ಸಚಿನ್‌ಗೆ ಪ್ಯಾಡು ದೋಷ

ಸಚಿನ್‌ಗೆ ಪ್ಯಾಡು ದೋಷ

ಬರಹ

(ನಗೆ ನಗಾರಿ ಕಿರ್ ಕಿರಿಕೆಟ್ಟು ಬ್ಯೂರೋ)

ಶ್ರೀಲಂಕಾದ ವಿರುದ್ಧ ನಡೆಯುತ್ತಿರುವ ಐದು ಏಕ ದಿನ ಪಂದ್ಯಗಳ ಮೊದಲ ಮೂರೂ ಪಂದ್ಯಗಳಲ್ಲಿ ಭಾರತದ ಲಿಟಲ್ ಮಾಸ್ಟರ್ ಸಚಿನ್ ತೆಂಡೂಲ್ಕರ್ ಹೆಚ್ಚು ರನ್ ಗಳಿಸದೆ ಔಟಾಗಿದ್ದಾರೆ. ಮೂರೂ ಪಂದ್ಯಗಳಲ್ಲಿ ಎಲ್.ಬಿ.ಡಬ್ಲ್ಯು (ವಿಕೆಟ್ ಮುಂದೆ ಕಾಲು) ಕಾರಣಕ್ಕೆ ಔಟಾಗಿದ್ದಾರೆ. ಶ್ರೀಲಂಕಾದ ಕುಮಾರ ಧರ್ಮಸೇನಾ,ಗಾಮಿನಿ ಸಿಲ್ವಾ, ದಕ್ಷಿಣಾ ಆಫ್ರಿಕಾದ ಬ್ರಯಾನ್ ಜರ್ಲಿಂಗ್ - ಈ ಮೂವರೂ ಅಂಪೈರ್‌ಗಳು ಸಚಿನ್ ವಿರುದ್ಧ ತಪ್ಪು ತೀರ್ಪು ನೀಡಿದ್ದಾರೆ. ಬೌಲರ್‌ಗಳ ಯಾರ್ಕರ್, ಬೌನ್ಸರ್, ಗೂಗ್ಲಿ, ದೂಸ್ರಾಗಳ ಜೊತೆಗೆ ನಮ್ಮ ಲಿಟಲ್ ಮಾಸ್ಟರ್ ಅಪೈರುಗಳನ್ನೂ ಎದುರಿಸಬೇಕಾಗಿರುವ ಪರಿಸ್ಥಿತಿ ಸೃಷ್ಟಿಯಾಗಿರುವುದು ವಿಷಾದನೀಯ.

ಧೋನಿ ಎಂಬ ಕಾಲ್ಚೆಂಡಾಟಗಾರ ಕ್ರಿಕೆಟ್ ಬ್ಯಾಟು ಹಿಡಿದದ್ದು, ರಾಷ್ಟ್ರೀಯ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡದ್ದು, ಟ್ವೆಂಟಿ ಟ್ವೆಂಟಿ ಕಪ್ ಗೆದ್ದದ್ದು, ಭಾರತದ ಏಕದಿನ, ಟೆಸ್ಟ್ ತಂಡಗಳಿಗೆ ನಾಯಕನಾದದ್ದು, ಸತತವಾಗಿ ಗೆಲುವಿನ ಕುದುರೆಯ ಮೇಲೆ ಸವಾರಿ ಮಾಡುತ್ತಿರುವುದಕ್ಕೆ ಆತನ ಪ್ರತಿಭೆಯಾಗಲಿ, ನಾಯಕತ್ವ ಗುಣಗಳಾಗಲಿ, ತಂಡದ ಸದಸ್ಯರ ಹೋರಾಟವಾಗಲಿ, ಸಾಂಘಿಕ ಪ್ರಯತ್ನವಾಗಲಿ, ಪರಿಶ್ರಮವಾಗಲಿ, ಒಗ್ಗಟ್ಟಾಗಲಿ ಕಾರಣವಲ್ಲ, ಅವುಗಳ ಪರಿಣಾಮವೇನಿದ್ದರು ಊಟದಲ್ಲಿನ ಉಪ್ಪಿನ ಕಾಯಿಯದು. ಧೋನಿಯ ಗೆಲುವಿನ ಕುದುರೆ ಸವಾರಿಯನ್ನು ಬ್ಯಾಲೆನ್ಸ್ ಮಾಡುತ್ತಿರುವುದು ಅಂತರಿಕ್ಷದಲ್ಲಿರುವ ಗ್ರಹಗಳು, ತಮ್ಮ ಕೈಯಿಂದ ಉರುಳುವ ದಾಳಗಳು ಎಂದು ಘಂಟಾಘೋಷವಾಗಿ ಸಾರಿದ ಸೋಮ-ಸೂಜಿ, ಚೈನ್ ಮಹಾಶಯರು ಈಗ ಸಚಿನ್ ಮೂರು ಭಾರಿ ಔಟಾದದ್ದಕ್ಕೆ ಏನು ಕಾರಣ ಕೊಡಬಹುದು ಎಂಬ ಕುತೂಹಲ ಸಾಮ್ರಾಟರಿಗೆ ಹುಟ್ಟಿತು.

