ಸಣ್ಣಕಥೆ - ನಿರ್ಧಾರ

ಸಣ್ಣಕಥೆ - ನಿರ್ಧಾರ

ಮನೆಯಿಂದ ಹೊರಹೋಗುವಿರಾ? ಅಲ್ಲ ನಾನೇ ಹೊರಹಾಕಲಾ? ಬೆಳೆದು ನಿಂತ ಮಗನ ಪ್ರಶ್ನೆಗೆ ತಬ್ಬಿಬ್ಬಾದರು ಸುಂದರರಾಯರು. ಈ ಪ್ರಾಯಸಂದ ಕಾಲದಲ್ಲಿ ಎಲ್ಲಿಗೆ ಹೋಗುವುದು? ಏನು ಮಾಡುವುದು? ಯಾರ ಕೈಬಾಯಿ ಒಳ್ಳೆಯದೆಂದು ನೋಡುವುದು? ಎಂದು ಚಿಂತಿಸಿದರು. ಜೊತೆಗೆ ಆಗಾಗ ಕಾಡುವ ಕೆಮ್ಮಿನಿಂದ ಬಳಲುವ ಪತ್ನಿ ಗಿರಿಜ. ಸೊಸೆ ರಮ್ಯಳಿಗೆ ಅತ್ತೆ ಮಾವನ ಕೆಮ್ಮು, ಸೀನು ಅಸಹ್ಯವಂತೆ, ಹಾಗೆಂದು ಎದುರಿಗೇ ಹೇಳಿ ಹಂಗಿಸುತ್ತಿದ್ದಳು. ಅವಳ ಮಾತನ್ನು ಕೇಳಿದ ಮಗ ಕೋಲೆ ಬಸವನ ಹಾಗೆ ತಲೆಯಾಡಿಸುವುದು ಕಂಡಾಗ, ರಾಯರಿಗೆ ಮನದೊಳಗೆ ಸಿಟ್ಟು ಕುದಿಯುತ್ತಿತ್ತು. ಮಗನನ್ನು ಸಾಕುವುದರಲ್ಲಿ ಎಡವಿದೆವೋ ಎಂದು ಯೋಚಿಸಿದ್ದೂ ಇದೆ.

ಮದುವೆಯಾಗಿ ಹತ್ತು ವರ್ಷದ ಅನಂತರ ಹುಟ್ಟಿದ ಓರ್ವನೇ ಪುತ್ರನಿಗೆ ನೀಡಿದ ಸಲುಗೆಯ ಪರಿಣಾಮ, ಓದಿಸಲು ತನ್ನವಳು ಕೊರಳ ತಾಳಿಯೊಂದು ಬಿಟ್ಟು ಮತ್ತೆಲ್ಲವನ್ನೂ ಗಿರವಿಯಿಟ್ಟು ನೀಡಿದ ಹಣದ ಸಹಾಯ ನೆನೆಸಿ ಕಣ್ಣಾಲಿಗಳು ತುಂಬಿತು. ನಾವು ಕೊಟ್ಟ ಸಲುಗೆಯ ಪರಿಣಾಮವಿದು ಅನುಭವಿಸಲೇಬೇಕು ಎಂದು ತನಗೆ ತಾನೇ ಹೇಳಿಕೊಂಡರು. ಹೋಗಲಿ ಮೊಮ್ಮಗಳನ್ನು ಅಪ್ಪಿ ಮುದ್ದಾಡೋಣವೆಂದರೆ ಅಜ್ಜ ಅಜ್ಜಿಯನ್ನು ಮುಟ್ಟಲು ಸಹ  ಬಿಡುತ್ತಿರಲಿಲ್ಲ. ರಾಯರ ಸ್ಥಿತಿ ಅಯೋಮಯವಾಗಿತ್ತು. ತೋಟ, ಮನೆ, ಆಸ್ತಿ ಎಂದು ಕಷ್ಟಪಟ್ಟು ಬೆವರಿಳಿಸಿ ದುಡಿದು ಹಣ್ಣಾದ ದೇಹ. ಯಾರಿಗಾಗಿ ಈ ದುಡಿತ? ಹುಟ್ಟಿದ ಮಗ ಅರ್ಥವೇ ಮಾಡಿಕೊಳ್ಳಲಿಲ್ಲ. ಬಂದ ಸೊಸೆಗೆ ನಾವು ಮುದಿಗೂಬೆಗಳು. ಯಾವ ಪ್ರತಿಫಲ ಅಪೇಕ್ಷೆಯಿಂದಲೂ ಕೆಲಸ ಮಾಡಿದ್ದಲ್ಲ. ಆದರೆ ಬಾಳ ಮುಸ್ಸಂಜೆಯಲ್ಲಿ ಹೊಟ್ಟೆಯಲ್ಲಿ ಹುಟ್ಟಿದ ಮಗ ಊರುಗೋಲಾಗಬೇಕಲ್ಲವೇ? ಎಲ್ಲಾ ಹಣೆಬರಹ. ತಪ್ಪಿಸಲು ಸಾಧ್ಯವಿಲ್ಲ.  

ಕೈತುಂಬಾ ಸಂಪಾದನೆಯಿರುವ ಇವನಿಗ್ಯಾಕೆ ಈ ತೋಟ, ಮನೆ ಎಂದು ಯೋಚಿಸಿದವರೇ, ಸಮೀಪದ ಅನಾಥ ಮಕ್ಕಳ 'ಆಸರೆ' ಸಂಸ್ಥೆಗೆ ನೋಂದಣಿ ದಾನವನ್ನು ನೀಡುವ ಬಗ್ಗೆ ಕಾಣಬೇಕಾದವರನ್ನು ಕಂಡು, ಮಾಡಬೇಕಾದ ಕೆಲಸ ಕಾರ್ಯಗಳನ್ನು ಮಾಡಿ, ಪತ್ನಿಯನ್ನು ಕರೆದುಕೊಂಡು ವೃದ್ಧಾಶ್ರಮದತ್ತ ಮುಖಮಾಡಿದರು. 'ಪೀಡೆ ತೊಲಗಿತು, ಹಳೆಯ ಕುರ್ಚಿಗಳು, ಕಾಲಿಗೆ ತೊಡರುತ್ತಿತ್ತು' ಎಂದು ಸಂತಸಪಟ್ಟಳು ಸೊಸೆ. ಕೆಲ ದಿನಗಳ ಬಳಿಕ ಅಪ್ಪನ ನಿರ್ಧಾರದ ಮೂಲಪ್ರತಿಗಳು ದೊರೆತು ಅದನ್ನು ಓದಿದ ಮಗ ಭೂಮಿಗಿಳಿದು ಹೋದವನ ಸ್ಥಿತಿ 'ರೈಲು ಹೋದ ಮೇಲೆ ಟಿಕೇಟ್ ತೆಗೆದಂತಾಗಿತ್ತು. 

(ಸತ್ಯ ಘಟನೆಯ ಸುತ್ತ)

-ರತ್ನಾ ಕೆ.ಭಟ್, ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