ಸಣ್ಕತೆ - ಅಸಡ್ಡೆ

ಸಣ್ಕತೆ - ಅಸಡ್ಡೆ

ಶಾರದಮ್ಮನಿಗ್ಯಾಕೋ ವಿಪರೀತ ಸುಸ್ತು ಸಂಕಟ. ಮಕ್ಕಳಿಗೆಲ್ಲ ರೆಕ್ಕೆಪುಕ್ಕ ಬಂದು ಸ್ವತಂತ್ರವಾದ ಬದುಕಿನತ್ತ ವಾಲಿದ್ದರು. ಯಾರಲ್ಲಿ ಹೇಳೋಣ ಕಷ್ಟವನ್ನು ಎಂದು ಯೋಚಿಸಿ ಹಣ್ಣಾದರು. ವಾಂತಿಯೂ ಬಂದಾಗ ಪತಿರಾಯರ ನುಡಿಗಳು ಕಾದ ಸೀಸ ಕಿವಿಗಳಿಗೆ ಹೊಯಿದಂತಾಯಿತು. ತಿಂದದ್ದು ಅಜೀರ್ಣವಾಗಿರಬಹುದು, 'ಎರಡು ಯಾಲಕ್ಕಿ ಕಾಳು ಬಾಯಿಗೆ  ಹಾಕಿಕೊ' ಎನ್ನುತ್ತಾ ಜಾತಕ ತಿರುವಿ ಹಾಕತೊಡಗಿದರು.

ಎದೆಯಲ್ಲಿ ಅವಲಕ್ಕಿ ಕುಟ್ಟಿದಂತಾದ ಅನುಭವ, ಸುಸ್ತು ತಡೆಯಲಾರದೆ ಮಲಗಿದರು. ಮನೆಗೆ ಬಂದ ದೊಡ್ಡ ಮಗನ ಹತ್ತಿರ ಹೇಳುವ ಮಾತುಗಳು ಬೇಡವೆಂದರೂ ಕೇಳಿಸಿತು. 'ಮಗ, ನಿನ್ನ ಅಮ್ಮನಿಗೆ ಆಯುಷ್ಯ ಇಲ್ಲ. ಮತ್ಯಾಕೆ ಆಸ್ಪತ್ರೆಗೆ ಹೋಗುವುದು. ಬಹುಶಃ ಮಣ್ಣಿಗೆ ಸೇರುವ ದಿನ ಬಂತು ನೋಡು. ಹೋದರೆ ಅದು ಇದು ಪರೀಕ್ಷೆ ಎಂದು ಹಣ ಸುಲಿಗೆ ಹೊರತು, ಜೀವ ಸಿಗದು, ದುಡ್ಡು ದಂಡ' ಎಂಬುದಾಗಿ. ಹದಿನಾಲ್ಕರ ಹರೆಯದಲ್ಲಿ ರಾಯರ ಮನೆಗೆ ಕಾಲಿಟ್ಟವಳು, ನಾಲ್ಕು ಮಕ್ಕಳನ್ನೂ ಸಾಕಿ ಬೆಳೆಸಿ, ಇವರಿಗೇನೂ ಕೊರತೆಯಾಗದಂತೆ ನೋಡಿದವಳು, ಗಾಣದೆತ್ತಿನಂತೆ ದುಡಿದವಳ ಬಗ್ಗೆ ಎಂಥ ಅಸಡ್ಡೆ' ಅನಿಸಿತು. ಮೌನವಾಗಿ ಸುರಿಸಿದ ಕಣ್ಣೀರು ಸೆರಗನ್ನು ತೋಯಿಸಿತು. ವಿಧಿಲಿಖಿತ ಇದ್ದಂತಾಗಲಿ ಎಂದು ಕುಟುಂಬ ವೈದ್ಯರನ್ನು ಮಗಳ ಮೂಲಕ ಸಂಪರ್ಕಿಸಿ ಬೇಕಾದ ಔಷಧೋಪಚಾರ ಮಾಡಿಸಿದೆ. ಒಂದು ತಿಂಗಳಿನಲ್ಲಿ ಸಂಪೂರ್ಣ ಗುಣಮುಖಳಾಗಿ, ರಾಯರ ಒಪ್ಪಿಗೆ ಪಡೆದು ಮಗಳ ಮನೆಯತ್ತ ಹೆಜ್ಜೆ ಹಾಕಿದೆ.

(ಸತ್ಯ ಘಟನೆ ಆಧರಿಸಿ)

-ರತ್ನಾ ಕೆ.ಭಟ್, ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