ಸಣ್ಣ ಕಥೆ: ಹತ್ತು ಡಾಲರಿನ ಸುತ್ತ...(ಭಾಗ 03/03)

ಸಣ್ಣ ಕಥೆ: ಹತ್ತು ಡಾಲರಿನ ಸುತ್ತ...(ಭಾಗ 03/03)

ಉಪಸಂಹಾರ :

ಅದು ಹೋಟೆಲಿನ ಹೌಸ್ ಕೀಪಿಂಗಿನ ಹಿಂಭಾಗದ ಕೋಣೆ. ಅಲ್ಲಿಬ್ಬರು ಹೌಸ್ ಕೀಪಿಂಗ್ ಡಿಪಾರ್ಟ್ಮೆಂಟಿನ ಏಶಿಯಾ ಮೂಲದ ಇಬ್ಬರು ಗೆಳತಿಯರು ಕೆಲಸ ಮುಗಿಸಿ ಚೇಂಜ್ ರೂಪಿನಲ್ಲಿ ಏಪ್ರನ್ ತೆಗೆದು ಬಟ್ಟೆ ಬದಲಿಸುತ್ತಿದ್ದಾರೆ... ಪಕ್ಕ ಪಕ್ಕದ ಕಂಪಾರ್ಟ್ಮೆಂಟಿನಲ್ಲಿದ್ದ ಅವರಿಬ್ಬರ ಹೊರತು ಅಲ್ಲಿ ಬೇರಾರು ಇಲ್ಲ. ಎಡಭಾಗದ ರೂಮಿನಲ್ಲಿದ್ದವಳು ತುಸು ಮೆತ್ತನೆಯ ದನಿಯಲ್ಲೆ, ' ಏನೇ ಇದು ? ಎರಡು ವಾರವಾದರೂ ಏನು ಕ್ರಮ ತೆಗೆದುಕೊಳ್ಳಲೇ ಇಲ್ಲವಲ್ಲ..? ಆ ಭೂತಾನ್ ಭೂತಿಣಿಗೆ ಏನು ಆದಂತೆಯೆ ಕಾಣುತ್ತಿಲ್ಲ ? ಮಾಮೂಲಿನಂತೆ ಕೆಲಸಕ್ಕೆ ಬರುತ್ತಾಳೆ, ಹೋಗುತ್ತಾಳೆ? ಆವತ್ತು ನೀನು ಎಲ್ಲಾ ನಾನು ಹೇಳಿದ ಹಾಗೆ ಮಾಡಿದೆ ತಾನೆ? ' ಎಂದಳು.

' ಅಯ್ಯೊ..! ನನಗು ಅದೇ ಅರ್ಥವಾಗುತ್ತಿಲ್ಲ.. ಅವತ್ತು ಅವಳು ಆ ರೂಮಿಗೆ ಹೌಸ್ ಕೀಪಿಂಗ್ ಸರ್ವೀಸ್ ಮಾಡಲು ಹೋಗುವ ಮೊದಲೆ, ನಾನೆ ಒಳಗೆ ಹೋಗಿ ಒಂದು ಡಬ್ಬಿ ತೆಗೆದು ಕಾಲು ಭಾಗ ಖಾಲಿ ಮಾಡಿ ಮಿಕ್ಕಿದ್ದನ್ನು ಅಲ್ಲೆ ವಾಪಸ್ಸು ಇಟ್ಟು ಬಂದುಬಿಟ್ಟೆ.. ಆಮೇಲೆ ಸರ್ವೀಸಿಂಗ್ ಮುಗಿದ ಮೇಲೂ ಹೋಗಿ ಚೆಕ್ ಮಾಡಿದ್ದೆ.. ನಾನಂದುಕೊಂಡಂತೆ ಹಳೆಯ ಡಬ್ಬಿ ತೆಗೆದು ಹೊಸದನ್ನು ಇಟ್ಟಿದ್ದಳು.... ನೋಡಿದರೆ, ಗಿರಾಕಿಯೆ ದೂರು ಕೊಡಲಿಲ್ಲವೆಂದು ಕಾಣುತ್ತದೆ... ಅಥವಾ ಅವನ ಗಡಿಬಿಡಿ ದಿನಚರಿಯಲ್ಲಿ ಗಮನಿಸಿದನೊ ಇಲ್ಲವೊ ?' ಎಂದಳು ಮತ್ತೊಬ್ಬಾಕೆ.

