ಸಣ್ಣ ಕುಟ್ರ ಎಂಬ ಪುಟ್ಟ ಹಕ್ಕಿಯ ಕಥೆ

ಸಣ್ಣ ಕುಟ್ರ ಎಂಬ ಪುಟ್ಟ ಹಕ್ಕಿಯ ಕಥೆ

ಈ ವಾರದ ಹಕ್ಕಿ ಕಥೆಗೆ ಸ್ವಾಗತ.. ಮೊದಲಿಗೆ ಒಂದು ಒಗಟು...

ಮರದ ಕಾಂಡದಲಿ ತೂತನು ಕೊರೆದು

ಗೂಡನ್ನು ನಾನು ಮಾಡುವೆನು

ಹಗಲಿನ ಹೊತ್ತಲಿ ಮರದಲಿ ಕೂತು

ಕುಟುರ್ ಕುಟುರ್ ಕೂಗುವೆನು

ಹಸುರಿನ ನಡುವಲ್ಲಿ ಕುಳಿತರೆ ಅಡಗಿ

ಗುರುತಿಸಲಾರಿರಿ ನೀವೆಂದೂ..

ತಿಳಿಯಿತೇನು ನಾನ್ಯಾವ ಹಕ್ಕಿ?

ಭಾನುವಾರದ ದಿನ ರಜೆಯಾದ್ದರಿಂದ ಬೆಳಗಿನ ಕೆಲಸವನ್ನೆಲ್ಲ ಮುಗಿಸಿ ತಿಂಡಿ ತಿಂದು ಹೊರಗಡೆ ಪೇಪರ್ ಓದುತ್ತಾ ಕುಳಿತಿದ್ದೆ. ಪಕ್ಕದ ಮರದಿಂದ ಕುಟ್ರು ಕುಟ್ರು ಎಂಬ ಸದ್ದು ಕೇಳಲು ಪ್ರಾರಂಭವಾಯಿತು. ಸ್ವಲ್ಪ ಹೊತ್ತಿನಲ್ಲಿ ಆ ಕಡೆ ಇನ್ನೊಂದು ಮರದಿಂದ ಇನ್ನೊಂದು ಹಕ್ಕಿ ಅದೇ ಧ್ವನಿಯಲ್ಲಿ ಕೂಗುತ್ತಿತ್ತು. ಎರಡು ಹಕ್ಕಿಗಳು ಹಾಡಿನ ಸ್ಪರ್ಧೆ ಮಾಡುತ್ತಿವೆಯೋ ಎಂಬಂತೆ ಒಂದಾದ ನಂತರ ಒಂದು ಕೂಗುತ್ತಿದ್ದರೆ, ಎಲ್ಲಿಂದ ಈ ಶಬ್ದ ಬರುತ್ತಿದೆ ಎಂದು ನಾನು ಹುಡುಕಿ ಹುಡುಕಿ ಸುಸ್ತಾದೆ. ಅಲ್ಲೇ ಮುಂದುಗಡೆ ಇದ್ದ ಮರದಿಂದ ಹಸಿರು ಬಣ್ಣದ ಹಕ್ಕಿಯೊಂದು ಹಾರಿದಾಗಲೇ ತಿಳಿದದ್ದು ಇಲ್ಲೇ ಹತ್ತಿರದಲ್ಲೇ ಇದು ಕುಳಿತಿತ್ತು ಎಂದು. ಗಿಡಗಳ ಮಧ್ಯೆ ಕುಳಿತರೆ ಎಲೆ ಯಾವುದು ಹಕ್ಕಿ ಯಾವುದು ಎಂದು ಗುರುತಿಸುವುದು ಅಸಾಧ್ಯ. ರೆಕ್ಕೆ ಮತ್ತು ಬಾಲಗಳೆಲ್ಲ ಪೂರ್ತಿ ಹಸಿರು ಬಣ್ಣ, ಕಂದು ಬಣ್ಣದ ತಲೆ, ದಪ್ಪನೆಯ ಕೊಕ್ಕು, ಮುಖದ ಮೇಲೆ ಬಿಳಿ ಬಣ್ಣದ ಕೆನ್ನೆಯ ಭಾಗ, ಕತ್ತು ಮತ್ತು ಗಲ್ಲದಲ್ಲಿ ಬಿಳಿ ಮತ್ತು ಕಂದು ಬಣ್ಣದ ಗೀರುಗಳು, ಕೂಗುವಾಗ ಗಂಟಲಿನ ಒಳಗಿಂದ ದೊಡ್ಡದೊಂದು ಬೆಲೂನಿನಂತಹ ಚರ್ಮ ಹೊರಬಂದು ದಪ್ಪನೆ ಉಬ್ಬಿಕೊಳ್ಳುತ್ತದೆ.

