ಸಡಿಲ ಮಾತುಗಳು ತರವಲ್ಲ
ಲೋಕಸಭಾ ಚುನಾವಣಾ ಕಣವು ದಿನದಿಂದ ದಿನಕ್ಕೆ ಹೆಚ್ಚೆಚ್ಚು ಕಾವೇರುತ್ತಿರುವಂತೆಯೇ ಕೆಲವು ರಾಜಕೀಯ ಮುಖಂಡರ ಸಡಿಲ ಮಾತುಗಳೂ ಹೆಚ್ಚುತ್ತಿರುವುದು ವಿಷಾದನೀಯ. ಚುನಾವಣೆಯಲ್ಲಿ ಗೆದ್ದರೆ ತಾವೇನು ಮಾಡಬಲ್ಲೆವು ಎಂಬ ಗುಣಾತ್ಮಕ ವಿಚಾರವನ್ನು ಮಂಡಿಸುವುದಕ್ಕಿಂತ ಹೆಚ್ಚಾಗಿ ಕೆಲವರು ತಮ್ಮ ವಿರೋಧಿಗಳನ್ನು ವೈಯಕ್ತಿಕವಾಗಿ ಟೀಕಿಸುವ ನಕಾರಾತ್ಮಕ ರಣತಂತ್ರಕ್ಕೆ ಜೋತುಬಿದ್ದಿರುವುದು ಸಲ್ಲದ ನಡವಳಿಕೆ. ವಿರೋಧಿ ಮುಖಂಡರ ಕುರಿತಂತೆ ಟೀಕೆಗಳನ್ನು ಮಾಡುವುದಾದರೂ ಅದು ಆರೋಗ್ಯಪೂರ್ಣವಾಗಿರಬೇಕು ಹಾಗೂ ಸಭ್ಯತೆಯ ಎಲ್ಲೆ ಮೀರಬಾರದು.ಆದರೆ ಕೆಲವರು ಸಭ್ಯತೆಯ ಎಲ್ಲೆ ಮೀರಿ ಮಾತನಾಡುತ್ತಿದ್ದು, ರಾಜಕೀಯದ ಘನತೆ ಗೌರವ ಕುಂದಿಸುತ್ತಿದ್ದಾರೆ. ಇಂತಹ ಅಸಭ್ಯ ಮಾತುಗಳು ಪ್ರತಿದಿನವೆಂಬಂತೆ ವರದಿಯಾಗುತ್ತಿದ್ದು, ಇದು ತಗ್ಗುವ ಸೂಚನೆಗಳಂತೂ ಕಾಣುತ್ತಿಲ್ಲ. ಕೇವಲ ಒಂದೆರಡು ಪಕ್ಷಗಳ ಮುಖಂಡರಷ್ಟೇ ಅಲ್ಲದೆ ಬಹುತೇಕ ಎಲ್ಲಾ ಪಕ್ಷಗಳ ಮುಖಂಡರೂ ಇಂತಹ ಅಸಭ್ಯ ಮಾತುಗಳ ಬಳಕೆಯಲ್ಲಿ ತೊಡಗಿರುವುದಂತೂ ಇನ್ನೂ ವಿಷಾದನೀಯ.
