ಸಣ್ಣ ಕಥೆ: ನಂಬಿಕೆಯ ಆಸ್ತಿ (ಮೂಲ: ರವೀಂದ್ರನಾಥ ಟಾಗೋರ್)

ಸಣ್ಣ ಕಥೆ: ನಂಬಿಕೆಯ ಆಸ್ತಿ (ಮೂಲ: ರವೀಂದ್ರನಾಥ ಟಾಗೋರ್)

ಅಧ್ಯಾಯ-೧
ಬೃಂದಾವನ ಕುಂದು ಕೋಪದಲ್ಲಿ ತನ್ನ ತಂದೆಯ ಹತ್ತಿರ ಬಂದು ಹೇಳಿದ " ನಾನು ಮನೆ ಬಿಟ್ಟು ಹೋಗುತ್ತಿದ್ದೇನೆ"
"ಕೃತಜ್ಞತೆ ಮರೆತ ದರಿದ್ರದವನೇ" ಉತ್ತರಿಸಿದ ಅವನ ತಂದೆ, ಜಗನ್ನಾಥ ಕುಂದು. "ನಾನು ನಿನ್ನ ಊಟ, ಬಟ್ಟೆಗೆ ಇದುವರೆಗೆ ಮಾಡಿದ ಖರ್ಚು ವಾಪಸ್ಸು ಕೊಟ್ಟ ದಿನ ನಿನಗೆ ದೊಡ್ಡ ಮಾತನಾಡುವ ಅರ್ಹತೆ ಬರುತ್ತದೆ"
ಜಗನ್ನಾಥನ ಮನೆಯಲ್ಲಿ ಊಟ, ಬಟ್ಟೆಗೆ ಹೇಳಿಕೊಳ್ಳುವಷ್ಟು ಖರ್ಚೇನು ಮಾಡುತ್ತಿರಲಿಲ್ಲ. ಹಳೆಯ ಕಾಲದ ಋಷಿಗಳು ಅತಿ ಕಡಿಮೆ ವೆಚ್ಚದಲ್ಲಿ ಹೇಗೆ ಜೀವನ ನಿಭಾಯಿಸುತ್ತಿದ್ದರೋ, ಅದೇ ಸಂಪ್ರದಾಯ ಜಗನ್ನಾಥ ತನ್ನ ಮನೆಯಲ್ಲಿ ಮುಂದುವರೆಸಿದ್ದ. ಆದರೆ ಅಧೋಗತಿಗೆ ಇಳಿಯುತ್ತಿರುವ ಸಮಾಜದ ಹೊಸ ಪದ್ಧತಿಗಳು ಅವನನ್ನು ಪೂರ್ತಿಯಾಗಿ ಹಳೆಯ ಸಂಪ್ರದಾಯವನ್ನು ಮುಂದುವರೆಸಿಕೊಂಡು ಹೋಗದಂತೆ ಮಾಡಿದ್ದವು.
ಬೃಂದಾವನನಿಗೆ ಮದುವೆ ಆಗುವವರೆಗೆ ಸಮಸ್ಯೆಗಳು ಅಷ್ಟಾಗಿ ಭಾಧಿಸುತ್ತಿರಲಿಲ್ಲ. ಆದರೆ ಮದುವೆಯ ನಂತರ ಕನಿಷ್ಠ ಸವಲತ್ತುಗಳೊಡನೆ ಬದುಕುವುದು ದುಸ್ತರ ಎನ್ನಿಸತೊಡಗಿತು. ಅವನು ಆಧ್ಯಾತ್ಮಿಕ ಜಗತ್ತಿನಿಂದ, ಲೌಕಿಕ ಜೀವನಕ್ಕೆ ವಾಲುತ್ತಿರುವುದು ಅವನ ತಂದೆಯ ಗಮನಕ್ಕೆ ಬಂತು. ಮಗನಿಗೆ ಬಿಸಿಲು-ಛಳಿ, ಹಸಿವು-ನೀರಡಿಕೆ ಗಳೊಡನೆ ಹೊಂದಾಣಿಕೆ ಮಾಡಿಕೊಂಡು ಬದುಕುವುದು ಇಷ್ಟವಿಲ್ಲವಾಯಿತು.
ತಂದೆ ಮಗನ ನಡುವೆ ಜಗಳ ಹೆಚ್ಚಾಗತೊಡಗಿತು. ಒಂದು ದಿನ ಬೃಂದಾವನನ ಹೆಂಡತಿಗೆ ಗಂಭೀರ ಖಾಯಿಲೆ ಬಂದು, ಅವಳ ಶ್ರುಶೂಸೆಗೆಂದು ವೈದ್ಯರನ್ನು ಕರೆಸಲಾಯಿತು. ವೈದ್ಯರು  ಸೂಚಿಸಿದ ಔಷಧ ದುಬಾರಿ ಬೆಲೆಯದ್ದಾಗಿತ್ತು. ಆದರೆ ಅದನ್ನು ಕೊಂಡು ತರಲು ಜಗನ್ನಾಥನ ವಿರೋಧಿಸಿದ. ವೈದ್ಯರು ಹೇಳಿದ ಔಷಧ ಉಪಚಾರ ಮಾಡಲು ಬೃಂದಾವನ ಮೊದಲು ತನ್ನ ತಂದೆಯಲ್ಲಿ ವಿನಂತಿಸಿ ಕೊಂಡ, ನಂತರ ಜಗಳವಾಡಿದ. ಆದರೆ ಯಾವುದೇ ಉಪಯೋಗವಾಗಲಿಲ್ಲ. ಕೊನೆಗೆ ತನ್ನ ಹೆಂಡತಿ ತೀರಿಕೊಂಡ ನಂತರ ಅವನು ತನ್ನ ತಂದೆಯನ್ನು ಕೊಲೆಗಾರ ಎಂದು ದೂರಿದ.
"ಎಂಥ ಅಸಂಬದ್ಧ ವಿಚಾರ" ಎಂದ ಜಗನ್ನಾಥ ಮಗನನ್ನು ಕೇಳಿದ "ಎಲ್ಲ ತರಹದ ಔಷಧಗಳನ್ನು ತೆಗೆದುಕೊಂಡ ಮೇಲೂ ಮನುಷ್ಯರಿಗೆ ಸಾವು ಬರುವುದೇ ಇಲ್ಲವೇನು? ದುಬಾರಿ ಬೆಲೆಯ ಔಷಧ ಮನುಷ್ಯ ಜೀವವನ್ನು ಉಳಿಸುವುದೇ ಆಗಿದ್ದರೇ, ದೊಡ್ಡ ದೊಡ್ಡ ರಾಜ, ಮಹಾರಾಜರೆಲ್ಲ ಇಂದೇಕೆ ಜೀವಂತ ಉಳಿದಿಲ್ಲ? ನಿನ್ನ ತಾಯಿ ಮತ್ತು ಅಜ್ಜಿ ಕಂಡ ಸಾವಿಗಿಂತ, ನಿನ್ನ ಹೆಂಡತಿಯ ಸಾವು ವೈಭವದಿಂದ ಆಗಬೇಕಿತ್ತೇನು?"
ಆದರೆ ಹೆಂಡತಿಯನ್ನು ಕಳೆದುಕೊಂಡ ದುಃಖದಲ್ಲಿದ್ದ ಬೃಂದಾವನನಿಗೆ ಈ ಮಾತುಗಳು ಸಮಾಧಾನ ತರುವಲ್ಲಿ ವಿಫಲವಾದವು. ಅವನ ತಾಯಿ ಮತ್ತು ಅಜ್ಜಿ ತಾವು ಸಾಯುವ ಮೊದಲು ಯಾವುದೇ ತರಹದ ಔಷಧ ಉಪಚಾರ ಪಡೆದಿರಲಿಲ್ಲ. ಅದು ಆ ಮನೆಯಲ್ಲಿ ನಡೆದು ಬಂದ ಸಂಪ್ರದಾಯವೇ ಆಗಿತ್ತು. ಆದರೆ ಹೊಸ ಪೀಳಿಗೆ ಹಳೆ ಸಂಪ್ರದಾಯದ ಸಾವು ಸಾಯಲು ಸಿದ್ಧರಿದ್ದಿಲ್ಲ. ಈ ಕಾಲ ಘಟ್ಟದಲ್ಲಿ, ಭಾರತಕ್ಕೆ ಹೊಸದಾಗಿ ಬಂದ ಬ್ರಿಟಿಷರು ಬದಲಾವಣೆಯ ಗಾಳಿ ಬೀಸಿದ್ದರು. ಆದರೆ ಈ ಬೆಳವಣಿಗೆ ಹಳೆ ಪೀಳಿಗೆಯವರಿಗೆ ಹಿಡಿಸದೆ, ಯಾವ ಮಾತನಾಡಲು ಸಾಧ್ಯವಾಗದಾಗ, ಹುಕ್ಕಾ ಸೇದಿ ಸಮಾಧಾನ ತಂದು ಕೊಳ್ಳುವರು.
ಅದೇನೇ ಇರಲಿ, ಹೊಸ ಪೀಳಿಗೆಯ ಬೃಂದಾವನ ಹಳೆ ಸಂಪ್ರದಾಯದ ತನ್ನ ತಂದೆಗೆ ಹೇಳಿದ "ನಾನು ಮನೆ ಬಿಟ್ಟು ಹೋಗುತ್ತಿದ್ದೇನೆ"

ಅದು ಅವನ ತಂದೆಗೂ ಒಪ್ಪಿಗೆಯಾಯಿತು. ಹಾಗೆಯೇ ತನ್ನ ಅಬಿಪ್ರಾಯ ತಿಳಿಸಿದ. "ತಾನು ಮುಂದೆ ಮಗನಿಗೆ ಒಂದು ಕವಡೆ ಕಾಸು ಕೊಟ್ಟರೆ, ಅದನ್ನು ದೇವತೆಗಳು ಗೋವಧೆಗೆ ಸಮನಾದ ಕೃತ್ಯ ಎಂದು ತಿಳಿದು ತನ್ನನ್ನು ಶಿಕ್ಷಿಸಲಿ". ಅದಕ್ಕೆ ಉತ್ತರ ಎನ್ನುವಂತೆ ಬೃಂದಾವನ ಹೇಳಿದ "ತಾನು ತಂದೆಯಿಂದ ಇನ್ನು ಮುಂದೆ ಎನೂ ತೆಗೆದುಕೊಂಡರು, ಅದು ಮಾತೃ ಹತ್ಯೆಗೆ ಸಮ".
ಹಳ್ಳಿಯ ಜನರು ಈ ಕ್ರಾಂತಿಕಾರಕ ಬೆಳವಣಿಗೆ, ಏಕತಾನತೆಯಿಂದ ಬೇಸತ್ತ ಊರಿಗೆ ಸಮಾಧಾನ ತರುವ ವಿಷಯ ಎಂದುಕೊಂಡರು. ಜಗನ್ನಾಥ ತನಗಿದ್ದ ಒಬ್ಬನೇ ಮಗನ ಜೊತೆಗೆ ಸಂಬಂಧ ಕಡಿದು ಕೊಂಡಾಗ, ಕೆಲವರು ಅವನನ್ನು ಕಂಡು ಸಮಾಧಾನ ಹೇಳಿದರು. ಅವರ ಅಭಿಪ್ರಾಯದಲ್ಲಿ ಈ ತರಹದ ಬೆಳವಣಿಗೆ ಸಮಾಜದ ಅಧಪತನವನ್ನು ತೋರಿಸುತ್ತಿತ್ತು. ಅವರ ವಾದದ ಪ್ರಕಾರ "ಒಬ್ಬ ಹೆಂಡತಿ ಸತ್ತರೆ, ಇನ್ನೊಬ್ಬಳನ್ನು ತರಬಹುದು. ಆದರೆ ತಂದೆ ಸತ್ತರೆ ಇನ್ನೊಬ್ಬನನ್ನು ತರಲು ಸಾಧ್ಯವೇ?" ಈ ವಾದ ಎಷ್ಟರ ಮಟ್ಟಿಗೆ ಸರಿ ಇತ್ತೋ, ಆದರೆ ಇನ್ನೊಬ್ಬ ತಂದೆಯನ್ನು ತರುವ ಬದಲು, ಹೀಗೆ ಬಿಟ್ಟು ಹೋಗುವುದೇ ದೇವರ ಕೃಪೆ ಎಂದುಕೊಂಡ ಮಗ ಬೃಂದಾವನ.
ಮಗ ಮನೆ ಬಿಟ್ಟು ಹೋದದ್ದು ತಂದೆಗೆ ಭಾಧಿಸಲಿಲ್ಲ. ಮೊದಲನೆಯದಾಗಿ, ಅವನ ಮನೆ ಖರ್ಚು ಕಡಿಮೆಯಾಗಿತ್ತು. ಅದಲ್ಲದೆ ಅವನನ್ನು ಭಾದಿಸುತ್ತಿದ್ದ ಆತಂಕ ದೂರಾಗಿತ್ತು. ಅದೇನೆಂದರೆ, ಮಗ ಅಥವಾ ಅವನಿಗೆ ಹುಟ್ಟುವ ಮಕ್ಕಳು ಅವನಿಗೆ ವಿಷ ಹಾಕಿ ಸಾಯಿಸಿಯಾರು ಎನ್ನುವುದು. ಅದು ಅವನು ಪ್ರತಿ ಸಲ ಊಟ ಮಾಡುವಾಗ ಅನುಮಾನ ಹುಟ್ಟು ಹಾಕುತ್ತಿತ್ತು. ಸೊಸೆ ಸತ್ತ ಮೇಲೆ ಸ್ವಲ್ಪ ಕಡಿಮೆಯಾಗಿದ್ದ ಆತಂಕ, ಮಗ ಮನೆ ಬಿಟ್ಟು ಹೋದ ಮೇಲೆ ಪೂರ್ತಿ ದೂರಾಗಿತ್ತು.
ಆದರೆ ಒಂದು ಚಿಕ್ಕ ಅಸಮಧಾನ ಮುದುಕನನ್ನು ಭಾಧಿಸುತಿತ್ತು. ಬೃಂದಾವನ ಮನೆ ಬಿಟ್ಟು ಹೋಗುವಾಗ ತನ್ನ ನಾಲ್ಕು ವರ್ಷದ ಮಗ ಗೋಕುಲ ಚಂದ್ರ ನನ್ನು ಜೊತೆಗೆ ಕರೆದೊಯ್ದಿದ್ದ. ಆ ಚಿಕ್ಕ ಹುಡುಗನನ್ನು ಸಾಕಲು ಹೆಚ್ಚು ಖರ್ಚು ಮಾಡಬೇಕಾಗಿರಲಿಲ್ಲ ಹಾಗಾಗಿ ಜಗನ್ನಾಥನಿಗೆ ಆ ಮಗುವನ್ನು ಪ್ರೀತಿಸಲು ಹಣ ಕಾಸಿನ ವಿಷಯ ಅಡ್ಡಿಯಾಗಿರಲಿಲ್ಲ. ಆದರೆ ಅವರಿಬ್ಬರೂ ಮನೆ ಬಿಟ್ಟು ಹೋದ ಮೇಲೆ ಉಳಿದ ಖರ್ಚು, ಅದು ವರ್ಷಕ್ಕೆ ಎಷ್ಟಾಗಬಹುದು ಮತ್ತು ಆ ಹಣಕ್ಕೆ ಎಷ್ಟು ಬಡ್ಡಿ ಬಂದಿತೆಂಬ ಲೆಕ್ಕಾಚಾರ ಮುದುಕನಿಗೆ ಪ್ರಿಯವಾಗಿ ಕಂಡಿತು.
