ಸಜ್ಜನ ರಾಜಕಾರಣಿ ಬಿ.ಎ.ಬೋಳಶೆಟ್ಟರು
ನಾಗೇಶ್ ಜೆ ನಾಯಕ ಇವರು ಬರೆದಿರುವ ನೂತನ ಪುಸ್ತಕ “ಸಜ್ಜನ ರಾಜಕಾರಣಿ ಬಿ.ಎ.ಬೋಳಶೆಟ್ಟರು" . ಈ ಕೃತಿಗೆ ಲೇಖಕರಾದ ಪ್ರಕಾಶ ಗ.ಖಾಡೆ ಇವರು ಸೊಗಸಾದ ಮುನ್ನುಡಿಯನ್ನು ಬರೆದಿದ್ದಾರೆ. ಅವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವಗಳು ನಿಮ್ಮ ಓದಿಗಾಗಿ...
“ಕನ್ನಡದ ಹೆಸರಾಂತ ಸಾಹಿತಿಗಳು , ಮಿತ್ರರಾದ ಸವದತ್ತಿಯ ನಾಗೇಶ ಜೆ. ನಾಯಕ ಅವರು ನಮ್ಮ ನಡುವಿನ ಅತ್ಯಂತ ಕ್ರಿಯಾಶೀಲ ಲೇಖಕರು. ಅವರ ಬರವಣಿಗೆ ವೈವಿಧ್ಯಮಯವಾದುದು. ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಬರೆದು ಛಾಪು ಮೂಡಿಸಿದ್ದಾರೆ. ಅವರ ಕಾವ್ಯವಂತೂ ಸವಿಯಾದುದು. ಗಜಲ್ ಮೂಲಕ ಗುರುತಿಸಿಕೊಂಡು ಅನೇಕ ಗಜಲ್ ಸಂಕಲನಗಳನ್ನು ಕೊಟ್ಟು ಜನಪ್ರಿರಾದವರು. ಓದಿನ ಹಸಿವನ್ನು ಸದಾ ಹಸಿಯನ್ನಾಗಿಯೇ ಇಟ್ಟುಕೊಂಡು ಬಂದು ನಿರಂತರ ಓದಿನ ಫಲಿತವಾಗಿ ಕೊಟ್ಟ ಅವರ ಓದಿನ ವಿಮರ್ಶಾ ಕೃತಿಗಳು ನಾಡವರ ಮೆಚ್ಚುಗೆಗೆ ಪಾತ್ರವಾಗಿವೆ. ಲೇಖಕ ಜಗತ್ತಿನ ಕಣ್ಣು, ಕಿವಿಯೂ ಆಗಬೇಕೆಂಬ ಮಾತಿದೆ. ಆತ ಒಟ್ಟಿಗೆ ಜಗತ್ತನ್ನು ಕಾಣುತ್ತಾ ತನ್ನ ಸುತ್ತಲ ಜಗತ್ತನ್ನು ಮರೆಯಬಾರದು ಎಂಬ ಮಾತೂ ಗಟ್ಟಿಯಾದುದು, ಈ ಮಾತಿಗೆ ಸಾಕ್ಷಿ ಎಂಬಂತೆ ನಾಗೇಶರು ತಮ್ಮ ಪರಿಸರದ ಸಾಧಕರನ್ನು, ಅವರ ಬದುಕಿನ ಕಥನವನ್ನು ಕಟ್ಟಿಕೊಡುವಲ್ಲಿ ಸ್ಥಳೀಯತೆಯನ್ನು ಮೆರೆವ ಕಾಯಕಕ್ಕೆ ಪುಷ್ಟಿ ನೀಡಿದ್ದಾರೆ. ಇದಕ್ಕೆ ಸಾಕ್ಷಿ ಎನ್ನುವಂತೆ ಈ ‘ಸಜ್ಜನ ರಾಜಕಾರಣಿ ಬಿ.ಎ.ಬೋಳಶೆಟ್ಟರು’ ಕೃತಿ ಬಂದಿದೆ.
