ಸಣ್ಣ ಕಥೆ: ಹತ್ತು ಡಾಲರಿನ ಸುತ್ತ...(ಭಾಗ 02/03)
ದಿನವೆಲ್ಲಾ ಮೀಟೀಂಗು, ಸೆಮಿನಾರು, ಲಂಚು, ಡಿನ್ನರುಗಳೆಂದು ಸಮಯವುರುಳಿದ್ದೆ ಗೊತ್ತಾಗಲಿಲ್ಲ ಲೌಕಿಕನಿಗೆ. ನೋಡ ನೋಡುತ್ತಿದ್ದಂತೆ ವಾಪಸು ಹೊರಡಬೇಕಾದ ಹಿಂದಿನ ದಿನವು ಬಂದು ಬಿಟ್ಟಿತ್ತು. ಮಾರನೆಯ ಬೆಳಗೆ ಚೆಕ್ ಔಟ್ ಮಾಡಬೇಕಿದ್ದ ಕಾರಣ ಎಲ್ಲಾ ಪ್ಯಾಕಿಂಗ್ ಮುಗಿಸಿ ರಾತ್ರಿ ಬೇಗನೆ ಮಲಗಿಬಿಡಬೇಕೆಂದು ಯೋಚಿಸಿದವನಿಗೆ ಇದ್ದಕ್ಕಿದ್ದಂತೆ ನೆನಪಾಗಿತ್ತು - ಬೆಳಗಿನ ಹೊತ್ತಲ್ಲಿ ದೊಡ್ಡದೊಂದು ಸರತಿ ಸಾಲೆ ಇರುವುದೆಂದು. ಅವನ ಜತೆಯಲ್ಲಿ ಬಂದಿದ್ದವರೆಲ್ಲ ಒಂದೆ ಸಾರಿ ವಾಪಾಸಾಗುವುದರಿಂದ ಆ ಅವಸರದಲ್ಲಿ ಸಾಲಲ್ಲಿ ಕಾಯುವುದು ತುಸು ತ್ರಾಸದಾಯಕವೆನಿಸಿತು. ಆಗಲೆ ಮತ್ತೊಂದು ಆಲೋಚನೆಯೂ ಹೊಳೆಯಿತು - 'ಯಾಕೆ ಹಿಂದಿನ ರಾತ್ರಿಯೆ ಚೆಕ್ ಔಟ್ ಮಾಡಿಬಿಡಬಾರದು?' ಎಂದು. ಬಿಲ್ ಎಲ್ಲ ಸೆಟಲ್ ಮಾಡಿ ಇನ್ವಾಯ್ಸ್ ತೆಗೆದುಕೊಂಡುಬಿಟ್ಟರೆ ಮರುದಿನ ಬರಿಯ ಡೋರ್ ಕೀ ವಾಪಸು ಕೊಟ್ಟು ಹೋಗಿಬಿಡಬಹುದು. ಕೊಡದೆ ಇದ್ದರು ಸಮಸ್ಯೆಯಿರುವುದಿಲ್ಲ - ಎಲೆಕ್ಟ್ರಾನಿಕ್ ಕೀ ಆದ ಕಾರಣ ಸಿಸ್ಟಮ್ಮಿನಲ್ಲೆ ಡೀ-ಆಕ್ಟಿವೇಟ್ ಮಾಡಿ ನಿಷ್ಕ್ರೀಯವಾಗಿಸಿಬಿಡುತ್ತಾರೆ. ಆದರೆ ಕೊನೆ ಗಳಿಗೆಯ ತರಲೆ, ತಾಪತ್ರಯ ಇರುವುದಿಲ್ಲ... ಸರಿ, ಅದೇ ಒಳ್ಳೆಯ ಯೋಜನೆ ಎಂದುಕೊಂಡವನೆ ನೇರ ಚೆಕ್-ಔಟ್ ಕೌಂಟರಿನಲ್ಲಿ ಆ ಸಾಧ್ಯತೆಯ ಕುರಿತು ವಿಚಾರಿಸತೊಡಗಿದ. ಬಹುಶಃ ಇಂತಹ ಎಷ್ಟೊ ಕೇಸುಗಳನ್ನು ನೋಡಿದ್ದವರಿಗೆ ಇದೇನು ಹೊಸ ಬೇಡಿಕೆಯಲ್ಲದ ಕಾರಣ, ' ನೋ ಪ್ರಾಬ್ಲಮ್..' ಎನ್ನುತ್ತಲೆ ಸರಸರನೆ ಅಲ್ಲೆ ಇನ್ವಾಯ್ಸ್ ಅನ್ನು ಪ್ರಿಂಟ್ ಮಾಡಿಕೊಟ್ಟುಬಿಟ್ಟರು. ಅದನ್ನೆತ್ತಿಕೊಂಡು