ಕರ್ನಾಟಕದಲ್ಲಿ ಕೆಲವು ಆಡಳಿತಾರೂಢ ಪಕ್ಷದ ಮುಖಂಡರಷ್ಟೇ ಅಲ್ಲದೆ ಕೆಲವು ಸಚಿವರು ಕೂಡಾ ನಿಂದನಾತ್ಮಕ ಮಾತುಗಳನ್ನಾಡಿ ವಿವಾದ ಸೃಷ್ಟಿಸಿದ್ದಾರೆ. ಪ್ರಧಾನಿ ಮೋದಿಯವರನ್ನು ವೈಯಕ್ತಿಕ ನೆಲೆಯಲ್ಲಿ ಟೀಕಿಸುವುದು ಹೆಚ್ಚುತ್ತಿದೆ. ಮಾತಿಗೆ ಪ್ರತಿ ಮಾತು, ಟೀಕೆಗೆ ಪ್ರತಿಟೀಕೆಯೆಂಬಂತೆ ಇಂತಹ ಪಕ್ಷಗಳವರಿಂದಲೂ ಕೆಲವೊಮ್ಮೆ ಇಂತಹುದೇ ನಿಂದನಾತ್ಮಕ ಪದ ಬಳಕೆಯಾಗುತ್ತದೆ. ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಪರ ಸ್ಪರ್ಧಿಸುತ್ತಿರುವ ಚಿತ್ರನಟಿ ಕಂಗನಾ ರಾಣಾವತ್ ವಿರುದ್ಧ ಕಾಂಗ್ರೆಸಿನ ಸುಪ್ರಿಯಾ ಶ್ರೀನೇತ್ ಕೀಳುಮಟ್ಟದ ಟೀಕೆ ಮಾಡಿದ್ದು ಅದರ ವಿರುದ್ಧವಾಗಿ ಕಂಗನಾ ದೂರು ನೀಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ದಿಲೀಪ್ ಘೋಷ್ ರವರು ಮಮತಾ ಬ್ಯಾನರ್ಜಿಯ ತಂದೆಯ ಕುರಿತಂತೆ ಅನುಚಿತ ಮಾತನ್ನಾಡಿದ್ದು, ಅವರಿಗೆ ಸ್ವತಃ ಬಿಜೆಪಿಯೇ ನೋಟೀಸ್ ನೀಡಿದೆ. ತಮಿಳುನಾಡಿನಲ್ಲಂತೂ ಡಿಎಂಕೆ ಮುಖಂಡರು ಬಿಜೆಪಿ ವಿರುದ್ಧ, ಹಿಂದುಗಳ ವಿರುದ್ಧ ಹಾಗೂ ಪ್ರಧಾನಿ ಮೋದಿಯವರ ವಿರುದ್ಧ ಅತ್ಯಂತ ಕೆಟ್ಟ ಪದಗಳನ್ನು ಬಳಕೆ ಮಾಡುತ್ತಿದ್ದಾರೆ. ಹಿಂದೆಯೂ ಅಷ್ಟೆ. ಪ್ರಧಾನಿ ಮೋದಿಯವರ ವಿರುದ್ಧ ಅತ್ಯಂತ ನಿಂದನಾತ್ಮಕ ಪದಗಳನ್ನು ಆಡಲಾಗಿತ್ತು. ಹಾಗೆ ಮಾತನಾಡಿದವರು ಬಳಿಕ ಸೋತು ಹೆಸರಿಲ್ಲದಂತಾಗಿದ್ದರು.
ಈಗಲೂ ಅಷ್ಟೆ. ಚುನಾವಣೆಯೆಂಬುದು ಅರೋಗ್ಯಪೂರ್ಣ ನೆಲೆಯಲ್ಲಿ ನಡೆಯಬೇಕು. ಪ್ರತಿಯೊಂದು ಪಕ್ಷವೂ ತನ್ನ ಸಿದ್ಧಾಂತ, ನೀತಿಗಳನ್ನು ಪ್ರಚುರಪಡಿಸುವುದರ ಜತೆಗೇ ಎದುರಾಳಿ ಪಕ್ಷದ ಸಿದ್ಧಾಂತಗಳು ಸಮಾಜಕ್ಕೆ ಪ್ರತಿಕೂಲವಾಗಿದ್ದಾರೆ ಆ ಕುರಿತಂತೆ ಜನತೆಯ ಗಮನ ಸೆಳೆಯುವುದು ತಪ್ಪಲ್ಲ. ಆದರೆ ಚುನಾವಣಾ ಅಭ್ಯರ್ಥಿಯ ಮೇಲೆ ವ್ಯಕ್ತಿಗತ ನೆಲೆಯಲ್ಲಿ ನೀತಿ ಪದಗಳನ್ನು ಬಳಸಿ ನಿಂದಿಸುವುದು ಸಲ್ಲದು. ಈ ವಿಷಯದಲ್ಲಿ ಎಲ್ಲರೂ ಬಾಯಿಗೆ ಬೀಗ ಹಾಕಿಕೊಳ್ಳುವುದು ಮುಖ್ಯ.
ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿ: ೨೮-೦೩-೨೦೨೪
ಚಿತ್ರ ಕೃಪೆ: ಅಂತರ್ಜಾಲ ತಾಣ