ಸಣ್ಣ ಕಥೆ - ಕಡಲು
ಗೋವಿಂದರಾಯರು ಮೂವತ್ತ್ಯೆದು ವರ್ಷಗಳ ಕಾಲ ಗುಮಾಸ್ತರಾಗಿ ಸೇವೆ ಸಲ್ಲಿಸಿ ನಿವೃತ್ತ ಜೀವನವನ್ನು ತಮ್ಮ ಹಳ್ಳಿಯಲ್ಲಿ ಪತ್ನಿಯೊಂದಿಗೆ ಕಳೆಯುತ್ತಿದ್ದರು. ಇದ್ದ ಒಬ್ಬನೇ ಮಗ, ಸೊಸೆಯ ಜೊತೆ ಆಫ್ರಿಕಾದಲ್ಲಿ ನೆಲೆಸಿದ್ದ. ರಾಯರ ಪತ್ನಿ ಆಕಸ್ಮಿಕವಾಗಿ ಹೃದಯಾಘಾತವಾಗಿ ಮರಣ ಹೊಂದಿದಾಗ, ತನ್ನ ಕರ್ತವ್ಯ ಎಂಬ ಹಾಗೆ ಮಗ ಬಂದು ಕ್ರಿಯಾವಿಧಿಗಳನ್ನು ಪೂರೈಸಿ, 'ಅಪ್ಪಾ, ನೀವು ಆಸ್ತಿಯೆಲ್ಲ ಮಾರಿ, ನನ್ನೊಂದಿಗೆ ಬಂದಿರಿ' ಎಂದ. ರಾಯರಿಗೆ ದಿಕ್ಕೇ ತೋಚದಾಗಿ ಒಂದೆರಡು ತಿಂಗಳು ಮಗನಲ್ಲಿಗೆ ಹೋಗಿ ಇದ್ದು ಬಂದರು.
ಅಲ್ಲಿಯ ಕೆಲಸ ಬೇಡ, ಇಲ್ಲಿ ಮನೆ ತೋಟ ನೋಡಿಕೊಂಡು, ಏನಾದರೂ ಮಾಡಬಹುದು ಬಾ ಮಗನೇ ಎಂದು ಎಷ್ಟು ಹೇಳಿದರೂ, ಸೊಸೆ ಬರಲು ಒಪ್ಪಲಿಲ್ಲ. ಮಗನೂ ಸೊಸೆಯ ಮಾತಿಗೆ ತಲೆ ಅಲ್ಲಾಡಿಸಿದ. ಇದ್ದಕ್ಕಿದ್ದಂತೆ ಒಂದು ದಿನ ಮಗನಿಗೆ ಹತ್ತಿರದ ಮನೆಯವರಿಂದ ಫೋನ್ ಬಂತು 'ನಿಮ್ಮ ಅಪ್ಪ ಇಲ್ಲಿ ಕಾಣಿಸ್ತಾ ಇಲ್ಲ, ನಾವು ಹತ್ತಿರದ ಠಾಣೆಗೆ ಮಾಹಿತಿ ನೀಡಿದ್ದೇವೆ' ಎಂಬುದಾಗಿ. ಗಾಬರಿಯಿಂದ ಮಗ, ಸೊಸೆ ಊರಿಗೆ ಬಂದರು. ಎಲ್ಲಾ ಇದ್ದ ಹಾಗೆ ಇದೆ. ನೆಂಟರಿಷ್ಟರು ಎಲ್ಲಾ ಬಂದು ಸಾಂತ್ವನ ಹೇಳಿ ಹೋದರು. ದಿನ ಹದಿನೈದು ಕಳೆಯಿತು. ರಾಯರ ಸುಳಿವಿಲ್ಲ
ರಾಯರ ಕೋಣೆಯನ್ನು ತಡಕಾಡಿದಾಗ ಸಿಕ್ಕಿದ ಪತ್ರ ಮಗನನ್ನು ಬೆಚ್ಚಿಬೀಳಿಸಿತು. 'ಯಾವುದೋ ದೂರದ ಊರಿನಲ್ಲಿ ನಿನ್ನ ಜೊತೆಯಿರುವ ಆ ವಿದೇಶಿ ಸಂಪ್ರದಾಯದ ಸೊಸೆಯ ಜೊತೆ ನಾನು ಇರಲಾರೆ ಮಗ. ನನ್ನ ಸಂಪ್ರದಾಯ, ಸಂಸ್ಕೃತಿಯನ್ನು ಬಿಟ್ಟು ನಿನ್ನ ಮನೆಯಲ್ಲಿರಲು ನನ್ನ ಮನಸ್ಸು ಒಪ್ಪುವುದಿಲ್ಲ. ಇಷ್ಟೆಲ್ಲಾ ಮಾಡಿದ್ದು ನಿನಗಾಗಿ. ಆದರೆ ನೀನು ಅದನ್ನೆಲ್ಲಾ ತಿರಸ್ಕರಿಸಿದೆ. ನಿನಗೆ ಹೆತ್ತವರು ಬೇಡ, ಅವರನ್ನು ಕಡೆಗಣಿಸಿದೆ. ಆಗಲಿ ನನ್ನ ಹಣೆಬರಹ, ವಿಧಿ ಲಿಖಿತ. ಹಣೆಯಲ್ಲಿ ಬರೆದದ್ದನ್ನು ಎಲೆಯಲ್ಲಿ ಒರೆಸಲು ಸಾಧ್ಯವಿಲ್ಲ. ಈ ಆಸ್ತಿ ಎಲ್ಲಾ ನನ್ನ ಸ್ವಯಾರ್ಜಿತ ಸಂಪಾದನೆಯದ್ದು. ಇದನ್ನು ನಮ್ಮೂರಿನ *ಶಾಲಾ ಮಕ್ಕಳ ವಿದ್ಯಾ ಟ್ರಸ್ಟಿಗೆ* ದಾನವಾಗಿ ನೀಡಿದ್ದೇನೆ. ಅದಕ್ಕೆ ಬೇಕಾದ ವ್ಯವಸ್ಥೆ ಈಗಾಗಲೇ ಮಾಡಿದ್ದೇನೆ. ಹಣ ಮತ್ತು ವಿದೇಶಿ ಸಂಸ್ಕೃತಿಯ ಹೆಂಡತಿಯ ಜೊತೆ, ಕಾಣದೂರಿನಲ್ಲಿ ಸುಖವಾಗಿರು. ನನ್ನನ್ನು ಹುಡುಕುವ ಪ್ರಯತ್ನ ಮಾಡಬೇಡ. ಕುಸಿದು ಕುಳಿತ ಮಗ ಶಿಲೆಯಂತಾದ.
ಮರುದಿನವೇ ಪತ್ನಿ ಜೊತೆ ಕಣ್ಣೀರು ಹಾಕುತ್ತಾ ಆಫ್ರಿಕಾ ದೇಶಕ್ಕೆ ಹೊರಟ. ನೊಂದ ಜೀವ ಮನೆಯ ಹತ್ತಿರದ ಕಡಲಿಗೆ ಹಾರಿ ಅಂತ್ಯವನ್ನು ಕಂಡ ವಿಷಯ, ಮಗನಿಗೆ ನೆರೆಯವರ ದೂರವಾಣಿ ಮೂಲಕ ಬಹುದಿನಗಳ ಬಳಿಕ ತಿಳಿಯಿತು.
-ರತ್ನಾಭಟ್ ತಲಂಜೇರಿ
(ಸತ್ಯ ಘಟನೆ ಆಧಾರಿತ)