ಸಣ್ಣದೊಂದು ಕೆಲಸ !

ಅಂದಿನ ಕಡೆಯ ರೈಲು ಪ್ಲಾಟ್ಫಾರ್ಮ್ ಬಿಟ್ಟು ಹೊರಟುಹೋಗಿತ್ತು. ವೃದ್ಧ ಮಹಿಳೆಯೊಬ್ಬರು ಒಬ್ಬಂಟಿಯಾಗಿ ಕುಳಿತಿದ್ದರು. ಗಮನಿಸಿದ ಕೂಲಿಯೊಬ್ಬ ಹತ್ತಿರ ಬಂದು "ಅಮ್ಮಾ, ಯಾರಿಗೆ ಕಾಯುತ್ತಿದ್ದೀರಿ? ಎಲ್ಲಿಗೆ ಹೋಗಬೇಕು?" ಎಂದು ಕೇಳಿದ.
"ನಾನು ದೆಹಲಿಗೆ ಹೋಗಬೇಕಿದೆ ಮಗ" ಅಂದರು ಆಕೆ.
"ಅಮ್ಮ, ಇವತ್ತು ಇನ್ನು ರೈಲುಗಳಿಲ್ಲ. ನಾಳೆ ಬೆಳಿಗ್ಗೆ ಬರುತ್ತೆ. ಬನ್ನಿ. ಇಲ್ಲಿ ರೆಸ್ಟ್ ತೆಗೆದುಕೊಳ್ಳಿ" ಅಂದ ಕೂಲಿ ಅವರನ್ನು ವೇಯ್ಟಿಂಗ್ ರೂಮಿಗೆ ಕರೆದೊಯ್ದ. ಸ್ವಲ್ಪ ಹೊತ್ತಾದ ಬಳಿಕ "ನಿಮ್ಮ ಮಗನ ಹೆಸರೇನು?" ಅಂತ ಕೇಳಿದ.
"ಅವನೂ ರೈಲ್ವೇ ಇಲಾಖೆಯಲ್ಲಿ ಕೆಲಸ ಮಾಡ್ತಿದ್ದಾನಂತೆ. ಏನು ಕೆಲಸ ಅಂತ ನನಗೂ ಗೊತ್ತಿಲ್ಲ" ಅಂದರು.
"ಹೆಸರೇನು ಅಮ್ಮ? ಅವರನ್ನು ಸಂಪರ್ಕ ಮಾಡಲು ಸಾಧ್ಯವಾ ನೋಡೋಣ" ಅಂದ.
"ಅವನ ಹೆಸರು ಲಾಲ್ ಬಹಾದ್ದೂರ್ ಶಾಸ್ತ್ರಿ. ನನಗೆ ಅವನು ಲಾಲ್" ಅಂದರು ಆ ತಾಯಿ ಮುಗ್ಧತೆಯಿಂದ ನಗುತ್ತಾ. ಶಾಸ್ತ್ರೀಜಿ ಆಗ ಕೇಂದ್ರ ರೈಲ್ವೇ ಮಂತ್ರಿ! ಶಾಕ್ ಆದ ಕೂಲಿಯವ ಸುದ್ದಿ ತಲುಪಿಸುತ್ತಲೇ ಇಡೀ ರೈಲು ನಿಲ್ದಾಣದಲ್ಲಿ ಮಿಂಚಿನ ಸಂಚಲನ. ಕೆಲವೇ ಹೊತ್ತಿನಲ್ಲಿ ಅಲ್ಲಿಗೆ ಕಾರ್ ಬಂತು. ಆಕೆಗೂ ಆಶ್ಚರ್ಯವೋ ಆಶ್ಚರ್ಯ.
ದೆಹಲಿ ತಲುಪಿ ಮಗನ ಬಳಿ ಮುಗ್ಧತೆಯಿಂದ "ಮಗಾ, ನೀನು ಏನು ಕೆಲಸ ಮಾಡ್ತೀಯ ಅಂತಲೇ ನನಗೆ ಗೊತ್ತಿಲ್ಲ. ಇವರೆಲ್ಲ ಕೇಳಿದ್ರು. ನನಗೆ ಹೇಳಲಿಕ್ಕೇ ಗೊತ್ತಾಗಲಿಲ್ಲ" ಅಂದರಾಕೆ ಮುಗ್ಧತೆ ತುಂಬಿದ ಮುಜುಗರದಿಂದ, ಸಂಕೋಚದಿಂದ ನಗುತ್ತಾ.
"ಸಣ್ಣದೊಂದು ಕೆಲಸ ಬಿಡು ಅಮ್ಮ" ಅಂದರು ಲಾಲ್ ಬಹುದ್ದೂರ್ ಶಾಸ್ತ್ರಿ ಅದೇ ಮುಗ್ಧತೆಯಿಂದ, ಅದೇ ಸಂಕೋಚದಿಂದ. ದುರಾದೃಷ್ಟ ಎಂದರೆ ಇವತ್ತು ಒಬ್ಬ ಪಂಚಾಯಿತಿ ಮೆಂಬರ್ ಗತ್ತು ಯಾವ ರೀತಿ ಇರುತ್ತೆ ಅಂತ ಬಿಡಿಸಿ ಹೇಳಬೇಕಿಲ್ಲ ಅಲ್ವೇ ?
