ಸತತ ಬರಗಾಲವಿದ್ದರೂ ಒಂದೆಕ್ರೆಯಿಂದ ವರುಷಕ್ಕೆ ರೂ.೭ ಲಕ್ಷ ಆದಾಯ
ಮಹಾರಾಷ್ಟ್ರದ ಮರಾಠವಾಡದಲ್ಲಿ ೨೦೧೧ರಿಂದ ಸತತ ಬರಗಾಲ. ಅಲ್ಲಿ ಇಸವಿ ೨೦೧೩ರ ಹೊರತಾಗಿ, ಉಳಿದೆಲ್ಲ ವರುಷಗಳಲ್ಲಿ ಅತ್ಯಂತ ಕಡಿಮೆ ಮಳೆಯಾಗಿದೆ.
ಮರಾಠವಾಡ ಪ್ರದೇಶದ ಬೀಡ್ ಜಿಲ್ಲೆ ರೈತರ ಆತ್ಮಹತ್ಯೆಗಳ ಜಿಲ್ಲೆಯೆಂದು ಕುಪ್ರಸಿದ್ಧ. ಯಾಕೆಂದರೆ, ೨೦೧೨ರಿಂದೀಚೆಗೆ ಬೀಡ್ ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ ಮರಾಠವಾಡದಲ್ಲೇ ಅತ್ಯಧಿಕ. ಮರಾಠವಾಡದಲ್ಲಿ ದಾಖಲಾದ ಒಟ್ಟು ೨,೪೫೦ ರೈತರ ಆತ್ಮಹತ್ಯೆಗಳಲ್ಲಿ ೭೦೨ ಬೀಡ್ ಜಿಲ್ಲೆಯಲ್ಲಾಗಿದೆ.
ಇಂತಹ ದಾರುಣ ಪರಿಸ್ಥಿತಿಯಲ್ಲಿ, ಬೀಡ್ ಜಿಲ್ಲೆಯ ಬಹಿರ್ವಾಡಿ ಗ್ರಾಮದ ವಿಶ್ವನಾಥ ಬೊಬಡೆ ಹತಾಶರಾಗಿ ಕೂರಲಿಲ್ಲ. ತನ್ನ ಒಂದೆಕ್ರೆ ಜಮೀನಿನಲ್ಲೇ ಸುಧಾರಿತ ಬೇಸಾಯ ಮಾಡಿ ಒಂದೇ ವರುಷದಲ್ಲಿ ರೂ.೭ ಲಕ್ಷ ಆದಾಯ ಗಳಿಸಿ, ಸತತ ಬರಗಾಲ ಎದುರಿಸುವ ದಾರಿ ತೋರಿದ್ದಾರೆ.
ವಿಶ್ವನಾಥ್ ಓದಿದ್ದು ಐದನೆಯ ಕ್ಲಾಸಿನ ತನಕ. ಅನಂತರ ಹಿರಿಯರಿಂದ ಬಂದ ಜಮೀನಿನಲಿ ಅಣ್ಣನೊಂದಿಗೆ ಕೃಷಿ ಮಾಡಿ ಬೆಳೆಸಿದ್ದು ಚನ್ನಂಗಿ ಮತ್ತು ಸಜ್ಜೆ. ತಂದೆ ತೀರಿಕೊಂಡ ನಂತರ, ಮನೆ ಕಟ್ಟಲಿಕ್ಕಾಗಿ ಈ ಸೋದರರು ೬ ಎಕ್ರೆ ಜಮೀನು ಮಾರಬೇಕಾಯಿತು. ಅನಂತರ ಅವರ ಪಾಲಿಗೆ ಉಳಿದದ್ದು ಕೇವಲ ೪ ಎಕ್ರೆ ಜಮೀನು.
