ಸಚಿನ್ - ಒಂದು ಆಪ್ತ ಚಿತ್ರ

ಸಚಿನ್ - ಒಂದು ಆಪ್ತ ಚಿತ್ರ

ಪುಸ್ತಕದ ಲೇಖಕ/ಕವಿಯ ಹೆಸರು
ಅರುಣ್, ಮೋಹನ್
ಪ್ರಕಾಶಕರು
ನುಡಿ ಪುಸ್ತಕ, ಬನಶಂಕರಿ ೨ನೇ ಹಂತ, ಬೆಂಗಳೂರು-೫೬೦೦೭೦, ದೂ: ೦೮೦-೨೬೭೧೧೩೨೯
ಪುಸ್ತಕದ ಬೆಲೆ
ರೂ.೭೦.೦೦, ಮುದ್ರಣ: ೨೦೧೦

ಸಚಿನ್ ತೆಂಡೂಲ್ಕರ್ ಎಂದೊಡನೆ ಕ್ರಿಕೆಟ್ ಪ್ರೇಮಿಗಳಲ್ಲಿ ಒಂಥರಾ ಪುಳಕ. ಹಲವಾರು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆಸಿಕೊಂಡ ಇವರನ್ನು ಸಾಕ್ಷಾತ್ ಕ್ರಿಕೆಟ್ ದೇವರು ಎಂದು ಕರೆಯುವವರೂ ಹಲವಾರು ಮಂದಿ ಇದ್ದಾರೆ. ಅವರ ಕ್ರೀಡಾ ಜೀವನವನ್ನು ಒಂದೆಡೆ ಕಟ್ಟಿಕೊಡುವುದು ಸಾಹಸದ ಪ್ರಯತ್ನವೇ ಸರಿ. ‘ಸಚಿನ್’ ಪುಸ್ತಕದ ಲೇಖಕರಾದ ಅರುಣ್ ಹಾಗೂ ಮೋಹನ್ ಅವರು ಇವರ ಕ್ರೀಡಾ ಬದುಕಿನ ಪ್ರಮುಖ ಘಟನೆಗಳನ್ನು ಬಹಳ ಆಪ್ತವಾಗಿ ಚಿತ್ರಿಸಿದ್ದಾರೆ. ಪುಸ್ತಕದ ಪ್ರಾರಂಭಿಕ ಪುಟಗಳಲ್ಲಿ ಸಚಿನ್ ಕ್ರಿಕೆಟ್ ಜೀವನ ಹಾಗೂ ಬಾಲ್ಯದ ಫೋಟೋ ಆಲ್ಬಮ್ ಒಂದನ್ನು ನೀಡಿದ್ದಾರೆ. 

ಪುಸ್ತಕದ ಬೆನ್ನುಡಿಯಲ್ಲಿ ಸಚಿನ್ ತೆಂಡೂಲ್ಕರ್ ಅವರ ಮಾತುಗಳನ್ನೇ ಪ್ರೇರಣಾ ಸ್ವರೂಪವಾಗಿ ನೀಡಿದ್ದಾರೆ. “ವಿಶ್ವ ಕ್ರಿಕೆಟ್ ನ ನನ್ನ ಅಭಿಮಾನಿಗಳೇ, ನಿಮಗೆ ನನ್ನ ಧನ್ಯವಾದಗಳು. ನಿಮ್ಮ ಅಭಿಮಾನದ ಕಾರಣ ನಾನು ಈ ಮಟ್ಟಕ್ಕೆ ಬಂದು ನಿಂತಿದ್ದೇನೆ. ನಾನು ಚೆನ್ನಾಗಿ ಬ್ಯಾಟ್ ಮಾಡಲಿ ಎಂದು ತುಂಬಾ ಮಂದಿ ಪ್ರಾರ್ಥಿಸುತ್ತಾರೆ ಎಂಬುದು ನನಗೆ ಗೊತ್ತು. ಅವರ ಪ್ರಾರ್ಥನೆ ನನ್ನಲ್ಲಿ ಶಕ್ತಿ ತುಂಬುತ್ತದೆ.

ನಾನು ಭಾರತಕ್ಕಾಗಿ ಆಡುತ್ತೇನೆ ಎಂಬುದೊಂದು ಹೆಮ್ಮೆಯ ಸಂಗತಿ. ಭಾರತವನ್ನು ಪ್ರತಿನಿಧಿಸಲು ಇಷ್ಟು ದಿನಗಳ ಅವಕಾಶ ಸಿಕ್ಕಿರುವುದಕ್ಕೆ ನನಗೆ ಖುಷಿಯಾಗುತ್ತಿದೆ. ಹಾಗಾಗಿಯೇ ವಿಶೇಷ ಸಾಧನೆ ಮಾಡಬೇಕು ಎನಿಸುತ್ತದೆ. ಒಂದೊಂದೂ ಗೆಲುವೂ ನನ್ನಲ್ಲಿ ಮತ್ತಷ್ಟು ಪ್ರೀತಿ, ಸ್ಪೂರ್ತಿ ತುಂಬುತ್ತದೆ.” ಎಂದು ತಮ್ಮ ಮನದಾಳದ ಮಾತುಗಳನ್ನು ಬಿಚ್ಚಿಟ್ಟಿದ್ದಾರೆ. 

