ಸಕಲ ಜೀವಿಗಳಿಗೆ ಆಧಾರವಾಗಿರುವ ಮಣ್ಣು ಕಲುಷಿತಗೊಳ್ಳುತ್ತಿದೆಯೇ ?

ಸಕಲ ಜೀವಿಗಳಿಗೆ ಆಧಾರವಾಗಿರುವ ಮಣ್ಣು ಕಲುಷಿತಗೊಳ್ಳುತ್ತಿದೆಯೇ ?

ಮಣ್ಣು ಒಂದು ನೈಸರ್ಗಿಕವಾದ ವಸ್ತು. ಇದು ಭೂಮಿಯ ಮೇಲ್ಭಾಗದಲ್ಲಿದ್ದು ಎಲ್ಲಾ ಸಸ್ಯಗಳ ಬೆಳವಣಿಗೆಗೆ ಕಾರಣವಾಗಿದೆ. ಮಣ್ಣು ಖನಿಜಗಳು ಸಾವಯವ ವಸ್ತುಗಳು ಮತ್ತು ಜೈವಿಕ ವಸ್ತುಗಳನ್ನೊಳಗೊಂಡ ಒಂದು ಸಂಕೀರ್ಣ ವ್ಯವಸ್ಥೆ ಎಂದು ಬಕ್‌ಮನ್ ಮತ್ತು ಬ್ರಾಡಿ ವಿವರಿಸಿದ್ದಾರೆ.

ಮಣ್ಣು ಖನಿಜಗಳು, ಸಾವಯವ ವಸ್ತುಗಳು, ಗಾಳಿ ಮತ್ತು ದ್ರವಗಳ ಒಂದು ಮಿಶ್ರಣ ಮತ್ತು ಅಸಂಖ್ಯಾತ ಸೂಕ್ಷ್ಮ ಜೀವಿಗಳನ್ನು ಹೊಂದಿದ್ದು ಭೂಮಿಯ ಮೇಲೆ ಬೇರೆ ಬ್ಭೆರೆ ಜೀವಿಗಳ ಜೀವಕ್ಕೆ ಆಧಾರವಾಗಿದೆ. ಮಣ್ಣು ಸೋಜಿಗಮಯವಾದ ಮತ್ತು ದೈವದತ್ತವಾದ ಪ್ರಕೃತಿಯ ಕೊಡುಗೆಯಾಗಿದ್ದು ಮನುಷ್ಯ ಅದನ್ನು ಸುಮಾರು ೧೦,೦೦೦ ಸಾವಿರ ವರ್ಷಗಳಿಂದಲೂ ಕೃಷಿಗೆ ಬಳಸಿ ಕೊಂಡಿದ್ದಾನೆ. ಫಲವತ್ತಾದ ಮಣ್ಣು ದೇಶದ ಸಂಪತ್ತು. ಆಧುನೀಕರಣ, ಕೈಗಾರಿಕೀಕರಣದಿಂದಾಗಿ ಕೃಷಿ ಭೂಮಿ ಕುಂಠಿತವಾಗುತ್ತಿದೆ. ಅಧಿಕ ಇಳುವರಿಯ ತಳಿಗಳು, ಹೆಚ್ಚಿನ ರಸಗೊಬ್ಬರಗಳ ಬಳಕೆ, ಸೂಕ್ತ ಸಸ್ಯ ಸಂರಕ್ಷಣಾ ಕ್ರಮಗಳಿಂದಾಗಿ ಅಧಿಕ ಇಳುವರಿ ಪಡೆದು ಆಹಾರ ಭದ್ರತೆಯನ್ನು ಸಾಧಿಸಿರುವುದು ಸತ್ಯವಾದುದಾದರೂ ಅತಿಯಾದ ರಸಗೊಬ್ಬರಗಳ ಬಳಕೆ, ನೀರಿನ ಅಸಮರ್ಪಕ ನಿರ್ವಹಣೆ, ಏಕಬೆಳೆ ಪದ್ಧತಿಗಳಿಂದಾಗಿ ಇಂದು ಮಣ್ಣು ಸವಳು/ಜವಳು/ಕರ್ಲು ಮಣ್ಣಾಗಿ ಸಮಸ್ಯಾತ್ಮಕವಾಗಿದೆ.