ಒಮ್ಮೆ ಈ ಹಕ್ಕಿ ನಮ್ಮ ಶಾಲೆಯ ತೆಂಗಿನ ಮರ ಒಂದರಲ್ಲಿ ಗೂಡು ಮಾಡಿತ್ತು. ಸಿಡಿಲಿಗೆ ಬೋಳಾಗಿದ್ದ ಮರದ ಕಾಂಡದಲ್ಲಿ ತೂತನ್ನ ಕೊರೆದು ಗೂಡು ಮಾಡಿ ಮರಿ ಮಾಡಿತ್ತು. ಹಣ್ಣುಗಳೆಂದರೆ ಈ ಹಕ್ಕಿಗಳಿಗೆ ಬಹಳ ಇಷ್ಟ. ಆಲದ ಜಾತಿಯ ಮರದ ಹಣ್ಣುಗಳ ಬಳಿ ಹೆಚ್ಚಾಗಿ ಕಾಣಿಸಿಗುತ್ತವೆ. ಕಾಫಿ ತೋಟಗಳಲ್ಲಿ ಕಾಫಿ ಹಣ್ಣನ್ನೂ ತಿನ್ನಲು ಬರುತ್ತವೆ ಯಂತೆ. ಜೊತೆಗೆ ಕೀಟಗಳು ಮತ್ತು ಹೂವಿನ ಮಕರಂದವನ್ನೂ ಹೀರುತ್ತದೆ. ಇದರ ಕೊಕ್ಕಿನ ಬದಿಯಲ್ಲಿರುವ ಮೀಸೆಯಂತಹ ಕರಿಗಳು ಹೂವಿನ ಮಕರಂದ ಹೀರುವಾಗ ಅವುಗಳಿಗೆ ಕೇಸರ ಅಂಟಿಕೊಂಡು ಸಸ್ಯಗಳಲ್ಲಿ ಪರಾಗಸ್ಪರ್ಶ ಕ್ರಿಯೆ ನಡೆಯಲು ಇವು ಸಹಕಾರಿ ಮಾತ್ರವಲ್ಲ, ಹಣ್ಣುಗಳನ್ನು ತಿಂದು ಬೀಜವನ್ನು ಎಲ್ಲೆಂದರಲ್ಲಿ ಎಸೆಯುವುದರಿಂದ ಇವು ಕಾಡಿನಲ್ಲಿ ಬೀಜ ಪ್ರಸಾರದ ಪ್ರಮುಖ ಕೆಲಸವನ್ನು ನಿರ್ವಹಿಸುತ್ತವೆ.

ನೋಡಲು ಒಂದೇ ರೀತಿ ಇರುವ ಗಂಡು ಮತ್ತು ಹೆಣ್ಣು ಹಕ್ಕಿಗಳು ಡಿಸೆಂಬರ್ ನಿಂದ ಜೂನ್ ತಿಂಗಳ ನಡುವೆ ಜೋಡಿಯಾಗಿ ಸಂತಾನಾಭಿವೃದ್ಧಿ ಮಾಡುತ್ತವೆ. ಮರದ ಪೊಟರೆಗಳಲ್ಲಿ ಎರಡರಿಂದ ನಾಲ್ಕು ಮೊಟ್ಟೆಗಳನ್ನು ಇಟ್ಟು ಮರಿ ಮಾಡುತ್ತವೆ. ತಂದೆ ತಾಯಿ ಎರಡು ಹಕ್ಕಿಗಳು ಸಮಾನವಾಗಿ ಮಕ್ಕಳ ಲಾಲನೆ ಪಾಲನೆ ಮಾಡುತ್ತವೆ. ನಿಮ್ಮ ಸಮೀಪದಲ್ಲೂ ಈ ಹಕ್ಕಿ ಕೂಗುವುದನ್ನು ಕೇಳಿದ್ದೀರಾ?

ಕನ್ನಡದ ಹೆಸರು: ಸಣ್ಣ ಕುಟ್ರ ( ಬಿಳಿ ಕೆನ್ನೆ ಕುಟ್ರ)

ಇಂಗ್ಲೀಷ್ ಹೆಸರು: White-cheeked Barbet

ವೈಜ್ಞಾನಿಕ ಹೆಸರು: Megalaima viridis

ಚಿತ್ರ-ಬರಹ : ಅರವಿಂದ ಕುಡ್ಲ, ಬಂಟ್ವಾಳ