ಸಣ್ಣ ಕಥೆ : ಮೆಕಾನಿಕ್... ಡಾII ಬಷೀರ್...!

ಸಣ್ಣ ಕಥೆ : ಮೆಕಾನಿಕ್... ಡಾII ಬಷೀರ್...!

ತಿಂಗಳ ೨೦ನೆ ತಾರೀಕು. ನನ್ನ ರಥದ ಅರ್ಥಾತ್ ನನ್ನ ಬೈಕ್ ನ ಸರ್ವೀಸ್ ಮಾಡಿಸುವ ತಾರೀಕು. ಮಾಮೂಲಿಯಾಗಿ ನನ್ನ ಬೈಕಿನ ಔಷದೊಪಚಾರವನ್ನು ಡಾ. ಬಷೀರ್ ಸಾಹೇಬರ ಹತ್ತಿರ ಮಾಡಿಸುತ್ತೇನೆ. ಆತನ ಮೆಕಾನಿಕ್ ಶಾಪಿನ ಹೆಸರು 'ಬೈಕ್ ಕ್ಲಿನಿಕ್', ಅದಕ್ಕಾಗಿ ಮೆಕಾನಿಕ್ ಬಷೀರ್ ನನ್ನು ನಾನು ಡಾ. ಬಷೀರ್ ಎಂದು ಕರೆಯುತ್ತೇನೆ. ತುಂಬಾ ಚಿಕ್ಕ ವಯಸ್ಸಿನ ಹುಡುಗ. ಸುಮಾರು ೧೮ ವರ್ಷದವನು. ಅವನ ತಂದೆಯೂ ಒಬ್ಬ ಮೆಕಾನಿಕ್.  ಒಂದು ಕೈ ಕೆಲಸ ಗೊತ್ತಿದ್ದರೆ ಹೇಗಾದರೂ ಜೀವನ ಸಾಗಿಸಬಹುದು ಎಂದು, ಇವನಿಗೆ ಓದು ಬರ ಕಲಿಸದೆ ಮೆಕಾನಿಕ್ ಕೆಲಸ ಕಲಿಸಿ, ಇವನಿಗಾಗಿ ಒಂದು ಮೆಕಾನಿಕ್ ಶಾಪ್ ಅನ್ನು ಇವನ ಜೀವನಕ್ಕೆ ಮಾಡಿ ಕೊಟ್ಟಿದ್ದ. ಬಷೀರ್ ನು ಅಷ್ಟೇ, ಮೆಕಾನಿಕ್ ಕೆಲಸ ಎಂದರೆ ತುಂಬಾ ಇಷ್ಟ. ಯಾವುದೇ ಬೈಕ್ ಆಗಲಿ, ಎಂತ ತೊಂದರೆ ಆಗಲಿ, ಏನಾದರೂ  ಮಾಡಿ ರಿಪೇರಿ ಮಾಡಿ ಬಿಡುತ್ತಿದ್ದ. ಅವನ ಕೈ ಗುಣ ತುಂಬಾ ಚೆನ್ನಾಗಿತ್ತು. ಅವನು ಬೈಕಿಗೆ ಕೈ ಇಟ್ಟನೆಂದರೆ ಸಾಕು, ಬೈಕು ಸ್ಟಾರ್ಟ್ ಆಗಿ ಬಿಡುತ್ತಿತ್ತು.