***
ಮೇಲಿನ ಕಥೆ ನನಗೆ ವಾಟ್ಸಾಪ್ ಮೂಲಕ ಹಂಚಿಕೊಂಡು ಬಂತು. ಬರೆದವರಿಗೆ ಅನಂತ ವಂದನೆಗಳು. ಈಗಿನವರು ಈ ಕಥೆಯನ್ನು ಖಂಡಿತಾ ಸತ್ಯ ಎಂದು ತಿಳಿಯಲಿಕ್ಕಿಲ್ಲ. ಹೀಗೆಲ್ಲಾ ಪ್ರಾಮಾಣಿಕ ಮುಗ್ಧ ಜನರು ಇರುತ್ತಾರಾ? ಎನ್ನುವ ಜಗತ್ತಿನಲ್ಲಿ ನಾವಿಂದು ಬದುಕುತ್ತಿದ್ದೇವೆ. ಪ್ರಾಮಾಣಿಕತೆ ಮತ್ತು ಸರಳತೆಯನ್ನೇ ಉಸಿರಾಗಿಸಿಕೊಂಡ ಅಪರೂಪದ ಜೀವಿ ನಮ್ಮ ಎರಡನೇ ಪ್ರಧಾನ ಮಂತ್ರಿಯಾಗಿದ್ದ ಲಾಲ್ ಬಹಾದ್ದೂರ್ ಶಾಸ್ತ್ರಿ. ತಮ್ಮ ವೈಯಕ್ತಿಕ ಕೆಲಸಗಳಿಗಾಗಿ ಯಾವತ್ತೂ ಸರಕಾರದ ಸೌಲಭ್ಯವನ್ನು ಬಳಸಿಕೊಳ್ಳದ ವ್ಯಕ್ತಿ. ಇಂತಹವರ ಸಂಖ್ಯೆ ಈಗ ವಿರಳವಾಗುತ್ತಿದೆ.
ಈಗ ಪಾಕಿಸ್ತಾನ ಮತ್ತು ಭಾರತದ ನಡುವೆ ವೈಮನಸ್ಸು ಜೋರಾಗಿ ಯುದ್ಧದ ಕಾರ್ಮೋಡ ಕವಿಯುವ ವಾತಾವರಣ ನಿರ್ಮಾಣವಾಗುತ್ತಿದೆ. ಅಂದು ೧೯೬೫ರಲ್ಲಿ ಲಾಲ್ ಬಹಾದ್ದೂರ್ ಶಾಸ್ತ್ರಿಯವರು ಪ್ರಧಾನಿಯಾಗಿದ್ದ ಸಮಯದಲ್ಲಿ ಭಾರತದ ಮೇಲೆ ಪಾಕಿಸ್ತಾನ ಆಕ್ರಮಣ ಮಾಡಿದಾಗ ಕೇವಲ ಐದೇ ನಿಮಿಷದಲ್ಲಿ ಯುದ್ಧ ಮಾಡುವ ನಿರ್ಣಯವನ್ನು ಕೈಗೊಂಡಿದ್ದರು ಈ ವಾಮನ ಮೂರ್ತಿ. ಮನಸ್ಸಿನಲ್ಲಿ ಧೃಢ ನಿರ್ಧಾರ ಹೊಂದಿದ್ದ ಶಾಸ್ತ್ರಿಯವರು ‘ಜೈ ಜವಾನ್ ಜೈ ಕಿಸಾನ್’ ಎನ್ನುವ ಪ್ರೇರಣಾದಾಯಕ ಘೋಷ ವಾಕ್ಯವನ್ನು ನಮಗಾಗಿ ನೀಡಿದರು. ಪಾಕಿಸ್ತಾನದ ವಿರುದ್ಧದ ಯುದ್ಧದಲ್ಲಿ ಶತ್ರುಗಳನ್ನು ಸೋಲಿಸಿ ಮಣ್ಣುಮುಕ್ಕಿಸಿದ್ದರು. ಇದು ಶಾಸ್ತ್ರಿಯವರ ತಾಕತ್ತು.
ಭಾರತದಂತಹ ದೇಶದ ಪ್ರಧಾನ ಮಂತ್ರಿಯಾಗಿದ್ದೂ ಅವರು ನಿಧನ ಹೊಂದುವಾಗ ಅವರ ಹೆಸರಿನಲ್ಲಿ ತೆಗೆದುಕೊಂಡ ಕಾರ್ ನ ಸಾಲದ ಮೊತ್ತ ಬಾಕಿ ಇತ್ತು. ಶಾಸ್ತ್ರೀಜಿಯವರ ಪತ್ನಿ ಲಲಿತಾ ಶಾಸ್ತ್ರಿಯವರು ನಂತರದ ದಿನಗಳಲ್ಲಿ ಅದನ್ನು ತೀರಿಸಿದರು. ಈಗ ಕೇವಲ ಪಂಚಾಯತ್ ಸದಸ್ಯನೂ ಕೋಟಿ ರೂಪಾಯಿ ಬೆಲೆ ಬಾಳುತ್ತಾನೆ. ಶಾಸ್ತ್ರಿಗಳ ಆದರ್ಶವನ್ನು ಇಂದಿನ ರಾಜಕಾರಣಿಗಳು ‘ಹುಚ್ಚು’ ಎಂದಾರು. ಆದರೆ ಜಗತ್ತು ಪ್ರಾಮಾಣಿಕರನ್ನು ನೆನಪಿಟ್ಟುಕೊಳ್ಳಬೇಕು ಮತ್ತು ಅವರು ಹಾಕಿಕೊಟ್ಟ ದಾರಿಯಲ್ಲಿ ಸಾಗಬೇಕು.
(ಶಾಸ್ತ್ರೀಜಿ ಜೀವನ ಘಟನೆ ಸಂಗ್ರಹ)
ಚಿತ್ರ ಕೃಪೆ: ಅಂತರ್ಜಾಲ ತಾಣ