ಸಣ್ಣ ಕಥೆ- ‘ಬಲಿಯಾದವಳು’

ಸಣ್ಣ ಕಥೆ- ‘ಬಲಿಯಾದವಳು’

ಸುರೇಶ-ಸುಧಾ ಅವರದು ಸುಂದರ ದಾಂಪತ್ಯದ ಬದುಕು. ಚೊಚ್ಚಲ ಮಗು ಹೆಣ್ಣಾದಾಗ ಸಂಭ್ರಮವೋ ಸಂಭ್ರಮ. ಮೊದಲ ಮಗುವೆಂಬ ಕಾರಣಕ್ಕೆ ಮನೆಯಲ್ಲಿ ಸುಧಾಳ ಅತ್ತೆ -ಮಾವ, ನಾದಿನಿಯರು ತುಂಬಾ ಅಕ್ಕರೆಯಿಂದ  ನೋಡಿಕೊಳ್ಳುತ್ತಿದ್ದರು.

ಮಗುವಿಗೆ ವರ್ಷವೆರಡು ತುಂಬಿದಾಗ ಸುಧಾ ಎರಡನೇ ಮಗುವಿಗೆ ತಾಯಿಯಾದಳು. ಹೆಣ್ಣು ಮಗುವಿನೊಂದಿಗೆ ಮನೆಗೆ ಬಾಣಂತಿ ಬಂದಾಗ ಅತ್ತೆಯವರ ತಾತ್ಸಾರ ನೋಟವನ್ನು ಗಮನಿಸಿದಳು. ಏನೋ ಶಾಸ್ತ್ರವೆಂಬಂತೆ  ಬಾಣಂತನ ಮಾಡಿದರು. ಪ್ರತಿನಿತ್ಯ 'ಹೆಣ್ಣು ಹೆತ್ತಿದ್ದಿ, ನಿನ್ನ ಹೊಟ್ಟೆಯಲ್ಲಿ ಗಂಡು ಹುಳ ಹುಟ್ಟುವ ಯೋಗವೇ ಇಲ್ಲ ವೇನೋ, ನಮ್ಮ ಮಗನ ವಂಶ ಇಲ್ಲಿಗೆ ನಿಂತು ಹೋಗುವುದು' ಎಂದು ಅತ್ತೆಯ ಬಿರುನುಡಿಗಳ ಕೇಳಿ ಸುಧಾಳಿಗೆ ಕಿವಿಗಳು ಕಿವುಡಾಗಿತ್ತು. ಅಡುಗೆ ಮನೆಯ ನಾಲ್ಕು ಗೋಡೆಗಳ ಮಧ್ಯೆ ಕಣ್ಣೀರು ಸುರಿಸುತ್ತಿದ್ದಳು.

ಇತ್ತೀಚೆಗೆ ಸುರೇಶ ಸಹ ಅಮ್ಮನ ಮಾತಿಗೆ ಮಾತು ಜೋಡಿಸಿ ಅಸಡ್ಡೆ ಮಾಡುತ್ತಿದ್ದ. ಸುಧಾಳು ಮನೆ, ಹಟ್ಟಿ, ತೋಟ ಎಂದು ದುಡಿದು ಹೈರಾಣ ಆಗಿದ್ದಳು. ಮೂರನೇ ಸಲ ತಾಯಿಯಾಗುವ ಲಕ್ಷಣಗಳು ಸುಧಾಳಲ್ಲಿ ಕಾಣಿಸಿತು. ಅತ್ತೆ ಮಾವ ಗಂಡ ಎಲ್ಲರದೂ ಒಂದೇ ಮಾತು *ನೋಡು ಈ ಸಲ ಗಂಡು ಮಗುವನ್ನೇ ಹೆರಬೇಕು* ಎಂಬುದಾಗಿ. ಮೌನವೇ ಉತ್ತರ ಸುಧಾಳದ್ದು. ಕಂಡ ಕಂಡ ದೇವರಲ್ಲಿ ಪ್ರಾರ್ಥನೆಯೊಂದೇ, ಗಂಡು ಮಗು ನೀಡು ಎಂಬುದಾಗಿ. ಆದರೂ ಆಕೆಯ ಒಳಮನಸ್ಸು ಚೀರಿ ಹೇಳುತಿತ್ತು, 'ನಾನು ಕಾರಣವೇ ಇದಕ್ಕೆ, ಪತಿರಾಯರಿಗೆ ಯಾಕೆ ಬುದ್ಧಿ ಇಲ್ಲ, ಅಮ್ಮನ ಮಾತಿಗೆ ಗೋಣು ಆಡಿಸುತ್ತಾರಲ್ಲ' ಎಂಬುದಾಗಿ ದುಃಖಿಸುತ್ತಿದ್ದಳು.

ಹೆರಿಗೆ ನೋವು ಆರಂಭವಾದಾಗ ಆಸ್ಪತ್ರೆಗೆ  ಹೊರಟು ನಿಂತರು. ಅತ್ತೆಯ ಖಡಕ್ ಎಚ್ಚರಿಕೆ 'ಸುಧಾ ಈ ಸಲ  ಗಂಡು ಮಗುವಿನೊಂದಿಗೆ ಬರಬೇಕು, ಹೆಣ್ಣಾದರೆ ಈ ಮನೆ ಹೊಸಿಲು ತುಳಿದು ಒಳಗೆ ಬರಬೇಡ, ನಿನಗೂ ನಿನ್ನ ಮಗುವಿಗೂ ಇಲ್ಲಿ ಜಾಗವಿಲ್ಲ' ಎಂದು. ಕಿವಿಗಳಿಗೆ ಕಾದ ಸೀಸ ಎರೆದ ಹಾಗಾಯಿತು, ನೋವಿನಲ್ಲೂ ಮೌನವಾಗಿ ರೋಧಿಸಿದಳು.

ಆಸ್ಪತ್ರೆಯಲ್ಲಿ ಹಲವಾರು ಗಂಟೆಗಳ ತರುವಾಯ ಹೆರಿಗೆಯಾಯಿತು ಸುಧಾಳಿಗೆ. ಮಗು ಏನೆಂದು ದಾದಿಯ ಹತ್ತಿರ ಕೇಳಿದಳು.*ಹೆಣ್ಣು ಮಗು, ಮುದ್ದಾಗಿದೆ* ಎಂಬುದು ಕಿವಿಗೆ ಬಿದ್ದದ್ದೇ ತಡ, ಹ್ಹಾಂ ಎಂದು ಚೀರುತ್ತಾ ಹೃದಯಾಘಾತಕ್ಕೆ ಒಳಗಾದಳು. ಸಮಾಜದ ಮೌಢ್ಯತೆಗೆ ಸಾಕ್ಷಿಯಾದಳು, ಕಟುವಾದ ಹೃದಯ ಹೀನರ ಎಲುಬಿಲ್ಲದ ನಾಲಿಗೆಗೆ *ಬಲಿ*ಯಾದಳು ಆ ಮುಗ್ಧೆ.

-ರತ್ನಾಭಟ್ ತಲಂಜೇರಿ.

(ಸತ್ಯ ಘಟನೆಯ ಆಧಾರಿತ)

ಚಿತ್ರ ಕೃಪೆ- ಇಂಟರ್ನೆಟ್ ತಾಣ