ಆದರೆ ಖಾಲಿ ಮನೆ, ಮೊಮ್ಮಗ ಗೋಕುಲ ಚಂದ್ರ ತನ್ನ ತುಂಟತನ ಮಾಡದೇ ಇದ್ದ ಮನೆಯಲ್ಲಿ ಒಬ್ಬನೇ ಕಾಲ ಕಳೆಯುವುದು ದುಸ್ತರ ಎನಿಸಿತು ಮುದುಕನಿಗೆ. ಅವನು ಪೂಜೆಗೆ ಕುಳಿತಾಗ ಅವನನ್ನು ಕಾಡುವವರು ಯಾರು ಇರಲಿಲ್ಲ ಮತ್ತು ಅವನಿಗಿಟ್ಟ ತಿಂಡಿಯನ್ನು ಎತ್ತಿಕೊಂಡು, ಕಣ್ಮರೆಯಲ್ಲಿ ತಿನ್ನುವವವರು, ಮತ್ತು ಅವನು ಲೆಕ್ಕ ಬರೆಯುವದಕ್ಕೆ ಕುಳಿತಾಗ, ಮಸಿ ಬಾಟಲಿ ಎತ್ತಿಕೊಂಡು ಓಡುವವವರು, ಯಾರೂ ಉಳಿದಿರಲಿಲ್ಲ. ಅವನ ಪ್ರತಿ ದಿನದ ಏಕತಾನತೆ ಸಹಿಸಲು ಅಸಾಧ್ಯವಾಗತೊಡಗಿತು. ಅವನಿಗೆ ಈ ತರಹದ ಶಾಂತ ಜೀವನ ಈ ಜೀವನದಲ್ಲಿ ಬದುಕುವುದು ಕಠಿಣ ಅನ್ನಿಸಿತು. ಅವನು ತನ್ನ ಮೊಮ್ಮಗ ಮಾಡಿದ ಹೊದಿಕೆಯಲ್ಲಿನ ತೂತುಗಳು, ಹಾಸಿಗೆಯಲ್ಲಿ ಮೂಡಿಸಿದ ಚಿತ್ತಾರ ಕಂಡಾಗ ಹೃದಯ ತುಂಬಿ ಬರುವುದು. ಒಂದು ದಿನ ಮೊಮ್ಮಗ ತನ್ನ ಧೋತಿಯನ್ನು ತುಂಡು ತುಂಡು ಮಾಡಿದ್ದಾಗ ಕಠಿಣವಾಗಿ ನಿಂದಿಸಿದ್ದ ಆದರೆ ಚಲ್ಲಾ-ಪಿಲ್ಲಿ ಯಾಗಿ ಮನೆಯಲ್ಲಿ ಬಿದ್ದಿದ್ದ ಆ ಬಟ್ಟೆ ಚೂರುಗಳು, ಇಂದು ಜಗನ್ನಾಥನ ಕಣ್ಣಲ್ಲಿ ನೀರು ಮೂಡಿಸಿದವು. ಅಂದು ಅವನಿಗೆ ಸಿಗದಂತೆ ತನ್ನ ಎಲ್ಲ ಬಟ್ಟೆಗಳನ್ನು ಅವನಿಗೆ ಸಿಗದ ಹಾಗೆ ಮೇಲೆ ಎತ್ತಿಟ್ಟಿದ್ದ, ಒಂದು ಬಟ್ಟೆ ಹಾಳಾದರೂ ಸಹಿಸುವ ಶಕ್ತಿ ಅವನಿಗಿದ್ದಿಲ್ಲ.
ಆದರೆ ಗೋಕುಲ ಆ ಮನೆಗೆ ಮರಳಲೇ ಇಲ್ಲ. ಇತ್ತ ಜಗನ್ನಾಥನಿಗೂ ತ್ವರಿತ ಗತಿಯಲ್ಲಿ ಎನ್ನುವಂತೆ ವಯಸ್ಸಾಗುತ್ತ ಹೋಯಿತು. ಖಾಲಿ ಮನೆ ಇನ್ನೂ ಖಾಲಿಯಾಗಿ ಕಾಣತೊಡಗಿತು.
ಆ ಮನೆಯಲ್ಲಿ ನೆಮ್ಮದಿಯ ಜೀವನ ಜಗನ್ನಾಥನಿಗೆ ಸಾಧ್ಯವಾಗದೇ ಹೊಯಿತು. ಮಧ್ಯಾಹ್ನದ ಸಮಯ, ಊರಿನ ಜನ ಊಟ ಮಾಡಿ ವಿಶ್ರಾಂತಿ ತೆಗೆದುಕೊಳ್ಳುವ ವೇಳೆಯಲ್ಲೂ, ಜಗನ್ನಾಥನ ಊರು ಸುತ್ತುತ್ತ ಹೊರಡುತ್ತಿದ್ದ, ಕೈಯಲ್ಲಿ ಹುಕ್ಕ ಒಂದನ್ನು ಹಿಡಿದು. ದಾರಿಯಲ್ಲಿ ಆಟವಾಡಿಕೊಂಡಿರುತ್ತಿದ್ದ ಹುಡುಗರು ಜಗನ್ನಾಥನನ್ನು ನೋಡಿದ ತಕ್ಷಣ ತಮ್ಮ ಆಟ ನಿಲ್ಲಿಸಿ, ಅವನ ಹಣದ ಹುಚ್ಚನ್ನು ಗೇಲಿ ಮಾಡುವ ಪದ್ಯ ಹಾಡುತ್ತಿದ್ದರು. ಒಬ್ಬ ಕೆಟ್ಟ ಮನುಷ್ಯನ ಹೆಸರನ್ನು ತೆಗೆದುಕೊಂಡರೆ, ಅಂದು ಉಪವಾಸವೇ ಗತಿ ಎಂದು ನಂಬಿದ್ದ ಅಲ್ಲಿನ ಜನರು, ಜಗನ್ನಾಥನನ್ನು ನಿಜ ನಾಮದಿಂದ ಆಡಿ ಕೊಳ್ಳುತ್ತಿದ್ದಿಲ್ಲ. ಬದಲಿಗೆ 'ಜಗನಾಶ' ಎನ್ನುವ ಹೆಸರು ಉಪಯೋಗಿಸುತ್ತಿದ್ದರು. ಆದರೆ ಹೊಸ ಪೀಳಿಗೆಯ ಜನ ಅವನನ್ನು 'ಪಿಶಾಚಿ' ಎಂದು ಏಕೆ ಕರೆಯುತ್ತಿದ್ದರೋ ಉಹಿಸುವುದು ಕಷ್ಟ. ರಕ್ತವೆಲ್ಲ ಇಂಗಿ ಹೋದ ಅವನ ಶರೀರ, ಒಣಗಿ ಹೋದ ಅವನ ಚರ್ಮ ಅವನಿಗೆ ಆ ತರಹದ ಹೋಲಿಕೆ ತಂದು ಕೊಟ್ಟಿರಬಹುದು.
ಅಧ್ಯಾಯ-೨
ಒಂದು ಮಧ್ಯಾಹ್ನ ತನ್ನ ಯಾವತ್ತಿನ ಸುತ್ತಾಟದಲ್ಲಿ ತೊಡಗಿದ ಜಗನ್ನಾಥನಿಗೆ, ಮಾವಿನ ಮರದ ನೆರಳಲ್ಲಿ ಒಬ್ಬ ಹುಡುಗ ನಿಂತಿರುವುದು ಕಂಡು ಬಂತು. ಅದು ಅಪರಿಚಿತ ಮುಖ. ಆದರೆ ಹಳ್ಳಿಯ ಹುಡುಗರಿಗೆ ನಾಯಕನಾಗಿ, ಒಂದು ಹೊಸ ತಮಾಷೆಯ ಯೋಜನೆಯನ್ನು ವಿವರಿಸುತ್ತಿದ್ದ. ಅವನ ಆಕರ್ಷಕ ವ್ಯಕ್ತಿತ್ವ ಮತ್ತು ಅವನ ಯೋಜನೆಗಳಲ್ಲಿನ ಹೊಸತನ ಕಂಡು, ಆ ಹುಡುಗರು ಅವನ ನಾಯಕತ್ವ ಒಪ್ಪಿಕೊಂಡು ಅವನಿಗೆ ನಿಷ್ಟರಾಗಿದ್ದರು. ಜಗನ್ನಾಥ ಅವರ ಹತ್ತಿರ ಹೋದಾಗ, ಆ ಹುಡುಗ ಮಾತ್ರ ಬೆದರದೆ ನಿಂತ ಆದರೆ ಉಳಿದ ಹುಡುಗರು ದೂರ ಸರಿದರು. ಆ ಹುಡುಗ ಮಾತ್ರ ಜಗನ್ನಾಥನ ಬಳಿಗೆ ಸಾಗಿ, ತಾನು ಹೊದ್ದಿದ್ದ ಬಟ್ಟೆಯನ್ನು ಅವನ ಮುಂದೆ ಜ್ಹಾಡಿಸಿದ. ಅದರಿಂದ ಹೊರ ಬಂದ ಹಲ್ಲಿಯೊಂದು ಜಗನ್ನಾಥನ ಮೇಲೆ ಜಿಗಿದು, ಅವನ ಬೆನ್ನ ಕೆಳಗಿಂದ ಇಳಿದು, ಕಾಡಿನ ಕಡೆಗೆ ಓಡಿತು. ಭಯದಿಂದ ನಡುಗಿ, ಮುದುಕ ಬೆವರಿ ಬಿಟ್ಟ. ಆದರೆ ನೆರೆದ ಹುಡುಗರಿಗೆ ಇದು ತಮಾಷೆಯ ಸಂಗತಿ ಎನ್ನುವಂತೆ ಕಂಡು, ಹರ್ಷೋದ್ಗಾರ ಮಾಡಿದರು. ಜಗನ್ನಾಥ ಆ ಹುಡುಗನಿಗೆ ಶಪಿಸುವುದಕ್ಕೆ ಶುರು ಮಾಡಿದ ಕ್ಷಣವೇ, ಅವನ ಭುಜದ ಮೇಲಿದ್ದ ವಸ್ತ್ರ ಕಾಣೆಯಾಯಿತು. ಮರು ಕ್ಷಣ ಅದು ರುಮಾಲಾಗಿ ಆ ಹುಡುಗನ ತಲೆ ಮೇಲೆ ಕಾಣಿಸಿತು.