ನನಗೂ ಆಫೀಸ್ ಗೆ ರಜಾ ಇದ್ದ ಕಾರಣ ಇವತ್ತೇ ಸರ್ವಿಸ್ ಮಾಡಿಸಿ ಬಿಡೋಣ ಎಂದು ಅವನ ಮೆಕಾನಿಕ್ ಶಾಪ್ ಗೆ ಹೋದೆ. ಅವನು ನನ್ನನು ನೋಡುತ್ತಿದ್ದಂತೆ, 'ಸಲಾಂ ಸಾಬ್' , ಏನ್ ಅಂತದೆ ನಿಮ್ದು ಬೈಕ್ ದು? ಎಂದು ತನ್ನ ಎಂದಿನ ಶೈಲಿಯಲ್ಲಿ ನಮಸ್ಕಾರ ಮಾಡುತ್ತ ಕೇಳಿದ. 'ಮಾಮೂಲಿ ಸರ್ವಿಸ್ ಕಣಯ್ಯಾ, ಇವತ್ತು ರಜಾ ಇತ್ತಲ್ಲ ಅದಕ್ಕೆ ತಂದೆ, ಸರ್ವೀಸ್ ಮಾಡಿ ಕೊಡಪ್ಪ' ಎಂದೇ. 'ಸರಿ ಸಾಬ್, ಆದ್ರೆ ಇವತ್ತು ಲೇಟ್ ಗೆ ಆಯ್ತದೆ' ಎಲ್ಲಾರ್ದು ರಜಾ ಅಂದ್ಬಿಟ್ಟಿ ೪ ಬೈಕ್  ಸುಭೈಗೆ ತಂದು ಬಿಟ್ಟಿದಾರೆ, ಶಾಮ್ ಕು ನಾನೆ ಮನೆಗೆ ತಂದ್ಬಿಟ್ಟಿ ಕೊಡ್ತೀನಿ ಸಾಬ್, ಎಂದ. ನಂಗು ಏನು ಬೇರೆ ಕೆಲಸ ಇಲ್ಲದ ಕಾರಣ ಸರಿ ಎಂದೇ. ನಾನು, ಅವನು ಗ್ಯಾರೇಜಿಗೆ ಹೋದರೆ ಸ್ವಲ್ಪ ಹೊತ್ತು ಅವನನ್ನು ಮಾತಾಡಿಸಿ ಬರುತ್ತೇನೆ. ಅವನ ಭಾಷೆ ನನಗೆ ನಗು ತರಿಸುತ್ತಿತ್ತು. ಉರ್ದು ಮತ್ತು ಕನ್ನಡ ಮಿಶ್ರಿತ ಅವನ ಮಾತು ಕಚಗುಳಿ ಇಡುತಿತ್ತು. ಆದರೆ ಅವನು ತನ್ನ ವಯಸ್ಸಿಗೆ ಮೀರಿ, ಜೀವನವನ್ನು ಅರ್ಥ ಮಾಡಿಕೊಂಡವನಂತೆ ಮಾತನಾಡುತ್ತಿದ್ದ. 
'ಹೇಗ್ ನಡೀತಿದೆ ನಿನ್ನ ಕೆಲಸ ಬಷೀರ್?' 'ಅಯ್ಯೋ ನಮ್ದುಕೆ ಕೆಲಸ ಬಿಡಿ ಸಾಬ್, ಆರ್ ಗೆ ಏರಲ್ಲ ಮೂರ್ ಗೆ ಇಳಿಯಲ್ಲ. ನಿಮ್ದು ಹೇಳಿ ಸಾಬ್, ನಿಮ್ದು ಹೊಸ ಖಹಾನಿ ಯಾವ್ದು ಬರ್ದ್ರಿ?, ಇನ್ನು ಯಾವ್ದು ಇಲ್ಲ ಕಣಪ್ಪಾ, ಬರದಾಗ ನಿಂಗೆ ಹೇಳ್ತೀನಿ ಬಿಡು. ಮತ್ತೆ ನಿಮ್ ಅಪ್ಪ ಹೇಗ್ ಇದಾರೆ?, 'ನಮ್ದು ಅಬ್ಬು ಚೆನ್ನಾಗಿದಾರೆ. ಶಾದಿ ಮಾಡ್ಕೋ ಅಂತ ದೀಮಕ್ ಕರಾಬ್ ಕರ್ರ ಸೊ. ನೀವೇ ಹೇಳಿ ಸಾಬ್ ನಮ್ದು ನಿಕ್ಹ ಮಾಡ್ಕೊಳೋ ಉಮರ್ ಕ್ಯಾ ಸಾಬ್? ಹಾಗೆ ಏನಾದ್ರು ಅಬ್ಬು