ಸಜ್ಜನರ ಸಂಗ

ಸಜ್ಜನರ ಸಂಗ

ಒಂದು ರಾಜ್ಯದ ರಾಜನು ಒಂದು ಘೋಷಣೆ ಹೊರಡಿಸಿದ. ‘ನನ್ನ ರಾಜ್ಯದಲ್ಲಿರುವ ಎಲ್ಲಾ ಸಾಧು ಸನ್ಯಾಸಿಗಳು ದಯವಿಟ್ಟು ಮುಂದಿನ ಹುಣ್ಣಿಮೆಯ ದಿನ ರಾಜಧಾನಿಗೆ ಬರಬೇಕು'. ರಾಜನು ಯಾವುದೋ ಆಧ್ಯಾತ್ಮಿಕ ವಿಚಾರವನ್ನು ಚರ್ಚಿಸಲು ತಮ್ಮನ್ನು ಬರಹೇಳಿದ್ದಾರೆಂದು, ಆ ರಾಜ್ಯದ ಐವತ್ತಕ್ಕೂ ಹೆಚ್ಚಿನ ಸಾಧು ಸನ್ಯಾಸಿಗಳು ರಾಜಧಾನಿಗೆ ಬಂದು ಸೇರಿದರು. ಈ ವಿಚಾರವು ಜನರಿಗೆ ಗೊತ್ತಾಗಿ, ಈ ಕುರಿತು ಎಲ್ಲರೂ ಚರ್ಚೆ ನಡೆಸತೊಡಗಿದರು.

ಆ ರಾಜಧಾನಿಯಲ್ಲಿ ಒಬ್ಬ ಕಳ್ಳ ಠಳಾಯಿಸುತ್ತಿದ್ದ. ಅವನು ಈ ವಿದ್ಯಮಾನವನ್ನು ನೋಡಿ ಕುತೂಹಲಗೊಂಡ. ರಾಜನು ಎಲ್ಲಾ ಸಾಧು ಸನ್ಯಾಸಿಗಳಿಗೆ ಸಾಕಷ್ಟು ಹಣ ನೀಡಬಹುದು ಎಂದು ಊಹಿಸಿದ ಕಳ್ಳನು, ತನ್ನ ಕರಾಮತ್ತು ತೋರಲು ಇದು ಒಳ್ಳೆಯ ಅವಕಾಶ ಎಂದು ನಿರ್ಧರಿಸಿದ. ರಾಜನಿಂದ ದಾನ ಪಡೆದ ನಂತರ, ಸಾಧುಗಳ ಬಳಿ ಇದ್ದ ಹಣವನ್ನೂ ತಾನು ಕದಿಯಬಹುದು ಎಂದು ಯೋಚಿಸಿದ. ಕಳ್ಳನು ಸನ್ಯಾಸಿಯ ರೀತಿ ಬಟ್ಟೆಯನ್ನು ಧರಿಸಿ, ಸಾಧುಗಳ ಜತೆ ತಾನೂ ಅರಮನೆಯನ್ನು ಸೇರಿದ.

ರಾಜನು ಎಲ್ಲರಿಗೂ ನಮಸ್ಕರಿಸಿ, ‘ನನ್ನ ರಾಜ್ಯದಲ್ಲಿ ಅತಿ ಉನ್ನತ ಮಟ್ಟದಲ್ಲಿ ಚಿಂತಿಸುವವರು ಸಾಧು ಸನ್ಯಾಸಿಗಳು ಎಂಬುದು ನನ್ನ ಅಭಿಪ್ರಾಯ. ಈಗ ನಿಮ್ಮನ್ನು ಇಲ್ಲಿಗೆ ಆಹ್ವಾನಿಸಿದ್ದಕ್ಕೆ ಒಂದು ಕಾರಣವಿದೆ. ನನ್ನ ಮಗಳಿಗೆ ಸೂಕ್ತ ವರನನ್ನು ಹುಡುಕುತ್ತಿದ್ದೇನೆ. ನನ್ನ ಅಳಿಯನಿಗೆ ಆಧ್ಯಾತ್ಮದ ಪರಿಚಯವಿರಬೇಕು ಎಂಬುದು ನನ್ನ ಅಭಿಲಾಷೆ. ಅವಳನ್ನು ಮದುವೆಯಾಗುವವರಿಗೆ ಅರ್ಧ ರಾಜ್ಯವನ್ನು ಸಹ ಕೊಡುತ್ತೇನೆ. ತಮ್ಮಲ್ಲಿ ಯಾರಾದರೂ ಇದಕ್ಕೆ ಮುಂದೆ ಬರಬೇಕು' ಎಂದು ವಿನಂತಿ ಮಾಡಿದ.

ಇದನ್ನು ಕೇಳಿದ ಅರ್ಧಕ್ಕೂ ಹೆಚ್ಚಿನ ಸಾಧು ಸನ್ಯಾಸಿಗಳು ಎದ್ದು ನಿಂತು ‘ನಾವು ಅಧ್ಯಾತ್ಮಿಕ ಸಭೆ ಇದೆ ಎಂಬ ಅಭಿಪ್ರಾಯದಲ್ಲಿ ಬಂದಿದ್ದೆವು. ನಾವು ಧ್ಯಾನ ಮಾಡುತ್ತಾ ನೆಮ್ಮದಿಯಿಂದ ಇದ್ದೇವೆ.’ ಎಂದು ಅಲ್ಲಿಂದ ಹೊರಟರು. 

ಇನ್ನುಳಿದ ಸಾಧು ಸನ್ಯಾಸಿಯರನ್ನು ನೋಡುತ್ತಾ ರಾಜನು ‘ನಾನು ಉದ್ದೇಶವನ್ನು ಮುಂಚಿತವಾಗಿಯೇ ತಿಳಿಸಲು ಸಾಧ್ಯವಾಗಿಲ್ಲ. ಈಗ ಹೊರಟು ಹೋದ ಸಾಧುಗಳ ಕುರಿತು ನನಗೆ ಅಪಾರ ಗೌರವವಿದೆ. ನಿಮ್ಮಲ್ಲಿ ಯಾರಾದರೂ ನನ್ನ ಮಗಳನ್ನು ವರಿಸಲು ಸಿದ್ಧರಿದ್ದರೆ, ಅವರಿಗೆ ಮುಕ್ಕಾಲು ಭಾಗ ರಾಜ್ಯವನ್ನು ಕೊಡುತ್ತೇನೆ.’ ಎಂದು ಹೇಳಿದ.

ಆಗ ಕೆಲವು ಸಾಧುಗಳು ಎದ್ದು ನಿಂತು ‘ರಾಜನೇ, ನೀನು ಆಧ್ಯಾತ್ಮ ಚರ್ಚೆಗೆ ಆಹ್ವಾನಿಸಿದ್ದೀಯಾ ಎಂದು ನಾವು ದೂರದ ಊರುಗಳಿಂದ ಬಂದಿದ್ದೇವೆ. ಆದರೆ, ನಾವು ನಿನ್ನ ಮಗಳನ್ನು ಮದುವೆಯಾಗಲು ಸಿದ್ಧರಿಲ್ಲ. ಏಕೆಂದರೆ, ನಮಗೆ ಮದುವೆಯಾಗಿದೆ ಮತ್ತು ಗೃಹಸ್ಥ ಜೀವನದಲ್ಲೇ ನಾವು ಆಧ್ಯಾತ್ಮಿಕ ಚಿಂತನೆಯನ್ನು ನಡೆಸುತ್ತಾ ನೆಮ್ಮದಿಯಿಂದ ಇದ್ದೇವೆ. ನಿನ್ನ ಮಗಳನ್ನು ಮದುವೆಯಾಗಿ, ಮುಕ್ಕಾಲು ಭಾಗ ರಾಜ್ಯವನ್ನು ಪಡೆದರೆ, ನಮಗೆ ರಾಜ್ಯವನ್ನು ಕ್ಷೇಮವಾಗಿ ನಡೆಸುವ ಜವಾಬ್ದಾರಿಯೂ ಅಂಟಿಕೊಳ್ಳುತ್ತದೆ. ಆಗ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುವುದಿಲ್ಲ ಮತ್ತು ಆಧ್ಯಾತ್ಮ ಪಥವನ್ನು ಅನುಸರಿಸಲು ಸಾಧ್ಯವಾಗುವುದಿಲ್ಲ' ಎಂದು ಹೊರಟು ಹೋದರು. ಈ ರೀತಿ ಒಬ್ಬೊಬ್ಬರೇ ‘ನಮ್ಮ ಜೀವನದಲ್ಲಿ ಅಪಾರ ಸಂಪತ್ತು ಇಲ್ಲದಿದ್ದರೂ, ನಾವು ಬಹಳ ನೆಮ್ಮದಿಯಾಗಿದ್ದೇವೆ' ಎಂದು ಹೇಳಿ ಹೊರಟು ಹೋದರು. 

