ಸತೀಶ್ ಧವನ್
ಸಾಮಾಜಿಕ ಕಳಕಳಿಯ ಧೀಮಂತ ವಿಜ್ಞಾನಿ 'ಸತೀಶ್ ಧವನ್' ಎಂಬ ಪುಸ್ತಕವನ್ನು 'ವಿಶ್ವಮಾನ್ಯರು' ಪ್ರಕಟಣೆಯ ಅಡಿಯಲ್ಲಿ ಮುದ್ರಿಸಿ ಹೊರತಂದಿದ್ದಾರೆ ಬೆಂಗಳೂರಿನ ನವಕರ್ನಾಟಕ ಪ್ರಕಾಶನ ಇವರು. ವಿಶ್ವಮಾನ್ಯರು ಸರಣಿಯ ಸಂಪಾದಕರು ಖ್ಯಾತ ಸಾಹಿತಿ ಡಾ. ನಾ ಸೋಮೇಶ್ವರ ಇವರು. ಸತೀಶ್ ಧವನ್ ಬಗ್ಗೆ ಸೊಗಸಾದ ಮಾಹಿತಿ ಬರೆದಿದ್ದಾರೆ ಡಾ ಬಿ ಆರ್ ಗುರುಪ್ರಸಾದ್ ಇವರು. ಬಾಹ್ಯಾಕಾಶ ಮತ್ತು ಖಗೋಳ ವಿಜ್ಞಾನದ ಕುರಿತು ಸಂಪನ್ಮೂಲ ವ್ಯಕ್ತಿಯಾಗಿರುವ ಗುರುಪ್ರಸಾದ್ ಇವರು ೩೭ ವರ್ಷ ಇಸ್ರೋದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ವಿಜ್ಞಾನಕ್ಕೆ ಸಂಬಂಧಿಸಿದಂತೆ ಐದು ನೂರಕ್ಕೂ ಲೇಖನಗಳು ಹಾಗೂ ಉಪನ್ಯಾಸಗಳನ್ನು ನೀಡಿದ್ದಾರೆ.
ನಮ್ಮ ಭಾರತೀಯ ಉದ್ಯಮ ಕ್ಷೇತ್ರದ ಮೇರು ಶಿಖರ ಜೆ ಆರ್ ಡಿ ಟಾಟಾ. ಭಾರತೀಯ ಬಾಹ್ಯಾಕಾಶ ಸಾಮರ್ಥ್ಯವನ್ನು ಇಡೀ ಜಗತ್ತೇ ಬೆಕ್ಕಸ ಬೆರಗಾಗಿ ನೋಡುವಂತೆ ಮಾಡಿದವರು ಪ್ರೊ.ಸತೀಶ್ ಧವನ್! ವಿಜ್ಞಾನ ಕ್ಷೇತ್ರಗಳಲ್ಲಿ ಅಸೀಮ ತಿಳಿವನ್ನು ಪಡೆದಿದ್ದ ಧವನ್ ಇಂಗ್ಲೀಷ್ ಎಂ ಎ ಮಾಡಿದ್ದರಿಂದ ಸಾಹಿತ್ಯವು ಅವರ ಹೃದಯಕ್ಕೆ ಹತ್ತಿರವಾಗಿತ್ತು. ಸಮಯ ದೊರೆತಾಗಲೆಲ್ಲ ಶ್ರೀಹರಿಕೋಟದ ಬಳಿ ಪಕ್ಷಿ ವೀಕ್ಷಣೆಗೆ ಹೊರಟು, ಅವುಗಳ ಚಿತ್ರವನ್ನು ತೆಗೆಯುತ್ತಿದ್ದರು. ಹಕ್ಕಿಗಳ ಹಾರಾಟದ ಬಗ್ಗೆ ಒಂದು ಪ್ರೌಢ ಪ್ರಬಂಧವನ್ನು ರಚಿಸಿದರು. ಶ್ರೀಹರಿಕೋಟದಲ್ಲಿ ರಾಕೆಟ್ ಉಡಾವಣಾ ಕೇಂದ್ರವನ್ನು