ಸಣ್ಕತೆ - ನಿನಗೆ ನಾನು ನನಗೆ ನೀನು
ಜಾನಕಮ್ಮ ರಾಯರಿಗೆ ಬೆಳಗಿನ ಕಾಫಿ ಕೊಟ್ಟವರು ಅಲ್ಲೇ ಕುಸಿದು ಕುಳಿತರು. ಮಡದಿಗೆ ಏನೋ ಹೇಳಲಿದೆಯೆಂದು ಗ್ರಹಿಸಿ ರಾಯರು, 'ಜಾನಕಿ' ಎಂದು ಮುಖ ನೋಡಿದರು. 'ಏನು ಯೋಚನೆ ನಿನಗೆ ಹೇಳು? ಕರುಳಬಳ್ಳಿ ಗೊತ್ತು ಗುರಿ, ಹಿಂದೆ-ಮುಂದೆ ಇಲ್ಲದವನ ಜೊತೆ ಹೋದಳೆಂದೇ? ಹೊಟ್ಟೆಯಲ್ಲಿ ಹುಟ್ಟಿದ ಮಗನನ್ನು, ಹೊಟ್ಟೆಬಾಯಿ ಕಟ್ಟಿ ಸಾಕಿ ಬೆಳೆಸಿದೆವು. ತುತ್ತು ಕೊಟ್ಟವಳಿಗಿಂತ ಮುತ್ತು ಕೊಡುವವಳ ಮಾತಿಗೆ ಕೋಲೆ ಬಸವನ ಹಾಗೆ ತಲೆಯಾಡಿಸಿಕೊಂಡು, ನಮ್ಮನ್ನು ಕಾಲಕಸಕ್ಕಿಂತ ಕಡೆಯಾಗಿಸಿ ಹೋದ ಅಂತಲೇ? ನೋಡು, ಯಾಕೆ ಚಿಂತೆ ಮಾಡ್ತಿ? ನಿನಗೆ ನಾನು, ನನಗೆ ನೀನು. ಗಟ್ಟಿಮುಟ್ಟಾಗಿದ್ದೇವೆ. ಕಷ್ಟಪಟ್ಟು ಸಾಕಿಬೆಳೆಸಿದ ಗಿಡಮರಗಳಿವೆ. ಹಟ್ಟಿಯಲ್ಲಿರುವ ಗಂಗೆ, ಕಪಿಲೆಯರು, ಮೋತಿ ನಾಯಿ, ಮಿಂಚುಳ್ಳಿ ಬೆಕ್ಕು ಇವೆಲ್ಲ ಜೊತೆಗಿರುವಾಗ ಬೇಸರ ಬೇಡ. ನೆರೆಹೊರೆ ಚೆನ್ನಾಗಿದೆ. ಮಗನ ಹೆಂಡತಿಯ ತಾಯಿಯ ಕೈವಾಡ ಇದರಲ್ಲಿ ಇದೆ ಎಂಬುದು ನನಗೆ ಗೊತ್ತಾಗಿದೆ. ಹೆತ್ತವರಿಗಿಂತ ಹೆರವರೇ ಹೆಚ್ಚಾದರು ಅವನಿಗೆ. ಏನೋ ಬೇರೆಯವರ ಮಾತು ಕೇಳಿ ಹೇಳಬಾರದ ಮಾತುಗಳನ್ನು ಹೇಳಿಹೋದ. ಬಿಟ್ಟುಬಿಡು ಜಾನಕಿ. ನಮ್ಮ ಈ 'ಮಾಯದ ನೋವಿಗೆ ಕಾಲವೇ ಮದ್ದು' ಎಂದು ಪತ್ನಿಯನ್ನು ಎದೆಗಾನಿಸಿಕೊಂಡರು.
-ರತ್ನಾ ಕೆ.ಭಟ್ ತಲಂಜೇರಿ
ಸಾಂಕೇತಿಕ ಚಿತ್ರ ಕೃಪೆ: ಇಂಟರ್ನೆಟ್ ತಾಣ