ವರುಷದಿಂದ ವರುಷಕ್ಕೆ ಅವರ ಒಟ್ಟು ಖರ್ಚುವೆಚ್ಚ ಹೆಚ್ಚಾಗುತ್ತಾ ಬಂತು. ಇದನ್ನು ಸರಿದೂಗಿಸಲಿಕ್ಕಾಗಿ ಅವರಿಬ್ಬರೂ ಇತರ ರೈತರ ಜಮೀನಿನಲ್ಲಿ ದುಡಿಯ ತೊಡಗಿದರು. ೧೯೯೨ರಲ್ಲಿ ಅವರ ಎರಡೆಕ್ರೆ ಜಮೀನನ್ನು ರಸ್ತೆ ನಿರ್ಮಾಣಕ್ಕಾಗಿ ಸರಕಾರ ವಶಪಡಿಸಿಕೊಂಡಿತು. ಅನಂತರ ೧೯೯೮ರಲ್ಲಿ ಅಣ್ಣತಮ್ಮ ಜಮೀನನ್ನು ಪಾಲು ಮಾಡಿಕೊಂಡಾಗ, ವಿಶ್ವನಾಥರ ಪಾಲಿಗೆ ಬಂದದ್ದು ಕೇವಲ ಒಂದೆಕ್ರೆ ಜಮೀನು.
ವಿಶ್ವನಾಥ್ ಶ್ರಮಪಟ್ಟು ಬೇಸಾಯ ಮಾಡಿದರೂ, ಬರಗಾಲದಿಂದಾಗಿ ಬವಣೆ ತಪ್ಪಲಿಲ್ಲ. ಹಾಗಾಗಿ ಅವರು ತನ್ನ ಕೃಷಿ ವಿಧಾನಗಳನ್ನು ಬದಲಾಯಿಸಿದರು. ಪ್ರತಿಯೊಂದು ಸುಧಾರಿತ ವಿಧಾನದಿಂದ ಅವರ ಆದಾಯ ಹೆಚ್ಚಿತು.
ಬಹುಬೆಳೆ ಬೇಸಾಯ:
ಕೇವಲ ಎರಡೇ ಬೆಳೆ ಬೆಳೆದು ಆದಾಯ ಹೆಚ್ಚಿಸಿಕೊಳ್ಳಲು ಸಾಧ್ಯವಿಲ್ಲವೆಂದು ವಿಶ್ವನಾಥರಿಗೆ ಅರ್ಥವಾಗಿತ್ತು. ಹಾಗಾಗಿ ಬಹುಬೆಳೆ ಬೇಸಾಯಕ್ಕೆ ತೊಡಗಿದರು. ಅವರು ಮಾಡಿದ ಉಪಾಯ: ತನ್ನ ಜಮೀನಿಗೆ ಬೇಲಿ ಹಾಕಿ, ಅದರಲ್ಲಿ ತರಕಾರಿ ಬಳ್ಳಿಗಳನ್ನು ಹಬ್ಬಿಸುವುದು.
“ಸಾಂಪ್ರದಾಯಿಕ ಬೆಳೆಗಳ ಜೊತೆಗೆ ಹೀರೇಕಾಯಿ ಮತ್ತು ಹಾಗಲಕಾಯಿ ಬೆಳೆಸಲು ನಿರ್ಧರಿಸಿದೆ. ಇದರಿಂದಾಗಿ ನನ್ನ ಬೆಳೆಗಳ ಪಟ್ಟಿಗೆ ಇನ್ನೆರಡು ಬೆಳೆಗಳು ಸೇರಿಕೊಂಡವು” ಎನ್ನುತ್ತಾರೆ ವಿಶ್ವನಾಥ್. ಈ ಪ್ರಯೋಗ ಉತ್ತಮ ಫಲಿತಾಂಶ ನೀಡಿತು. ಹಾಗಾಗಿ, ಹೂಕೋಸು, ಎಲೆಕೋಸು ಮತ್ತು ಬೆಂಡೆ – ಇವನ್ನೂ ಬೆಳೆಸಲು ನಿರ್ಧರಿಸಿದರು. ಇದರಿಂದಾಗಿ, ಈ ಬದಲಾವಣೆ ಮಾಡಿದ ಮೊದಲ ವರುಷವೇ ವಿಶ್ವನಾಥ್ ಮೂರು ಲಕ್ಷ ರೂಪಾಯಿ ಆದಾಯ ಗಳಿಸಲು ಸಾಧ್ಯವಾಯಿತು.