ಬೆಳಗಾವಿ ಜಿಲ್ಲೆಯು ಕಲೆ, ಸಾಹಿತ್ಯ, ಸಂಸ್ಕಂತಿಗೆ ಹೆಸರಾದಂತೆ, ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲೂ ಖ್ಯಾತಿವೆತ್ತ ಜಿಲ್ಲೆಯಾಗಿದೆ. ಈ ಜಿಲ್ಲೆ ಬೈಲಹೊಂಗಲ, ಸವದತ್ತಿ ತಾಲೂಕುಗಳು, ಧಾರ್ಮಿಕ, ವ್ಯಾಪಾರ ವಾಣಿಜ್ಯ ಸಹಕಾರ ಶಿಕ್ಷಣ ಹಾಗೂ ಪ್ರಾಮಾಣಿಕತೆಯ ರಾಜಕಾರಣಕ್ಕೆ ಹೆಸರಾದುದು. ಈ ನೆಲದ ಅಪ್ಪಟ ಸಾಧಕರನ್ನು ಅವರ ಬದುಕಿನ ಸಾಧನೆಗಳೊಂದಿಗೆ ತುಂಬಾ ಕಾವ್ಯಾತ್ಮಕವಾಗಿ ಕಟ್ಟಿಕೊಟ್ಟ ಈ ಕೃತಿಯು ಚಾರಿತ್ರಿಕವಾದುದು, ಸಾಧಕರ ಬದುಕಿನೊಂದಿಗೆ ಶತಮಾನದ ಹಿಂದಿನ ಕಾಲದ ಜನರು ಅವರ ಮನಸ್ಥಿತಿಗಳನ್ನು ಕಟ್ಟಿಕೊಡುವ ಮೂಲಕ ನಾಗೇಶರು ಚರಿತ್ರೆಯ ಪುಟಗಳನ್ನು ವಿಸ್ತರಿಸಿದ್ದಾರೆ. ‘ಸಜ್ಜನ ರಾಜಕಾರಣಿ ಬಿ.ಎ. ಬೋಳಶೆಟ್ಟರು’ ಈ ಕೃತಿಯು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಉಡುಕೇರಿಯ ದಿವಂಗತ ಬಾಬುರಾವ್ ಅಣ್ಣಪ್ಪ ಬೋಳಶೆಟ್ಟಿ ಅವರ ಜೀವನಗಾಥೆಯಾಗಿದೆ.
1926 – 2006 ಕಾಲ ಘಟ್ಟದ ಎಂಟು ದಶಕಗಳ ಚರಿತ್ರೆಯನ್ನು ಬಹಳ ಅರ್ಥಪೂರ್ಣವಾಗಿ ನಾಗೇಶ ನಾಯಕರು ಕಟ್ಟಿಕೊಟ್ಟಿದ್ದಾರೆ. ಸಮಾಜಮುಖಿ ಚಿಂತನೆಯ ಬೋಳಶೆಟ್ಟರು ಕರ್ನಾಟಕ ವಿಧಾನಸಭೆಯ ಶಾಸಕರಾಗಿ, ವಿಧಾನ ಪರಿಷತ್ತಿನ ಸದಸ್ಯರಾಗಿ ಮಾಡಿದ ಜನಾನುರಾಗಿ ಕೆಲಸಗಳೆಲ್ಲಾ ಇಲ್ಲಿ ದಾಖಲಾಗಿವೆ. ಇವತ್ತು ನಾವು ಜನಮುಖಿ ಅಭಿವೃದ್ಧಿಯ ಬಗ್ಗೆ ಚಿಂತನೆಮಾಡುವ ಹೊತ್ತಿನಲ್ಲಿ ಕಳೆದ ಶತಮಾನದ ಮಧ್ಯಭಾಗದಲ್ಲಿ ಬೋಳಶೆಟ್ಟರು ಹಲವು ಪ್ರಥಮಗಳಿಗೆ ಕಾರಣರಾಗಿ ಜನ ಬದುಕಲು ಅಗತ್ಯವಾಗಿರುವ ಕ್ಷೇತ್ರಗಳನ್ನು ಹುಡುಕಿ ಅವುಗಳನ್ನು ಪೂರೈಸಿದರು. ಕೃಷಿ ಜಮೀನುಗಳಿಗೆ ನೀರಾವರಿ ಸೌಲಭ್ಯ, ಕುಡಿಯುವ ನೀರಿನ ಪೂರೈಕೆ, ಇಡೀ ಏಶಿಯಾ ಖಂಡದಲ್ಲಿಯೇ ಪ್ರಥಮ ಬೂದಿಹಾಳ ಏತ ನೀರಾವರಿ ಯೋಜನೆ, ನೀರು ಬಳಕೆದಾರರ ಸಹಕಾರ ಸಂಘ ಸ್ಥಾಪನೆ, ರಿಯಾಯಿತಿ ದರದಲ್ಲಿ ಪಡಿತರ ವಿತರಣೆ, ಗ್ರಾಮಗಳಲ್ಲಿ ಆರೋಗ್ಯ ಕೇಂದ್ರಗಳ ಸ್ಥಾಪನೆ, ನೂತನ ರಸ್ತೆಗಳ ನಿರ್ಮಾಣ ಹೀಗೆ ಜನಹಿತ ಕಾರ್ಯಗಳಿಗೆಲ್ಲ ಕಾಲಲ್ಲಿ ಚಕ್ರ ಕಟ್ಟಿಕೊಂಡು ತಿರುಗಾಡಿ ತನ್ನ ಸ್ವಂತಕ್ಕೆ ಏನನ್ನೂ ಮಾಡಿಕೊಳ್ಳದೇ ತನ್ನ ಜನಕ್ಕಾಗಿ ಹತ್ತು ಹನ್ನೇರಡು ಕೂರಿಗೆ ಜಮೀನು ಕಳೆದುಕೊಂಡು ಜನಮಾಸದಲ್ಲಿ ಶಾಸ್ವತವಾದ ಸ್ಥಾನ ಪಡೆದುಕೊಂಡ ಈ ಹಿರಿಯರ ಜೀವನಗಾಥೆಯೇ ಒಂದು ಚರಿತ್ರೆ. ಈ ಎಲ್ಲದರ ಸವಿಸ್ತಾರ ಮಾಹಿತಿಯೊಂದಿಗೆ ಈ ಹಿರಿಯರ ಸಾರ್ಥಕ ಬದುಕಿನ ಕ್ಷಣಗಳು ಈ ಕೃತಿ ಕಟ್ಟಿಕೊಡುತ್ತದೆ.