ಕೊನೆಯಲ್ಲಿ ಒಬ್ಬ ಸಾಧು ಇರುವುದನ್ನು ಕಂಡು ರಾಜನಿಗೆ ಖುಷಿಯಾಯಿತು. ಇವರೊಬ್ಬರು ಇಲ್ಲೇ ನಿಂತಿರುವುದರಿಂದ, ಅವರಿಗೆ ತನ್ನ ಮಗಳನ್ನು ಮದುವೆಯಾಗುವ ಆಸಕ್ತಿ ಇದೆ ಎಂದು ತಿಳಿದ ರಾಜನು ಅವರಿಗೆ ನಮಸ್ಕರಿಸಿದನು.

‘ಮಹಾಸ್ವಾಮಿಗಳೇ, ತಾವು ನನ್ನ ಮಗಳನ್ನು ವರಿಸಬೇಕು' ಎಂದನು. ಆಗ ಆ ವ್ಯಕ್ತಿಯು ‘ಮಹಾರಾಜ, ನಾನು ಸಾಧು ಅಲ್ಲ, ನಾನೊಬ್ಬ ಕಳ್ಳ. ನೀನು ಸಾಧುಗಳಿಗೆ ಧನ ಕನಕ ಕೊಡುತ್ತೀಯಾ ಎಂದು ಭಾವಿಸಿ ಅವರನ್ನು ದರೋಡೆ ಮಾಡುವ ಉದ್ದೇಶದಿಂದ ಈ ವೇಷ ಧರಿಸಿ ಬಂದೆ. ಆದರೆ, ಇವರೆಲ್ಲರೂ ಅರ್ಧ ರಾಜ್ಯವನ್ನು ಕೊಡುತ್ತೇನೆಂದರೂ, ಅದನ್ನು ತಿರಸ್ಕರಿಸಿ ತಮ್ಮ ಹಾದಿ ಹಿಡಿದರು. ಅವರಿಗೆ ಧ್ಯಾನ ಮತ್ತು ಆಧ್ಯಾತ್ಮಿಕ ಪಥವೇ ಮಿಗಿಲು ಎನಿಸಿತು. ಇವರ ಈ ತ್ಯಾಗ ನನ್ನ ಮನಸ್ಸನ್ನು ಬದಲಿಸಿದೆ. ನಾನೂ ಸಹ ಆ ಸಾಧುಗಳ ಮಾರ್ಗವನ್ನೇ ಅನುಸರಿಸುತ್ತೇನೆ' ಎಂದು ರಾಜನಿಗೆ ನಮಸ್ಕರಿಸಿ, ಧ್ಯಾನ ಮಾಡಲು, ಊರಿನ ಹೊರವಲಯದ ಬೆಟ್ಟಕ್ಕೆ ಹೊರಟ. ಸಜ್ಜನರ ಸಂಗದ ಸತ್ ಪ್ರಭಾವವನ್ನು ಈ ಕಥೆ ತಿಳಿಸುತ್ತದೆ.

-ಶಶಾಂಕ್ ಮುದೂರಿ 

(ವೇದಾಂತಿ ಹೇಳಿದ ಕಥೆ- ವಿಶ್ವವಾಣಿ ಕೃಪೆ)

ಚಿತ್ರ ಕೃಪೆ: ಅಂತರ್ಜಾಲ ತಾಣ