ಕಟ್ಟುವ ನಿರ್ಧಾರವು, ಅಲ್ಲಿ ವಾಸವಾಗಿದ್ದ ಯಾನಾದಿ ಬುಡಕಟ್ಟಿನವರನ್ನು ತೆರವು ಮಾಡಬೇಕಾದ ಅನಿವಾರ್ಯತೆಯು ಬಂದೊದಗಿತು. ಧವನ್ ಅತ್ಯಂತ ಮಾನವೀಯ ಹಿನ್ನಲೆಯಲ್ಲಿ ಅವರಿಗೆ ಸೂಕ್ತ ಪುನರ್ವಸತಿಯನ್ನು ಒದಗಿಸಿದರು. ಅವರ ಅನುಪಮ ಸೇವೆಯನ್ನು ಮನಗಂಡು ನಮ್ಮ ಸರ್ಕಾರವು ಶ್ರೀಹರಿಕೋಟದಲ್ಲಿರುವ ರಾಕೆಟ್ ಉಡ್ಡಯನ ಕೇಂದ್ರವನ್ನು 'ಸತೀಶ್ ಧವನ್ ಅಂತರಿಕ್ಷ ಕೇಂದ್ರ' ಎಂದು ಕರೆದಿರುವುದು ಅತ್ಯಂತ ಸೂಕ್ತವಾಗಿದೆ.
ವಿಶ್ವಮಾನವರು ಮಾಲಿಕೆಯ ಸಂಪಾದಕರಾದ ಡಾ. ನಾ ಸೋಮೇಶ್ವರ ಅವರು ತಮ್ಮ ಮಾತಾದ 'ನುಡಿ ಮಂಥನ' ಇಲ್ಲಿ ಸತೀಶ್ ಧವನ್ ಬಗ್ಗೆ ಹೀಗೆ ಬರೆಯುತ್ತಾರೆ "ಭಾರತವು ಚಂದ್ರಯಾನ, ಗಗನಯಾನ, ಆದಿತ್ಯ, ಮಂಗಳಯಾನ, ಶುಕ್ರಯಾನ ಮುಂತಾದ ಯೋಜನೆಗಳನ್ನು ಯಶಸ್ವಿಯಾಗಿ ಮುಗಿಸಿದೆ ಅಥವಾ ಮುಗಿಸಲಿದೆ ಎಂದರೆ ಅದಕ್ಕೆ ಪ್ರಮುಖ ಕಾರಣ, ನಮ್ಮ ಅಂತರಿಕ್ಷ ವಿಜ್ಞಾನಕ್ಕೆ ಭದ್ರವಾದ ಅಡಿಗಲ್ಲನ್ನು ಹಾಕಿದ ವಿಕ್ರಮ್ ಸಾರಾಭಾಯಿಯವರು! ಆ ತಳಪಾಯದ ಮೇಲೆ ಒಂದೇ ಸಲಕ್ಕೆ ೧೦೪ ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಕೊಂಡೊಯ್ಯುವ ಜಾಗತಿಕ ದಾಖಲೆಯನ್ನು ಮಾಡಬಲ್ಲ ಭವ್ಯ ಭವನ, ಇಸ್ರೋ ಸಂಸ್ಥೆಯನ್ನು ಕಟ್ಟಿದ್ದು ಪದ್ಮವಿಭೂಷಣ ಪ್ರೊ। ಸತೀಶ್ ಧವನ್ (೧೯೨೦-೨೦೦೨)."
೪೮ ಪುಟಗಳ ಪುಟ್ಟ ಪುಸ್ತಕವು ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ತುಂಬಾ ಸಹಕಾರಿಯಾಗಿರುವುದರಲ್ಲಿ ಎರಡು ಮಾತಿಲ್ಲ.