ಸಖ - ಸಖಿ
ಕವನ
ಸಖ - ಬಾರೆ ಸಖಿ ಹೋಗೋಣ ಅಂಗಳದಿ ಹುಣ್ಣಿಮೆಯ
ಬೆಳದಿಂಗಳಲಿ ಉಯ್ಯಾಲೆಯಲಿ ಕೂತು
ನಲಿದಾಡೋಣ ಬಾರೆ ಸಖಿ..
ಸಖಿ - ಬೇಡ ಸಖ ಹುಣ್ಣಿಮೆಯ ಬೆಳದಿಂಗಳಿನಲ್ಲಿ
ಉಯ್ಯಾಲೆಯ ಆಟ ಬೇಡ ಸಖ, ಆ ಶಶಿಯ
ಅಂದವ ಕಂಡರೆ ನನಗೆ ಅಸೂಯೆ ಆಗುವುದು ...
ಸಖ - ಸಖಿ ನಿನ್ನಂದದ ಮುಂದೆ ಶಶಿಯ ಅಂದ
ಎಷ್ಟು ಮಾತ್ರ ಕಲೆಗಳಿಲ್ಲದ ನಿನ್ನ ಮುಖವೆಲ್ಲಿ,
ಕಲೆಗಳಿರುವ ಆ ಶಶಿ ಎಲ್ಲಿ..
ಸಖಿ - ಕಲೆಯಿದ್ದರೇನು ಸಖ ಅವನಿಗುಂಟು
ಸೊಕ್ಕು, ತನ್ನ ವರ್ಣ ಶ್ವೇತವರ್ಣವೆಂದು
ನನ್ನದೋ ಕೃಷ್ಣವರ್ಣ..
ಸಖ - ಶ್ವೇತವರ್ಣವಾದರೇನು ಸಖಿ ಹುಣ್ಣಿಮೆಗೆ
ಮಾತ್ರವಷ್ಟೇ ಅವನಿಗುಂಟು ಪೂರ್ಣ ರೂಪ, ನೋಡಲ್ಲಿ
ನಿನ್ನಂದವ ಕಂಡು ನಾಚಿಕೆಯಿಂದ ಮೋಡದ ಮರೆಯಾದ ಆ ಶಶಿ...