟಕದಲ್ಲಿ ಶ್ರೀಮಂತನ ಮನೆಯ ಔತಣಕೂಟದಲ್ಲಿ ಹೋಗಿ ಅನ್ನ ಕೇಳಿದ ಬಡವರ ಮೇಲೆ ಗೋಲಿಬಾರ್ ಆಗಿದೆ. ಗಲಭೆಯಲ್ಲಿ ಶ್ರೀಮಂತನೂ ಕೊಲೆಯಾಗಿದ್ದಾನೆ. ಸತ್ತವರ ಸಂಖ್ಯೆಯನ್ನು ಮುಚ್ಚಿಡಲಾಗಿದೆ. ಮುಖ್ಯವಾಗಿ ಅಸಮತೋಲನವಿರುವ ‘ಸರ್ಕಾರದ ತಕ್ಕಡಿಯನ್ನು ಬದಲಿಸುವ' ಅಧಿಕಾರವಿಲ್ಲದ ನ್ಯಾಯಾಧೀಶನೆದುರು ಸಾಕ್ಷಿಗಳು ಮಾತನಾಡುತ್ತಿವೆ. ಕೋರ್ಟುಗಳು ಸರ್ಕಾರದ ಮುಖವಾಡವನ್ನು ರಕ್ಷಿಸಲೆಂದೇ ಇರುತ್ತವೆ. ಅದೊಂದು ಥಿಯೇಟರ್ ನಲ್ಲಿ ನಡೆಯೋ ಆಟ. ಇಲ್ಲಿಯ ಸತ್ಯಕ್ಕೆ ಹಲವು ಮುಖಗಳು. …

‘.... ಗೋಲಿಬಾರ್ ನಲ್ಲಿ ಸತ್ತವರ ಜೀವಗಳು "ಪ್ರೇತ"ಗಳಾಗಿ ಎದ್ದು ಬಂದಿವೆ. ಅವು ಕೋರ್ಟನ್ನು ವಶಕ್ಕೆ ತೆಗೆದುಕೊಳ್ಳುತ್ತಿವೆ. ಎರಡನೇ ಅಂಕದ ಹೊತ್ತಿಗೆ ಕೋರ್ಟನ್ನು ಸಂಪೂರ್ಣವಾಗಿ ವಶಪಡಿಸಿಕೊಂಡ “ಪ್ರೇತ"ಗಳು ನಡೆಸುವ ವಿಚಾರಣೆ ಏಕಪಕ್ಷೀಯವಲ್ಲ. ಇಲ್ಲಿ ಶ್ರೀಮಂತ ಶಂಕರನ್ ಕುಟ್ಟಿಯ ಪ್ರೇತಕ್ಕೆ ಸಾಕ್ಷಿ ಹೇಳಲು ಅವಕಾಶವಿದೆ. ಆದರೆ ಆತ ಸುಳ್ಳನ್ನು ಸತ್ಯವೆಂದು ಸಾಧಿಸಲು ಹೊರಟಾಗ ಅವನ ಮಾತಿನಲ್ಲೇ ಅವನನ್ನು ಕಟ್ಟಿಹಾಕಿ ಸತ್ಯ ಹೊರಡಿಸುವ ಜಾಣ್ಮೆ ಇದೆ. ಆ ಸತ್ತು ಎದ್ದು ಬಂದವರಿಗೆ ಜಡ್ಜ್ ಸ್ಥಾನದಲ್ಲಿ ಕೂತ ಪ್ರೇತ ಶಂಕುವಿಗೆ “ಸ್ವಾತಂತ್ರ್ಯ ಸಂಗ್ರಾಮದಲ್ಲಿ ಇಸ್ತ್ರಿ ಹಾಕಿದ ಬಟ್ಟೆ ತೊಟ್ಟು ಜೈಲಿನಲ್ಲಿ ಮಲಗಿದವನಲ್ಲ ನಾನು, ಬ್ರಿಟೀಷರ ಹೊಡೆತ, ಗುಂಡೇಟುಗಳಿಂದ ಜರ್ಜರಿತನಾದವನು. ಸ್ವಾತಂತ್ರ್ಯ ದೇಶದ ಜನರಿಗಾಗಿ ಇದೆ ಎನ್ನುವುದಾದರೆ ಅದನ್ನು ಅವರಿಗೆಲ್ಲ ಹಂಚಿಕೊಡಿ “ ಎಂದು ಕೇಳುವ ಧೈರ್ಯವಿದೆ.’

ಹೀಗೆಯೇ ನಾಟಕ ಬಹಳ ಕುತೂಹಲಕಾರಿಯಾಗಿ ಮುಂದುವರೆಯುತ್ತದೆ. ರಂಗಸ್ಥಳದಲ್ಲಿ ನೋಡಲು ಇರುವ ಮಜಾವೇ ಬೇರೆ. ಆದರೆ ಓದುವುದಕ್ಕೂ ಈ ಪುಸ್ತಕ ಚೆನ್ನಾಗಿದೆ. ಸುಮಾರು ೯೦ ಪುಟಗಳ ಈ ಪುಸ್ತಕವನ್ನು ಕಾಸರಗೋಡು ಚಿನ್ನಾ ಹವ್ಯಾಸಿ ರಂಗಭೂಮಿಯ ಪಾಠ ಕಲಿಸಿದ ಡಾ।ಪುರುಷೋತ್ತಮ ಪೈಕ ಮತ್ತು ಪ್ರೋ. ವೇಣುಗೋಪಾಲ ಕಾಸರಗೋಡು ಇವರ ನೆನಪಿಗೆ ಅರ್ಪಿಸಿದ್ದಾರೆ.