ಜಗನ್ನಾಥನಿಗೆ ಅವನ ಹತ್ತಿರ ಬಂದು ಕಿಲಾಡಿತನ ಮಾಡುವ ಹುಡುಗರನ್ನು ಕಂಡು ಯಾವುದೋ ಕಾಲವಾಗಿತ್ತು. ಸಾಕಷ್ಟು ಪುಸಲಾಯಿಸಿದ ಮೇಲೆ, ಆ ಹುಡುಗನನ್ನು ಜಗನ್ನಾಥ ಮಾತಿಗೆ ಎಳೆದ.
"ಏನು ನಿನ್ನ ಹೆಸರು, ಹುಡುಗ?"
"ನಿತೈ ಪಾಲ್"
"ಎಲ್ಲಿ ನಿನ್ನ ಮನೆ?"
"ಹೇಳುವುದಿಲ್ಲ"
"ಯಾರು ನಿನ್ನ ತಂದೆ?"
"ಹೇಳುವುದಿಲ್ಲ"
"ಯಾಕೆ ಹೇಳುವುದಿಲ್ಲ?"
"ಏಕೆಂದರೆ ನಾನು ಮನೆ ಬಿಟ್ಟು ಓಡಿ ಬಂದಿದ್ದೇನೆ"
"ಅಂಥದ್ದೇನು ನಡೆಯಿತು?"
"ನನ್ನ ತಂದೆ ನನ್ನನ್ನು ಶಾಲೆಗೆ ಕಳಿಸುತ್ತಾರೆ"
ಇಂಥ ಹುಡುಗನನ್ನು ಶಾಲೆಗೆ ಕಳುಹಿಸುವುದು ಎಂಥ ವ್ಯರ್ಥ ಪ್ರಯತ್ನ ಎಂದು ವಿಚಾರ ಮಾಡಿದ ಜಗನ್ನಾಥ, ಈ ವಿಚಾರ ಬರದೆ ಇದ್ದ ಆ ಹುಡುಗನ ಅಪ್ಪ ಮೂರ್ಖನೇ ಇರಬೇಕು ಎಂದುಕೊಂಡ.
"ಸರಿ. ನನ್ನ ಜೊತೆಗೆ ನನ್ನ ಮನೆಯಲ್ಲಿ ಇರುವೆಯಾ?"
"ಯಾಕಾಗಬಾರದು" ಎಂದ ಹುಡುಗ ಜಗನ್ನಾಥನ ಮನೆಯಲ್ಲಿ ವಾಸ ಹೂಡಿದ. ಯಾವುದೋ ಮರಳ ನೆರಳಿನಲ್ಲಿ ತಂಗಿದ ಹಾಗೆ ಇದ್ದ ಆ ಹುಡುಗ, ತನಗೆ ಏನಾದರೂ ಅಡಚಣೆಯಾದರೆ ಮುದುಕನ ಜೊತೆಗೆ ಜಗಳಕ್ಕೆ ಇಳಿಯಲು ಹಿಂಜರಿಯುತ್ತಿರಲಿಲ್ಲ. ತನ್ನ ಸ್ವಂತ ಮಗನ ಮೇಲೆ ಹಿಂದೆ ಹಿಡಿತ ಸಾಧಿಸಿದ್ದ ಜಗನ್ನಾಥನಿಗೆ ಬೇರೆಯವರ ಮಗನ ಜೊತೆಗೆ ಸೋಲನ್ನೊಪ್ಪಿಕೊಳ್ಳಬೇಕಾಯಿತು.
ಅಧ್ಯಾಯ-೩
ಜನರು ಈ ಹುಡುಗನ ಮತ್ತು ಜಗನ್ನಾಥನ ಹೊಂದಾಣಿಕೆ ಕಂಡು ವಿಸ್ಮಯ ಪಟ್ಟರು. ಸಾವು ಹತ್ತಿರದಲ್ಲಿದ್ದ ಮುದುಕನ ಆಸ್ತಿ, ಈ ಕಂಡರಿಯದ ಹುಡುಗನ ಪಾಲಾಗುವುದು ಅವರ ಮನಸ್ಸಿನಲ್ಲಿ ಮುಳ್ಳಿನಂತೆ ಚುಚ್ಚುತ್ತಿತ್ತು. ಈರ್ಷ್ಯೆಯಿಂದ ಆ ಹುಡುಗನಿಗೆ ಪೆಟ್ಟು ಕೊಟ್ಟು ಓಡಿಸಲು ನೋಡಿದರು. ಆದರೆ ಮುದುಕ ಮಾತ್ರ ಆ ಹುಡುಗನ್ನು ತನ್ನ ದೇಹದ ಮೂಳೆ ಎನ್ನುವಂತೆ ಕಾಪಾಡುತ್ತಿದ್ದ.
ಕೆಲವೊಂದು ಸಲ ಹುಡುಗ ಮುದುಕನಿಗೆ ಮನೆ ಬಿಟ್ಟು ಹೋಗುವುದಾಗಿ ಬೆದರಿಕೆ ಹಾಕುತ್ತಿದ್ದ. ಆಗ "ನಾನು ಆಸ್ತಿಯನ್ನು ನಿನಗೆ ಬಿಟ್ಟು ಹೋಗುತ್ತೇನೆ" ಎಂದು ಅವನಲ್ಲಿ ಆಸೆ ಹುಟ್ಟಿಸುತ್ತಿದ್ದ  ಜಗನ್ನಾಥ. ಅವನು ಇನ್ನು ಹುಡುಗನಾದರೂ, ಜಗನ್ನಾಥ ಹೇಳುವ ವಿಷಯದ ಅವನಿಗೆ ಅರಿವು ಬಂದಾಗಿತ್ತು.
ಆ ಹೊತ್ತಿಗೆ ಹಳ್ಳಿಯ ಜನ ಆ ಹುಡುಗನ ತಂದೆ ಯಾರಿರಬಹುದು ಎನ್ನುವ ವಿಚಾರಣೆಯಲ್ಲಿ ತೊಡಗಿದ್ದರು. ಈ ಪುಂಡು ಹುಡುಗ ಅವರಿಗೆ ಎಷ್ಟು ತೊಂದರೆ ಕೊಟ್ಟಿರಬಹುದು ಎಂದು ಊಹೆಗೆ ತೊಡಗುತ್ತಿದ್ದರು. ನ್ಯಾಯ-ಅನ್ಯಾಯದ ವಿಚಾರಕ್ಕಿಂತ, ಈರ್ಷ್ಯೆ ಅವರನ್ನು ಈ ಹುಡುಗನ ಮೇಲೆ ಬೈಗುಳಗಳ ರಾಶಿಯನ್ನು ಕಟ್ಟುವಂತೆ ಮಾಡಿತ್ತು.