ಆದರೆ, ಅವರ ನೀರಿನ ಅಭಾವದ ಸಮಸ್ಯೆ ಪರಿಹಾರವಾಗಲಿಲ್ಲ. ಈ ಬಗ್ಗೆ ಚಿಂತಿಸಿ, ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ರೂಪಿಸಲು ನಿರ್ಧರಿಸಿದರು. ಅವರ ಹಳ್ಳಿಯಲ್ಲಿ ಬಿಂದುಸಾರ ನದಿ ಹರಿಯುತ್ತಿದೆ. ಕೃಷಿಯ ಲಾಭದಿಂದ ಅದರ ಹತ್ತಿರ ಒಂದು ಬಾವಿ ತೋಡಿಸಿದರು ವಿಶ್ವನಾಥ್. ಅನಂತರ ಆ ಬಾವಿಯಿಂದ ಕೊಳವೆ ಸಾಲು ಹಾಕಿಸಿ, ತನ್ನ ಜಮೀನಿಗೆ ನೀರು ತಂದರು. ಆ ನೀರನ್ನು ಸ್ಪ್ರಿಂಕ್ಲರುಗಳ ಮೂಲಕ ಬೆಳೆಗಳಿಗೆ ಸಿಂಪಡಿಸ ತೊಡಗಿದಾಗ ಅವರ ನೀರಿನ ಸಮಸ್ಯೆ ಪರಿಹಾರ.
ಇದರಿಂದಾಗಿ ಕಡು ಬೇಸಗೆಯಲ್ಲಿಯೂ ಅವರ ಜಮೀನಿನಲ್ಲಿ ತೇವಾಂಶ ಉಳಿಕೆ. “ಹೀಗೆ ನನ್ನ ಜಮೀನಿಗೆ ನೀರಿನ ವ್ಯವಸ್ಥೆ ಮಾಡಿಕೊಂಡ ನಂತರ ಟೊಮೆಟೊ ಮತ್ತು ಕಲ್ಲಂಗಡಿ ಬೆಳೆಯಲು ಶುರು ಮಾಡಿದೆ” ಎಂದು ತಿಳಿಸುತ್ತಾರೆ.
ಈಗ ವಿಶ್ವನಾಥರ ಜಮೀನಿನಲ್ಲಿ ವರುಷವಿಡೀ ಬೇಸಾಯ ಮತ್ತು ಸಮೃದ್ಧ ಫಸಲು. ಅವರು ಒಂದೆಕ್ರೆಯಲ್ಲಿ ಆರೇಳು ಬೆಳೆ ಬೆಳೆಯುತ್ತಿದ್ದಾರೆ. ಟೊಮೆಟೊ, ಹೀರೇಕಾಯಿ, ಹಾಗಲಕಾಯಿ ಮತ್ತು ಹೂಕೋಸು ಅಥವಾ ಎಲೆಕೋಸನ್ನು ಮೇ ತಿಂಗಳಿನಲ್ಲಿ ನಾಟಿ ಮಾಡುತ್ತಾರೆ. ಇವುಗಳ ಕೊಯ್ಲು ಆಗಸ್ಟ್ ತಿಂಗಳಿನಿಂದ ಆರಂಭ. ಅನಂತರ ಸಪ್ಟಂಬರ್ ಆರಂಭದಲ್ಲಿ ಬೆಂಡೆ ಮತ್ತು ಹೀರೇಕಾಯಿ ನಾಟಿ ಮಾಡುತ್ತಾರೆ. ಮುಂದಿನ ವರುಷ ಜನವರಿ ತಿಂಗಳಿನಲ್ಲಿ ಈ ಎಲ್ಲ ಬೆಳೆಗಳ ಫಸಲು ಮುಕ್ತಾಯ. ತದನಂತರ, ಫೆಬ್ರವರಿ ತಿಂಗಳಿನಲ್ಲಿ ಅವರು ನಾಟಿ ಮಾಡುವುದು ಕಲ್ಲಂಗಡಿಯನ್ನು.
