ಸಕ್ಕರೆ ಗೊಂಬೆ

ಸಕ್ಕರೆ ಗೊಂಬೆ

ಕವನ

ಅಕ್ಕರೆ ಗೊಂಬೆ ಸಕ್ಕರೆ ಗೊಂಬೆ

ಹೃದಯ ಮೆಚ್ಚಿತು ಈ ಗೊಂಬೆ

ಕೊಕ್ಕರೆ ನಡೆಯು ನೋಡಲು ಸಿಹಿಯು

ಮನವ ಕದ್ದಿತು ಈ ಗೊಂಬೆ||

 

ನಕ್ಕರೆ ಅಂದ ಸಿಕ್ಕರೆ ಚೆಂದ

ದುಂಡು ಮೊಗವಿದು ದಾಳಿಂಬೆ

ಚಕ್ಕನೆ ಕಣ್ಣು ಮಿಟುಕಿಸೊ ಗೊಂಬೆ

ಚೆಲುವು ಸುಂದರ ಈ ಗೊಂಬೆ||

 

ಯಾವ ಬೊಮ್ಮನ ಸೃಷ್ಠಿ ಮಾಡಿದ

ದೇವ ಲೋಕದ ಈ ರಂಭೆ

ಜನುಮ ಜನುಮದ ಋಣಾನು ಬಂಧ

ಧರೆಗೆ ಇಳಿದಿದೆ ಈ ಗೊಂಬೆ||

 

ಮಾನಸ ಗಂಗೆ ಪ್ರೇಮದ ತುಂಗೆ

ಒಲವ ಸುರಿಸುವ ಈ ಗೊಂಬೆ

ತಾಮಸ ಗುಣವು ರಸಮಯ ಗುಣವು

ಮಿಳಿತು ನಿಂದಿಹ ಈ ರಂಭೆ||

 

ನಾಳಿನ ಹೆಣ್ಣು ನಾಡಿನ ಕಣ್ಣು

ನಮಗೆ ಹೆಮ್ಮೆಯು ಈ ಗೊಂಬೆ

ಬಾಳಿಗೆ ಸ್ಪೂರ್ತಿ ದೇಶಕೆ ಕೀರ್ತಿ

ತರುವ ಮುದ್ದಿನ ಈ ಗೊಂಬೆ||

 

-*ಶ್ರೀ ಈರಪ್ಪ ಬಿಜಲಿ* 

 

ಚಿತ್ರ್