ಸಣ್ಣ ಕ್ಲಿನಿಕ್ ಗಳ ಕಡೆಗೆ ಸಾಮಾನ್ಯ ಜನರ ಒಲವು...
ಕೊರೋನಾ, ಓಮಿಕ್ರಾನ್ ಉತ್ತುಂಗದ ಈ ಸಮಯದಲ್ಲಿ ಕೆಮ್ಮು ನೆಗಡಿ ಶೀತ ಜ್ವರ ಬಹುತೇಕ ಜನರಲ್ಲಿ ಸಾಮಾನ್ಯ ಆಗುತ್ತಿರುವಾಗ ಹಿಂದಿನ ಎರಡು ಅಲೆಗಳಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳಿಗೆ ಹೆಚ್ಚು ಒಲವು ತೋರುತ್ತಿದ್ದ ಜನ ಈಗ ಏಕಾಏಕಿ ಸಣ್ಣ ಸಾಮಾನ್ಯ ಕ್ಲಿನಿಕ್ ಗಳ ಮುಂದೆ ಸಾಲುಗಟ್ಟಿ ನಿಲ್ಲುತ್ತಿರುವುದು ಕಂಡು ಬರುತ್ತಿದೆ. ಈ ಬದಲಾವಣೆಯ ಒಳ ಅರ್ಥ ಅಥವಾ ಕಾರಣ ಏನಿರಬಹುದು ?
ಎರಡು ವರ್ಷಗಳಿಂದ ಕೋವಿಡ್ ಎಂಬ ವೈರಸ್, ಅದರ ಪ್ರಸಾರ, ಪರಿಣಾಮ, ಸಾವು ನೋವುಗಳು ಮುಂತಾದ ಎಲ್ಲಾ ಸುದ್ದಿಗಳು ಜನರ ಪ್ರತಿನಿತ್ಯದ ಭಾಗವಾಗಿದೆ. ಬಹುಶಃ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಅದರ ಪ್ರಸ್ತಾಪ ಇಲ್ಲದ ಒಂದು ದಿನವೂ ಇಲ್ಲ ಎಂದೇ ಹೇಳಬೇಕು. ಸ್ನೇಹಿತರು, ಸಂಬಂಧಿಗಳು, ಪರಿಚಿತರು, ಅನಾಮಿಕರು ಹೀಗೆ ಒಬ್ಬರಲ್ಲ ಒಬ್ಬರು ಇದಕ್ಕೆ ತುತ್ತಾಗಿ ಸತ್ತಿರಬಹುದು ಅಥವಾ ಸಾವಿನ ಹತ್ತಿರ ಹೋಗಿ ವಾಪಸ್ಸು ಬಂದಿರಬಹುದು ಅಥವಾ ಇನ್ನೂ ಚೇತರಿಸಿಕೊಳ್ಳುತ್ತಿರಬಹುದು ಅಥವಾ ಆಸ್ಪತ್ರೆಯ ಖರ್ಚು ವೆಚ್ಚದ ಪರಿಣಾಮ ಎದುರಿಸುತ್ತಿರಬಹುದು ಒಟ್ಟಿನಲ್ಲಿ ಏನೋ ಒಂದು ಅನುಭವ ಅವರ ಪಾಲಿಗೆ ದಕ್ಕಿರುತ್ತದೆ. ಆ ಅನುಭವದ ಆಧಾರದಲ್ಲಿ ಸಾಮಾನ್ಯ ಜನರು ಒಂದು ತೀರ್ಮಾನಕ್ಕೆ ಬಂದಿರಬಹುದು.
ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳು ಅತ್ಯಂತ ದುಬಾರಿ ಎಂಬುದು ಮೊದಲ ನೋಟಕ್ಕೆ ತಿಳಿಯುತ್ತದೆ. ಅಲ್ಲಿ ಅನವಶ್ಯಕ ಲ್ಯಾಬ್ ಟೆಸ್ಟ್ ಗಳಿಗೆ ಒಳಪಡಿಸಲಾಗುತ್ತದೆ ಎಂಬ ಅನುಮಾನವಿದೆ. ಕೆಲವೊಮ್ಮೆ ಅನಿವಾರ್ಯವಲ್ಲದಿದ್ದರೂ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ ಎಂಬ ಗುಮಾನಿ ಇದೆ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳು ರೋಗದ ಗುಣಲಕ್ಷಣಗಳನ್ನು ಉತ್ಪ್ರೇಕ್ಷೆ ಮಾಡಿ ಭಯ ಹುಟ್ಟಿಸಿ ಸಾಕಷ್ಟು ಹಣ ವಸೂಲಿ ಮಾಡುತ್ತಾರೆ ಎಂಬ ಆರೋಪವೂ ಇದೆ. ಎಲ್ಲಕ್ಕಿಂತ ಹೆಚ್ಚಾಗಿ ಸಾವಿನ ಭಯ ಹೆಚ್ಚಾಗುವ ಚಿಕಿತ್ಸಾ ವಿಧಾನಗಳು ಸಾವನ್ನು ಬೇಗ ಅಪ್ಪಿಕೊಳ್ಳುವಂತೆ ಮಾಡುತ್ತದೆ ಎಂದು ಅನೇಕರು ಖಾಸಗಿಯಾಗಿ ಮಾತನಾಡಿಕೊಳ್ಳುತ್ತಾರೆ. ಹೌದು, ಈಗಲೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ತುಂಬಿ ತುಳುಕುತ್ತಿವೆ ಮತ್ತು ಸಾಕಷ್ಟು ಜನರ ಜೀವ ಉಳಿಸಿವೆ. ಆದರೆ ಮಧ್ಯಮ ವರ್ಗ ಕೊರೋನಾ ಸಮಯದಲ್ಲಿ ದೊಡ್ಡ ಆಸ್ಪತ್ರೆಗಳು ಸಾವಿನ ಕೂಪದಂತೆ ಭಾಸವಾಗಿ ಈಗ ಅದಕ್ಕಿಂತ ಸರಳವಾಗಿ ಇಂಜೆಕ್ಷನ್ ಮತ್ತು ಮಾತ್ರೆಗಳ ಮೂಲಕವೇ ಗುಣವಾಗುವಂತೆ ಮಾಡುವ ಕ್ಲಿನಿಕ್ ಗಳೇ ಹೆಚ್ಚು ಆಕರ್ಷಕವಾಗಿ ಕಾಣುತ್ತಿರುವುದು ಒಂದು ಗಮನಾರ್ಹ ಬದಲಾವಣೆ. ಬಹುಶಃ ಇದನ್ನು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳು ಎಚ್ಚರಿಕೆ ಎಂದು ಪರಿಗಣಿಸಿ ಸ್ವಲ್ಪವಾದರೂ ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಈ ಆಸ್ಪತ್ರೆಗಳು ವೈದ್ಯರನ್ನು ಮೀರಿ ಕಾರ್ಪೊರೇಟ್ ಸಂಸ್ಥೆಗಳು ಬಹುತೇಕ ಆಕ್ರಮಿಸಿರುವುದರಿಂದ ಅವರ ಹಣದಾಹಕ್ಕೆ ಮಿತಿಯೇ ಇಲ್ಲ ಎಂಬಂತಾಗಿದೆ.
ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ವೈದ್ಯೋ ನಾರಾಯಣೋ ಹರಿ ಎಂದು ಪರಿಗಣಿಸಿ ಆ ವೃತ್ತಿಗೆ ದೈವತ್ವದ ಮಹತ್ವ ನೀಡಲಾಗಿದೆ. ಸರ್ಕಾರದ ತೆರಿಗೆ ನೀತಿಯಿಂದ ಅದೊಂದು ವೃತ್ತಿ ಎಂದು ಪರಿಗಣಿಸಿದರು ಜನ ಸಾಮಾನ್ಯರಿಗೆ ಅದೊಂದು ಸೇವೆ. ಕೆಲವು ವರ್ಷಗಳ ಹಿಂದೆ ಗ್ರಾಮೀಣ ಭಾಗಗಳಲ್ಲಿ ವೈದ್ಯರು ರೋಗಿ ಕೊಟ್ಟಷ್ಟೇ ಹಣವನ್ನು ಪಡೆಯುತ್ತಿದ್ದರು. ಇಂತಿಷ್ಟೇ ಎಂದು ಒತ್ತಾಯ ಮಾಡುತ್ತಿರಲಿಲ್ಲ. ಒಂದಷ್ಟು ಜನ ಸಾಲ ಸಹ ಹೇಳಿ ಹೋಗುತ್ತಿದ್ದರು. ಆದರೆ ಈಗ ನಗರ ಪ್ರದೇಶಗಳಲ್ಲಿ " ಮೊದಲು ಪೇಮೆಂಟ್ ಆಮೇಲೆ ಟ್ರೀಟ್‌ಮೆಂಟ್ " ಎಂಬುದು ಘೋಷವಾಕ್ಯವಾಗಿದೆ. ರೋಗಿಯ ಬಳಿ ಸಿಂಗಲ್ ಬೆಡ್, ಡಬಲ್ ಬೆಡ್, ಎಸಿ - ನಾನ್ ಎಸಿ, ಡಿಲಕ್ಸ್, ಸೂಪರ್ ಡಿಲಕ್ಸ್ , ವಿಐಪಿ ರೂಂ ಎಂದು ನಾನಾ ಥರದ ಹೋಟೆಲ್ ಲಾಡ್ಜಿಂಗ್ ರೀತಿಯ ಆಫರ್ ಗಳನ್ನು ಇಡಲಾಗುತ್ತದೆ.