“ಜೂನ್ ತಿಂಗಳಿನಲ್ಲಿ ನಾಲ್ಕು ಲಕ್ಷ ರೂಪಾಯಿ ಬೆಳೆಯ ಟೊಮೆಟೊ ಮಾರಿದ್ದೇನೆ. ಅನಂತರ ಹೀರೇಕಾಯಿ ಮಾರಾಟದಿಂದ ಒಂದು ಲಕ್ಷ ರೂಪಾಯಿ ಮತ್ತು ಜನವರಿ ತಿಂಗಳಿನಲ್ಲಿ ಕಲ್ಲಂಗಡಿ ಮಾರಾಟದಿಂದ ಎರಡೂವರೆ ಲಕ್ಷ ರೂಪಾಯಿ ಕೈಗೆ ಬಂದಿದೆ” ಎಂಬುದು ವಿಶ್ವನಾಥ್ ತಿಳಿಸುವ ಆದಾಯದ ವಿವರ.
ಏರುಮಡಿ ಮತ್ತು ಮುಚ್ಚಿಗೆ:
ಬೆಳೆ ಬೆಳೆಸಲಿಕ್ಕಾಗಿ ಏರುಮಡಿಗಳ ಮತ್ತು ಮುಚ್ಚಿಗೆಯ ಬಳಕೆ – ಇವು ವಿಶ್ವನಾಥರಿಗೆ ಅತ್ಯುತ್ತಮ ಫಲಿತಾಂಶ ನೀಡಿರುವ ಕೃಷಿವಿಧಾನಗಳು.
ಮೂರು ಅಥವಾ ನಾಲ್ಕಡಿ ಅಗಲ ಮತ್ತು ಆರು ಇಂಚು ಎತ್ತರದ ಹಾಗೂ ಅಗತ್ಯವಾದಷ್ಟು ಉದ್ದದ ಏರುಮಡಿಗಳನ್ನು ನಿರ್ಮಿಸುತ್ತಾರೆ ವಿಶ್ವನಾಥ್. ಇದಕ್ಕಾಗಿ ಮರದ ಹಲಗೆಗಳು, ಕಲ್ಲುಗಳು ಮತ್ತು ಕಾಂಕ್ರೀಟ್ ಬ್ಲಾಕುಗಳ ಬಳಕೆ. ಸಸಿಗಳ ನಡುವಿನ ಅಂತರ ಕಡಿಮೆ ಮಾಡಿ, ಪ್ರತಿಯೊಂದು ಚದರ ಮೀಟರ್ ಜಾಗದಲ್ಲಿ ಹೆಚ್ಚು ಸಂಖ್ಯೆಯ ಸಸಿಗಳನ್ನು ಬೆಳೆಸುತ್ತಾರೆ.
ವಿಶ್ವನಾಥರ ಅನುಭವದಂತೆ ಏರುಮಡಿಗಳ ಬೇಸಾಯದಿಂದಾಗಿ ಹಲವು ಅನುಕೂಲಗಳು: ಕಳೆಗಳ ಬೆಳವಣಿಗೆ ಕಡಿಮೆ. ಏರುಮಡಿಗಳಲ್ಲಿ ಯಾರೂ ನಡೆದಾಡುವುದಿಲ್ಲ; ಹಾಗಾಗಿ ಮಣ್ಣು ಗಟ್ಟಿಯಾಗುವುದಿಲ್ಲ ಮತ್ತು ಬೇರುಗಳ ಬೆಳವಣಿಗೆಗೆ ಅನುಕೂಲ. ಪ್ರತಿ ಚದರ ಮೀಟರಿನಲ್ಲಿ ಹೆಚ್ಚು ಸಸಿಗಳನ್ನು ಬೆಳೆಸುವ ಕಾರಣ ಅಧಿಕ ಫಸಲು. ಏರುಮಡಿಗಳಲ್ಲಿ ವಿಶ್ವನಾಥ್ ಬೆಳೆಸುವುದು ಟೊಮೆಟೊ ಮತ್ತು ಹೀರೇಕಾಯಿ. ಎರಡು ಏರುಮಡಿಗಳ ನಡುವೆ ಆರು ಅಡಿ ಅಂತರ ಇರಿಸಿ, ಆ ಜಾಗದಲ್ಲಿ ಬೆಂಡೆ ಮತ್ತು ಹೂಕೋಸು ಬೆಳೆಯುತ್ತಾರೆ.