ಮಾತ್ ಕೇಳಿ ನಿಕ್ಹ ಮಾಡ್ಕೊಂಡ್ರೆ. ನಮ್ದು ಪೋಲಿಸ್ ಸಾಹೇಬರು ಇದಾರಲ್ಲ, ಪೋಲಿಸ್ ವೆಂಕಟಪ್ಪ ಬಂದು ಒದ್ದು ಒಳಗೆ ಕಳಿಸಿ ಬಿಡ್ತಾರೆ. ಅಲ್ವ ಸಾಬ್. ನಮ್ದು ದೇಶಗೆ ಹಿಂಗೆ ಕರಾಬ್ ಆಗ್ತಿರೋದು ಸಾಬ್. ಇಷ್ಟ ಬೇಗ  ನಿಕ್ಹ ಆದ್ರೆ, ಕೆಯ್ಸ ಸಾಬ್, ಸಂಸಾರದು ಮಾಡೋದು. ಈಗ ಆಗ್ತಿರೋ ಸಂಪಾದನೆ ಪೂರ, ಈ ಗ್ಯಾರೇಜ್ ಮಾಡೋಕೆ ಮಾಡಿರೋ ಸಾಲಗೆ ಹೋಗ್ತಿದೆ. ಇನ್ನು ನಿಕ್ಹ ಮಾಡ್ಕೊಂಡ್ರೆ, ಬಚ್ಚೆ ಲೋಗ್ ಆಗ್ಬಿಡ್ತಾರೆ. ಅವರ್ಗೆ ಖಾನ ಪೀನೆ ಕೊ ಕ್ಯಾ ಕರ್ನ. ನಮ್ದು ಅಬ್ಬು ಮಾಡಿದ್ದೂ ತಪ್ಪು ನಮಗೆ ಮಾಡಲ್ಲ. ನಮ್ದು ಬಚ್ಚೆ ಲೋಗ್ ಕೊ ಸ್ಕೂಲ್ ಕೊ ಬೇಜುಂಗ. ಚೆನ್ನಾಗಿ ಓದ್ಸಿ, ನಿಮ್ದು ತರ ದೊಡ್ದು ಸಾಬ್ ಮಾಡ್ತೀನಿ.'  ಅಭಿಚ್ ನಿಕ್ಹ ನಕ್ಕೋ ಅಂತ ಅಬ್ಬು ಗೆ ಹೇಳಿದೀನಿ. ನಿಕ್ಹ, ಬಚ್ಚೆ ಎಲ್ಲ ಯಾವಾಗ್ ಬೇಕಾದರು ಆಗ್ಬೋದು ಸಾಬ್. ಮೊದ್ಲು ನಮ್ದುಕೆ ಸೇಫ್ಟಿ ಮಾಡ್ಕೊಳ್ಬೇಕು ಅಲ್ವ ಸಾಬ್! ಎಂದ.
ಅವನ ಮಾತುಗಳಲ್ಲೇ ಅವನ ಜವಾಬ್ದಾರಿ ಗೊತ್ತಾಗುತ್ತದೆ. ಅವನ ಗ್ಯಾರೇಜಿಗೆ ಬಂದು ಹೋಗೋ ಗಿರಾಕಿಗಳನ್ನ ನೋಡಿ ನಾನು ಅವರ ತರ ಆಗಬೇಕು, ಇಲ್ಲ ನನ್ನ ಮಕ್ಕಳಾದ್ರು ದೊಡ್ಡ ವ್ಯಕ್ತಿ ಆಗಬೇಕು ಅನ್ನೋದು. ಅವನ ಮನಸ್ಸಿನಲ್ಲಿ ಆಳವಾಗಿ ಕುಳಿತಿತ್ತು. ನನಗೆ ಅವನಲ್ಲಿ ಇಷ್ಟವಾಗೋ ವಿಷಯ ಅಂದ್ರೆ 'ಅವನು ಆಶಾವಾದಿ', ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು, ತನ್ನ ಜೀವನವನ್ನು ಮತ್ತು ತನ್ನನ್ನು ನಂಬಿದವರ ಜೀವನವನ್ನು ಒಳ್ಳೆಯದಾಗಿ ರೂಪಿಸಬೇಕು ಅನ್ನುವುದು. ಅದಕ್ಕಾಗಿ ಶ್ರಮ ಪಡುತ್ತಾನೆ, ಸುಮ್ಮನೆ ಬರಿ ಮಾತಿನಲ್ಲಿ ಹೀರೋ ಅಗೋ ವ್ಯಕ್ತಿಯಲ್ಲ.