ಮಹಾತ್ಮ ಗಾಂಧೀಜಿಯವು ಒಂದು ಕಡೆ ಹೇಳಿದ್ದಾರೆ “This earth is not inherited from our forefathers but we have borrowed it from our younger generation” ಅಂದರೆ ಈ ಭೂಮಿಯನ್ನು ಹಾಳಾಗದಂತೆ ಉಳಿಸಿ ಸಂರಕ್ಷಿಸುವುದು ನಮ್ಮ ನಿಮ್ಮೆಲ್ಲರ ಕರ್ತ್ಯವ್ಯ. 

ಬೇಸಾಯವೆಂದರೆ ಮೊದಲು ಮೂಡುವ ಚಿತ್ರಣವೆಂದರೆ ಜಮೀನು, ಬಿತ್ತನೆ, ಬೀಜ, ನೀರಾವರಿ ಸೌಲಭ್ಯ ನಂತರ ಗೊಬ್ಬರ, ಉತ್ತಮ ಫಸಲು, ಇಳುವರಿ ಪಡೆಯ ಬೇಕೆನ್ನುವುದು ಪ್ರತಿಯೊಬ್ಬ ಕೃಷಿಕನ ಆಶಯ. ಉತ್ತಮ ಇಳುವರಿಗಾಗಿ ಅಗತ್ಯ ಪೋಷಕಾಂಶಗಳನ್ನು ಅದರಲ್ಲೂ ಪ್ರಮುಖವಾಗಿ ಸಾರಜನಕ, ರಂಜಕ, ಪೋಟ್ಯಾಸಿಯಂಗಳನ್ನು ರಸಗೊಬ್ಬರಗಳ ರೂಪದಲ್ಲಿ ಶಿಫಾರಿಸಲ್ಪಟ್ಟ ಪ್ರಮಾಣದಲ್ಲಿ ಹಾಕಿದಲ್ಲಿ ಬೆಳೆಗಳ ಇಳುವರಿ ಜಾಸ್ತಿಯಾಗುವುದರಲ್ಲಿ ಸಂದೇಹವೇ ಇಲ್ಲ. ಹೆಚ್ಚು ಇಳುವರಿಯ ತಳಿಗಳು, ರಸಗೊಬ್ಬರಗಳ ಬಳಕೆಯಿಂದ ಹಸಿರು ಕ್ರಾಂತಿಯುಂಟಾಗಿದ್ದು ನಿಜವಾದರೂ, ಈ ಇಳುವರಿಯು ದೊರೆತಿದ್ದು ಕೆಲವು ವರ್ಷಗಳು ಮಾತ್ರ. ನಂತರದ ವರ್ಷಗಳಲ್ಲಿ ಈ ಇಳುವರಿಯ ಪ್ರಮಾಣವು ಕ್ರಮೇಣ ಇಳಿಮುಖವಾಯಿತು.

ಈ ಮಣ್ಣು ಅನೇಕ ಕಾರಣಗಳಿಂದ ಹಾಳಾಗುತ್ತಿದೆ:

* ಅತೀ ತೀವ್ರವಾದ ಕೃಷಿ ಚಟುವಟಿಕೆಗಳಿಂದಾಗಿ ಅತ್ಯಧಿಕ ರಸಗೊಬ್ಬರಗಳ ಬಳಕೆ ಮತ್ತು ಕೀಟನಾಶಕಗಳ / ಪೀಡೆನಾಶಕಗಳ ಬಳಕೆಯಿಂದಾಗಿ ಮಣ್ಣಿನಲ್ಲಿ ಇವುಗಳ ಪ್ರಮಾಣ ಹೆಚ್ಚಿ ಮಣ್ಣು ಕಲುಷಿತವಾಗುತ್ತಿದೆ. 