ತಮ್ಮ ಡಯಾಬಿಟಿಸಿಗೆ ದುಬಾರಿ ಆಸ್ಪತ್ರೆಯ ಅತ್ಯಂತ ದುಬಾರಿ ಡಾಕ್ಟರ ಬಳಿ ಅತ್ಯಧಿಕ ದುಬಾರಿ ಇಂಜಕ್ಷನ್ನು ಹೆಟ್ಟಿಸಿಕೊಂಡು, ಇನ್ನಷ್ಟು ವರ್ಷ ಬದುಕುಳಿಯುವುದು ಗ್ಯಾರಂಟಿಯಾ ಎಂದು ಡಾಕ್ಟರ ಬಳಿ ಮೂರ್ನಾಲ್ಕು ಬಾರಿ ಕೇಳಿಕೊಂಡು ಸಾಮ್ರಾಟರೊಂದಿಗೆ ಸಂದರ್ಶನಕ್ಕೆ ಕೂತ ಸೋಮ-ಸೂಜಿಯವರು, ‘‘ಸಚಿನ್ ಕಳೆದ ಬಾರಿ ನಾಗ ಪ್ರತಿಷ್ಠೆ ಮಾಡಿಸಿಕೊಳ್ಳಲು ಬಂದಾಗಲೇ ನಾನು ಹೇಳಿದ್ದೆ. ‘ನಿನ್ನ ಕಾಲ ಬಳಿ ಗ್ರಹಗಳ ಓಡಾಟ ಅಷ್ಟು ಸಮರ್ಪಕವಾಗಿಲ್ಲ. ಬೇಗನೇ ಶಾಂತಿಯನ್ನು ಮಾಡಿಸಿಬಿಡು’ ಎಂದು. ಆದರೆ ಆತ ನನ್ನ ಮಾತಿನಲ್ಲಿ ನಂಬಿಕೆಯಿಡಲಿಲ್ಲ. ಯಾರೆಷ್ಟೇ ದೊಡ್ಡವರಾದರೂ ಗ್ರಹಗತಿಗಳನ್ನು ಅಲಕ್ಷಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಈಗ ಅರಿವಾಗಿದೆ. ಒಂದಲ್ಲ ಎರಡಲ್ಲ, ಮೂರು ಬಾರಿ. ಅದೂ ಒಂದೇ ಪಂದ್ಯಾವಳಿಯಲ್ಲಿ, ಸತತವಾಗಿ ಮೂರು ಬಾರಿ ತಪ್ಪು ತೀರ್ಮಾನದಿಂದ ಔಟಾಗುವುದು ಆಕಸ್ಮಿಕ ಎನ್ನಲು ಸಾಧ್ಯವೇ? ಒಂದು ಸಲವಾದರೆ ಹೌದೆನ್ನಬಹುದು. ಮೂರು ಬಾರಿ ಹಾಗಾಗುವುದು ಕಾಕತಾಳೀಯವಲ್ಲವೇ ಅಲ್ಲ. ಅದು ಗ್ರಹಗತಿ ದೋಷದಿಂದ ಹುಟ್ಟಿದ ಸಮಸ್ಯೆ ಎಂಬುದು ಸ್ಪಷ್ಟ.