'ಸರಿ ಬಷೀರ್, ನಾನು ಹೊರಡುತ್ತೇನೆ, ಸಾಯಂಕಾಲ ನೀನೆ ಗಾಡಿ ತಂದು ಬಿಡು ಮನೆಗೆ'. 'ಓಕೆ ಸಾಬ್, ಸಾಯಂಕಾಲ ಚಾಂದ್ ಬಾಹರ್ ನಿಕಲ್ ಗಯಾ ತೊ ಭಿ ನಿಮ್ ಗಾಡಿ ತಂದ ಕೊಡ್ತೀನಿ ಸಾಬ್', ಎಂದ. ನಾನು ಅವನ ಮಾತಿಗೆ ನಗುತ್ತಾ ನಡೆದುಕೊಂಡು ಮನೆ ಕಡೆ ನಡೆದೆ. ಸ್ವಲ್ಪ ಸಮಯ ಸುತ್ತಾಡುತ್ತ, ಮನೆಗೆ ಬಂದು ಊಟ ಮಾಡಿ, ವಿಶ್ರಾಂತಿಗಾಗಿ ಮಲಗಿಕೊಂಡೆ, ನಿದ್ದೆ ಬರದಿದ್ದರೂ ಹಾಗೆ ಮಲಗಿಕೊಂಡು ಸ್ವಲ್ಪ ಕಾಲ ಕಳೆದೆ. ಸ್ವಲ್ಪ ಸಮಯದ ನಂತರ ನನ್ನ ಮೊಬೈಲ್ ರಿಂಗಿಸಿತು, ಯಾವುದೊ ಹೆಸರಿಲ್ಲದ ನಂಬರ್! ಕಾಲ್ ರಿಸಿವ್ ಮಾಡಿದೆ, ನನ್ನ ಹಳೇ ಗೆಳೆಯನ ಫೋನ್, ಧಾರವಾಡದಿಂದ ಬೆಂಗಳೂರಿಗೆ ಯಾವುದೊ ಕೆಲಸದ ಮೇಲೆ ಬಂದಿದ್ದನಂತೆ, ಸಿಗೋಣ ಎಂದ. ಮನೆಗೆ ಬಾ ಎಂದೇ. ಆದರೆ ಸಂಜೆ ಬಸ್ ಗೆ ತಡವಾಗುವುದು. ನೀನೆ ಬಸ್ ಸ್ಟಾಪ್ ಗೆ ಬಾ ಎಂದ. ಸರಿ ಅವನಿಗೂ ಯಾಕೆ ತೊಂದರೆ, ನಾನೆ ಹೊರೋಡೋಣ ಎಂದು ರೆಡಿ ಆದೆ. ಆಮೇಲೆ ನನಗೆ ಅರಿವಾಗಿದ್ದು. ನನ್ನ ರಥವನ್ನು ಸರ್ವಿಸ್ ಗಾಗಿ ಗ್ಯಾರೇಜಿಗೆ ಬಿಟ್ಟಿರುವುದು. ಹಮ್...! ಏನು ಮಾಡುವುದು. ಸರ್ವಿಸ್ ಆಗಿಲ್ಲ ಅಂದರು ಪರವಾಗಿಲ್ಲ, ಗಾಡಿಯನ್ನು ಹಾಗೆ ತೆಗೆದುಕೊಂಡು ಹೋದರಾಯಿತು, ಮುಂದಿನ ವಾರ ಸರ್ವಿಸ್ ಮಾಡಿಸೋಣ, ಸ್ನೇಹಿತ ಈಗ ಹೊರಟರೆ, ಮತ್ತೆ ಅವನ ದರ್ಶನ ಇನ್ನು ಎಷ್ಟು ವರ್ಷಕ್ಕೋ ಎಂದು, ಗ್ಯಾರೇಜಿನ ಕಡೆಗೆ ನಡೆದೆ.