ವಿವರಗಳತ್ತ ಕಣ್ಣು ಹಾಯಿಸಿ ಎಲ್ಲಾ ಸರಿ ಇದೆಯೆ ಎಂದು ನೋಡಿದರೆ ಯಾವುದೊ ಒಂದು ರೂಮ್ ಸರ್ವೀಸ್ ಐಟಂ ' ಹತ್ತು ಡಾಲರು' ಎಂದು ನಮೂದಿಸಿರುವುದು ಕಂಡು ಬಂತು. ಅದೇನಿರಬಹುದೆಂದು ನೋಡಿದವನಿಗೆ ರೂಮಿನ ಮಿನಿ ಬಾರಿನಿಂದ ಯಾವುದೊ ಸ್ನ್ಯಾಕ್ ಐಟಂ ತೆಗೆದುಕೊಂಡದ್ದಾಗಿ ನಮೂದಿಸಿದ್ದು ಕಂಡು ಬಂತು. 'ಅರೆರೆ...ಇದೇನಿದು? ನಾನು ಮಿನಿ ಬಾರಲ್ಲೇನು ಮುಟ್ಟೆ ಇಲ್ಲವಲ್ಲಾ? ಇದೇನೆಂದು ಕೇಳಿಬಿಡಲೆ? ಎಂದುಕೊಂಡವನಿಗೆ ಯಾವುದಕ್ಕು ಒಮ್ಮೆ ರೂಮಿನಲ್ಲಿ ಪರಿಶೀಲಿಸಿ ನಂತರ ವಿಚಾರಿಸುವುದು ವಾಸಿ ಎನಿಸಿ ಹಾಗೆ ಮಡಿಚೆತ್ತಿಕೊಂಡು ರೂಮಿನತ್ತ ನಡೆದ.. ಆದರು ಮನದಲ್ಲಿ ಮಾತ್ರ ಏನೊ ವಿಲಕ್ಷಣ ಚಡಪಡಿಕೆ, ಅಸಹನೆ, ನಿರಾಳವಿಲ್ಲದ ಭಾವ..
ಲಿಪ್ಟನ್ನೇರಿ ನಡೆದಾಗಲೂ ಅದೇ ಯೋಚನೆಯ ಗುಂಗು ತೀವ್ರವಾಗುತ್ತ ಹೋದಾಗ ' ಛೇ! ಕೇವಲ ಹತ್ತು ಡಾಲರಿನ ವಿಷಯಕ್ಕೇಕೆ ಇಷ್ಟೊಂದು ಚಿಂತೆ? ಪರಿಶೀಲಿಸಿ ನೋಡಿ ನಂತರ ತೆಗೆಸಿ ಹಾಕಿದರಾಯ್ತು.. ಅದಕ್ಕೇಕಿಷ್ಟೊಂದು ಆಳದ ಚಂಚಲತೆ, ಚಡಪಡಿಕೆ?' ಎಂದು ಸಮಾಧಾನ ಪಡಿಸಿಕೊಳ್ಳಲೆತ್ನಿಸಿದರು ಯಾಕೊ ಮನದ ಮೊರೆತ ಮಾತ್ರ ನಿಲ್ಲಲಿಲ್ಲ. ಹಣಕ್ಕಿಂತ ಹೆಚ್ಚಾಗಿ 'ಅದು ಹೇಗೆ ತಾನು ಮಾಡಿರದ ವೆಚ್ಚವೊಂದು ತನ್ನರಿವಿಲ್ಲದೆ ಸೇರಿಕೊಂಡುಬಿಟ್ಟಿತು ?' ಎಂಬ ಲೆಕ್ಕಾಚಾರದ ಜಿಜ್ಞಾಸೆಯೆ, ಘಟಿಸಿದ ಘಟನೆಯ ಕನಿಷ್ಠ ಗುರುತ್ವವನ್ನು ಆಲೋಚನೆಯಲ್ಲಿ ಗರಿಷ್ಠ ಮಟ್ಟಕ್ಕೇರಿಸಿ ಕಾಡತೊಡಗಿತು. ಅದರ ಮೊರೆತದ ಗದ್ದಲ ಯಾವ ಮಟ್ಟಕ್ಕೆ ಮುಟ್ಟಿಬಿಟ್ಟಿತ್ತೆಂದರೆ ರೂಮಿನ ಒಳಗೆ ತಲುಪಿದ ಕೂಡಲೆ ಅವನ ಗ್ರಹಿಕೆಗು ನಿಲುಕದ ವೇಗದಲ್ಲಿ ರಿಸೆಪ್ಷನ್ನಿನ್ನತ್ತ ಪೋನಾಯಿಸುವಷ್ಟು..