ಒಂದು ದಿನ, ಒಬ್ಬ ದಾಮೋದರ ಪಾಲ್ ಎನ್ನುವ ವ್ಯಕ್ತಿ ತನ್ನ ಕಳೆದುಕೊಂಡ ಮಗನನ್ನು ಹುಡುಕುತ್ತಿರುವ ವಿಷಯ, ಹಾಗೆಯೇ ಅವನು ಇಲ್ಲಿಗೆ ಬರುತ್ತಿರುವ ಸುದ್ದಿ ಮುದುಕನ ಕಿವಿಗೆ ಬಿತ್ತು. ಆ ಸುದ್ದಿಯನ್ನು ಕೇಳಿದ ಹುಡುಗ, ಬಿಟ್ಟು ಬಿಡದ ಚಟುವಟಿಕೆಯಲ್ಲಿ ತೊಡಗಿದ, ತನ್ನ ಭವಿಷ್ಯದ ಆಸ್ತಿಯನ್ನು ಆದರ ಪಾಡಿಗೆ ಬಿಟ್ಟು, ಮತ್ತೆ ಊರು ಬಿಟ್ಟು ಓಡುವ ತಯಾರಿ ನಡೆಸಿದ. ಜಗನ್ನಾಥ ಆ ಹುಡುಗನಿಗೆ ಭರವಸೆ ನೀಡಿದ "ನಿನ್ನನ್ನು ಯಾರು ನೋಡಿರದ ಜಾಗದಲ್ಲಿ ಬಚ್ಚಿಡುವೆ. ಅದು ಈ ಊರಿನ ಜನರಿಗೂ ಗೊತ್ತಿಲ್ಲ"
ಕುತೂಹಲ ಮೂಡಿದ ಹುಡುಗ ಕೇಳಿದ "ಎಲ್ಲಿದೆ, ಆ ಜಾಗ. ನನಗೆ ತೋರಿಸು."
"ಹಾಗೆ ಮಾಡಿದರೆ ಜನರಿಗೆ ಸುಳಿವು ಸಿಗುತ್ತದೆ. ಅದಕ್ಕಾಗಿ ರಾತ್ರಿಯವರೆಗೆ ಕಾಯಿ" ಹೇಳಿದ ಜಗನ್ನಾಥ.
ರಹಸ್ಯ ಜಾಗದ ಅನ್ವೇಷಣೆ ಹುಡುಗನಿಗೆ ತುದಿಗಾಲಲ್ಲಿ ನಿಲ್ಲುವಂತೆ ಮಾಡಿತ್ತು. ಅವನು ತನ್ನ ತಂದೆ ವಾಪಸ್ಸು ಹೋದ ಮೇಲೆ, ಆ ಜಾಗವನ್ನು ತನ್ನ ಸ್ನೇಹಿತರ ಜೊತೆ ಕಣ್ಣಾ-ಮುಚ್ಚಾಲೆ ಆಟಕ್ಕೆ ಬಳಸಿಕೊಳ್ಳಬೇಕು ಎನ್ನುವ ಯೋಜನೆಗೆ ತೊಡಗಿದ. ಯಾರಿಗೂ ಅವನನ್ನು ಹುಡುಕಲು ಆಗುವುದಿಲ್ಲ. ಅವನ ತಂದೆ ಊರೆಲ್ಲ ಜಾಲಾಡಿದರು, ಅವನು  ಸಿಗುವುದಿಲ್ಲ. ಎಂಥ ಮಜಾ ಎಂದುಕೊಂಡ.
ಮಧ್ಯಾಹ್ನದ ವೇಳೆ ಹುಡುಗನನ್ನು ಮನೆಯಲ್ಲಿ ಕೂಡಿ ಹಾಕಿ, ಜಗನ್ನಾಥ ಊರು ಅಲೆಯಲು ಹೊರಟ. ಸಂಜೆ ಮರಳಿ ಬಂದಾಗ ಹುಡುಗ ಅವನ ಮೇಲೆ ಪ್ರಶ್ನೆಗಳ ಸುರಿಮಳೆ ಮಾಡಿದ. ನಸುಗತ್ತಲು ಆಗುತ್ತಲೇ ಹುಡುಗ ಕೇಳಿದ "ಈಗ ಹೋಗೋಣವೇ?"
"ಇನ್ನು ಪೂರ್ತಿ ಕತ್ತಲಾಗಿಲ್ಲ" ಉತ್ತರಿಸಿದ ಜಗನ್ನಾಥ.
ಅದಾದ ಸ್ವಲ್ಪ ಹೊತ್ತಿಗೆ ಹುಡುಗ ಹೇಳಿದ "ನೋಡು, ಈಗ ಕತ್ತಲಾಗಿದೆ"
"ಇನ್ನು ಊರ ಜನ ಮಲಗಿರುವುದಿಲ್ಲ" ಎಂದು ಮೆಲ್ಲನೆಯ ಧ್ವನಿಯಲ್ಲಿ ಉಸುರಿದ ಜಗನ್ನಾಥ.
ಇನ್ನು ಸ್ವಲ್ಪ ಹೊತ್ತು ಕಳೆದ ಮೇಲೆ ಹುಡುಗ ಹೇಳಿದ "ಊರ ಜನ ಎಲ್ಲ ಮಲಗಿಯಾಯಿತು. ಇನ್ನು ಹೊರಡೋಣ".
ರಾತ್ರಿ ಏರಿದಂತೆಲ್ಲ ಕತ್ತಲು ದಟ್ಟವಾಗುತ್ತಿತ್ತು. ನಿದ್ದೆಯ ಒತ್ತಡದಿಂದ ಹುಡುಗನ ಕಣ್ಣು ರೆಪ್ಪೆ ಮುಚ್ಚದೆ ಇರಲು ಪ್ರಯಾಸ ಪಡುತ್ತಿದ್ದವು. ಅದರೂ ಹರ ಸಾಹಸದಿಂದ ಮಧ್ಯ ರಾತ್ರಿಯವರೆಗೂ ಎಚ್ಚರವಾಗಿದ್ದ. ಆ ಹೊತ್ತು ಇಡೀ ಹಳ್ಳಿ ಗಾಢ ನಿದ್ರೆಯಲ್ಲಿರುವಾಗ, ಜಗನ್ನಾಥ ಆ ಹುಡುಗನ ಕೈ ಹಿಡಿದು, ಊರಿಂದ ಹೊರಗೆ ಕರೆದೊಯ್ದ. ಆಗೊಮ್ಮೆ ಈಗೊಮ್ಮೆ ಕೇಳಿ ಬರುತ್ತಿದ್ದ ನಾಯಿಗಳು ಊಳಿಡುವ ಸದ್ದು ಮತ್ತು ಇವರ ಹೆಜ್ಜೆ ಸಪ್ಪಳಕ್ಕೆ ಹೆದರಿ ರೆಕ್ಕೆ ಬಡಿಯುವ ಪಕ್ಷಿಗಳ ಸದ್ದು ಬಿಟ್ಟರೆ ಬೇರೆ ಯಾವ ಸದ್ದೂ ಆ ಅಪರಾತ್ರಿಯಲ್ಲಿ ಕೇಳಿ ಬರುತ್ತಿರಲಿಲ್ಲ.
ಎಷ್ಟೋ ಹೊಲಗಳನ್ನು ದಾಟಿ ಸಾಗಿದ ಮೇಲೆ, ಕಾಡು ಆರಂಭವಾಯಿತು. ಅಲ್ಲಿ ಜೀರ್ಣಾವಸ್ಥೆಯಲ್ಲಿದ್ದ, ದೇವರ ಮೂರ್ತಿಯೇ ಇರದಿದ್ದ ಗುಡಿಗೆ ಬಂದು ಸೇರಿದರು. "ಏನು? ಇಲ್ಲಾ!' ಎಂದು ನಿರಾಶೆಯ ಧ್ವನಿಯಲ್ಲಿ ನುಡಿದ ಹುಡುಗ. ಅವನು ಊಹಿಸಿದಂತೆ ಅದು ಇರಲಿಲ್ಲ. ಅಲ್ಲಿ ರಹಸ್ಯ ಅನ್ನಿಸುವಂತ ನೋಟವೇನು ಇರಲಿಲ್ಲ. ಅವನು ಹಿಂದೆ ಊರು ಬಿಟ್ಟು ಓಡಿದಾಗ, ಇಂತಹ ಪಾಳು ಮಂಟಪಗಳಲ್ಲಿ ಹಲವು ರಾತ್ರಿ ಕಳೆದಿದ್ದ. ಅದು ಕಣ್ಣಾ ಮುಚ್ಚಾಲೆ ಆಟಕ್ಕೆ ಸೂಕ್ತ ಜಾಗವಲ್ಲ ಅನ್ನುವ ಹಾಗೇನೂ ಇರಲಿಲ್ಲ. ಆದರೆ ಅವನ ಸ್ನೇಹಿತರು  ಅವನನ್ನು ಹುಡುಕಿ ಬಿಡುವ ಸಾಧ್ಯತೆ ಇತ್ತು.