ಲೇಖಕರಾದ ಅರುಣ್, ಮೋಹನ್ ಅವರು “ ಸಚಿನ್ ಕ್ರಿಕೆಟ್ ಜೀವನ, ಹರಿವ ನದಿಯ ಹಾಗೆ. ಅದಕ್ಕೊಂದು ಎಲ್ಲ ಕಾಲಕ್ಕೂ ಸಲ್ಲುವ ಸೌಂದರ್ಯ ಇರುತ್ತದೆ. ಅಂಥ ನದಿಯ ಸುಂದರತೆಯನ್ನು ಬೊಗಸೆಯಲ್ಲಿ ಹಿಡಿದು ತೋರಿಸುವ ಯತ್ನ ಇದು. ವಿವಿಧ ಮೂಲಗಳಿಂದ ಗ್ರಹಿಸಲಾದ ಈ ಆಪ್ತಚಿತ್ರ ನಿಮ್ಮ ಮುಂದಿದೆ" ಎಂದಿದ್ದಾರೆ. ಪುಟ್ಟ ಪುಟ್ಟ ಅಧ್ಯಾಯಗಳಲ್ಲಿ ಸಚಿನ್ ಬದುಕಿನ ಪ್ರಮುಖ ವಿದ್ಯಮಾನಗಳನ್ನು ಹರಡುತ್ತಾ ಹೋಗಿದ್ದಾರೆ. ಹಲವಾರು ಆಸಕ್ತಿದಾಯಕ ವಿಷಯಗಳೂ ನಮ್ಮ ಗಮನ ಸೆಳೆಯುತ್ತವೆ. 

ಪುಸ್ತಕದ ಒಂದು ಅಧ್ಯಾಯ “ಹೀಗೇ ಈ ಸಚಿನ್” ನಲ್ಲಿ ಕ್ರಿಕೆಟ್ ದಂತ ಕಥೆ ಸರ್ ಡಾನ್ ಬ್ರಾಡ್ಮನ್ ಹಾಗೂ ಸಚಿನ್ ಭೇಟಿಯ ಸಮಯದ ಒಂದು ಮಾತುಕತೆಯನ್ನು ಹೇಳಲಾಗಿದೆ. ಅದು ಹೀಗಿದೆ-

“ಸಚಿನ್ ಬ್ರಾಡ್ಮನ್ ಅವರನ್ನು ಭೇಟಿಯಾದದ್ದು ಅವರಿಗೆ ೯೦ ವರ್ಷ ತುಂಬಿದ ದಿನ. ಮಾತಿನ ನಡುವೆ ಹೀಗೇ ಒಂದು ಪ್ರಶ್ನೆ ಕೇಳಿದ್ದ. ನೀವು ಈಗ ಆಡುತ್ತಾ ಇದ್ದೀರಿ ಎಂದಿಟ್ಟುಕೊಂಡರೆ, ನಿಮ್ಮ ಸರಾಸರಿ ರನ್ ಹೇಗಿರುತ್ತಿತ್ತು? ಅವರು ನಗುತ್ತ “ ಬಹುಷಃ ೭೦ ಅಂತ ಇಟ್ಟುಕೊಳ್ಳಬಹುದೇನೋ?! ಎಂದಿದ್ದರು.

ಅದಕ್ಕೆ ಪ್ರತಿಕ್ರಿಯಿಸಿದ ಸಚಿನ್ ‘ನಿಮ್ಮ ಈಗಿನ ಸರಾಸರಿಯೇ ೯೯ರ ಮೇಲಿದೆಯಲ್ಲಾ!’ ಎಂದಿದ್ದಕ್ಕೆ ಅವರು ನಗುತ್ತಾ ಕೊಟ್ಟ ಉತ್ತರ : ‘೯೦ರ ಹರೆಯದ ವ್ಯಕ್ತಿ ಇನ್ನೆಷ್ಟು ತಾನೇ ಮಾಡಬಲ್ಲ ಹೇಳು!’

ಇದನ್ನು ನೆನೆದು ಮಗ ಅರ್ಜುನ್ ಗೆ ಸಚಿನ್ ಹೇಳಿದ್ದು ‘ಹನ್ನೊಂದರ ಅರ್ಜುನ್ ಆಗಲಿ ಅಥವಾ ೯೦ರ ಬ್ರಾಡ್ಮನ್ ಆಗಲಿ. ಇದೊಂದು ಆಟ ಎಂಬುದನ್ನು ಮರೆಯುವಂತಿಲ್ಲ. ಎಲ್ಲರೂ ಖುಷಿ ಪಡಬೇಕಾದದ್ದೇ ಮುಖ್ಯ'..."

ಸುಮಾರು ೭೫ ಪುಟಗಳ ಪುಟ್ಟ ಪುಸ್ತಕದ ಮುಖಪುಟ ವಿನ್ಯಾಸ ನಿಜಕ್ಕೂ ಆಪ್ತವಾಗಿದೆ. ಪುಸ್ತಕ ಕೊನೆಯ ಪುಟದಲ್ಲಿ ಸಚಿನ್ ಕ್ರೀಡಾ ಬದುಕಿನ ಅಂಕಿ ಅಂಶಗಳನ್ನು ನೀಡಿದ್ದಾರೆ. ಆಸಕ್ತರಿಗೆ ಇದು ಸಹಕಾರಿಯಾದೀತು.