ಇವನ ಉದ್ವೇಗಪೂರ್ಣ ಅಹವಾಲನ್ನು ಆಲಿಸಿದ ಅತ್ತ ಕಡೆಯ ಮಧುರ ದನಿ, ಅಷ್ಟೆ ಶಾಂತ ದನಿಯಲ್ಲಿ, ' ಡೊಂಟ್ ವರಿ ಸಾರ್.. ಇಟ್ಸ್ ಆಲ್ರೈಟ್.. ನೀವು ನಾಳೆ ಹೊರಡುವಾಗ ಚೆಕ್ ಔಟ್ ಕೌಂಟರಿನಲ್ಲಿ ಹೇಳಿ, ಅವರು ತಿದ್ದಿದ ಮತ್ತೊಂದು ಬಿಲ್ ಕೊಡುತ್ತಾರೆ.. ಅದರಲ್ಲಿ ತೊಡಕೇನು ಇಲ್ಲ' ಎಂದಾಗ ಕುಣಿಯುತ್ತಿದ್ದ ಮನ ಸ್ವಲ್ಪ ತಹಬದಿಗೆ ಬಂದಿತ್ತು.
ನಂತರ ಶಾಂತನಾಗಿ ಮಾರನೆಯ ಪ್ಯಾಕಿಂಗಿನ ಕುರಿತು ಸಿದ್ದತೆ ನಡೆಸತೊಡಗಿದ ಲೌಕಿಕ, ಹೊರಗೆ ಹರಡಿಕೊಂಡಿದ್ದ ಮತ್ತು ನೇತು ಹಾಕಿದ್ದ ಬಟ್ಟೆ ಬರೆಗಳನ್ನೆಲ್ಲ ಒಂದೊಂದಾಗಿ ಮಡಚಿ ಒಳಗಿಡತೊಡಗಿದ. ಹಾಗೆಯೆ ಎಲ್ಲವನ್ನು ಸಾವರಿಸಿಡುತ್ತ ಇದ್ದಾಗ ಇದ್ದಕ್ಕಿದ್ದಂತೆ ಮಿನಿ ಬಾರಿನ ಕಡೆ ಗಮನ ಹರಿದು ಬಿಲ್ಲಿನಲ್ಲಿ ಸೇರಿಸಿದ್ದ ವಸ್ತುವೇನಿದ್ದಿರಬಹುದೆಂಬ ಕುತೂಹಲದ ತುಣುಕು ಮತ್ತೆ ಇಣುಕಿ, ಅದರ ಖಾನೆಯನ್ನೆಳೆದು ನೋಡಿದವನಿಗೆ ತಟ್ಟನೆ ದಿಗ್ಭ್ರಾಂತಿಯೊಂದು ಕಾಡಿತ್ತು...!
ಆ ಖಾನೆಯ ಮೇಲಿನ ಸಾಲಿನಲ್ಲಿದ್ದ ಒಂದು ತಿಂಡಿಯ ಡಬ್ಬದ ಮುಚ್ಚಳದ ಸೀಲು ತೆರೆದಂತಿದ್ದು, ಕಾಲು ಭಾಗ ಖಾಲಿಯಾಗಿರುವುದು ಕಾಣಿಸಿತು!