ಮಣ್ಣಿನ ಸವಕಳಿ ಉಂಟಾಗಿ ಮೇಲ್ಪದರದ ಮಣ್ಣು ಕೊಚ್ಚಿ ಹೋಗುತ್ತಿದೆ ಇದರಿಂದ ಸಾರಜನಕ, ರಂಜಕ, ಪೋಟ್ಯಾಷ್ ಅಲ್ಲದೇ ಲಘು ಪೋಷಕಾಂಶಗಳು ಕೂಡ ಕೊಚ್ಚಿ ಹೋಗುತ್ತಿವೆ. 

* ಕೃಷಿಯೇತರ ಚಟುವಟಿಕೆಗಳು ಹೆಚ್ಚಿ ಇಂದು ಸಾಗುವಳಿ ಪ್ರದೇಶದ ವಿಸ್ತೀರ್ಣವೂ ಕಡಿಮೆಯಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ರಸಗೊಬ್ಬರಗಳು, ಕೀಟನಾಶಕಗಳು ಹಾಗೂ ಇನ್ನಿತರ ರಾಸಾಯನಿಕಗಳನ್ನು ಹೆಚ್ಚು ಹೆಚ್ಚಾಗಿ ಮತ್ತು ಅವೈಜ್ಞಾನಿಕವಾಗಿ ಬಳಸುತ್ತಿರುವುದರಿಂದ ಇಂದು ಅನೇಕ ತೊಂದರೆಗಳಾಗುತ್ತವೆ. ಅವುಗಳಲ್ಲಿ ಮುಖ್ಯವಾದವುಗಳೆಂದರೆ, 

* ಅಧಿಕ ರಸಗೊಬ್ಬರಗಳ ಬಳಕೆಯಿಂದ ಮಣ್ಣಿನಲ್ಲಿ ಲವಣಗಳ ಸಂಗ್ರಹಣೆ ಹೆಚ್ಚುತ್ತಾ ಹೋಗುತ್ತದೆ. ಈ ಸಮಸ್ಯೆಯು ಶುಷ್ಕ, ಅರೆಶುಷ್ಕ ವಾತಾವರಣಗಳಲ್ಲಿ ಇನ್ನೂ ಹೆಚ್ಚಿ ಮಣ್ಣು ಸವಳಾಗುತ್ತದೆ. ಸಮಸ್ಯೆ ಮುಂದುವರೆದಂತೆ ಕ್ಷಾರೀಯ (ಕರ್ಲು ಮಣ್ಣು) ವಾಗುತ್ತದೆ. 

* ಅಧಿಕ ರಸಗೊಬ್ಬರಗಳನ್ನು ಬಳಸುವುದರಿಂದ ಪೋಷಕಾಂಶಗಳು ಅದರಲ್ಲೂ ಸಾರಜನಕವು ನೈಟ್ರೇಟ್ ರೂಪದಲ್ಲಿ ಬಸಿದು ಹೋಗಿ ಹರಿಯುವ ನೀರನ್ನು ಸೇರಿ ಮುಂದೆ ಅಂತರ್ಜಲವನ್ನು ಕಲುಷಿತಗೊಳಿಸುತ್ತವೆ. 

* ನೀರಿನಲ್ಲಿ ನೈಟ್ರೆಟ್ ರೂಪದಲ್ಲಿ ಸಾರಜನಕ ಮತ್ತು ರಂಜಕದ ಪ್ರಮಾಣ ಹೆಚ್ಚುವುದರಿಂದ ನೀರಿನ ಮೇಲ್ಮೈ ಮೇಲೆ ಪಾಚಿ ಬೆಳವಣಿಗೆ ಹೆಚ್ಚುತ್ತದೆ. 