ಅವರಿಬ್ಬರು ಬಟ್ಟೆ ಬದಲಿಸಿ ಹೊರಬರುವಾಗ ಮತ್ತೆ ಮೊದಲಿನವಳು,  ' ಕನಿಷ್ಠ ದೂರು ಕೊಟ್ಟಿದ್ದರೆ ಒಂದು ವಾರ್ನಿಂಗ್ ಆದರು ಕೊಡಬಹುದೇನೊ ಅಂದುಕೊಂಡಿದ್ದೆ..  ಅಂತಾದರೂ ಈ ಬಾರಿ ಬೆಸ್ಟ್ ಸ್ಟ್ಯಾಫ್ ಅವಾರ್ಡ್ ಅವಳಿಗೆ ತಪ್ಪಿ, ಮತ್ತಾರಿಗಾದರು ಸಿಕ್ಕುತ್ತಿತ್ತೊ ಏನೊ ?' ಎಂದಳು ನಿಟ್ಟುಸಿರಿಡುತ್ತ.

ಯಾಕೆ ಏನು ಆಗಲಿಲ್ಲವೆಂದು ಪೂರ್ತಿ ಸ್ಪಷ್ಟವಾಗಿ ಗೊತ್ತಾಗದಿದ್ದರು ಅದರ ಮಾರನೆ ದಿನ ಅವರಿಬ್ಬರಿಗು ಸೂಕ್ಷ್ಮವಾಗಿ ಗೊತ್ತಾಗಿತ್ತು - ಹೋಟಿಲಿನ ಹೌಸ್ ಕೀಪಿಂಗ್ ಸ್ಟಾಫಿಗೆಲ್ಲ ಸೇರಿದಂತೆ ನಡೆಸಿದ ತರಬೇತಿ ಕಾರ್ಯಕ್ರಮದಲ್ಲಿ ಕೊಟ್ಟ ಉದಾಹರಣೆಯೊಂದನ್ನು ಕೇಳಿದಾಗ....
***
ತಿಂಗಳಿಗೊಮ್ಮೆ ಕಡ್ಡಾಯವಾಗಿ ಕೊಡುವ ಆ ತರಬೇತಿಯ ಮೀಟಿಂಗಿನಲ್ಲಿ ಪ್ರತಿ ಬಾರಿಯೂ ಏನಾದರೊಂದು ವಿಷಯಾಧಾರಿತ ವಸ್ತುವಿನ ಕುರಿತು ಉಪನ್ಯಾಸ ನೀಡುವುದು ಚಿಕಾಗೊದ ಆ ಹೋಟೆಲಿನಲ್ಲಿ ಅನೇಕ ವರ್ಷಗಳಿಂದ ನಡೆದು ಬಂದ ಪದ್ದತಿ... ಈ ಬಾರಿಯು ಅಂತೆಯೆ ಸೇರಿಸಿದ್ದ ವಿಷಯ 'ಗ್ರಾಹಕ ನಡುವಳಿಕೆ ಮತ್ತು ನಮ್ಮ ಪ್ರತಿಕ್ರಿಯೆ'. ಡಿನ್ನರಿನ ಕೂಟದಲ್ಲಿ ಹೋಟೆಲಿನ ಕೆಲಸಕ್ಕೆ ಸೇರಿದ್ದವರೆಲ್ಲರು ಆ ದಿನ ಕಡ್ಡಾಯವಾಗಿ ಭಾಗವಹಿಸಲೆಬೇಕಾಗಿತ್ತು. ಜತೆಗೆ ಪ್ರತಿ ಬಾರಿಯೂ ಆಯ್ದ ಕೆಲವರಿಗೆ ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಅವಕಾಶವೂ ಇರುತ್ತಿತ್ತು. ಈ ಬಾರಿ ರೆಸೆಪ್ಷನ್ನಿನ ಯುವತಿಯೊಬ್ಬಳ ಸರದಿ. ಅವಳು ಕೆಲವೊಮ್ಮೆ ಗ್ರಾಹಕರು ಹೇಗೆ ವರ್ತಿಸುತ್ತಾರೆ, ಹೇಗೆ ಕೆಲವು ದೂರು, ಆರೋಪಗಳನ್ನು ಸಲ್ಲಿಸುತ್ತಾರೆ, ಹೇಗೆ ಕೆಲವೊಮ್ಮೆ ಅದು ನಿಜವೂ ಆಗಿರಬಹುದು, ಸುಳ್ಳು ಆಗಿರಬಹುದು, ಅಂತಹ ಸಂಧರ್ಭಗಳಲ್ಲಿ ಹೇಗೆ ಪ್ರತಿಕ್ರಿಯಿಸಬೇಕೆಂದು ಕೆಲವು ಉದಾಹರಣೆಗಳ ಮೂಲಕ ವಿವರಿಸುತ್ತಿದ್ದಳು. ಹಾಗೆ ನೀಡುತ್ತಿದ್ದ ಉದಾಹರಣೆಯಲ್ಲಿ ಇತ್ತೀಚೆಗೆ ಒಬ್ಬ ಕಸ್ಟಮರ್ ತಾನು ತೆಗೆದುಕೊಂಡಿರದ ಮಿನಿಬಾರ್ ತಿನಿಸಿಗೆ ಚಾರ್ಜ್ ಮಾಡಿರುವುದರ ಕುರಿತು ದೂರು