ಒಂದರೆಗಳಿಗೆ ತನ್ನ ಕಣ್ಣನ್ನೆ ನಂಬದವನಂತೆ ಅವಾಕ್ಕಾಗಿ ನಿಂತುಬಿಟ್ಟ ಲೌಕಿಕ... ತೆರೆದ ಡಬ್ಬಿ, ಅರೆ ಖಾಲಿಯಾಗಿದ್ದ ತಿನಿಸು, ಅದರ ಮಾಮೂಲಿ ಜಾಗದಲ್ಲಿ ಇಟ್ಟಿದ್ದ ಬದಲಿ ಹೊಸ ತಿನಿಸಿನ ಡಬ್ಬ - ತನಗೆ ಅರಿವಿಲ್ಲದಂತೆ ತಾನೆ ಏನಾದರು ತಿಂದುಬಿಟ್ಟಿರುವೆನೆ ? ಯಾವುದೊ ಜ್ಞಾನದಲ್ಲಿ ತಿಂದು ಮರೆತುಬಿಟ್ಟಿರುವೆನೆ ? ಎಲ್ಲವನ್ನು ಅಷ್ಟು ನಿಖರವಾಗಿ ನೆನಪಿನಲ್ಲಿಡುವ ತಾನು ಮರೆಯಲಾದರು ಹೇಗೆ ಸಾಧ್ಯ ? ಅದು ಈ ರೀತಿಯ ವಿಷಯದಲ್ಲಿ ತುಂಬಾ ಹುಷಾರಿ.. ಎರಡು ಹೆಜ್ಜೆ ನಡೆದರೆ ಹೋಟೆಲಿನೆದುರಿನ ಅಂಗಡಿಯಲ್ಲಿ ಕೇವಲ ಒಂದೆರಡು ಡಾಲರಿಗೆ ಅದೆ ತಿನಿಸೆ, ಅದೂ ದುಪ್ಪಟ್ಟು ಗಾತ್ರದ್ದು ಸಿಗುವಾಗ, ಈ ರೀತಿ ಹತ್ತಿಪ್ಪತ್ತು ಪಟ್ಟು ದುಬಾರಿ ಬೆಲೆ ತೆತ್ತು ಈ ಹಿಡಿ ಗಾತ್ರದ ಡಬ್ಬ ಕೊಳ್ಳುವ ಅನಿವಾರ್ಯವಾದರು ಏನು? ಇಲ್ಲ ಇದು ತಾನಂತು ಬಿಚ್ಚಿಟ್ಟ ಡಬ್ಬಿಯಲ್ಲ. ದಿನವೂ ಲಂಚು, ಡಿನ್ನರು ಎಂದು ಗಡದ್ದಾಗಿಯೆ ತಿನ್ನುತ್ತಿರುವುದರಿಂದ ರಾತ್ರಿ ಒಂದು ಹೊತ್ತಲ್ಲಿ ಹಸಿವೆಯಾಗಿ ತಿಂದದ್ದು ಎಂದು ಹೇಳುವ ಹಾಗೂ ಇಲ್ಲ... ಅಂದ ಮೇಲೆ ಇದನ್ನು ಎತ್ತಿಕೊಂಡು ಬಿಚ್ಚಿಟ್ಟದ್ದು ಅಲ್ಲದೆ ಕಾಲುಭಾಗ ತಿಂದು ಖಾಲಿ ಮಾಡಿದ್ದು ಯಾರು?