ಹಾಗೆಯೇ ಕೆಲವು ದೊಡ್ಡ ಆಸ್ಪತ್ರೆಗಳಲ್ಲಿ ವೈದ್ಯರಿಗೆ ತಿಂಗಳಿಗೆ ಇಂತಿಷ್ಟು ಬಿಸಿನೆಸ್ ಕೊಡಬೇಕು ಎಂದು ಟಾರ್ಗೆಟ್ ಫಿಕ್ಸ್ ಮಾಡಿದ್ದಾರೆ ಎಂದು ಹೇಳಲಾಗುತ್ತದೆ. ಈ ಕಾರಣದಿಂದಾಗಿ ವೈದ್ಯಕೀಯ ಕ್ಷೇತ್ರದ ಮಾಫಿಯಾಗಳು ವೈರಸ್ ಅಲೆಗಳನ್ನು ತಾವೇ ಸೃಷ್ಟಿ ಮಾಡಿ ಸುದ್ದಿ ಪ್ರಸಾರ ಆಗುವಂತೆ ಮಾಡುತ್ತಿದ್ದಾರೆ ಎಂದು ಜನ ಸಾಮಾನ್ಯರು ಮಾತನಾಡಿಕೊಳ್ಳುತ್ತಿದ್ದಾರೆ. ವೈದ್ಯಕೀಯ ಕ್ಷೇತ್ರ ಮುಂದುವರಿದಷ್ಟು ರೋಗಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ ಎಂಬ ವ್ಯಂಗ್ಯ ಮಾತೊಂದನ್ನು ವಿಜ್ಞಾನಿಯೊಬ್ಬರು ಹೇಳಿದ್ದು ನೆನಪಾಗುತ್ತಿದೆ.
ದುಡ್ಡಿನಿಂದ ಎಲ್ಲವನ್ನೂ ಪಡೆಯಬಹುದು ಆದರೆ ಆರೋಗ್ಯವನ್ನಲ್ಲ ಎಂಬುದು ಸಾಮಾನ್ಯ ತಿಳಿವಳಿಕೆ. ಆದರೆ ಇಂದು ಅನಾರೋಗ್ಯದಿಂದ ಹಣ ಮಾಡಬಹುದು ಎಂಬಂತಾಗಿರುವುದು ವಿಷಾದನೀಯ. ಕಾಯುವವನೇ ಕೊಲ್ಲುವವನಾದರೆ ಕಾಪಾಡುವವನಾರು? ಇದೆಲ್ಲದರ ಪರಿಣಾಮ ಸಾಮಾನ್ಯ ಜನ ಸಾಮಾನ್ಯ ಖಾಯಿಲೆಗೆ ಕ್ಲಿನಿಕ್ ಗಳತ್ತಾ ಮುಖ ಮಾಡುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಗಳು ಹಿಂದಿಗಿಂತ ಈಗ ಸ್ವಲ್ಪ ಪರವಾಗಿಲ್ಲ ಎಂಬ ಅಭಿಪ್ರಾಯ ಇದೆಯಾದರೂ ಅದು ಇನ್ನೂ ಸಾಕಷ್ಟು ಪ್ರಮಾಣದಲ್ಲಿ ಸುಧಾರಣೆಯ ಅವಶ್ಯಕತೆ ಇದೆ.
ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳು ಸಂಜೀವಿನಿ ಸಿಗುವ ಕಾಡುಗಳು ಎಂಬ ಭಾವನೆ ಜನ ಸಾಮಾನ್ಯರಲ್ಲಿ ಮೂಡಬೇಕೆ ಹೊರತು ಯಮಧೂತರ ಆವಾಸಸ್ಥಾನ ಎಂಬ ಭಾವನೆ ಮೂಡದಿರಲಿ. ಆ ನಿಟ್ಟಿನಲ್ಲಿ ವೈದ್ಯಕೀಯ ಕ್ಷೇತ್ರ ಮತ್ತು ಅದರಲ್ಲಿ ತೊಡಗಿಸಿಕೊಂಡಿರುವ ಜನರು ಪ್ರಯತ್ನಿಸಲಿ ಎಂಬ ಆಶಾ ಭಾವನೆಯೊಂದಿಗೆ...
-ವಿವೇಕಾನಂದ. ಹೆಚ್.ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ಚಿತ್ರ