ಕೊಟ್ಟಿದ್ದನ್ನು ಉದಾಹರಿಸುತ್ತ, ಆ ಹೊತ್ತಲ್ಲಿ ಆ ದೂರನ್ನು ನಿರಾಕರಿಸದೆ, ಆರೋಪವನ್ನು ತಿರಸ್ಕರಿಸದೆ ಹೇಗೆ ಅದನ್ನು ಒಪ್ಪಿಕೊಂಡು ಸೆಟಲ್ಮೆಂಟ್ ಹೊತ್ತಿನಲ್ಲಿ ಇನ್ವಾಯ್ಸ್ ತಿದ್ದಿಸಿಕೊಳ್ಳುವಂತೆ ಸಲಹೆ ನೀಡಿದಳು, ಅದು ಹೇಗೆ ಗ್ರಾಹಕನ ನಿರಾಳತೆಗೆ ಸಹಕಾರಿಯಾಯ್ತು ಎಂದು ವಿವರಿಸಿದಳು. ಹಾಗೆಯೆ ಮುಂದುವರೆದು ಕೆಲವೊಮ್ಮೆ ಟೆಂಕ್ಷನ್ನಿನಲ್ಲಿ ಗ್ರಾಹಕರು ದೂರಿತ್ತರು, ಶಾಂತವಾದಾಗ ಅವರು ಮರೆತಿದ್ದ ವಿಷಯ ನೆನಪಿಗೆ ಬಂದೊ, ಅಥವಾ ತಾವು ಕೊಟ್ಟ ದೂರು ಸಕಾರಣದ್ದಲ್ಲವೊಂದೊ ಅರಿವಾಗಿ ತಾವೆ ದೂರು ಹಿಂದೆ ಪಡೆಯುವ ಪ್ರಕರಣಗಳನ್ನು ವಿವರಿಸುತ್ತ, ಈ ಕೇಸಿನಲ್ಲಿ ಗ್ರಾಹಕ ಮತ್ತೆ ಆ ದೂರಿನ ಬಗ್ಗೆ ಮಾತಾಡದೆ ಬಿಲ್ಲು ಪಾವತಿಸಿ ಹೋದ ಬಗೆಯನ್ನು ವಿವರಿಸಿದಳು. ಯಾವುದೆ ಆತಂಕದ ಸಂಧರ್ಭದಲ್ಲು ಒತ್ತಡಕ್ಕೆ ಸಿಲುಕದೆ ಸಮಾಧಾನವಾಗಿ ನಿಭಾಯಿಸಿದರೆ ಬಹುತೇಕ ಸಮಸ್ಯೆಗಳು ತಂತಾನೆ ಪರಿಹಾರವಾಗುತ್ತವೆ ಎಂಬುದು ಅವಳ ಮಾತಿನ ಸಾರವಾಗಿತ್ತು. 
***
ಭೂತಾನಿನ ಆ ಹೆಂಗಸು ಲೌಕಿಕ ಹೊರಟ ಸಂಜೆಗೆ ಮತ್ತೆ ಅವನ ರೂಮಿಗೆ ಸರ್ವೀಸಿಂಗಿಗೆ ಹೋದಾಗ ಖಾಲಿಯಾಗಿದ್ದ ರೂಮಿನಲ್ಲಿ ಮುಕ್ಕಾಲು ಭಾಗ ತಿನ್ನದೆ ಉಳಿದಿದ್ದ ಡಬ್ಬಿ ಕೈಗೆ ಸಿಕ್ಕಿತ್ತು. ಅದು ನೇರ ಕಣ್ಣಿಗೆ ಕಾಣುವಂತೆ ಇಟ್ಟಿದ್ದು ಮಾತ್ರವಲ್ಲದೆ ಅದರಡಿಯಲ್ಲಿದ್ದ ಟಿಶ್ಯೂ ಪೇಪರಿನಲ್ಲಿ ಏನೊ ಬರೆದಿದ್ದಂತೆ ಕಾಣಿಸಿತು. ಎತ್ತಿಕೊಂಡು ನೋಡಿದರೆ ಅದರಲ್ಲಿ, 'ಥ್ಯಾಂಕ್ಯೂ, ಧನ್ಯವಾದ್.. ದಿಸ್ ಇಸ್ ಫಾರ್ ಯೂ' ಎಂದು ಬರೆದಿತ್ತು. ಅದನ್ನು ನೋಡುತ್ತಿದ್ದಂತೆ ಅವಳ ಮುಖದಲ್ಲೊಂದು ಮುಗುಳ್ನಗೆ ಮೂಡಿತ್ತು. 'ಕೇವಲ ಒಂದು ದಿನ ಕೆಲವು ಗಳಿಗೆ ಸಹಜವಾಗಿ ಮಾತಾಡಿದ್ದಕ್ಕೆ ಈ ಥ್ಯಾಂಕ್ಸ್ ಜತೆ ತಿನಿಸಿನ ಡಬ್ಬವನ್ನು ಬಿಟ್ಟು ಹೋಗಿರುವನಲ್ಲ, ತುಂಬಾ ಒಳ್ಳೆಯ ಮನುಷ್ಯ' ಎಂದುಕೊಳ್ಳುತ್ತಲೆ ಆ ಡಬ್ಬಿಯನ್ನು ತೆಗೆದಿಟ್ಟುಕೊಂಡಳು, ಅವನದನ್ನಲಿ ಬಿಟ್ಟು ಹೋದ ಹಿನ್ನಲೆಯ ನೈಜ ಅರಿವೆ ಇರದೆ. ಆ ರಾತ್ರಿ ಮನೆಗೆ ಹೋದಾಗ ಅದರ ರುಚಿ ನೋಡಿದ ಮಗಳು, ' ಅಮ್ಮ ಎಲ್ಲಿಂದ ತಂದೆ ಇದನ್ನು? ತುಂಬಾ ಚೆನ್ನಾಗಿದೆ?...' ಎಂದು ಕೇಳಿದಾಗ, ತಾನು ಒಂದೆರಡು ಕಾಳು ಬೀಜ ಬಾಯಿಗೆ ಹಾಕಿಕೊಳ್ಳುತ್ತ ' ಹೀಗೆ ಯಾರೊ ಗೊತ್ತಿರುವ ಅಂಕಲ್ ಹೋಟೆಲಿಗೆ ಬಂದಿದ್ದರು.. ನಿನ್ನ ಮಗಳಿಗೆ ಕೊಡು ಅಂತ ಕೊಟ್ಟು ಹೋದರು' ಅಂದಾಗ ಎಂಟು ವರ್ಷದ ಆ ಹುಡುಗಿಯ ಮುಖದಲ್ಲಿ ಮಲ್ಲಿಗೆಯಂತಹ ನಗು ಅರಳಿತ್ತು. ಅದನ್ನು ನೋಡಿ ತಾನೂ ನಕ್ಕವಳೆ ಹಾಸಿಗೆಯಲ್ಲಿ ಮಗ್ಗುಲು ಬದಲಿಸಿದ್ದಳು ಆ ಭೂತಾನಿನ ಹೆಂಗಸು.
***
ಬೆಳಿಗ್ಗೆಯೆ ಅವಸರದಲ್ಲಿ ಏರ್ಪೋರ್ಟಿಗೆ ಹೊರಡಬೇಕಾದ ಲೌಕಿಕ ತನ್ನ ಲಗೇಜನ್ನೆಲ್ಲ ಎಳೆದುಕೊಂಡು ರಿಸೆಪ್ಷನ್ನಿನಲ್ಲಿ ಕೀ ಕೊಡಲು ಹೋದಾಗ, ಆ ಸ್ವಾಗತಕಾರಿಣಿ , ' ಸಾರ್ ಒಂದು ನಿಮಿಷ.. ' ಎನ್ನುತ್ತ ಅವನ ಕೈಗೊಂದು ಕವರನ್ನು ಕೊಟ್ಟಿದ್ದಳು. ಅದನ್ನು ತೆಗೆದು ನೋಡಲು ಪುರುಸೊತ್ತಿಲ್ಲದೆ ಇನ್ವಾಯ್ಸಿನ ಮತ್ತೊಂದು ಕಾಪಿಯಿರಬಹುದೆಂದುಕೊಂಡು ಅದನ್ನು ಕಂಪ್ಯೂಟರ ಬ್ಯಾಗಿಗೆ ಸೇರಿಸಿ ನಡೆದವನಿಗೆ ಗಡಿಬಿಡಿಯಲ್ಲಿ ಅದರ ವಿಷಯ ಮರೆತೆ ಹೋಗಿತ್ತು. ಏರ್ಪೋರ್ಟ್ ತಲುಪಿ ಚೆಕ್-ಇನ್ ಆದ ಮೇಲೆ, ವಲಸೆ ರಹದಾರಿ ಮತ್ತು ಸುರಕ್ಷಾ ತಪಾಸಣೆಯ ವಿಧಿಗಳನ್ನೆಲ್ಲ ಮುಗಿಸಿ ಲಾಂಜೊಂದರಲ್ಲಿ ಕೂತು ವಿಮಾನದ ಬೋರ್ಡಿಂಗ್ ಅನೌನ್ಸ್ ಮೆಂಟಿಗೆ ಕಾಯತೊಡಗಿದಾಗ ತಟ್ಟನೆ ಆ ಕವರಿನ ನೆನಪಾಗಿತ್ತು. ಸರಿ ಅದೇನೆಂದು ನೋಡಿಯೆಬಿಡುವ ಎಂದುಕೊಂಡು ಹೊರತೆಗೆದು ಕವರು ಬಿಚ್ಚಿದ. ಅವನಂದುಕೊಂಡಂತೆ ಅದು ಇನ್ವಾಯ್ಸ್ ಆಗಿರದೆ ಇಪ್ಪತ್ತು ಡಾಲರಿನ ಗಿಫ್ಟ್ ವೋಚರು ಆಗಿತ್ತು!  ಅದೇಕೆ ಆ ವೋಚರು ಕೊಟ್ಟರೆಂದು ಅಚ್ಚರಿಪಡುತ್ತ ಅದರ ಜತೆಗಿದ್ದ ಲೆಟರು ನೋಡಿದರೆ - ಹೋಟೆಲಿನ ಲಾಯಲ್ಟಿ ಗ್ರಾಹಕ ಮೆಂಬರಶಿಪ್ ಕಾರ್ಡ್ ಪಡೆಯಲೊಪ್ಪಿಕೊಂಡ ಕಾರಣಕ್ಕೆ ಮತ್ತು ಹೋಟೆಲಿನ ಸೇವಾಮಟ್ಟದ ಕುರಿತಾದ ಸರ್ವೆ ಕಾರ್ಡನ್ನು ತುಂಬಿಸಿದ್ದರ ಕೃತಜ್ಞತೆಯ ಕುರುಹಾಗಿ ಆ ಗಿಫ್ಟ್ ವೋಚರ್ ನೀಡಿದ್ದರೆಂದು ವಿವರಿಸಿತ್ತು..