* ಅವಶ್ಯ ಮಟ್ಟಕ್ಕಿಂತ ಅಧಿಕ ಪ್ರಮಾಣದಲ್ಲಿ ರಸಗೊಬ್ಬರಗಳನ್ನು ಬಳಸುವುದರಿಂದ ಮಣ್ಣಿನಲ್ಲಿ ಲವಣಗಳ ಸಾಂದ್ರತೆ ಹೆಚ್ಚಿ ಬೀಜಗಳು ಮೊಳಕೆಯೊಡೆಯುವುದಿಲ್ಲ. 

* ಸಸ್ಯಗಳ ಬೇರಿನ ವಲಯದಲ್ಲಿ ಲವಣಗಳ ಪ್ರಮಾಣ ಹೆಚ್ಚುವುದರಿಂದ ನೀರು ಮತ್ತು ಪೋಷಕಾಂಶಗಳನ್ನು ಹೀರಿಕೊಳ್ಳುವ ಸಾಮರ್ಥ್ಯ ಕಡಿಮೆಯಾಗಿ ಸಸ್ಯಗಳ ಬೆಳವಣಿಗೆ ಕುಂಠಿತವಾಗುತ್ತದೆ. 

* ಅವಶ್ಯಕತೆಗಿಂತ ಹೆಚ್ಚಿನ ಪ್ರಮಾಣದಲ್ಲಿ ರಸಗೊಬ್ಬರಗಳನ್ನು ಬಳಸುವುದರಿಂದ ಕಳೆಗಳು ಉತ್ತೇಜನಗೊಂಡು ಹುಲುಸಾಗಿ ಬೆಳೆಯುತ್ತವೆ. 

* ಆರಂಭಿಕ ಹಂತದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರಸಗೊಬ್ಬರಗಳನ್ನು ಹೆಚ್ಚಾಗಿ ಬಳಸುವುದರಿಂದ ಸಸ್ಯಗಳ ಬೆಳವಣಿಗೆ ಹೆಚ್ಚಿ ಕಾಳು ಕಟ್ಟುವುದು ಕಡಿಮೆಯಾಗುತ್ತದೆ ಅಥವಾ ಜೊಳ್ಳಾಗುತ್ತದೆ. ಅವಶ್ಯಕತೆಗಿಂತ ಹೆಚ್ಚಿನ ಪ್ರಮಾಣದಲ್ಲಿ ರಸಗೊಬ್ಬರಗಳನ್ನು ಅದರಲ್ಲೂ ಸಾರಜನಕ ರಸಗೊಬ್ಬರಗಳನ್ನು ಬಳಸುವುದರಿಂದ ರೋಗ ಮತ್ತು ಕೀಟ ಬಾಧೆ ಹೆಚ್ಚಾಗುತ್ತದೆ. 

* ಅಧಿಕ ಮಟ್ಟದಲ್ಲಿ ರಸಗೊಬ್ಬರಗಳನ್ನು ಬಳಸುವುದರಿಂದ ಸಾರಜನಕವು ನೈಟ್ರೇಟ್ ರೂಪದಲ್ಲಿ ಬಸಿದು ನೀರಿನ ಮೂಲಗಳನ್ನು ಸೇರಿ ಕುಡಿಯುವ ನೀರನ್ನು ಕಲುಷಿತಗೊಳಿಸುತ್ತದೆ. ಅಲ್ಲದೇ ಈ ನೀರನ್ನು ಬಳಸಿದಾಗ ಮಕ್ಕಳಲ್ಲಿ ಬ್ಲೂ ಬೇಬಿ ಸಿಂಡ್ರೋಮ್ ಎಂಬ ರೋಗ ಕಂಡುಬರುತ್ತದೆ. 

* ಅವಶ್ಯಕತೆಗಿಂತ ಅಧಿಕ ಮಟ್ಟದಲ್ಲಿ ರಸಗೊಬ್ಬರಗಳನ್ನು ಬಳಸಿದಾಗ ಸಾರಜನಕ, ಗಂಧಕಗಳು ಆವಿಯಾಗಿ ವಾತಾವರಣದಲ್ಲಿರುವ ತೇವಾಂಶದೊಂದಿಗೆ ಸೇರಿ ಆಮ್ಲಗಳಾಗಿ ಆಮ್ಲ ಮಳೆ ಉಂಟಾಗುತ್ತದೆ. ಇದು ಮತ್ತೆ ಮಣ್ಣನ್ನು ಸೇರಿ ಮಣ್ಣಿನ ಆಮ್ಲೀಯತೆಗೆ ಕಾರಣವಾಗುತ್ತದೆ. 

* ರಸಗೊಬ್ಬರಗಳ ಅದರಲ್ಲೂ ಸಾರಜನಕ, ರಂಜಕ, ಪೋಟ್ಯಾಷ್ ಗೊಬ್ಬರಗಳನ್ನು ಮಾತ್ರವೇ ಅಧಿಕವಾಗಿ ಬಳಸುವುದರಿಂದ ಮಣ್ಣಿನಲ್ಲಿ ಪೋಷಕಾಂಶಗಳ ಅಸಮತೋಲನವುಂಟಾಗಿ ಸಸ್ಯಗಳಿಗೆ ಬೇಕಾಗುವ ಎಲ್ಲಾ ಪೋಷಕಾಂಶಗಳೂ ಸುಲಭವಾಗಿ ದೊರೆಯುವುದಿಲ್ಲ.

* ರಸಗೊಬ್ಬರಗಳೆ ಅಲ್ಲದೇ ಬೆಳೆಗೆ ತಗಲುವ ರೋಗ ಮತ್ತು ಅನೇಕ ಕೀಟ ಬಾಧೆಯನ್ನು ತಡೆಯಲು ಅನೇಕ ಕೀಟ/ಪೀಡೆ ನಾಶಕಗಳನ್ನು ಅವಶ್ಯಕತೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಹಾಗೂ ಅವೈಜ್ಞಾನಿಕವಾಗಿ ಬಳಸುತ್ತಿರುವುದು ಸರ್ವೆ ಸಾಮಾನ್ಯವಾಗಿದೆ. 

* ಅನೇಕ ಕೀಟ/ಪೀಡೆ ನಾಶಕಗಳು ಅತ್ಯಂತ ವಿಷಕಾರಿಯಾಗಿದ್ದು, ಪ್ರಾಣಿ, ಪಕ್ಷಿ, ಮಾನವ, ಸೂಕ್ಷ್ಮ ಜೀವಿಗಳಿಗೆ ಹಾನಿಕಾರವಾಗಿವೆ. 

* ಅವಶ್ಯಕತೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಕೀಟ/ಪೀಡೆನಾಶಕಗಳನ್ನು ಬಳಸುವುದರಿಂದ ಕೀಟ/ಪೀಡೆಗಳಲ್ಲಿ ನಿರೋಧಕ ಶಕ್ತಿಯು ಹೆಚ್ಚಿ ಬೇರೆ ಬೇರೆ ರಾಸಾಯನಿಕಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಬೇಕಾಗುತ್ತದೆ. ಇದರಿಂದ ಖರ್ಚು ಹೆಚ್ಚಾಗುತ್ತದೆ. ಮಣ್ಣು ಮತ್ತು ನೀರು ಹಾಗೂ ಪರಿಸರ ಕಲುಷಿತವಾಗುತ್ತದೆ.

* ಕೀಟ/ಪೀಡೆನಾಶಕಗಳಲ್ಲಿರುವ ಧಾತುಗಳು ಅದರಲ್ಲೂ ಕ್ಯಾಡ್ಮಿಯಂ, ಆರ್ಸೆನಿಕ್, ಪಾದರಸ, ಸೀಸ ಮುಂತಾದವುಗಳು ಆಹಾರ ಸರಪಳಿಯನ್ನು ಸೇರಿ ಸರಪಳಿಯ ಪ್ರತಿ ಹಂತದಲ್ಲೂ ಸಾಂದ್ರತೆ ಹೆಚ್ಚುತ್ತಾ ಹೋಗಿ ಹಾನಿಕಾರಕ ಮಟ್ಟವನ್ನು ತಲುಪುತ್ತವೆ. ಇದನ್ನು ವೈಜ್ಞಾನಿಕವಾಗಿ ಬಯೋ ಮ್ಯಾಗ್ನಿಫಿಕೇಶನ್ ಎನ್ನುತ್ತಾರೆ. 

