ಸಖೀಗೀತ

ಸಖೀಗೀತ

ಕವನ

ಸಖೀ.....
ಎನ್ನ ಕೈ-ಬೆರಳುಗಳಿಂದ
ನಿನ್ನ ಮುಂಗುರುಳ ನೇವರಿಸಿ
ನಿನ್ನೆದೆಯ ವೀಣೆಯಾ
ತಂತಿಗಳ ಮೀಟುತಾ
ಸಪ್ತ-ಸ್ವರಗಳ ಹೊರಡಿಸಿ
ಪ್ರೇಮರಾಗವ ಹಾಡುವಾಸೆ ಎನಗೆ...

ಭೃಂಗದಾ ತೆರದಿ
ನಾದ-ನೀನಾದ ಹೊರಡಿಸಿ
ನಿನ್ನ ಕೇಶರಾಶಿಯಲಿ
ಕಣ್ಣ ಮುಚ್ಚಾಲೆಯಾಡುತಾ
ನಸುನಗುವ ಹೊತ್ತಿರುವ
ಕೆಂದುಟಿಗಳನೊಮ್ಮೆ ಚುಂಬಿಸಿ
ಸುರಿವ ಸವಿಜೇನು ಹೀರುವಾಸೆ ಎನಗೆ....

ಪ್ರೇಮಧಾರೆಯ ಹರಿಸುವ
ಆ ಕಂಗಳನು ಚುಂಬಿಸುತಾ
ಚಂದ್ರ ಬಿಂಬವನು
ಬೊಗಸೆಯಲಿ ಹಿಡಿದು
ಎನ್ನ ಬಾಳಿನಲಿ ಬೆಳದಿಂಗಳ
ಹರಡುವಾಸೆ ಎನಗೆ

ಚಂದ್ರಿಕೆಯ ಮೊಗದಲ್ಲಿ
ಪಲ್ಲವಿಯ ಬರೆದು...
ದಂತದಾ ಬೊಂಬೆಯ
ಅಂಗಾಂಗಗಳ ಮೇಲೆ
ಸಾಲು-ಸಾಲು ಕವಿತೆಯಾ
ಚರಣಗಳ ಬರೆಯುವಾಸೆ ಎನಗೆ...

ಬಾರೆ ಸಖೀ
ಇಳಿದು ಬಿಡು ಎನ್ನ ಲೇಖನಿಯಲ್ಲಿ
ಬೆಳಗಲಿ ಎನ್ನ ಕವಿತೆಗಳ ಸಂಭ್ರಮ
ಮೊಳಗಲಿ ನಮ್ಮ ಪ್ರೇಮ ಪರಿಣಯ.....