ತಾನು ಹತ್ತು ಡಾಲರಿನ ಮೊತ್ತಕ್ಕೆ ತಲೆ ಕೆಡಿಸಿಕೊಂಡು ಒದ್ದಾಡಿ ಕೊನೆಗೊಂದು ಡಬ್ಬದ ತಿನಿಸು ಹಿಂದೆ ಬಿಟ್ಟು ಬಂದರೆ, ಇಲ್ಲಿ ಅದರ ಋಣವಿಟ್ಟುಕೊಳ್ಳದೆ ಬಡ್ಡಿಯ ಸಮೇತ ಹಿಂದಿರುಗಿಸುವ ಹಾಗೆ ಇಪ್ಪತ್ತು ಡಾಲರು ವೋಚರೀನ ರೂಪದಲ್ಲಿ ವಾಪಸ್ಸು ಬಂದಿದೆ..!  'ಎಲ್ಲಾ ಅಯೋಮಯವೆ' ಎಂದುಕೊಂಡು ಟರ್ಮಿನಲ್ಲಿನ ಒಳಗೆ ಇದ್ದ ಶಾಪಿಂಗಿನ ಅಂಗಡಿಗಳಲ್ಲೆ ಸುತ್ತಾಡತೊಡಗಿದ ಆ ಇಪ್ಪತ್ತು ಡಾಲರಿಗೆ ಏನು ಸಿಗಬಹುದೆಂದು. ಆ ಗಿಫ್ಟ್ ವೋಚರನ್ನು ಸ್ವೀಕರಿಸುವ ಮಾಹಿತಿ ಫಲಕವಿದ್ದ ಅಂಗಡಿಯೊಂದರ ಮುಂದೆ ನೇತು ಹಾಕಿದ್ದ ಪಾಶ್ಮೀನ ಕಾಶ್ಮೀರಿ ಶಾಲೊಂದರ ಸೊಗಸಾದ ವಿನ್ಯಾಸ ಕಣ್ಸೆಳೆದಂತಾಗಿ ಅದರ ಬೆಲೆಯೆಷ್ಟೆಂದು ನೋಡಿದರೆ ಇಪ್ಪತ್ತೊಂದು ಡಾಲರು ಎಂದಿತ್ತು. ತುಟಿಯಂಚಿನಲ್ಲೆ ಮುಗುಳ್ನಕ್ಕ ಲೌಕಿಕ ಅದನ್ನೆತ್ತಿಕೊಂಡು ಪೇ ಕೌಂಟರಿನತ್ತ ನಡೆಯುವ ಹೊತ್ತಿಗೆ ಸರಿಯಾಗಿ ಅವನ ಫ್ಲೈಟ್ ಬೋರ್ಡಿಂಗಿಗೆ ಸಿದ್ದವಾಗಿರುವ ಕುರಿತು ಅನೌನ್ಸ್ಮೆಂಟ್ ಬರಲಾರಂಭಿಸಿದ್ದನ್ನು ಕೇಳಿಸಿಕೊಂಡು, ತನ್ನ ಹೆಜ್ಜೆಯ ಗತಿಯನ್ನು ತೀವ್ರಗೊಳಿಸಿದ...