ಒಂದು ವೇಳೆ ಆ ರೂಮ್ ಸರ್ವೀಸಿನ ಭೂತಾನ್ ಹೆಂಗಸಿನ ಕೆಲಸವೇನಾದರು ಇರಬಹುದೆ ? ದಿನವೂ ರೂಮಿನ ಸರ್ವೀಸ್ ಮಾಡುತ್ತ, ಸ್ಟಾಕ್ ಬದಲಾಯಿಸುವಾಗ ಈ ಡಬ್ಬ ಪೊಟ್ಟಣಗಳು ಕಣ್ಣಿಗೆ ಬೀಳುತ್ತಲೆ ಇರುತ್ತವೆ. ಎದುರಿಗಿದ್ದರು ಮುಟ್ಟಬಹುದಷ್ಟೆ ಹೊರತು ತಿನ್ನುವಂತಿಲ್ಲವಾಗಿ, ಅದೆಷ್ಟು ಬಾರಿ ತಿನ್ನಬೇಕೆಂಬ ಪ್ರಲೋಭನೆಯನ್ನು ಅದುಮಿಟ್ಟುಕೊಂಡು ಕೆಲಸ ಮಾಡುವ ಪರಿಸ್ಥಿತಿ ಉಂಟಾಗಿರಬಹುದೊ ? ಅದೆ ರೀತಿಯ ತಿನಿಸು ಹೊರಗೆ ಅಗ್ಗದಲ್ಲಿ ಸಿಗುವುದಾದರು ಇಲ್ಲಿ ಇಷ್ಟೊಂದು ದುಬಾರಿ ವೆಚ್ಚದಲ್ಲಿ, ನೀಟಾದ ಪ್ಯಾಕಿಂಗಿನಲ್ಲಿ ಇಟ್ಟ ತಿನಿಸಿನ ರುಚಿಯ, ವೈವಿಧ್ಯದ ವಿಶೇಷತೆಯೇನಿರಬಹುದು ಎಂಬ ಕುತೂಹಲ, ಕೌತುಕ ಸುಮಾರು ಬಾರಿ ಕಾಡಿರಬಹುದಲ್ಲ ? ಆದರೂ ವೃತ್ತಿಪರ ಬದ್ಧತೆ ಮತ್ತು ನಿಯಮಗಳ ಭೀತಿಯಿಂದ ಅದನ್ನು ಮುಟ್ಟದೆ ಬಿಟ್ಟಿರಬೇಕು. ಆದರೆ ಮೊನ್ನೆ ತನ್ನೊಡನಾಡಿದ ಮಾತುಕತೆಯ ಸಲಿಗೆಯಿಂದಾಗಿಯೊ, ಅಥವಾ ತಾನೆ ತಿಂದರು ತಿಂದಿರಬೇಕೆಂಬ ಅನಿಸಿಕೆಯಲ್ಲಿ ನಾನು ಗಮನಿಸುವುದಿಲ್ಲವೆಂದುಕೊಂಡು ತಡೆಯಲಾಗದೆ ಡಬ್ಬಿ ತೆರೆದು ರುಚಿ ನೋಡಿಬಿಟ್ಟಿರಬೇಕು...!
ಹೌದು.. ಅದೆ ಸರಿಯಾದ ಊಹೆ.. ಆ ಗಳಿಗೆಯ ಲೆಕ್ಕಾಚಾರದ ಭಂಡ ಧೈರ್ಯದಲ್ಲಿ ಡಬ್ಬಿ ತೆರೆದು ತಿಂದುಬಿಟ್ಟಿರಬೇಕು... ಕಾಲು ಭಾಗ ಖಾಲಿಯಾಗಿ ಅದರ ಕುರಿತಾದ ಆರಂಭಿಕ ಕುತೂಹಲ ತಣಿಯುವ ಹೊತ್ತಿಗೆ, ತಾನು ಮಾಡಿದ ತಪ್ಪಿನ ಭೀತಿ ಪ್ರಬಲವಾಗಿ ಭಯ ಹುಟ್ಟಿಸಿಬಿಟ್ಟಿರಬೇಕು.. ಗಿರಾಕಿ ದೂರು ಕೊಟ್ಟು ಕೆಲಸಕ್ಕೆ ಸಂಚಕಾರ ಬರುವಂತಾದರೆ ಎನ್ನುವ ಅರಿವು ಮತ್ತಷ್ಟು ಹೆದರಿಸಿ, ಮಿಕ್ಕಿದ್ದನ್ನು ತಿನ್ನಲು ಬಿಡದೆ ಕಂಗೆಡಿಸಿಬಿಟ್ಟಿರಬೇಕು. ಆ ಹೊತ್ತಿನಲ್ಲಿ ತಿನ್ನಬೇಕೆನ್ನುವ ಪ್ರಲೋಭನೆಯನ್ನು ಅಧಿಗಮಿಸಿದ ವಾಸ್ತವ ಭೀತಿ, ಮಿಕ್ಕ ಭಾಗವನ್ನು ತಿನ್ನಬಿಡದೆ ಹಾಗೆಯೆ ವಾಪಸ್ಸು ಇಟುಬಿಡುವಂತೆ ಪ್ರೇರೇಪಿಸಿಬಿಟ್ಟಿರಬೇಕು - ದೂರು ಕೊಡಬೇಕೆಂದುಕೊಂಡ ಗಿರಾಕಿಯೂ ನಡೆದಿದ್ದನ್ನು ಊಹಿಸಿಯೊ, ಅಥವಾ ತಾನೆ ತಿಂದಿರಬಹುದೆಂಬ ಅನಿಸಿಕೆಯಲ್ಲೊ ಮಿಕ್ಕ ಭಾಗವನ್ನು ತಿಂದು ಸುಮ್ಮನಾಗುವನೆಂಬ ಆಶಯದಲ್ಲಿ.....