* ಮಣ್ಣಿನಲ್ಲಿರುವ ವಿಷಕಾರಿ ಧಾತುಗಳ ಪ್ರಮಾಣ ಹೆಚ್ಚುವುದರಿಂದ ಪೋಷಕಾಂಶಗಳ ಅಸಮತೋಲನವುಂಟಾಗಿ ನಡೆಯುವ ಅನೇಕ ಜೀವ ರಾಸಾಯನಿಕ ಕ್ರಿಯೆಗಳಲ್ಲಿ ತೊಂದರೆಯಾಗುತ್ತದೆ. ಹಾಗೂ ಬೆಳವಣಿಗೆ ಕುಂಠಿತವಾಗುತ್ತದೆ. ಇವುಗಳ ಜೊತೆಗೆ ಅವಶ್ಯಕತೆಗಿಂತ ಹೆಚ್ಚಿನ ಪ್ರಮಾಣದಲ್ಲಿ ರಸಗೊಬ್ಬರಗಳನ್ನಾಗಲಿ ಕೀಟನಾಶಕಗಳನ್ನಾಗಲಿ ಬಳಸುವುದರಿಂದ ಖರ್ಚು ಹೆಚ್ಚಾಗುತ್ತದೆ. 

ಈ ಎಲ್ಲಾ ಸಮಸ್ಯೆಯಿಂದ ಮುಕ್ತಿ ಪಡೆಯಲು ಏನು ಮಾಡಬೇಕು?

ಮಣ್ಣು ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿಸಬೇಕು: ಪರೀಕ್ಷೆಯ ಫಲಿತಾಂಶದ ವರದಿಯನ್ನಾಧರಿಸಿ ಪೋಷಕಾಂಶಗಳನ್ನು ಸರಿಯಾಗಿಸಿ ರಸಗೊಬ್ಬರಗಳನ್ನು ಬಳಸಬೇಕು. ಉದಾ: ಮಣ್ಣಿನಲ್ಲಿ ಸಾರಜನಕದ ಪ್ರಮಾಣ ಕಡಿಮೆ ಇದೆ ಎಂದು ತಿಳಿದು ಬಂದರೆ ಶಿಫಾರಿತ ಪ್ರಮಾಣಕ್ಕಿಂತ ಶೇ. ೧೨.೫ ರಷ್ಟು ಹೆಚ್ಚಿಗೆ ಹಾಕಬೇಕು. ಸಾರಜನಕದ ಪ್ರಮಾಣ ಅಧಿಕ ಎಂದು ತಿಳಿದು ಬಂದಲ್ಲಿ ಶಿಫಾರಿತ ಪ್ರಮಾಣಕ್ಕಿಂತ ಶೇ. ೧೨.೫ ರಷ್ಟು ಕಡಿಮೆ ಬಳಸಬೇಕು. ಆಯಾ ಬೆಳೆಗೆ ಶಿಫಾರಸ್ಸು ಮಾಡಿರುವ ಪ್ರಮಾಣದಲ್ಲಿ ಮಾತ್ರವೇ ರಸಗೊಬ್ಬರಗಳನ್ನು ಬಳಸಬೇಕು. 