ಆ ಮಂಟಪದ ನೆಲ ಹಾಸುವಿನ ನಡುವಿನ ಚಪ್ಪಡಿ ಕಲ್ಲೊಂದನ್ನು ಸರಿಸಿದ ಜಗನ್ನಾಥ. ಕಂದೀಲಿನ ಬೆಳಕಿನಲ್ಲಿ ಅಲ್ಲಿ ನೆಲ ಮಾಳಿಗೆಯ ಕೋಣೆಯಿರುವುದು ಕಾಣಿಸಿ ಹುಡುಗ ನಿಬ್ಬೆರಗಾದ. ಭಯ ಮತ್ತು ಕುತೂಹಲ ಅವನಲ್ಲಿ ಒಟ್ಟಿಗೆ ಮೂಡಿದವು. ಜಗನ್ನಾಥ ಏಣಿಯ ಸಹಾಯದಿಂದ ಕೆಳಗಿಳಿದ. ಹುಡುಗ ಅವನನ್ನು ಹಿಂಬಾಲಿಸಿದ.
ಸುತ್ತಲೂ ಹಿತ್ತಾಳೆಯ ದೊಡ್ಡ ಪಾತ್ರೆಗಳನ್ನು ಜೋಡಿಸಿಟ್ಟಿರುವುದನ್ನು ಹುಡುಗ ನೋಡಿದ. ನಡುವೆ ಪ್ರಾರ್ಥನೆಗಾಗಿ ಹಾಸಿದ್ದ ಹಾಸು, ಅದರ ಮುಂದೆ ಕುಂಕುಮ, ಗಂಧ, ಹೂ ಮತ್ತು ಇತರ ಪೂಜಾ ಸಾಮಗ್ರಿಗಳು. ತನ್ನ ಕುತೂಹಲ ತಣಿಸುವುದಕ್ಕಾಗಿ ಹುಡುಗು ಒಂದು ಹಿತ್ತಾಳೆಯ ಪಾತ್ರೆಯಲ್ಲಿ ಕೈ ಹಾಕಿ, ಸಿಕ್ಕದ್ದನ್ನು ಹೊರ ತೆಗೆದು ನೋಡಿದ. ಅವು ಬಂಗಾರದ ನಾಣ್ಯಗಳಾಗಿದ್ದವು.
ಜಗನ್ನಾಥ ಹುಡುಗನನ್ನು ಉದ್ದೇಶಿಸಿ ಹೇಳಿದ "ನಿತೈ, ನಾನು ನಿನಗೆ ಹೇಳಿದ್ದೆ. ನಾನು ನನ್ನ ಎಲ್ಲ ಸಂಪತ್ತು ನಿನಗೆ ಕೊಡುವೆ ಎಂದು. ನನ್ನ ಹತ್ತಿರ ಹೆಚ್ಚೇನಿಲ್ಲ. ಇಲ್ಲಿರುವ ಹಿತ್ತಾಳೆ ಪಾತ್ರೆಗಳಲ್ಲಿ ಇರುವುದು ಮಾತ್ರ ನಾನು ಹೊಂದಿರುವುದು. ಇವುಗಳ ಜವಾಬ್ದಾರಿ ನಾನು ನಿನಗೆ ಇಂದು ವಹಿಸುತ್ತೇನೆ."
ಹುಡುಗ ಖುಷಿಯಿಂದ ಕುಪ್ಪಳಿಸಿದ "ಎಲ್ಲ?" ಅವನು ಗಟ್ಟಿ ಎನಿಸುವ ಧ್ವನಿಯಲ್ಲಿ ಕೇಳಿದ "ನೀನು ಒಂದು ರೂಪಾಯಿಯನ್ನು ವಾಪಸು ತೆಗೆದುಕೊಳ್ಳುವುದಿಲ್ಲ?"
"ನಾನು ಹಾಗೆ ಮಾಡಿದರೆ" ಮುದುಕ ಗಂಭೀರ ಸ್ವರದಲ್ಲಿ ಹೇಳಿದ "ನನ್ನ ಕೈ ಕುಷ್ಠ ರೋಗ ಬಡಿಯಲಿ. ಆದರೆ ಒಂದು ಷರತ್ತು. ನನ್ನ ಮೊಮ್ಮಗ ಗೋಕುಲ ಚಂದ್ರ ಅಥವಾ ಅವನ ಮಗ ಅಥವಾ ಅವನ ಮೊಮ್ಮಗ ಅಥವಾ ಅವನ ವಂಶದ ಕುಡಿಗಳು ಈ ದಾರಿಯಲ್ಲಿ ಬಂದರೆ, ನೀನು ಅವರಿಗೆ ಈ ಎಲ್ಲ ಸಂಪತ್ತು, ಪ್ರತಿಯೊಂದು ನಾಣ್ಯವನ್ನು ಒಪ್ಪಿಸಬೇಕು."
ಹುಡುಗನಿಗೆ ಮುದುಕನ ಮಾತುಗಳು ತರ್ಕವಿಲ್ಲದವು ಎನಿಸಿತು. ಹಾಗಾಗಿ "ನೀನು ಹೇಳಿದಂತೆ ಆಗಲಿ" ಎಂದು ಉತ್ತರಿಸಿದನು.
"ಹಾಗಿದ್ದರೆ ಈ ಆಸನದ ಮೇಲೆ ಕುಳಿತುಕೋ" ಹೇಳಿದ ಜಗನ್ನಾಥ.
"ಯಾವುದಕ್ಕೆ?"
"ಏಕೆಂದರೆ ನಿನಗೆ ಪೂಜೆ ಮಾಡಬೇಕು"
"ಆದರೆ, ಯಾಕೆ?" ಕೇಳಿದ ಹುಡುಗ, ಅಧೀರನಾಗಿ.
"ಅದು ನಿಯಮ"
ಹುಡುಗ ಹೇಳಿದ ಹಾಗೆ ಆಸನದ ಮೇಲೆ ಕುಳಿತ. ಜಗನ್ನಾಥ ಹುಡುಗನ ಹಣೆಗೆ ಗಂಧ ಬಳಿದ, ಹುಬ್ಬುಗಳ ನಡುವೆ ಕುಂಕುಮದ ಬೊಟ್ಟು ಇಟ್ಟ. ಕೊರಳಿಗೆ ಹೂವಿನ ಹಾರ ಹಾಕಿದ. ಮತ್ತು ಮಂತ್ರಗಳನ್ನು ಜಪಿಸಲು ಶುರು ಮಾಡಿದ.
ಅಲ್ಲಿ ದೇವರ ಹಾಗೆ ಕುಳಿತು ಮಂತ್ರಗಳನ್ನು ಕೇಳುವುದು ಹುಡುಗನಲ್ಲಿ ಆತಂಕ ಮೂಡಿಸಿತು. ಅವನು ಮೆಲ್ಲನೆಯ ಧ್ವನಿಯಲ್ಲಿ ಜಗನ್ನಾಥನನ್ನು "ತಾತ" ಎಂದು ಕರೆದ. ಆದರೆ ಅದಕ್ಕೆ ಉತ್ತರಿಸದೆ ಜಗನ್ನಾಥ ಮಂತ್ರ ಉಚ್ಚಾರಣೆ ಮುಂದುವರೆಸಿದ.
ಕೊನೆಗೆ ಪ್ರತಿ ಹಿತ್ತಾಳೆ ಪಾತ್ರೆಯನ್ನು ಹುಡುಗನ ಮುಂದೆ ತಂದು ತಾನು ಹೇಳಿ ಕೊಡುವ ಶಪಥವನ್ನು ಹುಡುಗ ಪುನರುಚ್ಚಾರ ಮಾಡುವಂತೆ ಹೇಳಿದ.