(ಮುಕ್ತಾಯ)
 

Comments

Submitted by H A Patil Tue, 06/02/2015 - 08:33

ನಾಗೇಶ ಮೈಸೂರುರವರಿಗೆ ವಂದನೆಗಳು
ಕಥೆಯ ಕೊನೆಯ ಭಾಗ ಓದಿದೆ ಎರಡನೆ ಭಾಗ ಓದುವಾಗ ಆ ಭೂತಾನಿನ ಕೆಲಸದವಳ ಬಗ್ಸಗೆ ಒಂದು ತರಹದ ಸಿಟ್ಟು ಮತ್ತು ಮರುಕ ಎರಡೂ ಉಂಟಾಗಿತ್ತು ಆದರೆ ಈ ಭಾಗ ಓದಿದಾಗ ಆ ಪಾತ್ರದ ಬಗೆಗೆ ನನ್ನ ಗೌರವ ಹೆಚ್ಚಿದೆಅದೆ ರೀತಿ ಆಕಯನ್ನು ತೊಂದರೆಗೆ ಒಡ್ಡಲು ಏಸಿಯಾ ಮೂಲದ ಆ ಇಬ್ಬರು ಕೆಲಸದವರ ಬಗ್ಗೆ ಒಂದು ರೀತಿಯ ವಿಷಾದವೂ ಇದೆ.ಇಡಿ ಕಥನ ಗರಿಗಟ್ಟುವುದೆ ಈ ಕೊನೆಯ ಭಾಗದಲ್ಲಿ ಅದ್ಭುತವಾದ ಕಥಾನಕ, ಒಟ್ಟಿನಲ್ಲಿ ಕಥಾನಕದ ಕೊನೆಯ ಆಶಯ ಚೆನ್ನಾಗಿ ಮೂಡಿ ಬಂದು ಕಥೇಗೆ ಒಂದು ರೀತಿಯ ಗಟ್ಟಿತನ ಬಂದಿದೆ, ಧನ್ಯವಾದಗಳು.

Submitted by nageshamysore Tue, 06/02/2015 - 16:10

In reply to by H A Patil

ಪಾಟೀಲರೆ ನಮಸ್ಕಾರ ಮತ್ತು ಧನ್ಯವಾದಗಳು. ಕಣ್ಣಿಗೆ ಕಾಣುವ ಅಥವ ತಟ್ಟನೆ ಮೇಲ್ನೋಟಕ್ಕೆ ಅನಿಸುವ ಎಷ್ಟೊ ಕಾರಣಗಳಿಗು ಮೀರಿದ ಹಿನ್ನಲೆ, ಸಂಯೋಜನೆಗಳು ಇರಬಹುದಾದರು ಅದು ನಮಗೆ ಗೊತ್ತಿರದೆ ಇದ್ದಾಗ, ನಮ್ಮ ಮೂಗಿನ ನೇರಕ್ಕೆ ತೀಮಾನಕ್ಕೆ ಬಂದು ಬಿಡುತ್ತೇವೆ. ಆದರೆ ಅದೆ ಅಂತಿಮ ಸತ್ಯವಾಗಬೇಕಿಲ್ಲ ಎನ್ನುವ ಆಲೋಚನೆ ಈ ಕಂತಿನ ಮುಖ್ಯ ಸಾರವಾದರೆ, ಸೂಕ್ಷ್ಮ ಮನಸಿನ ನಡುವಳಿಕೆಯತ್ತ ಒಂದು ವಿಭಿನ್ನ ದೃಷ್ಟಿ ಹರಿಸುವುದು ಮತ್ತೊಂದು ಅಂಶ. ನೀವಂದಂತೆ ಅದು ಕಥೆಯನ್ನು ಗಟ್ಟಿಗೊಳಿಸಿರುವುದಾದರೆ ನಿಜಕ್ಕು ಆ ಯತ್ನ ಸಾರ್ಥಕ. ಮತ್ತೆ ಧನ್ಯವಾದಗಳು.