ಒಂದೊಂದು ಅಧ್ಯಾಯಗಳು ವ್ಯಕ್ತಿತ್ವ ದರ್ಶನದ ಬೆಳಕಾಗಿವೆ. ಬೋಳಶೆಟ್ಟರ ಬದುಕಿನ ಅಪರೂಪದ ಪ್ರಸಂಗಗಳು ಅಧ್ಯಾಯದಲ್ಲಿ ಮಾನವೀಯತೆಯ ಪ್ರತಿರೂಪ ಕಾಣುತ್ತೇವೆ. ಶಿಕ್ಷಕರು ಕಂಡ ಸಂಸ್ಥಾಪಕರ ಅಧ್ಯಕ್ಷರ ವ್ಯಕ್ತಿತ್ವ ಅಧ್ಯಾಯದಲ್ಲಿ ಭವಿಷ್ಯತ್ತಿಗೆ ಬೆಳಕಾದ ರವಿಯನ್ನು ಕಾಣುತ್ತೇವೆ. ಉಡಿಕೇರಿಯ ಗ್ರಾಮಸ್ಥರು ತಮ್ಮ ನೆಲದ ನಕ್ಷತ್ರದ ಕುರಿತು ಹಂಚಿಕೊಂಡ ಮಾಹಿತಿಗಳು ಹೃದ್ಯವಾಗಿವೆ. ನಾಗೇಶ ನಾಯಕರು ನಮ್ಮ ನಡುವೆ ದಾಖಲಾಗದೇ ಕಳೆದುಹೊಗುತ್ತಿದ್ದ ಆ ಕಾಲದ ಸಂದರ್ಭಗಳನ್ನು, ಬೋಳಸೆಟ್ಟರ ಬದುಕಿನ ಪಯಣವನ್ನು ದಾಖಲಿಸಿಕೊಟ್ಟಿರುವುದು ಸ್ಮರಣೀಯವಾದುದು. ಬಡ ಮಕ್ಕಳ ಶಿಕ್ಷಣಕ್ಕಾಗಿ, ಗ್ರಾಮೀಣ ಮಕ್ಕಳ ಓದಿಗಾಗಿ ತೆರೆದ ಶಿಕ್ಷಣ ಸಂಸ್ಥೆಗಳು ಇಂದು ಹೆಮ್ಮರವಾಗಿ ಬೆಳೆದು ಕಟ್ಟಿದವರ ಕನಸಿಗೆ ಕೋಡು ಮೂಡಿಸಿವೆ. ಅನೇಕರ ಬದುಕಿಗೆ ಬೆಳಕಾಗಿವೆ. ಅಕ್ಷರ ಬೆಳಕು ಸುತ್ತೆಲ್ಲ ಪಸರಿಸಿದೆ. ಅಜಾತ ಶತ್ರುವಾಗಿ ಬೋಳಶೆಟ್ಟರು ಇಂದು ನಮ್ಮ ಕಾಲದ ಆದರ್ಶವಾಗಿದ್ದಾರೆ. ಅನೇಕರು ಅವರ ವ್ಯಕ್ತಿತ್ವದ ಬಗ್ಗೆ ಇಲ್ಲಿ ಮಾತನಾಡಿದ್ದಾರೆ. ಅವರ ಆತ್ಮೀಯ ಒಡನಾಟಕ್ಕೆ ಬಂದವರು, ಅವರ ನೆರವು, ಸಹಕಾರ ಪಡೆದವರು ನೆನಸಿ ತಮ್ಮ ಋಣ ಸಂದಾಯ ಮಾಡಿದ್ದಾರೆ. ಈ ಕೃತಿಯು ಹಲವು ಸಾಧನೆಗಳ ಮೊತ್ತವಾಗಿವೆ, ಸವಿಯಾದ ಭಾಷೆ, ಅಚ್ಚುಕಟ್ಟಾದ ನಿರೂಪಣೆ, ಕಾಲಘಟ್ಟದ ಕ್ರಮಾಗತತೆ, ವ್ಯಕ್ತಿತ್ವ ದರ್ಶನದ ಅಭಿವ್ಯಕ್ತಿ ಎಲ್ಲವು ಇಲ್ಲಿ ನಾಗೇಶರ ಬರಹದ ಮೂಲಕ ಸಾಧ್ಯವಾಗಿದೆ. ಒಟ್ಟಾರೆ ಇಲ್ಲಿ ನಾಗೇಶರ ಶ್ರಮವನ್ನು ಕಾಣುತ್ತೇವೆ. ಸಾಧಕರ ಜೀವನ ಚರಿತ್ರೆ ಬರೆಯುವವರಿಗೆ ಈ ಕೃತಿ ಮಾದರಿಯಾಗಿ ನಿಲ್ಲುತ್ತದೆ. ಇಂಥ ಚರಿತಾರ್ಹ ಕೃತಿಕೊಟ್ಟ ನಾಗೇಶರನ್ನು ಅತ್ಯಂತ ತುಂಬು ಹೃದಯದಿಂದ ಅಭಿನಂದಿಸುತ್ತೇನೆ.”