"ನಾನು ಈ ಮೂಲಕ ವಾಗ್ದಾನ ಮಾಡುತ್ತೇನೆ ಅದೇನೆಂದರೆ ಈ ಸಂಪೂರ್ಣ ಸಂಪತ್ತನ್ನು ಬೃಂದಾವನ ಕುಂದುವಿನ ಮಗ ಮತ್ತು ಜಗನ್ನಾಥ ಕುಂದುವಿನ ಮೊಮ್ಮಗನಾದ ಗೋಕುಲ ಚಂದ್ರ ಕುಂದುವಿಗೆ, ಅಥವಾ ಅವನ ಮಗನಿಗೆ, ಮೊಮ್ಮಗನಿಗೆ, ಮರಿ ಮೊಮ್ಮಗನಿಗೆ ಅಥವಾ ಆ ವಂಶದಲ್ಲಿ ಹುಟ್ಟಿದ ಉತ್ತರಾಧಿಕಾರಿಗೆ ಒಪ್ಪಿಸುತ್ತೇನೆ."
ಅ ಹುಡುಗನಿಗೆ ಇದನ್ನು ಮತ್ತೆ ಮತ್ತೆ ಹೇಳುತ್ತಾ ದಣಿವಿನಿಂದ ನಾಲಿಗೆ ಆಡದಂತಾಯಿತು. ಅವನ ಬಾಯಿಯ ಪಸೆ ಆರಿ, ಕೈ-ಕಾಲುಗಳಲ್ಲಿ ಉರಿ ಎದ್ದು, ಉಸಿರು ಕಟ್ಟಿದಂತೆ ಆಯಿತು.
ದೀಪದ ಬೆಳಕು ಮಂದವಾಗುತ್ತ, ಕೊನೆಗೆ ಆರಿ ಹೋಯಿತು. ಆ ಗಾಢ ಅಂಧಕಾರದಲ್ಲಿ ಮುದುಕನು ಏಣಿ ಹತ್ತುತ್ತಿರುವ ಸದ್ದು ನಿತೈಗೆ ಕೇಳಿಸಿತು. "ತಾತ, ಎಲ್ಲಿಗೆ ಹೊರಟಿರುವೆ?" ಎಂದು ಯಾತನೆಯ ಧ್ವನಿಯಲ್ಲಿ ಕೇಳಿದನು.
"ನನ್ನು ಹೋಗುತ್ತಿದ್ದೇನೆ" ಎಂದು ಉತ್ತರಿಸಿದ ಜಗನ್ನಾಥ, "ನೀನು ಇಲ್ಲೇ ಇರು. ನಿನ್ನನ್ನು ಹುಡುಕಲು ಯಾರಿಗೂ ಸಾಧ್ಯವಿಲ್ಲ. ಗೋಕುಲ ಚಂದ್ರ ಎನ್ನುವ ಹೆಸರು ನೆನಪಿಡು, ಬೃಂದಾವನನ ಮಗ, ಜಗನ್ನಾಥನ ಮೊಮ್ಮಗ". ಇಷ್ಟು ಹೇಳಿ ಅವನು ಏಣಿಯನ್ನು ಮೇಲೆಳೆದು ಕೊಂಡನು. ಸರಿಯಾಗಿ ಉಸಿರಾಡಲು ಸಾಧ್ಯವಾಗದೇ, ಕಡು ದುಃಖದ ಧ್ವನಿಯಿಂದ, ನಿಸ್ಸಹಾಯಕತೆಯಿಂದ ಹುಡುಗ ಕೇಳಿಕೊಂಡನು "ನಾನು ನನ್ನ ತಂದೆಯ ಹತ್ತಿರ ಹೋಗಬೇಕು"
ಜಗನ್ನಾಥ ಚಪ್ಪಡಿ ಕಲ್ಲನ್ನು ಮೊದಲಿನ ಸ್ಥಾನಕ್ಕೆ ತಳ್ಳಿ ಭದ್ರ ಪಡಿಸಿದನು. ನಂತರ ಅಲ್ಲಿ ಕಿವಿ ಕೊಟ್ಟು ಕೇಳಿದನು. ನಿತೈ ನ ಧ್ವನಿ ಮತ್ತೊಮ್ಮೆ ಕೇಳಿಸಿತು "ಅಪ್ಪ" ನಂತರ ಯಾವುದೊ ಒಂದು ಭಾರವಾದ ವಸ್ತು ದೊಡ್ಡ ಶಬ್ದದೊಂದಿಗೆ ಬಿದ್ದ ಸದ್ದಾಯಿತು. ಅದಾದ ನಂತರ ಎಲ್ಲವೂ ಶಾಂತ.
ಹೀಗೆ ತನ್ನ ಸಂಪತ್ತನ್ನು ಒಂದು ಯಕ್ಷಿಯ ಕೈಗೆ ವಹಿಸಿದ ನಂತರ, ಜಗನ್ನಾಥ ಆ ಚಪ್ಪಡಿ ಕಲ್ಲಿನ ಮೇಲೆ ಮಣ್ಣು ತುಂಬಿದನು. ಮತ್ತು ಅಲ್ಲಿ ಹುಲ್ಲು ಹಾಗೂ ಕಳೆಯನ್ನು ತುಂಬಿದನು. ರಾತ್ರಿ ಮುಗಿಯುತ್ತ ಬಂದಿತ್ತು. ಆದರೂ ಅವನಿಗೆ ಆ ಜಾಗ ಬಿಟ್ಟು ಬೇಗ ಹೋಗುವದಕ್ಕೆ ಸಾಧ್ಯವಾಗಲಿಲ್ಲ. ಇನ್ನೊಂದು ಸಲ ಅಲ್ಲಿ ಕಿವಿ ಕೊಟ್ಟು ಕೇಳಿದನು. ಅವನಿಗೆ ಭೂಮಿಯ ಒಳಗಿಂದ ಗೋಳಾಟದ ಧ್ವನಿ ಕೇಳಿ ಬಂದಂತೆ ಆಯಿತು. ಅಲ್ಲದೆ ರಾತ್ರಿಯ ಆಕಾಶದ ತುಂಬೆಲ್ಲ ಅದೇ ಶಬ್ದ ಪ್ರತಿಧ್ವನಿಸಿದಂತೆ, ಮತ್ತು ಮಲಗಿದ್ದ ಮನುಜ ಕುಲವೆಲ್ಲ ಎದ್ದು ಕುಳಿತು, ಅದನ್ನು ಕೇಳುತ್ತ ಕುಳಿತಂತೆ ಅನ್ನಿಸಿತು.
ಮುದುಕ ತನ್ನ ನಿಯಂತ್ರಣ ತಪ್ಪಿದವನಂತೆ, ಆ ಚಪ್ಪಡಿ ಕಲ್ಲಿನ ಮೇಲೆ ಮಣ್ಣಿನ ರಾಶಿಯನ್ನೇ ಪೇರಿಸಿದ, ಆ ಶಬ್ದವನ್ನು ಹೇಗಾದರೂ ನಿಲ್ಲಿಸಬೇಕೆಂಬ ಶತ ಪ್ರಯತ್ನದಲ್ಲಿ. ಆದರೂ 'ಅಪ್ಪ' ಎಂದು ಕೂಗುತ್ತಿರುವ ಧ್ವನಿ ಕೇಳಿಸಿದಂತೆ ಆಗುವ ಭ್ರಮೆಯಿಂದ ಹೊರ ಬರಲಾಗಲಿಲ್ಲ.
ತನ್ನೆಲ್ಲ ಶಕ್ತಿ ಒಟ್ಟುಗೂಡಿಸುಕೊಂಡು, ಆ ಜಾಗದ ಮೇಲೆ ಹೊಡೆದು ಹೇಳಿದ "ಸಾಕು, ಸುಮ್ಮನಾಗು. ಜನ ಕೇಳಿಸಿ ಕೊಂಡಾರು". ಆದರೂ ಅವನ ಊಹೆಯಲ್ಲಿ "ಅಪ್ಪ" ಎಂದು ಕೂಗುವ ಧ್ವನಿ ಕೇಳಿ ಬಂತು.