ಸಸಿಗಳ ಬುಡದಲ್ಲಿ ಮುಚ್ಚಿಗೆ – ಇದು ವಿಶ್ವನಾಥರು ಬಳಸಿರುವ ಇನ್ನೊಂದು ಯಶಸ್ವಿ ವಿಧಾನ. ಇದರಿಂದಾಗಿ ಮಣ್ಣಿನ ತೇವಾಂಶ ಉಳಿಸಲು ಸಹಾಯ.
“ಒಂದು ಎಕ್ರೆ ಜಮೀನಿನಲ್ಲಿ ೧,೦೦೦ ಕ್ರೇಟ್ ಟೊಮೆಟೊ ಮತ್ತು ೩೦ ಟನ್ ಕಲ್ಲಂಗಡಿ ಬೆಳೆಯಲು ಸಾಧ್ಯ” ಎಂದು ಆತ್ಮವಿಶ್ವಾಸದಿಂದ ಹೇಳುತ್ತಾರೆ ವಿಶ್ವನಾಥ್. ಹೀರೇಕಾಯಿ, ಹಾಗಲಕಾಯಿಯಂತಹ ತರಕಾರಿಗಳನ್ನು ಚಳಿಗಾಲದಲ್ಲಿ ಕೊಯ್ಲಿಗೆ ಬರುವಂತೆ ಬೆಳೆಸಿದರೆ ಉತ್ತಮ ರೇಟು ಸಿಗುತ್ತದೆ ಎಂಬುದವರ ಕಿವಿಮಾತು.
ಕೇವಲ ಇಬ್ಬರು ಕೆಲಸಗಾರರ ಸಹಾಯದಿಂದ ಒಂದೆಕ್ರೆಯಲ್ಲಿ ಏಳೆಂಟು ಬೆಳೆ ಬೆಳೆಯುತ್ತಿದಾರೆ ವಿಶ್ವನಾಥ್. ಬೆಳೆಗಳಿಗೆ ನೀರೆರೆಯುವುದು, ಸಾವಯವ ಗೊಬ್ಬರ ಮತ್ತು ಪೀಡೆನಾಶಕಗಳ ಸಿಂಪಡಣೆ – ಈ ಕೆಲಸಗಳಿಗೆ ಸ್ಪ್ರಿಂಕ್ಲರುಗಳ ಬಳಕೆ. ವಿಶ್ವನಾಥ್ ಮತ್ತು ಅವರ ಪತ್ನಿ ದಿನವಿಡೀ ತಮ್ಮ ಜಮೀನಿನಲ್ಲಿ ದುಡಿಯುತ್ತಾರೆ. ಇದರಿಂದಾಗಿ ಅವರಿಗೆ ಕೆಲಸದಾಳುಗಳ ವೆಚ್ಚ ಕಡಿಮೆ ಮಾಡಲು ಸಾಧ್ಯವಾಗಿದೆ.
“ಈ ವರುಷ ಪ್ರತಿಯೊಂದು ಹಂಗಾಮಿನಲ್ಲಿ ಬೇಸಾಯ ಮಾಡಲು ಸುಮಾರು ೫೦,೦೦೦ ರೂಪಾಯಿ ಖರ್ಚು ಮಾಡಿ, ಒಟ್ಟಾರೆ ಐದು ಲಕ್ಷ ರೂಪಾಯಿ ಲಾಭ ಗಳಿಸಿದ್ದೇನೆ. ಮುಂದಿನ ವರುಷ ಇನ್ನಷ್ಟು ಲಾಭ ಗಳಿಸುವ ನಿರೀಕ್ಷೆ ನನ್ನದು. ಯಾಕೆಂದರೆ ಮುಂದಿನ ವರುಷ ಸಾವಯವ ಕೃಷಿ ಮಾಡುತ್ತೇನೆ. ಇದರಿಂದಾಗಿ ನನ್ನ ಖರ್ಚು ಕಡಿಮೆಯಾಗಲಿದೆ ಮತ್ತು ನಾನು ಬೆಳೆಸಿದ್ದಕ್ಕೆ ಇನ್ನೂ ಹೆಚ್ಚಿನ ರೇಟು ಸಿಗಲಿದೆ” ಎಂದು ತಮ್ಮ ಮುಂದಿನ ಯೋಜನೆಯ ಚಿತ್ರಣ ನೀಡುತ್ತಾರೆ ವಿಶ್ವನಾಥ್.