Submitted by partha1059 Tue, 06/02/2015 - 10:33

ಕತೆಯ ಹೊಸಸೂತ್ರವೊಂದರ ಹಿಂದಿದೆ ಅಧುನಿಕ ಕಾರ್ಪೊರೇಟ್ ಪ್ರಪಂಚದ ಹೊರಗಿನ ಮೆರುಗಿನ ಹಿಂದೆ,
ಅಂತರಾಳದಲ್ಲಿರುವ ಮನುಷ್ಯನ ವಿವಿಧ ಸ್ವಭಾವ, ಭಾವನೆಗಳ ತಾಕಲಾಟ ಚಿತ್ರಿತಗೊಂಡಿದೆ.
ಸ್ವಭಾವ, ಭಾವನೆಗಳು ವ್ಯವಹಾರಗಳ ಹಿಂದೆ ಅಡಗಿವೆ .

ಒಳ್ಳೆಯ ಕತೆ
ಅಭಿನಂದನೆಗಳು ನಾಗೇಶ್ ಮೈಸೂರ್ ಸಾರ್,

Submitted by nageshamysore Tue, 06/02/2015 - 16:13

In reply to by partha1059

ಪಾರ್ಥರೆ ನಮಸ್ಕಾರ. ಸಣ್ಣ ಕಥೆಗಳ ಸರದಾರರಾದ ನಿಮ್ಮಿಂದಲೆ ಒಳ್ಳೆಯ ಕಥೆ ಎನಿಸಿಕೊಳ್ಳುವುದಕ್ಕಿಂತ ಹೆಚ್ಚಿನ ಶಹಭಾಷಗಿರಿ ಬೇಕೆ? ತುಂಬಾ ಧನ್ಯವಾದಗಳು. ಅಂದ ಹಾಗೆ ನಿಮ್ಮ ಸಲಹೆಯಂತೆ ನಾನು 'ಸಾರ್' ನಿಲ್ಲಿಸಿದೆ, ಆದರೆ ನೀವು ಶುರು ಹಚ್ಚಿಕೊಂಡಿರಲ್ಲ? ಇಬ್ಬರೂ ಒಟ್ಟಿಗೆ ನಿಲ್ಲಿಸಿಬಿಡುವುದೆ ಒಳಿತೇನೊ ? :-)

Submitted by kavinagaraj Tue, 06/02/2015 - 15:05

ನಾಗೇಶರೇ, 2 ಮತ್ತು 3ನೆಯ ಕಂತುಗಳನ್ನೂ ಓದಿದೆ. ಮೊದಲ ಕಂತಿನಲ್ಲಿ ಕುನ್ ಸೂ ನೆನಪು ಬರಬಾರದಿತ್ತೆನ್ನಿಸಿತು. ಡಬ್ಬಿಯ ತಿಂಡಿಯ ಹಿನ್ನೆಲೆ ತಿಳಿದಾಗ ವೃತ್ತಿ ಮಾತ್ಸರ್ಯದ ಅನಾವರಣ ಆಯಿತು. ವಿಭಿನ್ನವಾಗಿದೆ, ಅಭಿನಂದನೆಗಳು.

Submitted by nageshamysore Tue, 06/02/2015 - 16:20

In reply to by kavinagaraj

ಕವಿಗಳೆ, ಸಣ್ಣಕಥೆಯಲ್ಲಿ ಪಾರ್ಥರಂತೆ ಪಳಗಿದ ಕೈಯಲ್ಲವಾಗಿ, ಹೇಗೊ ಹಾಗು ಹೀಗು ಮೂರು ಕಂತಿನೊಳಗೆ ಹಿಡಿಸುವಂತೆ ಕುಗ್ಗಿಸಿ ಒಂದನ್ನು ಹೊಸೆದುಬಿಟ್ಟೆ! ಅದು ವಿಭಿನ್ನವಾಗಿ ಕಾಣಲು ಕಾರಣ ಬಹುಶಃ ಆಧುನಿಕ ವ್ಯಾಪಾರಿ ಜಗದ, ಕಾರ್ಪೋರೇಟ್ ಹಿನ್ನಲೆಯ ಈ ತರದ ಕಥೆಗಳು ಹೆಚ್ಚಾಗಿರದೆ ಇರುವುದು ಕಾರಣವಿರಬಹುದೇನೊ.. ಆದರೆ ಎಲ್ಲಾ ಪ್ರಗತಿ, ವಾಣಿಜ್ಯೀಕರಣದ ನಡುವೆಯೂ ಮಾನವೀಯ ಮೌಲ್ಯಗಳು ಸದಾ ಜೀವಂತವಿರುವ ಬಗೆ ಅಲ್ಲಿಯೂ ಕಾಣುತ್ತದೆನ್ನುವುದನ್ನು ಎತ್ತಿ ತೋರಿಸುವುದು ಒಂದು ಉದ್ದೇಶವಾಗಿತ್ತು. ಅದು ಸಫಲವಾಗಿದ್ದರೆ ಯತ್ನ ಸಾರ್ಥಕ. ಪ್ರತಿಕ್ರಿಯೆಗೆ ಧನ್ಯವಾದಗಳು ಕವಿಗಳೆ :-)