ಪೂರ್ವ ದಿಕ್ಕಿನಲ್ಲಿ ಸೂರ್ಯ ಬೆಳಕನ್ನು ಚೆಲ್ಲಲಾರಂಭಿಸಿದ. ಜಗನ್ನಾಥ ಆ ಪಾಳು ಗುಡಿಯನ್ನು ಬಿಟ್ಟು ಬಯಲು ಪ್ರದೇಶದ ಹೊಲಗಳೆಡೆಗೆ ನಡೆದು ಬಂದ. ಅಲ್ಲಿಯೂ ಕೂಡ ಅವನಿಗೆ "ಅಪ್ಪ" ಎಂದು ಕರೆಯುವ ಧ್ವನಿ ಕೇಳಿ ಬಂತು. ಬೆಚ್ಚಿ ಬಿದ್ದ ಮುದುಕ ತಿರುಗಿ ನೋಡಿದ. ಅಲ್ಲಿ ಅವನ ಮಗ ನಡೆದು ಬರುತ್ತಿದ್ದ.
"ಅಪ್ಪ" ಎಂದು ಕರೆದ ಬೃಂದಾವನ, "ನಾನು ನನ್ನ ಮಗ ನಿನ್ನ ಮನೆಯಲ್ಲಿ ಅಡಗಿರುವುದು ಕೇಳಿದೆ. ನಾನು ಅವನನ್ನು ಕರೆದೊಯ್ಯಲು ಬಂದಿದ್ದೇನೆ".
ಹಿಗ್ಗಿಸಿದ ಕಣ್ಣುಗಳು, ವಿಕಾರವಾದ ಬಾಯಿ ಮಾಡಿ, ಮುದುಕ ಮುಂದೆ ಬಾಗಿ ಕೇಳಿದ "ನಿನ್ನ ಮಗ?"
"ಹೌದು. ನನ್ನ ಮಗ ಗೋಕುಲ. ಅವನ ಹೆಸರೀಗ ನಿತೈ ಪಾಲ್. ನನ್ನ ಹೆಸರು ಕೂಡ ಈಗ ದಾಮೋದರ ಪಾಲ್ ಎಂದಾಗಿದೆ. ನಿನ್ನ 'ಖ್ಯಾತಿ' ಎಲ್ಲ ಕಡೆ ಹಬ್ಬಿದ್ದರಿಂದ, ನಾವು ನಮ್ಮ ಸಂಗತಿ ತಿಳಿಯದಂತೆ ಹೆಸರು ಬದಲಾಯಿಸಿಕೊಳ್ಳಬೇಕಾಯಿತು."
ಮುದುಕ ತನ್ನ ಕಂಪಿಸುವ ಎರಡೂ ಕೈಗಳನ್ನು ನಿಧಾನವಾಗಿ ಮೇಲೆತ್ತಿ ತಲೆಯ ಮೇಲೆ ಇಟ್ಟುಕೊಂಡ. ಬಳಿಕ ಅಲ್ಲಿಯೇ ನೆಲಕ್ಕೆ ಕುಸಿದ. ಅವನಿಗೆ ಪ್ರಜ್ಞೆ ಬಂದ ನಂತರ ತನ್ನ ಮಗನನ್ನು ಕರೆದುಕೊಂಡು ಆ ಪಾಳು ಮಂಟಪಕ್ಕೆ ಬಂದ. ಅಲ್ಲಿ ಕೇಳಿದ "ನಿನಗೆ ಇಲ್ಲಿ ಯಾರಾದರೂ ಗೋಳಾಡುತ್ತಿರುವ ಧ್ವನಿ ಕೇಳಿಸುತ್ತಿದೆಯೇ?"
"ಇಲ್ಲ" ಉತ್ತರಿಸಿದ ಬೃಂದಾವನ.
"ಎಚ್ಚರಿಕೆಯಿಂದ ಕೇಳು. ನಿನಗೆ ಯಾರಾದರೂ 'ಅಪ್ಪ' ಎಂದು ಕೂಗುವ ಶಬ್ದ ಕೇಳಿಸುತ್ತಿದೆಯೇ?"
"ಇಲ್ಲ"
ಆ ಉತ್ತರ ಮುದುಕನಿಗೆ ಸಮಾಧಾನ ತಂತು.
ಆ ದಿನದಿಂದ, ಮುದುಕ ಜನರಿಗೆ ಪ್ರಶ್ನೆ ಹಾಕುತ್ತಿದ್ದ "ನಿಮಗೆ ಗೋಳಾಡುತ್ತಿರುವ ಧ್ವನಿ ಕೇಳಿಸುತ್ತಿದೆಯೇ?"
ಅವರು ಮುದುಕನ ಹುಚ್ಚು ಪ್ರಶ್ನೆಗೆ ನಕ್ಕು ಮುಂದೆ ಸಾಗುತ್ತಿದ್ದರು.
ಇದಾಗಿ ನಾಲ್ಕು ವರ್ಷಗಳ ನಂತರ, ಜಗನ್ನಾಥ ಸಾವಿನ ಶಯ್ಯೆಯಲ್ಲಿ ಮಲಗಿದ್ದ. ಈ ಜಗತ್ತಿನ ಬೆಳಕು ಕ್ರಮೇಣವಾಗಿ ತನ್ನ ಪ್ರಕಾಶವನ್ನು ಕಳೆದುಕೊಂಡು ಅವನ ಕಣ್ಣಿಂದ ಮರೆಯಾಗತೊಡಗಿತ್ತು. ಅವನಿಗೆ ಉಸಿರಾಡುವುದೇ ಬಹು ಕಷ್ಟವಾಯಿತು. ಆ ಸ್ಥಿತಿಯಲ್ಲಿ ಅವನು ಸನ್ನಿ ಹೊಡೆದ ಹಾಗೆ ಎದ್ದು ಕುಳಿತು, ತನ್ನ ಕೈಗಳನ್ನು ಗಾಳಿಯಲ್ಲಿ ಏನನ್ನೋ ಹುಡುಕುವಂತೆ ಆಡಿಸುತ್ತ ವಟಗುಟ್ಟಿದ "ನಿತೈ, ನನ್ನ ಏಣಿಯನ್ನು ಯಾರು ತೆಗೆದಿಟ್ಟರು?"
ಆ ಭಯಾನಕ ಸೆರೆಯಿಂದ ಹೊರ ಬರಲು ಏಣಿ ಸಿಗದೇ, ಯಾವ ಬೆಳಕು ಕಾಣದೇ, ಉಸಿರಾಡಲು ಗಾಳಿ ದೊರಕದೆ, ತನ್ನ ಹಾಸಿಗೆಯ ಮೇಲೆ ಬಿದ್ದು ಮೈ ಚೆಲ್ಲಿದ ಮತ್ತು ಯಾರಿಗೂ ಸಿಗದಂತ ಜಾಗದಲ್ಲಿ ಮರೆಯಾಗಿ ಹೋದ.
[ಈ ಕಥೆಯಲ್ಲಿ ವಿವರಿಸಿದ ಘಟನೆ, ಇಂದಿಗೆ ಹಳೆಯ ಕಾಲದ ನೆನಪು ಮಾತ್ರ. ಆದರೆ ಹಿಂದೆ ಬಂಗಾಳದಲ್ಲಿ ಈ ಘಟನೆಗಳು ಅಪರೂಪ ಎನ್ನುವಂತಿದ್ದಿಲ್ಲ. ಇದರ ಹಿಂದಿನ ಉದ್ದೇಶ ಕೆಲವು ಜನರು ತಮ್ಮ ಸಂಪತ್ತನ್ನು ತಮ್ಮ ಮುಂದಿನ ಜನ್ಮದಲ್ಲಿ ಸಿಗುವಂತೆ ಮಾಡುವುದು ಆಗಿತ್ತು. ನನಗೆ ಮಾತ್ರ ಈ ಸಂಪತ್ತು ಹಿಂತಿರುಗಿಸಬೇಕು ಎನ್ನುವ ಭಾಷೆ ತೆಗೆದುಕೊಂಡು, ಪೂಜೆ ಮಾಡಿ, ನರಬಲಿ ಕೊಟ್ಟು, ಯಕ್ಷಿಯನ್ನು ಸಂಪತ್ತಿನ ಕಾವಲಿಗೆ ಹಾಕುತ್ತಿದ್ದರು. ಕೆಲವರು ಧಿಡಿರನೆ ಶ್ರೀಮಂತರಾಗುತ್ತಿದ್ದ ಉದಾಹರಣೆಗಳಿಗೆ, ಇಂತಹ ಘಟನೆಗಳು ತಾಳೆಯಾಗಿದ್ದ ಕಥೆಗಳೂ ಉಂಟು]