ಸಣ್ಣದಾಗಿ ಹೊತ್ತಿಸಿ ಜ್ಞಾನವೆಂಬ ಬೆಳಕು...
ಬಚ್ಚಿಟ್ಟುಕೊಂಡಿದೆ
ಪ್ರೀತಿ ಸ್ನೇಹ ವಿಶ್ವಾಸ
ಆತ್ಮಸಾಕ್ಷಿಯ ಮರೆಯಲ್ಲಿ...
ಅವಿತುಕೊಂಡಿದೆ
ಕರುಣೆ ಮಾನವೀಯತೆ ಸಮಾನತೆ
ಆತ್ಮವಂಚಕ ಮನಸ್ಸಿನಲ್ಲಿ...
ಅಡಗಿ ಕುಳಿತಿದೆ
ತ್ಯಾಗ ನಿಸ್ವಾರ್ಥ ಕ್ಷಮಾಗುಣ
ಆತ್ಮಭ್ರಷ್ಟ ಮನದಾಳದಲ್ಲಿ...
ಕಣ್ಮರೆಯಾಗಿದೆ
ಸಭ್ಯತೆ ಒಳ್ಳೆಯತನ ಸೇವಾ ಮನೋಭಾವ
ಆತ್ಮವಿಮರ್ಶೆಯ ಗೂಡಿನಿಂದ...
ಓಡಿ ಹೋಗಿದೆ
ಧ್ಯೆರ್ಯ ಛಲ ಸ್ವಾಭಿಮಾನ
ಮನಸ್ಸಿನಾಳದಿಂದ...
ಅದರಿಂದಾಗಿಯೇ...
ಆಕ್ರಮಿಸಿಕೊಂಡು ಮೆರೆಯುತ್ತಿದೆ
ದುರಾಸೆ ದುರಹಂಕಾರ ಸ್ವಾರ್ಥ ಉಢಾಪೆ...
ತುಂಬಿ ತುಳುಕುತ್ತಿದೆ
ಕಾಮ ಕ್ರೋದ ಲೋಭ ಮೋಹ ಮದ ಮತ್ಸರಗಳು
ಇಡೀ ದೇಹದಲ್ಲಿ...
ಆದರೂ,
ನಿರಾಶರಾಗಬೇಕಾಗಿಲ್ಲ,
ಬಡಿದೆಬ್ಬಿಸಿ
ನಿಮ್ಮ ಸ್ವಾಭಿಮಾನವನ್ನು,..
ಹುಡುಕಿ ಎಳೆದು ತನ್ನಿ
ಪ್ರೀತಿ ವಿಶ್ವಾಸ ಸ್ನೇಹವನ್ನು,
ಒದ್ದೋಡಿಸಿ
ಅಡಗಿ ಕುಳಿತಿರುವ ದುಷ್ಟ ಶಕ್ತಿಗಳನ್ನು,
ಇದಕ್ಕಾಗಿ ನೀವೇನು ಶ್ರಮ ಪಡಬೇಕಾಗಿಲ್ಲ..
ಅತ್ಯಂತ ಸರಳ ವಿಧಾನವಿದೆ,
ಅದೆಂದರೆ..
ಸಣ್ಣದಾಗಿ ಹೊತ್ತಿಸಿ ಜ್ಞಾನವೆಂಬ ಬೆಳಕು,
ಪುಟ್ಟದಾಗಿ ಚಿಗುರಿಸಿ ಪ್ರೀತಿಯೆಂಬ ಸೆಳಕು,
ಆಗ ಮರೆಯಾಗುತ್ತದೆ ಕತ್ತಲೆಂಬ ಮನಸ್ಸಿನ ಕೊಳಕು,
ಮತ್ತೆ ಪ್ರಜ್ವಲಿಸುತ್ತದೆ ನಿಮ್ಮ ನಿಜ ವ್ಯಕ್ತಿತ್ವ, ಹಾಗಾದಲ್ಲಿ ನಮ್ಮೆಲ್ಲರ ಕನಸು ನನಸಾಗುತ್ತದೆ.....ಅದೇ.....
- ಜ್ಞಾನ ಭಿಕ್ಷಾ ಪಾದಯಾತ್ರೆಯ 265 ನೆಯ ದಿನ ಉಡುಪಿ ಜಿಲ್ಲೆಯ ಹೆಬ್ರಿ ತಾಲ್ಲೂಕಿನಿಂದ ಸುಮಾರು 36 ಕಿಲೋಮೀಟರ್ ದೂರದ ಶಂಕರನಾರಾಯಣ ಎಂಬ ಗ್ರಾಮ ತಲುಪಿ ಅಲ್ಲಿ ವಾಸ್ತವ್ಯ ಹೂಡಿತು.
-ವಿವೇಕಾನಂದ. ಹೆಚ್.ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