Submitted by nageshamysore Tue, 06/02/2015 - 19:48

In reply to by smurthygr

ಮೂರ್ತಿಗಳೆ ನಮಸ್ಕಾರ. ನನಗೆ ಹೆಚ್ಚು ಗೊತ್ತಿರುವ ಸರಕೆಲ್ಲ ಬರಿ ಕಾರ್ಪೋರೇಟ್ ಜಗದ ಸುತ್ತಲೆ ಇರುವುದರಿಂದ ಹೆಚ್ಚು ಕಡಿಮೆ ಎಲ್ಲಾ ಕಥೆಗಳಲ್ಲು ಅದರ ತುಣುಕುಗಳು ಇಣುಕುತ್ತಲೆ ಇರುತ್ತವೆ. ಮಿಕ್ಕ ಭಾಗದ ಅನುಭವ ಕಡಿಮೆ ಮಾತ್ರವಲ್ಲದೆ, ಅದರ ಕುರಿತು ಬರೆಯಬಲ್ಲ ಸವ್ಯಸಾಚಿಗಳು ಬೇಕಾದಷ್ಟು ಇರುವುದರಿಂದ ನಾನು ಬರದುದರಲ್ಲಿ ವಿಭಿನ್ನತೆ ಇರಲು ಸಾಧ್ಯವಿಲ್ಲ. ನಿಮ್ಮ ಸಲಹೆಯಂತೆ ಕಾರ್ಪೋರೇಟ್ ಜಗದ ಕುರಿತು (ಅದರಲ್ಲು ಐಟಿ ಸುತ್ತ) ಹೆಚ್ಚು ಗಮನ ಹರಿಸುತ್ತೇನೆ. ಬಹಳ ದಿನಗಳಿಂದ ಒಂದು ಬೃಹತ್ ಕಥಾನಕದ ಐಡಿಯ ತಲೆ ಕೊರೆಯುತ್ತಿದೆ. ಅದು ಕಾದಂಬರಿ ಮಾತ್ರವೆ ಆಗಬಲ್ಲ ಸಾಧ್ಯತೆ ಇರುವುದರಿಂದ ಸೂಕ್ತ ಸಮಯಾವಕಾಶ ಸಿಗಲೆಂದು ಕಾಯುತ್ತಿದ್ದೇನೆ. ಆದರೆ ಅದು ಬರಿ ಕಾರ್ಪೋರೇಟ್ ಜಗದ ಆಳವಾದ ಕಥೆಯಾದ ಕಾರಣ, ಬರಿ ಒಂದು ವರ್ಗದ ಓದುಗರಿಗೆ ಮಾತ್ರ ಹಿಡಿಸಬಹುದೆಂದು ಕಾಣುತ್ತದೆ :-)

Submitted by smurthygr Wed, 06/03/2015 - 18:31

In reply to by nageshamysore

ಕಾರ್ಪೋರೇಟ್ / ಐಟಿ ಹಿನ್ನೆಲೆಯನ್ನು ಎಷ್ಟು ಬೇಕೋ ಅಷ್ಟೇ ಇರಿಸಿಕೊಂಡು, ಮಾನವೀಯ ಸಂಬಂಧಗಳು, ತೊಳಲಾಟಗಳಿಗೆ ಹೆಚ್ಚಿನ ಒತ್ತು ನೀಡಿ ಕತೆ ಬರೆದರೆ ಬಹುಶಃ ಎಲ್ಲಾ ವರ್ಗಗಳ ಓದುಗರಿಗೂ ಮೆಚ್ಚುಗೆಯಾಗಬಹುದು.

Submitted by nageshamysore Thu, 06/04/2015 - 01:33

In reply to by smurthygr

ಮೂರ್ತಿಗಳೆ ನಿಮ್ಮ ಮಾತು ನಿಜ -  ಪ್ರಯೋಗವಂತು ಮಾಡಿ ನೋಡುವೆ, ಬಿಡಿ - ಕಳೆದುಕೊಳ್ಳುವುದಾದರೂ ಏನು? ಕಡಿಮೆಯೆಂದರೂ ಕನ್ನಡದ ಅಕ್ಷರ, ಕಾಗುಣಿತ ಅಭ್ಯಾಸ ಮಾಡಿದಂತಾದರು ಆಗುತ್ತದೆ...:-)