ಹೀಗೆ ನಡೆದಿರಬಹುದಾದುದರ ಚಿತ್ರಣದ ಊಹಾ ಪರಿಸರ ಲೌಕಿಕನ ಮನದಲ್ಲಿ ಮೂಡುತ್ತಿದಂತೆ, ಅದು ಹಾಗೆಯೆ ನಡೆದಿರಬಹುದೆಂಬ ನಂಬಿಕೆ ಬಲವಾಗುತ್ತ ಹೋಯ್ತು.. ಜತೆಗೆ ತಿನ್ನಲೆತ್ತಿಕೊಂಡರು ಮುಗಿಸಬಿಡದ ಮನಸ್ಸಾಕ್ಷಿ ಮತ್ತೆ ವಾಪಸ್ಸು ಇಡಿಸಿಬಿಟ್ಟ ಸನ್ನಿವೇಶದ ಕುರಿತು ಕರುಣೆ, ಖೇದವೂ ಉಂಟಾಯ್ತು... ಆ ಗಳಿಗೆಯಲ್ಲಿ ಏನೆಲ್ಲ ಮನೊ ಚಪಲ, ತಾಕಲಾಟ, ಸಂದಿಗ್ದಗಳ ಹೊಯ್ದಾಟ ಅವಳನ್ನು ಆವರಿಸಿಕೊಂಡಿರಬಹುದೆನ್ನುವ ಅನುಕಂಪದ ಭಾವವು ಜತೆ ಸೇರಿ, ಆ ಅರೆಖಾಲಿಯಾಗಿದ ಡಬ್ಬಿಯನ್ನು ತಿನ್ನದೆ ಹಾಗೆ ಖಾನೆಯ ಮೇಜಿನ ಮೇಲಿಟ್ಟುಬಿಟ್ಟ - ಮುಂದಿನ ಬಾರಿ ಅವಳಿಗೆ ಮತ್ತೆ ಎತ್ತಿಕೊಳ್ಳಲು ಕೈಗೆ ಸಿಗುವ ಹಾಗೆ. ಅದೆ ಸಮಯದಲ್ಲಿ ತಟ್ಟನೆ ರಿಸೆಪ್ಷನ್ ಕೌಂಟರಿಗೆ ಪೋನ್ ಮಾಡಿ ದೂರು ಕೊಟ್ಟದ್ದು ನೆನಪಾಗಿ, ' ಓಹ್.. ಅದರಿಂದವಳಿಗೇನಾದರು ತೊಂದರೆಯಾಗಿಬಿಟ್ಟರೆ? ಮತ್ತೆ ಪೋನ್ ಮಾಡಿ ತಾನೆ ತಿಂದು ಮರೆತುಬಿಟ್ಟೆ ಎಂದು ದೂರು ವಾಪಸು ಪಡೆದುಬಿಡಲೆ ?' ಎಂದುಕೊಂಡವನಿಗೆ 'ಹೇಗು ಚೆಕ್ ಔಟ್ ಹೊತ್ತಿನಲ್ಲಿ ಬಿಲ್ ಸರಿ ಮಾಡಿಸಿಕೊ - ಎಂದು ನುಡಿದಿರುವಳಲ್ಲ ? ಏನು ಬದಲಿಸದೆ ಸುಮ್ಮನೆ ಇದ್ದುಬಿಟ್ಟರೆ ತಾನು ತಿಂದ ಹಾಗೆ ಲೆಕ್ಕವಲ್ಲವೆ ?' ಅನಿಸಿ ಮತ್ತೇನು ಮಾಡದೆ ಹಾಗೆ ಸುಮ್ಮನಿದ್ದು ಬಿಟ್ಟ - ಮತ್ತೆ ಅವಳು ಮರುದಿನ ಆ ಡಬ್ಬಿ ನೋಡಿದಾಗ ಇದೆಲ್ಲ ಆಲೋಚನೆ, ಚಿಂತನೆ ಅವಳಿಗು ಅರಿವಾಗಿ ಡಬ್ಬಿಯನ್ನು ತೆಗೆದುಕೊಳ್ಳುವಳೆಂಬ ಅನಿಸಿಕೆಯಲ್ಲಿ. ಆದರೆ ಅದಾಗುವ ಹೊತ್ತಲ್ಲಿ ತಾನು ವಿಮಾನದ ಒಡಲಲ್ಲಿ ಪ್ರಪಂಚದ ನಡುವಲ್ಲೆಲ್ಲೊ ಹಾರುತ್ತಿರುತ್ತೇನೆ ಎಂದು ನೆನಪಾಗಿ ಮೆಲ್ಲಗೆ ನಕ್ಕ ಲೌಕಿಕ, ಯಾವುದಕ್ಕು ಇರಲೆಂದು ಅಲ್ಲಿದ್ದ ಟಿಶ್ಯೂ ಪೇಪರಿನ ಮೇಲೆ ಒಂದೆರಡು ಸಾಲು ಗೀಚಿದವನೆ ಆ ತಿನಿಸಿನ ಡಬ್ಬಿಯ ಅಡಿಯಲಿಟ್ಟ. ಯಾಕೊ ಅದುವರೆಗಿದ್ದ ಚಡಪಡಿಕೆ, ಆತಂಕವೆಲ್ಲ ಮಾಯವಾಗಿ ತುಂಬಾ ನಿರಾಳವಾದ ಭಾವವುಂಟಾಗಿ ಪ್ರಶಾಂತ ನೆಮ್ಮದಿಯಲ್ಲಿ ಸೋಫಾಕ್ಕೊರಗಿ ಕಣ್ಮುಚ್ಚಿದವನಿಗೆ ಏನೊ ಘನ ಕಾರ್ಯ ಮಾಡಿದಂತಹ ಹಗುರ, ಹೆಮ್ಮೆಯ ಭಾವ...
(ಮುಂದುವರೆಯುವುದು)
Comments
ಉ: ಸಣ್ಣ ಕಥೆ: ಹತ್ತು ಡಾಲರಿನ ಸುತ್ತ...(ಭಾಗ 02/03)
ನಾಗೇಶ ಮೈಸೂರುರವರಿಗೆ ವಂದನೆಗಳು
ತಮ್ಮ ಕಥೆ ಸೊಗಸಾಗಿ ಮೂಡಿ ಬರುತ್ತಿದೆ ವಿಶಿಷ್ಟ ಅಆನುಭವವನ್ನು ನೀಡುವ ಕಥಾವಸ್ತುವಿನ ನಿರೂಪಣೆ ಸರಳವಾಗಿ ಮನಮುಟ್ಟುವಂತೆ ರೂಪ ಪಡೆಯುತ್ತ ಸಾಗಿದೆ ದನ್ಯವಾದಗಳು.
In reply to ಉ: ಸಣ್ಣ ಕಥೆ: ಹತ್ತು ಡಾಲರಿನ ಸುತ್ತ...(ಭಾಗ 02/03) by H A Patil 1
ಉ: ಸಣ್ಣ ಕಥೆ: ಹತ್ತು ಡಾಲರಿನ ಸುತ್ತ...(ಭಾಗ 02/03)
ಪಾಟೀಲರೆ ನಮಸ್ಕಾರ ಮತ್ತು ಧನ್ಯವಾದಗಳು. ಚಿಕಾಗೊದಲ್ಲಿ ಆದ ಸಣ್ಣ ಅನುಭವವೊಂದಕ್ಕೆ ಸ್ವಲ್ಪ ಊಹೆ, ಕಲ್ಪನೆಗಳ ಮಸಾಲೆ ಬೆರೆಸಿ ಒಂದು ಸಣ್ಣಕಥೆಯ ರೂಪ ಕೊಡಲೆತ್ನಿಸಿದ್ದೇನೆ. ಉಪಸಂಹಾರದ ಕೊನೆಯ ಭಾಗವೂ ಮೆಚ್ಚುಗೆಯಾದೀತೆಂದು ಆಶಿಸುವೆ :-)