ಆಯಾ ಕೀಟ/ಪೀಡೆಗೆ ಸೂಚಿಸಿರುವ ಕೀಟನಾಶಕ/ಪೀಡೆನಾಶಕಗಳನ್ನು ಮಾತ್ರವೇ ಬಳಸಬೇಕು ಹಾಗೂ ಶಿಫಾರಸ್ಸು ಮಾಡಿರುವ ಪ್ರಮಾಣವನ್ನು ಮಾತ್ರ ಸಿಂಪಡಿಸಬೇಕು. ಅಧಿಕ ಪ್ರಮಾಣದಲ್ಲಿ ಸಾವಯವ ಗೊಬ್ಬರಗಳನ್ನು ಬಳಸುವುದರಿಂದ ಮಣ್ಣಿನಲ್ಲಿ ಈ ರಾಸಾಯನಿಕಗಳ / ಲವಣಗಳಿಂದಾಗುವ ಹಾನಿಯನ್ನು ತಗ್ಗಿಸಬಹುದು. ಅಲ್ಲದೇ ಮಣ್ಣಿನ ಭೌತಿಕ ಗುಣಧರ್ಮಗಳಾದ ಕಣರಚನೆ, ನೀರನ್ನು ಹಿಡಿದಿಡುವ ಸಾಮಾರ್ಥ್ಯ ಮುಂತಾದವುಗಳನ್ನು ಸುಧಾರಿಸಬಹುದು. 

ಹಸಿರೆಲೆ ಗೊಬ್ಬರದ ಗಿಡಗಳಾದ ಸೆಣಬು, ಡಯಾಂಚ ಮುಂತಾದವುಗಳನ್ನು ಬೆಳೆದು ೪೫ ದಿನಗಳ ನಂತರ ಮಗ್ಗು ಹೊಡೆಯುವುದರಿಂದ ಮುಂದಿನ ಬೆಳೆಗೆ ಬೇಕಾಗುವ ಅವಶ್ಯ ರಾಸಾಯನಿಕ ರಸಗೊಬ್ಬರಗಳ ಬಳಕೆಯ ಪ್ರಮಾಣವನ್ನು ಕಡಿಮೆ ಮಾಡಬಹುದು. ಇದಲ್ಲದೆ ಸಸ್ಯಗಳಿಗೆ ಬೇಕಾಗುವ ಲಘು ಪೋಷಕಾಂಗಳು ಸುಲಭವಾಗಿ ಲಭ್ಯವಾಗುತ್ತವೆ. ಜೈವಿಕ ಗೊಬ್ಬರಗಳಿಂದ ಬೀಜೋಪಚಾರ ಮಾಡುವುದರಿಂದ ರಸಗೊಬ್ಬರಗಳ ಬಳಕೆಯಲ್ಲಿ ಶಿಫಾರಿತ ಪ್ರಮಾಣಕ್ಕಿಂತ ಶೇ. ೨೫ ರಷ್ಟು ಕಡಿಮೆ ಮಾಡಬಹುದು. 

ಹೀಗೆ ಮಣ್ಣು ಪರೀಕ್ಷೆ ಮಾಡಿಸಿ ಅವಶ್ಯಕತೆಗೆ ತಕ್ಕಂತೆ ಶಿಫಾರಿತ ಪ್ರಮಾಣದಲ್ಲಿ ಮಾತ್ರವೇ ರಸಗೊಬ್ಬರಗಳನ್ನು ಬಳಸಿ ಉತ್ತಮ ಬೆಳೆಯನ್ನು ಮತ್ತು ಮಣ್ಣಿನ ಆರೋಗ್ಯವನ್ನು ಕಾಪಾಡಬಹುದಾಗಿದೆ ಜೊತೆಗೆ ಮಣ್ಣು ಮತ್ತು ನೀರು ಕಲುಷಿತವಾಗುವುದನ್ನು ತಡೆಗಟ್ಟಬಹುದು.          

ಮಾಹಿತಿ : ಚಂದ್ರಕಾಂತ ಮತ್ತು ಸಿದ್ರಾಮ್. ಬಿ. ಪಾಟೀಲ್  ಮಣ್ಣು ವಿಜ್ಞಾನ ಮತ್ತು ಕೃಷಿ ರಸಾಯನ ಶಾಸ್ತ್ರ ವಿಭಾಗ, ಜಿ.ಕೆ.ವಿ.ಕೆ. ಬೆಂಗಳೂರು.