“ನಮ್ಮ ಈ ಅಭಿಪ್ರಾಯವನ್ನು ನಾವು ಸಚಿನ್‌ಗೂ ಮತ್ತವನ ನಾಯಕ ಧೋನಿ ಇಬ್ಬರಿಗೂ ಹೇಳಿದ್ದೇವೆ. ಹೀಗಾಗಿ ಕಾಲುಗಳ ಗ್ರಹಗಳ ಶಾಂತಿ ನಡೆಯುವವರೆಗೂ ಸಚಿನ್ನನಿಗೆ ವಿಶ್ರಾಂತಿ ಕೊಡಲು ತೀರ್ಮಾನಿಸಲಾಗಿದೆ. ಶೀಘ್ರದಲ್ಲಿ ನಾವು ಬಹುದೊಡ್ಡ ಹೋಮ ಕಾರ್ಯಕ್ರಮ ನಡೆಸಿ ಶಾಂತಿ ಮಾಡಲಿದ್ದೇವೆ. ಈಗ ಐದು ನೂರು ಕಿಲೋ ತುಪ್ಪಕ್ಕೆ ಆರ್ಡರ್ ಮಾಡಿಸಿದ್ದೇವೆ. ನಾಳೆಯಿಂದ ಸಿದ್ಧತೆ ಶುರುವಾಗಲಿದೆ.”

ಸಂದರ್ಶನ ಮುಗಿಯುತ್ತಿದ್ದಂತೆ ಸೋಮ-ಸೂಜಿಯವರ ಶಿಷ್ಯೋತ್ತಮ ಸಾಮ್ರಾಟರೆದುರು ‘ಹುಂಡಿ’ಯನ್ನು ಹಿಡಿದು ನಿಂತ. ತಮ್ಮ ಖಾಲಿ ಜೇಬಿನ ಮೇಲೆ ಕೈಯಾಡಿಸಿ ಸಾಮ್ರಾಟರು, ‘ನಾನು ಹುಂಡಿಗೆ ಎಷ್ಟು ದುಡ್ಡು ಹಾಕುವೆ ಎಂಬುದನ್ನು ನಿಖರವಾಗಿ ಊಹಿಸಿ’ ಎಂದು ಸೋಮ-ಸೂಜಿಯವರಿಗೆ ಸವಾಲು ಹಾಕುವ ಮನಸ್ಸಾಯಿತು. ಆದರೆ ಅವರ ‘ತಪ ಬಲ’ ಗಿಂತಲೂ ಅಗಾಧವಾಗಿ ಕಾಣುತ್ತಿದ್ದ ಅವರ ಸುತ್ತಮುತ್ತಲಿನ ಶಿಷ್ಯರ ‘ಬಾಹು ಬಲ’ವನ್ನು ಕಂಡು ಹೆದರಿ ಕಂಗಾಲಾಗಿ ಕತ್ತಿನಲ್ಲಿದ್ದ ರೋಲ್ಡ್ ಗೋಲ್ಡ್ ಚೈನನ್ನು ಧಾರಾಳವಾಗಿ ಹುಂಡಿಗೆ ನೂಕಿ ಪಾರಾದರು.