 
ಗ್ಯಾರೇಜಿನ ಹತ್ತಿರ ಬಂದು ನೋಡಿದೆ, ಗ್ಯಾರೇಜು ಬೀಗ ಹಾಕಿತ್ತು. ಅದು ೫ ಗಂಟೆಯ ಸಮಯ. ಅಯ್ಯೋ, ಬಹುಶ ಬಷೀರ್ ನಮಾಜ್ ಗೆ ಹೋಗಿರಬೇಕು. ಇನ್ನು ಅರ್ಧ ತಾಸು ಇಲ್ಲೇ ಕಾಯಬೇಕು, ಛೆ! , ಸ್ನೇಹಿತ ಇನ್ನು ಅರ್ಧ ತಾಸು ಮುಂಚೆ ಫೋನ್ ಮಾಡಿದ್ದರೆ, ಬಷೀರ್ ಇರುತ್ತಿದ್ದ, ಎಂದು ಸ್ನೇಹಿತನದೆ ತಪ್ಪು ಎಂದು ಮನದಲ್ಲೇ ಶಪಿಸುತ್ತ, ಬಷೀರ್ ಗ್ಯಾರೇಜಿನ ಬಾಗಿಲಲ್ಲೇ ಬಷೀರ್ ಗಾಗಿ ಕಾದು ಕುಳಿತೆ. ನಾನು ಬಂದು ಬಷೀರ್ ಗಾಗಿ ಕಾಯುತಿರುವುದನ್ನು ನೋಡಿದ ಪಕ್ಕದ ಬ್ಯಾಟರಿ ಅಂಗಡಿ ಹುಡುಗ ನನ್ನ ಬಳಿ ಬಂದು ನನ್ನ ಬೈಕ್ ನ ಕೀಲಿ ಕೊಟ್ಟ, ' ಸರ್ ನಿಮ್ಮ ಗಾಡಿ ಕೀ ತಗೊಳ್ಳಿ ಸಾರ್' ಎಂದ. ನನಗೆ ತುಂಬಾ ಖುಷಿ ಆಯಿತು. ಬಷೀರ್ ನನಗೋಸ್ಕರ ನನ್ನ ರಥವನ್ನ ಮೊದಲು ಸರ್ವಿಸ್ ಮಾಡಿ ನಿಲ್ಲಿಸಿದ್ದಾನೆ ಅಂತ. ನನಗೆ ನನ್ನ ಮೇಲೆ ಹೆಮ್ಮೆ ಅನಿಸಿತು, ಹಾಗು ನನ್ನ ಮೇಲೆ ಇಟ್ಟಿದ್ದ ಮರ್ಯಾದೆ ಕಂಡು ಬಷೀರ್ ಮೇಲಿನ ಪ್ರೀತಿ ಇನ್ನು ಜಾಸ್ತಿ ಆಯಿತು. ಕೀಲಿ ಕೊಟ್ಟ ಆ ಹುಡುಗನಿಗೆ. ' ಗಾಡಿ ಸರ್ವಿಸ್  ಮಾಡಿದ ಬಿಲ್ ಏನಾದರು ಬಷೀರ್ ಕೊಟ್ಟಿದಾನ?' ಎಂದು ಕೇಳಿದೆ. ಅದಕ್ಕೆ ಆ ಹುಡುಗ, 'ಇನ್ನು ಎಲ್ಲಿ ಬಷೀರ್ ಸಾರ್! ಬೆಳಿಗ್ಗೆ ಅವನಿಗೆ ಕುಳಿತಲ್ಲೇ ಹಾರ್ಟ್ ಅಟ್ಯಾಕ್ ಆಗೋಯ್ತು. ನಾನು ಅವನನ್ನು ಆಸ್ಪತ್ರೆ ಗೆ ಸೇರಿಸಿದೆ, ಆದರೆ ಡಾಕ್ಟರ ಅವನು ಸತ್ತು ಹೋಗಿದ್ದಾನೆ ಎಂದು ಹೇಳಿದರು. ಆಮೇಲೆ ಅವನ ಹೆಣವನ್ನ ಅವನ ತಂದೆ ಮನೆಗೆ ತೆಗೆದು ಕೊಂಡು ಹೋದರು' ಎಂದ. ಅವನ ಮಾತುಗಳನ್ನ ನನಗೆ ನಂಬಲಿಕ್ಕೆ ಆಗಲಿಲ್ಲ. ಬೆಳಿಗ್ಗೆ ನನ್ನ ಜೊತೆ ಅವನ ಮದುವೆ ವಿಚಾರ ಮಾತನಾಡಿ ನಗುತಿದ್ದ ಆ ನಗು ಇನ್ನಿಲ್ಲ ಎಂದಾಗ ನನಗೆ ಆಘಾತ ಆಯಿತು. ನಾನು ಕನಸು ಕಾಣುತ್ತಿದ್ದೇನೆ ಎಂಬ ಧಿಗ್ಬ್ರಮೆ ಆವರಿಸಿತು. 'ನಾನು ಬಷೀರ್ ಮನೆಗೆ ಹೋಗುತಿದ್ದೇನೆ, ನೀವು ಬರ್ತೀರಾ ಸರ್?' ಎಂದ. ನಾನು ಯಾವದಕ್ಕೂ ಪ್ರತಿಕ್ರಿಯಿಸದ ಗೊಂಬೆ ಆಗಿದ್ದೆ. ಏನನ್ನು ಮಾತಾಡದೆ ಹಾಗೆ ಕುಳಿತೆ ...!