‘ಹುದಯ’ ಟಿವಿಯ ಆಸ್ಥಾನ ಜೋತಿಷಿಗಳಾಗಿ ಮೆರೆದ ಚೈನ್ ಮಹಾಸ್ವಾಮಿಯನ್ನು ಭೇಟಿಯಾಗಿ ಸಚಿನ್ ದುರದೃಷ್ಟಕ್ಕೆ ಪರಿಹಾರವೇನೆಂದು ಸಾಮ್ರಾಟರು ಪ್ರಶ್ನಿಸಿದರು. “ನೋಡಿ ಗುರು ಗ್ರಹ ಶ್ರೀಲಂಕಾದಲ್ಲಿ ಪ್ರವೇಶಿಸಲು ಹೋಗಿ ಎಲ್.ಟಿ.ಟಿ.ಇ, ಲಂಕಾ ಸೈನ್ಯದ ಕಾಳಗದ ನಡುವೆ ಸಿಕ್ಕು ಹಾಕಿಕೊಂಡಿರುವುದರಿಂದ, ಶ್ರೀಲಂಕದಲ್ಲಿ ಶನಿಗ್ರಹ ಪ್ರಧಾನ ಪಾತ್ರ ವಹಿಸಿದೆ. ರಾಹುವು ಬೌಲರ್ ಬದಿಯ ವಿಕೆಟಿನ ಹಿಂದೆಯೂ, ಕೇತುವು ಬ್ಯಾಟ್ಸ್‍ಮನ್‌ನ ಹಿಂಬದಿಯ ಹಿಂದೆಯೂ ವಿರಾಜಮಾನನಾಗಿರುವುದರಿಂದ ಸಚಿನ್ನನಿಗೆ ‘ಕುಜ’ ದೋಷದ ಬದಲು ‘ಪ್ಯಾಡ್ ದೋಷ’ ಅಮರಿಕೊಂಡಿದೆ. ಇದಕ್ಕಿರುವ ಅತ್ಯಂತ ಸುಲಭವಾದ ಪರಿಹಾರವೆಂದರೆ ಪಂದ್ಯವಿರುವ ದಿನ ಎಡಗಡೆಯಿಂದ ಎದ್ದು, ಒಂದು ಹನಿ ನೀರನ್ನೂ ಕುಡಿಯದೆ, ಒಂದು ಕಾಳು ಅಕ್ಕಿಯನ್ನೂ ಅಗಿಯದೆ ಉಪವಾಸವನ್ನಾಚರಿಸಿ, ಕಾಲಿಗೆ ಪ್ಯಾಡ್ ಕಟ್ಟಿಕೊಳ್ಳದೆ, ಹಿಮ್ಮುಖವಾಗಿ ಕ್ರೀಜಿಗೆ ಬಂದು ನಿಲ್ಲಬೇಕು. ಆಗ ರಾಹು - ಕೇತುವಿನ ಪರಿಭ್ರಮಣೆಯಲ್ಲಿ ಬದಲಾವಣೆ ಬಂದು ‘ಪ್ಯಾಡ್ ದೋಷ’ ನಿವಾರಣೆಯಾಗುತ್ತದೆ.”

ಸಂದರ್ಶನ ಮುಗಿಸಿ ನಾಲ್ಕು ಘಳಿಗೆ ಹುಂಡಿಯ ಆಗಮನಕ್ಕಾಗಿ ಸಾಮ್ರಾಟರು ಕಾಯುತ್ತಿದ್ದರು. ಕೈಲಿದ್ದ ನಕಲಿ ಬಂಗಾರದ ಉಂಗುರವನ್ನು ಅಗಲುವುದಕ್ಕೆ ಮಾನಸಿಕವಾಗಿ ತಯಾರಾಗುತ್ತಿದ್ದರು. ಹುಂಡಿ ಬರಲೇ ಇಲ್ಲ. ಅದರ ಬದಲಾಗಿ ‘ನಗೆ ನಗಾರಿ’ಯಲ್ಲಿ ಪೂರ್ತಿ ಪುಟ ಪ್ರಕಟಣೆಗಾಗಿ ಚೈನ್ ಮಹಾಸ್ವಾಮಿಯವರ ಜಾಹೀರಾತು ಸಿಕ್ಕಿತು. ಸಾಮ್ರಾಟರು ಆ ಪ್ರತಿಯನ್ನು ಬೆಳಗಿನ ಶೌಚ ವಿಧಿ ಪೂರೈಕೆಗಾಗಿ ಬಳಸಿ ರೀಮುಗಟ್ಟಲೆ ಪುಣ್ಯವನ್ನು ಗೋಡೌನಿಗೆ ತುಂಬಿಕೊಂಡಿದ್ದಾರೆ!